ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗೇರಲಿದೆ ಗುಜರಾತ್‌ ಪ್ರಚಾರ ಕಣ

* ಶುಕ್ರವಾರ, ಶನಿವಾರ ರಾಹುಲ್‌ ಪ್ರಚಾರ * ಸೋಮವಾರ, ಬುಧವಾರ ಮೋದಿ ಪ್ರವಾಸ
Last Updated 23 ನವೆಂಬರ್ 2017, 20:13 IST
ಅಕ್ಷರ ಗಾತ್ರ

ನವದೆಹಲಿ: ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಗುಜರಾತ್‌ ವಿಧಾನಸಭೆಯ ಚುನಾವಣಾ ಪ್ರಚಾರ ಕಣ ಮತ್ತೆ ರಂಗೇರಲಿದೆ. ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನ ಇಬ್ಬರು ಅತ್ಯಂತ ದೊಡ್ಡ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಜನರ ಮನವೊಲಿಕೆಗೆ ಕಣಕ್ಕಿಳಿಯಲಿದ್ದಾರೆ.

ನವಸರ್ಜನ ಯಾತ್ರೆಯ ಮೂಲಕ ಕಳೆದ ಎರಡು ತಿಂಗಳಲ್ಲಿ ರಾಜ್ಯದ ಉದ್ದಗಲಕ್ಕೂ ರಾಹುಲ್‌ ಅವರು ತಿರುಗಾಡಿದ್ದಾರೆ. ಮತ್ತೊಂದು ಸುತ್ತಿನ ಪ್ರವಾಸಕ್ಕೆ ಶುಕ್ರವಾರದಿಂದ ಅವರು ಅಣಿಯಾಗಲಿದ್ದಾರೆ. ಮಹಾತ್ಮ ಗಾಂಧಿ ಅವರ ಹುಟ್ಟೂರು ಪೋರಬಂದರದ ಕೀರ್ತಿ ಮಂದಿರಕ್ಕೆ ಭೇಟಿ ನೀಡಿ ಈ ಸುತ್ತಿನ ಪ್ರಚಾರ ಆರಂಭಿಸಲಿದ್ದಾರೆ. ಬಳಿಕ ಪಟ್ಟಣದ ಮೀನುಗಾರರನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ.

ನಂತರ, ಸನಂದ್‌ಗೆ ಭೇಟಿ ನೀಡಲಿರುವ ಅವರು ದಲಿತ ಶಕ್ತಿ ಕೇಂದ್ರದಲ್ಲಿ ದಲಿತ ಸ್ವಾಭಿಮಾನ್‌ ಸಭಾವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲಿ ಅವರು ದಲಿತ ಕುಶಲಕರ್ಮಿಗಳು ತಯಾರಿಸಿದ 125X80 ಅಡಿಯ ಬೃಹತ್‌ ರಾಷ್ಟ್ರ ಧ್ವಜವನ್ನು ಸ್ವೀಕರಿಸಲಿದ್ದಾರೆ. ಈ ಧ್ವಜವನ್ನು ಮುಖ್ಯಮಂತ್ರಿ ವಿಜಯ ರೂಪಾಣಿ ಅವರಿಗೆ ನೀಡಲು ಉದ್ದೇಶಿಸಲಾಗಿತ್ತು. ಆದರೆ ಸ್ಥಳದ ಅಭಾವದಿಂದಾಗಿ ಅದನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿತ್ತು.

ಬಳಿಕ ಅಹಮದಾಬಾದ್‌ನಲ್ಲಿ ವೃತ್ತಿಪರರ ಸಮಾವೇಶದಲ್ಲಿ ರಾಹುಲ್‌ ಮಾತನಾಡಲಿದ್ದಾರೆ. ನಗರದಲ್ಲಿ ಪಟೇಲ್‌ ಸಮುದಾಯದ ಪ್ರಾಬಲ್ಯ ಇರುವ ನಿಕೊಲ್‌ನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಪಟೇಲ್‌ ಮೀಸಲು ಹೋರಾಟದ ನಾಯಕ ಹಾರ್ದಿಕ್‌ ಪಟೇಲ್‌ ಅವರೂ ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್‌ ನೀಡಿರುವ ಮೀಸಲಾತಿ ಸೂತ್ರವನ್ನು ಹಾರ್ದಿಕ್‌ ಅವರು ಒಪ್ಪಿಕೊಂಡ ಬಳಿಕ ಈ ಸುದ್ದಿ ಹೆಚ್ಚು ದಟ್ಟವಾಗಿದೆ.

ಮರುದಿನ ಮಧ್ಯ ಗುಜರಾತ್‌ನ ವಿವಿಧ ಸ್ಥಳಗಳಲ್ಲಿ ಸಭೆ ನಡೆಸಲಿರುವ ರಾಹುಲ್‌ ಸಂಜೆ ದೆಹಲಿಗೆ ಹಿಂದಿರುಗಲಿದ್ದಾರೆ.

ತವರಿನಲ್ಲಿ ಮೋದಿ ಪ್ರಚಾರ: ಚುನಾವಣೆ ಘೋಷಣೆಯಾದ ಬಳಿಕ ಪ್ರಧಾನಿ ಮೋದಿ ಅವರು ಗುಜರಾತಿನ ಎರಡು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಒಂದರಲ್ಲಿ ವೈಯಕ್ತಿಕವಾಗಿ ಮತ್ತು ಇನ್ನೊಂದರಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಅವರು ಭಾಗಿಯಾಗಿದ್ದರು. ಇದೇ 27 ಮತ್ತು 29ರಂದು ಮೋದಿ ಅವರು ಪ್ರಚಾರ ಕಣಕ್ಕಿಳಿಯಲಿದ್ದಾರೆ. ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ನಲ್ಲಿ ಅವರು ಪ್ರಚಾರ ಮಾಡಲಿದ್ದಾರೆ.

27ರಂದು ಬೆಳಿಗ್ಗೆ ಮೋದಿ ಅವರು ಕಛ್‌ ಜಿಲ್ಲೆಯ ಭುಜ್‌ನಲ್ಲಿ ನಡೆಯುವ ಸಮಾವೇಶದಲ್ಲಿ ಮಾತನಾಡಲಿದ್ದಾರೆ. ಬಳಿಕ ರಾಜಕೋಟ್‌ನ ಜಸ್ದನ್‌, ಅಮ್ರೇಲಿಯಧರಿ ಮತ್ತು ಸೂರತ್‌ ಜಿಲ್ಲೆಯ ಕಮರೇಜ್‌ನಲ್ಲಿನ ರ‍್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಗುಜರಾತ್‌ ಬಿಜೆಪಿ ಉಸ್ತುವಾರಿ ಭೂಪೇಂದ್ರ ಯಾದವ್‌ ತಿಳಿಸಿದ್ದಾರೆ.

ಪ್ರತಿ ರ‍್ಯಾಲಿಯಲ್ಲಿಯೂ ಸಮೀಪದ ಐದರಿಂದ ಆರು ಕ್ಷೇತ್ರಗಳ ಜನರು ಭಾಗವಹಿಸುವಂತೆ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ವಿವಿಧ ಸ್ಥಳಗಳಲ್ಲಿ 26 ಮತ್ತು 27ರಂದು ಬಿಜೆಪಿಯ ಹಿರಿಯ ಮುಖಂಡರು ಪ್ರಚಾರ ಮಾಡಲಿದ್ದಾರೆ. ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌, ನಿತಿನ್‌ ಗಡ್ಕರಿ, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್‌, ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ ಮತ್ತು ವಸುಂಧರಾ ರಾಜೇ ಅವರು ರ‍್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ.

ಮತ್ತೆ ‘ಚಾಯ್‌ ಪೆ ಚರ್ಚಾ’
ಪ್ರಧಾನಿ ಗುಜರಾತ್‌ಗೆ ಬರುವುದಕ್ಕೆ ಒಂದು ದಿನ ಮೊದಲು ಬಿಜೆಪಿಯ ವಿವಿಧ ನಾಯಕರು 50 ಸಾವಿರ ಬೂತ್‌ಗಳ ಬೂತ್‌ ಮಟ್ಟದ ಕಾರ್ಯಕರ್ತರ ಜತೆ ‘ಚಾಯ್‌ ಪೆ ಚರ್ಚಾ’ ನಡೆಸಲಿದ್ದಾರೆ. ಇದಾದ ಬಳಿಕ ಬಿಜೆಪಿಯ ಕಾರ್ಯಕರ್ತರು ಪ್ರಧಾನಿಯ ‘ಮನದ ಮಾತು’ ಬಾನುಲಿ ಭಾಷಣಕ್ಕೆ ಕಿವಿಗೊಡಲಿದ್ದಾರೆ. ಅಂದಿಗೆ ಮುಂಬೈ ಭಯೋತ್ಪಾದನಾ ದಾಳಿಗೆ ಹತ್ತು ವರ್ಷ ತುಂಬಲಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ಈ ಅಭಿಯಾನದ ನೇತೃತ್ವ ವಹಿಸಲಿದ್ದಾರೆ.

ರಾಷ್ಟ್ರೀಯವಾದಿಗಳಿಂದ ದೇಶ ರಕ್ಷಿಸಿ: ಆರ್ಚ್‌ಬಿಷಪ್‌ ಪತ್ರ
‘ರಾಷ್ಟ್ರೀಯವಾದಿ ಶಕ್ತಿಗಳಿಂದ ದೇಶವನ್ನು ರಕ್ಷಿಸಲು ಪ್ರಾರ್ಥಿಸಿ’ ಎಂದು ಗಾಂಧಿನಗರ ಆರ್ಚ್‌ಬಿಷಪ್‌ ಥಾಮಸ್‌ ಮೆಕ್‌ವಾನ್‌ ಅವರು ದೇಶದ ಎಲ್ಲ ಬಿಷಪ್‌ಗಳಿಗೆ ಪತ್ರ ಬರೆದಿರುವುದು ಗುಜರಾತಿನಲ್ಲಿ ಈಗ ಚರ್ಚೆಯ ವಿಷಯವಾಗಿದೆ.

ಗುಜರಾತ್‌ ಚುನಾವಣೆಗಾಗಿ ಮತ್ತು ಭಾರತದ ಸಂವಿಧಾನಕ್ಕೆ ಬದ್ಧವಾಗಿರುವವರ ಆಯ್ಕೆಗೆ ಪ್ರಾರ್ಥಿಸುವಂತೆ ದೇಶದ ಬಿಷಪ್‌ಗಳನ್ನು ಮೆಕ್‌ವಾನ್‌ ಅವರು ಇದೇ 21ರಂದು ಬರೆದ ಪತ್ರದಲ್ಲಿ ಕೋರಿದ್ದಾರೆ. ಈ ಪತ್ರ ಈಗ ಜಾಲತಾಣದಲ್ಲಿ ಹರಿದಾಡುತ್ತಿದೆ.

‘ಗುಜರಾತ್‌ ಚುನಾವಣೆಗೆ ದಿನಾಂಕ ಪ್ರಕಟವಾಗಿದೆ. ಈ ಚುನಾವಣೆಯ ಫಲಿತಾಂಶ ಮಹತ್ವದ್ದಾಗಿದ್ದು ನಮ್ಮ ಪ‍್ರೀತಿಯ ದೇಶದಾದ್ಯಂತ ಅದು ಪ್ರತಿಧ್ವನಿಸಲಿದೆ. ದೇಶದ ಭವಿಷ್ಯದ ಮೇಲೆ ಪ್ರಭಾವ ಬೀರಲಿದೆ. ದೇಶದ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಚೌಕಟ್ಟನ್ನೇ ಪಣಕ್ಕೆ ಇಡಲಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ.

ಸಾಂವಿಧಾನಿಕ ಹಕ್ಕುಗಳನ್ನು ದಮನಿಸಲಾಗುತ್ತಿದೆ. ಚರ್ಚ್‌ಗಳು, ಚರ್ಚ್‌ನ ಜನರ ಮೇಲೆ ಹಲ್ಲೆಯಾಗದ ಒಂದು ದಿನವೂ ಇಲ್ಲ. ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ಪರಿಶಿಷ್ಟರ, ಬಡವರಲ್ಲಿ ಅಸುರಕ್ಷ ಭಾವ ಹೆಚ್ಚುತ್ತಿದೆ. ರಾಷ್ಟ್ರೀಯವಾದಿ ಶಕ್ತಿಗಳೇ ದೇಶವನ್ನು ವಶಕ್ಕೆ ಪಡೆಯುತ್ತಿದ್ದಾರೆ. ಗುಜರಾತ್‌ ಚುನಾವಣೆಯ ಫಲಿತಾಂಶ ಬದಲಾವಣೆಗೆ ಕಾರಣವಾಗಬಲ್ಲದು’ ಎಂದು ಪತ್ರದಲ್ಲಿ ಹೇಳಲಾಗಿದೆ.

ಈ ಪತ್ರದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿರುವ ಮೆಕ್‌ವಾನ್‌ ಅವರು, ಈ ಪತ್ರವನ್ನು ಸಕಾರಾತ್ಮಕ ದೃಷ್ಟಿಯಿಂದ ನೋಡಬೇಕು ಮತ್ತು ಇದು ಯಾರ ವಿರುದ್ಧವೂ ಅಲ್ಲ ಎಂದಿದ್ದಾರೆ. ‘ನಾನು ರಾಷ್ಟ್ರೀಯವಾದಿ ಮತ್ತು ದೇಶವನ್ನು ಪ್ರೀತಿಸುತ್ತೇನೆ. ಗುಜರಾತ್‌ನ ಅಧಿಕಾರ ಸರಿಯಾದ ಜನರ ಕೈಗೆ ಸಿಗಲಿ ಎಂದು ಪ್ರಾರ್ಥಿಸುವುದಕ್ಕಷ್ಟೇ ನಾನು ಕರೆ ಕೊಟ್ಟಿದ್ದೇನೆ. ನಾನು ಕಾಂಗ್ರೆಸ್‌ ಪರವೂ ಅಲ್ಲ, ಬಿಜೆಪಿಯ ವಿರೋಧಿಯೂ ಅಲ್ಲ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT