ಮೈಸೂರು

ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ...

ಕನ್ನಡ ಸಾಹಿತ್ಯ ಸಮ್ಮೇಳನ ಅಂದ್ರ ಬರೀ ಸಾಹಿತ್ಯವಲ್ಲ. ನಮ್ಮ ಸಾಹಿತ್ಯಕ್ಕೆ ಆಕಾರವಾದ ಕನ್ನಡದ ಬದುಕು, ಕನ್ನಡದ ಚರಿತ್ರೆ, ಕನ್ನಡ ಸಾಗಿ ಬಂದ ಹಾದಿ, ಸಾಗಬೇಕಾದ ದಾರಿ... ಹೀಗೆ ಕನ್ನಡದ ಸುತ್ತ ಅನೇಕ ವರ್ತುಲಗಳನ್ನು ಹೆಣೆಯಬಹುದು.

ಪ್ರೊ.ಚಂದ್ರಶೇಖರ ಪಾಟೀಲ

ಮೈಸೂರು: 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಪ್ರೊ.ಚಂದ್ರಶೇಖರ ಪಾಟೀಲ ಅವರ ಪ್ರಸಿದ್ಧವಾದ ಕವನ ‘ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ...’. ಅದರ ಪ್ರಸ್ತುತತೆ, ಸಂದೇಶ ಕುರಿತು ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದು ಇಲ್ಲಿದೆ.

ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ ಎನ್ನುವ ಶಬ್ದಗಳು ಸಂಭ್ರಮದವು. ಈ ಸಂಭ್ರಮ ಆಚರಿಸಲು ಎಲ್ಲ ಜಾತಿ, ಪ್ರದೇಶ, ಗಡಿಗೆರೆಗಳನ್ನು ದಾಟಿ ಬರ್ರಿ. ಹಬ್ಬ ಮಾಡೂಣು ಬರ್ರಿ ಎನ್ನುವ ಸಂದೇಶ ಐತಿ. ಇನ್ನೊಂದು ಸಂದೇಶ ಐತಿ– ಕನ್ನಡ ಮುಳುಗತೈತಿ ಅದನ್ನು ಪಾರು ಮಾಡಲು ಬರ್ರಿ ಅಂತ. ಒಟ್ಟಿನಲ್ಲಿ ಕನ್ನಡ ವೈಯಕ್ತಿಕ ನೆಲೆಯಲ್ಲ. ವೈಯಕ್ತಿಕವನ್ನೂ ಒಳಗೊಂಡ ಸಮಷ್ಟಿ ನೆಲೆಯ ಒಂದು ಸಂಕೇತ ಕನ್ನಡ. ಅದು ಕನ್ನಡದ ಭಾಷೆ, ನೆಲ, ಆಕಾಶ, ರೈತ, ಕಾರ್ಮಿಕ, ದಲಿತ, ಮಹಿಳೆ, ಪರಿಸರ, ಭೂತ, ವರ್ತಮಾನ ಹಾಗೂ ಭವಿಷ್ಯ ಎಲ್ಲವನ್ನೂ ಒಳಗೊಂಡ ಪರಿಪೂರ್ಣ ಪರಿಕಲ್ಪನೆ ಕನ್ನಡ ಅನ್ನೋದು.

ಕನ್ನಡ ಸಾಹಿತ್ಯ ಸಮ್ಮೇಳನ ಅಂದ್ರ ಬರೀ ಸಾಹಿತ್ಯವಲ್ಲ. ನಮ್ಮ ಸಾಹಿತ್ಯಕ್ಕೆ ಆಕಾರವಾದ ಕನ್ನಡದ ಬದುಕು, ಕನ್ನಡದ ಚರಿತ್ರೆ, ಕನ್ನಡ ಸಾಗಿ ಬಂದ ಹಾದಿ, ಸಾಗಬೇಕಾದ ದಾರಿ... ಹೀಗೆ ಕನ್ನಡದ ಸುತ್ತ ಅನೇಕ ವರ್ತುಲಗಳನ್ನು ಹೆಣೆಯಬಹುದು. ಇದೊಂದು ಸಂದೇಶ.

ಕನ್ನಡಿಗರು ಅಂದ್ರ ಕೇವಲ ಕನ್ನಡ ಮಾತನಾಡುವವರಲ್ಲ. ಕರ್ನಾಟಕದಲ್ಲಿರುವ ಎಲ್ಲರೂ ಕನ್ನಡಿಗರು. ಕರ್ನಾಟಕದ ಬದುಕಿನ ಭಾಗವಾಗಿರುವ ಅವರ ಮಾತೃಭಾಷೆ ಯಾವುದೇ ಇದ್ದರೂ ಅವರು ಕನ್ನಡಿಗರು. ಕನ್ನಡ–ಕನ್ನಡಿಗ–ಕರ್ನಾಟಕ ಎನ್ನವ ಪರಿಕಲ್ಪನೆಯಲ್ಲಿ ಸಂಘಟನೆ, ಚಳವಳಿ ಮಾಡಬೇಕಂದ್ರ ಜನ ಬರಬೇಕಲ್ಲ? ಜನರು ಕೂಡಿಸಲು ಇಂಥ ಘೋಷಣೆಗಳು ಪ್ರೇರಣಾಶಕ್ತಿಯಾಗಿ ಕೆಲಸ ಮಾಡುತ್ತವೆ. ಈ ಸಂದೇಶ ಕೂಡಾ ಎಲ್ಲಾರೂ ಬರ್ರಿ, ಕೂಡಿ ಬದುಕೋಣ, ಕೂಡಿ ದುಡಿಯೋಣ, ಕೂಡಿ ಹಂಚಿಕೊಂಡು ತಿನ್ನೋಣ ಎನ್ನುವುದೂ ಇದೆ. ಮೊದಲು ಕೂಡಲಿಕ್ಕೆ ಬರ್ರಿ ಅಂದಂಗ. ಈ ಹಿನ್ನೆಲೆಯಲ್ಲಿ ’ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ’ ಎನ್ನುವ ಈ ನಾಲ್ಕು ಪದಗಳ ಪುಂಜ ಅನೇಕ ಸ್ತರಗಳಲ್ಲಿ, ಅನೇಕ ಸನ್ನಿವೇಶಗಳಲ್ಲಿ ಬಳಸಬಹುದು.

ಈ ಕವಿತೆಯ ಬೀಜ ನನ್ನ ತಲೆಯೊಳಗೆ ಹುಟ್ಟಿದ್ದು 1981–82ರಲ್ಲಿ. ಗೋಕಾಕ ಚಳವಳಿಯ ಮೊದಲ ಘಟ್ಟದಲ್ಲಿ. ಆಗ ಧಾರವಾಡದಲ್ಲಿ ಕನ್ನಡ ಕ್ರಿಯಾ ಸಮಿತಿ ಮಾಡಿಕೊಂಡಿದ್ವಿ. ಶಂ.ಬಾ.ಜೋಶಿ ಅಧ್ಯಕ್ಷರಾಗಿದ್ದರು. ಕವಿಗಳು, ಪತ್ರಕರ್ತರು ಎಲ್ಲರೂ ಇದ್ದರು. ಗೋಕಾಕ ಸಮಿತಿ ಧಾರವಾಡಕ್ಕ ಬಂದಾಗ ಸಂಸ್ಕೃತದ ವಿರುದ್ಧ ಹೋರಾಟ ಶುರು ಮಾಡಿದ್ವಿ. ಅದಕ್ಕೂ ಮೊದಲು ವಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ಗದಗಿನ ತೋಂಟದಾರ್ಯ ಸ್ವಾಮೀಜಿ, ಗೋಕಾಕ ಚಳವಳಿಯಾಗಬೇಕಂತ ಕರೆ ಕೊಟ್ಟರು.

ಗೋಕಾಕ ಸಮಿತಿಯು ಧಾರವಾಡಕ್ಕ ಬಂದಾಗ ಗೋಕಾಕರ ಪಟ್ಟ ಶಿಷ್ಯರೆಲ್ಲ ಸೇರಿ ‘ಗೋಕಾಕ್‌ ಗೋ ಬ್ಯಾಕ್‌’ ಎಂದು ಪ್ರತಿಭಟನೆ ಮಾಡಿದ್ವಿ. ಮರುದಿನ ಸಮಿತಿ ಬೆಳಗಾವಿಗೆ ಹೋದಾಗ ಪ್ರತಿಭಟನೆ ಎದುರಿಸಿತು. ಅಲ್ಲಿಂದ ವಿಜಾಪುರಕ್ಕೆ ಹೋದಾಗ ಉಗ್ರ ಪ್ರತಿಭಟನೆ ಎದುರಾಯಿತು. ಅಲ್ಲಿಂದ ಬೆಂಗಳೂರಿಗೆ... ಹಿಂಗ ಹೋದಲ್ಲೆಲ್ಲ ಪ್ರತಿಭಟನೆ ಆದಾಗ ಕರ್ನಾಟಕ ಪ್ರೌಢಶಾಲೆಗಳ ಪಠ್ಯಕ್ರಮದಲ್ಲಿ ಕನ್ನಡಕ್ಕೆ ಪ್ರಥಮ ಸ್ಥಾನ ಬೇಕೆಂದು ಶಿಫಾರಸು ಮಾಡಿ ಗೋಕಾಕರು ವರದಿ ಕೊಟ್ಟರು. ಆಗ ಮುಖ್ಯಮಂತ್ರಿಯಾಗಿದ್ದ ಗೂಂಡಾರಾವ್‌ ಅವರಿಗೆ ಬೇಕಿರಲಿಲ್ಲ. ಅವರ ಹಿಂದಿನ ಶಕ್ತಿ ಪೇಜಾವರ ಶ್ರೀಗಳಾಗಿದ್ದರು. ಸಂಸ್ಕೃತಕ್ಕೆ ಮೊದಲ ಸ್ಥಾನ ಸಿಗಬೇಕು ಎನ್ನುವುದು ಅವರ ಹುನ್ನಾರವಾಗಿತ್ತು.

1982 ಏಪ್ರಿಲ್‌ 2ರಂದು ‘ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ’ ಎಂದು ಘೋಷಣೆ ಹಾಕಿದ ಮೇಲೆ ಚಳವಳಿ ಶುರುವಾಯಿತು. ಗೂಂಡೂರಾಯರ ಸಂಧಾನ ಸೂತ್ರ ನಮಗೆ ಒಪ್ಪಿಗೆ ಆಗಲಿಲ್ಲ. ಆಮೇಲೆ ರಾಜಕುಮಾರ್‌ ನೇತೃತ್ವ ವಹಿಸಿಕೊಂಡ ಮೇಲೆ ದೊಡ್ಡ ಜನಾಂದೋಲನವಾಯಿತು. ಆಗ ಸರ್ಕಾರದ ಮೇಲೆ ಒತ್ತಡವಾದಾಗ 1982ರ ಜುಲೈ 27ರಂದು ಕನ್ನಡಕ್ಕೆ ಪ್ರಥಮ ಸ್ಥಾನವೆಂದು ಗುಂಡೂರಾಯರು ಘೋಷಿಸಿದರು. ವಿಜಯೋತ್ಸವ ಮಾಡಿ ಮುಗಿಸಿದೆವು. ಈಗಲೂ ಆ ಕವಿತೆ ರಿಂಗಣಿಸುತ್ತಲೇ ಇದೆ.

* * 

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾದ ಮೇಲೆ ‘ಕನ್ನಡ, ಕನ್ನಡ ಬರ್ರಿ ನಮ್ಮ ಸಂಗಡ’ ಎನ್ನುವ ಕವಿತೆ ನಾಡಗೀತೆಯ ರೀತಿ ಬೆಳೆಯಿತು. ಕನ್ನಡಪರ ಸಂಘಟನೆಗಳೆಲ್ಲ ಈಗಲೂ ಘೋಷಣೆ ಕೂಗ್ತಾವು...
ಚಂಪಾ, ಅಧ್ಯಕ್ಷರು,
ಸಾಹಿತ್ಯ ಸಮ್ಮೇಳನ ಅಧ್ಯಕ್ಷರು

Comments
ಈ ವಿಭಾಗದಿಂದ ಇನ್ನಷ್ಟು
ಮೇಯರ್‌ ಚುನಾವಣೆ ಇಂದು

ಮೈಸೂರು
ಮೇಯರ್‌ ಚುನಾವಣೆ ಇಂದು

24 Jan, 2018

ಕೆ.ಆರ್.ನಗರ
ಎಲ್ಲೆಲ್ಲಿ ಏನೇನು ಮಾಡಿದ್ದಾರೊ?

‘ಸಿದ್ದರಾಮಯ್ಯ ಅವರು ₹ 70 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ವಾಚ್ ಉಡುಗೊರೆ ಕೊಟ್ಟಿದ್ದು ಯಾರು ಎಂದು ಹೇಳಿಲ್ಲ, ಅದರ ಹಿನ್ನೆಲೆ ಬಹಿರಂಗ ಪಡಿಸಬೇಕು’ ...

24 Jan, 2018

ಮೈಸೂರು
ರಾಗಿಗೆ ₹ 2,300 ಬೆಂಬಲ ಬೆಲೆ

ಜಿಲ್ಲಾ ಕಾರ್ಯಪಡೆಯ ತೀರ್ಮಾನದಂತೆ ಗುಣಮಟ್ಟದ ರಾಗಿಯನ್ನು ಬೆಂಬಲ ಬೆಲೆ ಕೇಂದ್ರಗಳ ಮೂಲಕ ಮಾರಾಟ ಮಾಡಲು ಕೋರಲಾಗಿದೆ. ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ...

24 Jan, 2018
‘ತಾಲ್ಲೂಕಿನಲ್ಲಿ ಪಕ್ಷ ಸಂಘಟನೆಯೇ ನನ್ನ ಗುರಿ’

ಎಚ್.ಡಿ.ಕೋಟೆ
‘ತಾಲ್ಲೂಕಿನಲ್ಲಿ ಪಕ್ಷ ಸಂಘಟನೆಯೇ ನನ್ನ ಗುರಿ’

23 Jan, 2018

ಎಚ್.ಡಿ.ಕೋಟೆ
‘ದೂರು ಕೊಡಲು ಬಂದವರನ್ನೇ ಜೈಲಿಗಟ್ಟುವ ಸರ್ಕಾರ’

‘ರಾಜ್ಯದಲ್ಲಿ ಜನಸಾಮಾನ್ಯರು ನೆಮ್ಮದಿಯಿಂದ ಜೀವನಮಾಡಲಾಗುತ್ತಿಲ್ಲ, ಅವರ ಸ್ವಕ್ಷೇತ್ರದಲ್ಲಿಯೇ ಅಮಾನವೀಯ ಘಟನೆಗಳು ನಡೆಯುತ್ತಿವೆ. ಪೊಲೀಸರ ನಿಯಂತ್ರಣವನ್ನು ನಿವೃತ್ತ ಪೊಲೀಸ್‌ ಅಧಿಕಾರಿ ಕೆಂಪಯ್ಯ ಮಾಡುತ್ತಿದ್ದಾರೆ

23 Jan, 2018