ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರುದ್ಯೋಗಿಗಳಿಗೆ ‘ಖಚಿತ ಉದ್ಯೋಗ’ ಭರವಸೆ

Last Updated 24 ನವೆಂಬರ್ 2017, 6:10 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ ನಿರುದ್ಯೋಗಿಗಳಿಗೆ ಉತ್ತಮ ಭವಿಷ್ಯ ರೂಪಿಸಿಕೊಡುವ ಸಲುವಾಗಿ ಜಿಲ್ಲಾಡಳಿತವ ‘ಖಚಿತ ಉದ್ಯೋಗ’ ಎಂಬ ಆಶಯದೊಂದಿಗೆ ವಿನೂತನ ಬಗೆಯ ವೆಬ್‌ಸೈಟ್‌ ರೂಪಿಸುತ್ತಿದೆ.

ರಾಜ್ಯದಲ್ಲಿಯೇ ಜಿಲ್ಲಾಡಳಿತವೊಂದು ಈ ಬಗೆಯ ಪ್ರಯತ್ನಕ್ಕೆ ಮುಂದಾಗಿರುವುದು ಇದೇ ಮೊದಲು ಎನ್ನಲಾಗಿದೆ. ಶೈಕ್ಷಣಿಕವಾಗಿ ಅಷ್ಟು ವಿದ್ಯಾವಂತರಲ್ಲದರಿಗೂ ಉದ್ಯೋಗ ದೊರಕಿಸಿಕೊಡುವ ಆಶಯ ಹೊಂದಿರುವುದು ಇದರ ಮತ್ತೊಂದು ವಿಶೇಷವಾಗಿದೆ. ರಾಷ್ಟ್ರೀಯ ಸಂಖ್ಯಾವಿಜ್ಞಾನ ಕೇಂದ್ರವು (ಎನ್ಐಸಿ) ಈ ವೆಬ್‌ಸೈಟ್‌ ಅನ್ನು ರೂಪಿಸುತ್ತಿದೆ.

ಜಿಲ್ಲೆಯ ಎಲ್ಲ ಉದ್ಯೋಗಿಗಳ ಮಾಹಿತಿ ಕಲೆ ಹಾಕಿ ಉದ್ಯೋಗದಾತರೊಡನೆ ಹಂಚಿಕೊಂಡು ಇಬ್ಬರಿಗೂ ನೆರವಾಗುವುದು ಇದರ ಉದ್ದೇಶವಾಗಿದೆ.
ಮೂರು ಹಂತದ ಪ್ರಕ್ರಿಯೆ: ಉದ್ಯೋಗ ಆಕಾಂಕ್ಷಿಗಳು ಆನ್‌ಲೈನ್‌ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ವೆಬ್‌ಸೈಟಿನ ಪುಟ ತೆರೆದೊಡನೆ ‘ಹೆಸರು ನೋಂದಾಯಿಸಿ’ ಆಯ್ಕೆಯನ್ನು ಕ್ಲಿಕ್ ಮಾಡಿದಲ್ಲಿ ಒಂದಿಷ್ಟು ಮಾಹಿತಿ ಕೇಳುವ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಹೆಸರು, ಮೊಬೈಲ್‌ ಸಂಖ್ಯೆ, ಆಧಾರ್ ಸಂಖ್ಯೆ, ಜನ್ಮದಿನಾಂಕ ಇನ್ನಿತರ ವಿವರ ತುಂಬಿ ಸೇವ್‌ ಮಾಡಬೇಕು. ಹಾಗೆ ಮಾಡಿದಲ್ಲಿ ನಿಮಗೊಂದು ‘ಬಳಕೆದಾರರ ಸಂಖ್ಯೆ’ ದೊರೆಯುತ್ತದೆ. ಈ ಸಂಖ್ಯೆಯೇ ಮುಂದಿನ ಎಲ್ಲ ವ್ಯವಹಾರಗಳಿಗೆ ಆಧಾರವಾಗಿರುತ್ತದೆ.

ಅಭ್ಯರ್ಥಿಗಳು ಮುಂದಿನ ಹಂತಗಳಲ್ಲಿ ಮನೆಯ ವಿಳಾಸ, ವೈಯಕ್ತಿಕ ವಿವರ , ಶೈಕ್ಷಣಿಕ ಅರ್ಹತೆ, ಸೇವಾ ಅನುಭವದ ವಿವರ, ಕಾರ್ಯ ನಿರ್ವಹಿಸಲು ಬಯಸುವ ಕ್ಷೇತ್ರ, ಸಂಬಳದ ನಿರೀಕ್ಷೆ ಮತ್ತಿತರ ವಿವರ  ಭರ್ತಿ ಮಾಡಬೇಕು. ಅದಕ್ಕೆ ಪೂರಕವಾಗಿ ಶೈಕ್ಷಣಿಕ ಅರ್ಹತೆಯ ಪ್ರಮಾಣಪತ್ರಗಳು, ಜಾತಿ ಪ್ರಮಾಣಪತ್ರ ಮೊದಲಾದ ದಾಖಲೆಗಳನ್ನೂ ಅಪ್‌ಲೋಡ್‌ ಮಾಡಬೇಕಾಗುತ್ತದೆ. ಇಷ್ಟು ಮಾಡಿದಲ್ಲಿ ಅಭ್ಯರ್ಥಿಯ ಪಾಲಿನ ಕೆಲಸ ಮುಗಿದಂತೆ.

ಹೀಗೆ ಸಲ್ಲಿಸಲಾದ ಅರ್ಜಿಗಳು ನೇರವಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ತಲುಪುತ್ತವೆ. ಅಲ್ಲಿನ ಸಿಬ್ಬಂದಿ ಆನ್‌ಲೈನ್‌ ಮೂಲಕವೇ ಅದನ್ನು ಪರಿಶೀಲಿಸುತ್ತಾರೆ. ಅಭ್ಯರ್ಥಿ ಹಿನ್ನೆಲೆ,  ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿವೆಯೇ ಎಂದು ಹುಡುಕುತ್ತಾರೆ. ಎಲ್ಲವೂ ಸರಿ ಇದ್ದಲ್ಲಿ ಅರ್ಜಿಯನ್ನು ಮುಂದಿನ ಹಂತಕ್ಕೆ ವರ್ಗಾಯಿಸುತ್ತಾರೆ.

ಪೊಲೀಸರಿಂದ ಸ್ವೀಕಾರವಾದ ಅರ್ಜಿಗಳು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವನ್ನು ತಲುಪುತ್ತವೆ. ಅಲ್ಲಿ ರೋಸ್ಟರ್‌ ಪದ್ಧತಿ ನು ಅನುಸರಿಸಿ ಅಭ್ಯರ್ಥಿಗಳ ಪಟ್ಟಿಯನ್ನು ಸಂಬಂಧಿಸಿದ ಉದ್ಯೋಗದಾತರಿಗೆ ರವಾನೆ ಮಾಡಲಾಗುತ್ತದೆ. ಸರ್ಕಾರದ ಮೀಸಲಾತಿ ನಿಯಮವನ್ನೂ ಇಲ್ಲಿ ಅನುಸರಿಸಲಾಗುತ್ತದೆ.

ಒಂದೆಡೆ ಲಭ್ಯ: ಎಲ್ಲ ಉದ್ಯೋಗ ಆಕಾಂಕ್ಷಿಗಳ ವಿವರವೂ ಒಂದೆಡೆ ಲಭ್ಯವಾಗುವ ಜೊತೆಗೆ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಅಭ್ಯರ್ಥಿಗಳ ಪಟ್ಟಿಯು ಉದ್ಯೋಗದಾತ ಕಂಪೆನಿಗಳ ಕೈಸೇರುವುದರಿಂದ ಹೆಚ್ಚಿನ ಅನುಕೂಲ ಆಗಲಿದೆ. ನಿರುದ್ಯೋಗಿಗಳ ‘ಡಿಜಿಟಲ್‌ ಡಾಟಾಬೇಸ್‌’ ಸೃಷ್ಟಿಯಾಗಲಿದ್ದು, ಅದಕ್ಕೆ ಪೂರಕವಾಗಿ ಯೋಜನೆಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗಲಿದೆ.

ಕಂಪೆನಿಗಳು ಮುಂದೆ: ಜಿಲ್ಲೆಯಲ್ಲಿ ಒಟ್ಟು 64 ಬೃಹತ್‌, ಮಧ್ಯಮ ಗಾತ್ರದ ಕೈಗಾರಿಕೆಗಳು ಹಾಗೂ 1633 ಸಣ್ಣ ಕೈಗಾರಿಕೆಗಳು ಇವೆ. ಬಿಡದಿ, ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳ ಮೂಲಕ ಪ್ರತಿ ವರ್ಷ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ರಾಮನಗರವು ರಾಜಧಾನಿಗೆ ಹತ್ತಿರವಿದ್ದು ಅಲ್ಲಿಂದಲೂ ಬೇಡಿಕೆ ಇದೆ.

‘ಸಾಕಷ್ಟು ಕಂಪೆನಿಗಳು ಉದ್ಯೋಗ ನೀಡಲು ಮುಂದೆ ಬರುತ್ತಿವೆ. ವಿಸ್ಕಾನ್‌ ಇಂಡಿಯಾ ಎಂಬ ಎರೋಸ್ಪೇಸ್ ಕಂಪೆನಿಯು ಸಾವಿರಾರು ನಿರುದ್ಯೋಗಿಗಳಿಗೆ ತರಬೇತಿ ನೀಡಲು ಆಸಕ್ತಿ ತಾಳಿದೆ. ಇಂತಹ ಕಂಪೆನಿಗಳಿಗೆ ಆಕಾಂಕ್ಷಿಗಳ ಪಟ್ಟಿಯನ್ನು ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಬಿ.ಆರ್. ಮಮತಾ ತಿಳಿಸಿದರು.

ವರ್ಷಾಂತ್ಯದವರೆಗೆ ನೋಂದಣಿ
ಉದ್ಯೋಗ ಆಕಾಂಕ್ಷಿಗಳು ಡಿಸೆಂಬರ್‌ 31ರವರೆಗೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲು ಯೋಜಿಸಲಾಗಿದೆ. ಜನವರಿ ಅಂತ್ಯಕ್ಕೆ ಈ ಎಲ್ಲ ಅರ್ಜಿಗಳ ಪರಿಶೀಲನೆ ಕಾರ್ಯ ನಡೆಯಲಿದೆ. ಫೆಬ್ರುವರಿಯಲ್ಲಿ ಬೃಹತ್‌ ಉದ್ಯೋಗ ಮೇಳ ಆಯೋಜನೆ ಮೂಲಕ ಉದ್ಯೋಗ ಹಂಚಿಕೆ ಕಾರ್ಯಕ್ಕೆ ಚಾಲನೆ ನೀಡುವುದು. ನಂತರದಲ್ಲಿ ಆಸಕ್ತ ಕಂಪೆನಿಗಳಿಗೆ ಆಕಾಂಕ್ಷಿಗಳ ಮಾಹಿತಿ ವಿನಿಮಯ ಮಾಡಿಕೊಳ್ಳುವ ಗುರಿಯನ್ನು ಹೊಂದಲಾಗಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಮಮತಾ.

ಸದ್ಯ ವೆಬ್‌ಸೈಟ್‌ ramanagara–employment.kar.nic.in ನಲ್ಲಿ ಲಭ್ಯವಿದೆ. ಶೀಘ್ರದಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಆಗಲಿದೆ. ಅದರ ಲಿಂಕ್‌ ಜಿಲ್ಲಾಡಳಿತದ ವೆಬ್‌ಸೈಟಿನಲ್ಲಿಯೂ ಸಿಗಲಿದೆ.

* * 

ಜಿಲ್ಲೆಯ ಎಲ್ಲ ನಿರುದ್ಯೋಗಿಗಳಿಗೆ ಉದ್ಯೋಗ ಭರವಸೆಯೊಂದಿಗೆ ಈ ವೆಬ್‌ಸೈಟ್ ರೂಪಿಸಲಾಗಿದೆ. ಇದರಿಂದ ಅವರು ಉದ್ಯೋಗಕ್ಕೆಂದು ಅಲೆದಾಡುವುದು ತಪ್ಪಲಿದೆ
ಡಾ.ಬಿ.ಆರ್. ಮಮತಾ
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT