ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಪ ಮಾಡಿದರೆ ಕ್ಯಾನ್ಸರ್ ಶಿಕ್ಷೆ !

Last Updated 23 ನವೆಂಬರ್ 2017, 20:31 IST
ಅಕ್ಷರ ಗಾತ್ರ

ಗುವಾಹಟಿ: ‘ಮಾಡಿರುವ ‍ಪಾಪಗಳಿಂದಾಗಿ ಕೆಲವರು ಕ್ಯಾನ್ಸರ್‌ನಂತಹ ಪ್ರಾಣಘಾತುಕ ರೋಗಗಳಿಂದ ಬಳಲುತ್ತಾರೆ. ಇದು ಅವರಿಗೆ ದೇವರು ಕೊಟ್ಟ ಶಿಕ್ಷೆ’ ಎಂದು ಅಸ್ಸಾಂನ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ನೀಡಿರುವ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

ರಾಜಕೀಯ ಮುಖಂಡರು, ಜನಸಾಮಾನ್ಯರು, ಕ್ಯಾನ್ಸರ್‌ನಿಂದ ಬಳಲುತ್ತಿರುವವರು ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ತೀವ್ರ ವಿರೋಧ ವ್ಯಕ್ತವಾಗಿದೆ. ಜಾಲತಾಣಿಗರು, ಅದರಲ್ಲೂ ಟ್ವಿಟರಿಗರು ಹಿಮಂತ ಅವರ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದ್ದಾರೆ.

ಶಿಕ್ಷಕರಾಗಿ ಆಯ್ಕೆಯಾದವರಿಗೆ ನೇಮಕಾತಿ ಪತ್ರ ವಿತರಿಸುವ ಸಮಾರಂಭದಲ್ಲಿ ಬುಧವಾರ ಮಾತನಾಡಿದ್ದ ಶರ್ಮಾ, ‘ಪಾಪ ಮಾಡಿದರೆ ದೇವರು ನಮ್ಮನ್ನು ನರಳುವಂತೆ ಮಾಡುತ್ತಾನೆ. ಯುವಜನರು ಕ್ಯಾನ್ಸರ್‌ನಿಂದ ಬಳಲುತ್ತಿರುವುದು ಅಥವಾ ಅಪಘಾತಕ್ಕೀಡಾಗುವುದನ್ನು ನಾವು ಕಾಣುತ್ತಿರುತ್ತೇವೆ. ಇದರ ಹಿನ್ನೆಲೆಯನ್ನು ಗಮನಿಸಿದರೆ ಇದು ದೇವರೇ ಕೊಟ್ಟ ಶಿಕ್ಷೆ ಎಂದು ಅರ್ಥವಾಗುತ್ತದೆ. ಆ ಶಿಕ್ಷೆಯನ್ನು ನಾವು ಅನುಭವಿಸಲೇ ಬೇಕು’ ಎಂದು ಹೇಳಿದ್ದರು.

‘ಈ ಜೀವನದಲ್ಲಿ ಅಥವಾ ಹಿಂದಿನ ಜನ್ಮದಲ್ಲಿ ಇಲ್ಲವೇ ನಮ್ಮ ತಂದೆ ಅಥವಾ ತಾಯಿ... ಆ ಯುವ ಜನರು ಪಾಪ ಮಾಡದೇ ಇರಬಹುದು; ಆದರೆ ಅವರ ಪೋಷಕರು ಏನಾದರೂ ತಪ್ಪು ಮಾಡಿರಬಹುದು. ವ್ಯಕ್ತಿ ಮಾಡಿದ ಕರ್ಮದ ಪ್ರತಿಫಲದ ಬಗ್ಗೆ ಭಗವದ್ಗೀತೆ ಮತ್ತು ಬೈಬಲ್‌ನಲ್ಲಿ ಉಲ್ಲೇಖ ಇದೆ. ಅದಕ್ಕಾಗಿ ದುಃಖಿಸುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ಈ ಜೀವನದಲ್ಲಿ ಮಾಡಿದ ಕರ್ಮಗಳಿಗೆ, ಇದೇ ಜೀವನದಲ್ಲಿ ಪ್ರತಿಫಲವನ್ನು ಎಲ್ಲರೂ ಉಣ್ಣಲಿದ್ದಾರೆ. ದೇವರು ಶಿಕ್ಷೆ ನೀಡಿಯೇ ನೀಡುತ್ತಾನೆ. ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿದ್ದರು.

ಈ ಹೇಳಿಕೆಗೆ ಬುಧವಾರವೇ ಖಾರವಾಗಿ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್‌ ಮುಖಂಡ ದೇವವ್ರತ ಸೈಕಿಯಾ, ‘ಆರೋಗ್ಯ ಸಚಿವರಾದವರು ಕ್ಯಾನ್ಸರ್‌ ರೋಗಿಗಳ ಭಾವನೆಗೆ ಧಕ್ಕೆಯಾಗುವಂತಹ ಹೇಳಿಕೆ ನೀಡಿರುವುದು ದುರದೃಷ್ಟಕರ. ಸಾರ್ವಜನಿಕವಾಗಿ ಅವರು ಈ ಹೇಳಿಕೆ ನೀಡಿರುವುದರಿಂದ ಸಾರ್ವಜನಿಕವಾಗಿಯೇ ಕ್ಷಮೆಯಾಚಿಸಬೇಕು’ ಎಂದು  ಆಗ್ರಹಿಸಿದ್ದರು.

‘ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕ್ಯಾನ್ಸರ್‌ ಹರಡುವಿಕೆಯನ್ನು ನಿಯಂತ್ರಿಸಲು ವಿಫಲವಾಗಿರುವುದರಿಂದ ಅವರು ಈ ಹೇಳಿಕೆ ನೀಡಿದ್ದಾರೆ’ ಎಂದು ಎಐಯುಡಿಎಫ್‌ನ ಮುಖಂಡ ಅಮಿನುಲ್‌ ಇಸ್ಲಾಂ ಆರೋಪಿಸಿದ್ದಾರೆ.

ಕ್ಯಾನ್ಸರ್‌ ಬರುವುದಕ್ಕೆ ವೈಜ್ಞಾನಿಕ ಕಾರಣಗಳು ಮತ್ತು ಹಲವು ಮಾನದಂಡಗಳು ಇರುವುದನ್ನು ವೈದ್ಯಕೀಯವಾಗಿ ಪತ್ತೆಮಾಡಲಾಗಿರುವ ಹೊತ್ತಿನಲ್ಲಿ ಆರೋಗ್ಯ ಸಚಿವರ ಹೇಳಿಕೆಯಿಂದ ಬೇಸರವಾಗಿದೆ ಎಂದು ಕೆಲವು ಕ್ಯಾನ್ಸರ್‌ ರೋಗಿಗಳು ಹೇಳಿದ್ದಾರೆ.

‘ಸಚಿವರು ವೈಜ್ಞಾನಿಕ ಆಧಾರದಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂದು ನನಗೆ ಅನ್ನಿಸುವುದಿಲ್ಲ. ಸಾಮಾಜಿಕ ಸಂದರ್ಭದಲ್ಲಿ ಈ ರೀತಿ ಹೇಳಿರಬಹುದು. ಇದೊಂದು ವಿವಾದ ಮಾಡುವ ವಿಷಯ ಅಲ್ಲ. ಅದಕ್ಕೆ ಅಷ್ಟು ಪ್ರಾಮುಖ್ಯ ನೀಡಬೇಕಾಗಿಯೂ ಇಲ್ಲ’ ಎಂದು ಸರ್ಕಾರಿ ಸ್ವಾಮ್ಯದ ಡಾ. ಬಿ. ಬರೂವಾ ಕ್ಯಾನ್ಸರ್‌ ಸಂಸ್ಥೆಯ ವೈದ್ಯಕೀಯ ಸೂಪರಿಂಟೆಂಡೆಂಟ್‌ ಡಾ. ಬಿ.ಬಿ. ಬೋರ್ಥಾಕೂರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT