ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲ ಪಾಳಯದಲ್ಲಿ ಆಕಾಂಕ್ಷಿಗಳ ಸಾಲು

Last Updated 24 ನವೆಂಬರ್ 2017, 6:41 IST
ಅಕ್ಷರ ಗಾತ್ರ

ಚಾಮರಾಜನಗರ: ಹನೂರು ವಿಧಾನಸಭಾ ಕ್ಷೇತ್ರ ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯಲ್ಲಿಯೇ ಹೆಚ್ಚು ಕುತೂಹಲ ಮೂಡಿಸಿದೆ. ಇತರೆ ಮೂರು ಕ್ಷೇತ್ರಗಳಿಗಿಂತ ಹನೂರು ಕ್ಷೇತ್ರದತ್ತ ರಾಜಕೀಯ ಮುಖಂಡರ ಚಿತ್ತ ನೆಟ್ಟಿದೆ.

ಪಕ್ಷಗಳ ನಡುವಣ ಜಿದ್ದಾಜಿದ್ದಿಗಿಂತಲೂ, ಬಿಜೆಪಿ ಮುಖಂಡರ ಪಾಲಿಗೆ ಹನೂರು ಪ್ರತಿಷ್ಠೆಯ ಕ್ಷೇತ್ರವಾಗಿ ಪರಿಣಮಿಸಿದೆ. ಬಿಜೆಪಿ ಜಿಲ್ಲಾ ಉಸ್ತುವಾರಿಯೂ ಆಗಿರುವ ವಿ. ಸೋಮಣ್ಣ ಮತ್ತು ಮಾಜಿ ಶಾಸಕಿ ಪರಿಮಳಾ ನಾಗಪ್ಪ ಅವರ ನಡುವಣ ಮುಸುಕಿನ ಗುದ್ದಾಟ ಗುಟ್ಟಾಗಿ ಉಳಿದಿಲ್ಲ.

ಕ್ಷೇತ್ರದಲ್ಲಿ ಒಂದಷ್ಟು ಪ್ರವಾಸ ಮಾಡಿ ಕೆಲವೆಡೆ ಪ್ರಭಾವ ಮೂಡಿಸಿರುವ ಸೋಮಣ್ಣ ತಮ್ಮ ಸ್ಪರ್ಧೆ ಖಚಿತ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಅತ್ತ ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತು ಬಿಜೆಪಿಗೆ ಬಂದಿರುವ ಪರಿಮಳಾ ನಾಗಪ್ಪ ಅವರು ತಮ್ಮ ಕುಟುಂಬಕ್ಕೇ ವರಿಷ್ಠರು ಟಿಕೆಟ್ ನೀಡಲಿದ್ದಾರೆ ಎನ್ನುವ ಮೂಲಕ ಪುತ್ರ ಪ್ರೀತಂ ಅವರನ್ನು ರಾಜಕಾರಣಕ್ಕೆ ತರುವ ಸೂಚನೆ ನೀಡಿದ್ದಾರೆ.

ಒಂದು ಟಿಕೆಟ್‌, ನಾಲ್ವರು ಆಕಾಂಕ್ಷಿಗಳು: ಸೋಮಣ್ಣ ಅವರ ವರ್ಚಸ್ಸು ಮತ್ತು ಅನುಭವ ವರಿಷ್ಠರು ಅವರಿಗೆ ಮಣೆ ಹಾಕಲು ಪೂರಕವಾಗಿದೆ. ಜೆಡಿಎಸ್‌ ತೊರೆದು ಬಂದಿರುವ ಪರಿಮಳಾ ಅವರಿಗೂ ಆದ್ಯತೆ ನೀಡುವುದು ಅನಿವಾರ್ಯವಾಗಿದೆ. ಇದು ಪಕ್ಷದ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದೆ.

ಪಕ್ಷದ ಕಾರ್ಯಕರ್ತರು ಬಣಗಳಲ್ಲಿ ಹಂಚಿಹೋಗಿದ್ದಾರೆ. ಇವರ ನಡುವೆಯೇ ಸಾಮರಸ್ಯ ಇಲ್ಲದಂತಾಗಿದೆ. ಯಾರಿಗೇ ಟಿಕೆಟ್‌ ನೀಡಿದರೂ ಇನ್ನೊಂದು ಬಣದಲ್ಲಿ ಅಸಮಾಧಾನ ಭುಗಿಲೇಳುವ ಭೀತಿ ನಾಯಕರಲ್ಲಿ ಮೂಡಿದೆ. ಹೀಗಾಗಿ, ಇಬ್ಬರ ಮನವೊಲಿಕೆಗೂ ತೆರೆಮರೆಯಲ್ಲಿ ಸಂಧಾನ ಪ್ರಯತ್ನಗಳು ನಡೆಯುತ್ತಿವೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ಕೆ. ಶಿವಕುಮಾರ್‌ ಬೆಂಬಲ ದೊರಕಿರುವುದು ಪರಿಮಳಾ ಅವರ ಶಕ್ತಿ ಹೆಚ್ಚಿಸಿದೆ.

ಇವರಿಬ್ಬರ ನಡುವೆ, ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿರುವ ಸಿ.ಎಂ. ರಾಜೇಂದ್ರ ಕುಮಾರ್ ತಮ್ಮದೇ ಹೆಸರಿನ ಟ್ರಸ್ಟ್‌ ನಡೆಸುವ ಮೂಲಕ ಜನರಿಗೆ ಹತ್ತಿರವಾಗಲು ಪ್ರಯತ್ನಿಸುತ್ತಿದ್ದಾರೆ. ತಾವೂ ಈ ಬಾರಿ ಪಕ್ಷದ ಪ್ರಬಲ ಟಿಕೆಟ್‌ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ. ದಿಡ್ನಳ್ಳಿ, ಹೂಗ್ಯಂ ಸುತ್ತಮುತ್ತ ಅವರು ಜನಬೆಂಬಲ ಪಡೆದುಕೊಂಡಿದ್ದಾರೆ. ಪಕ್ಷದಲ್ಲಿ ಇತ್ತೀಚೆಗೆ ಗುರುತಿಸಿಕೊಳ್ಳುತ್ತಿರುವ ಮಂಜುನಾಥ್‌ ಕೂಡ ಟಿಕೆಟ್‌ಗಾಗಿ ವರಿಷ್ಠರನ್ನು ಓಲೈಸುವುದರಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

ಕ್ಷೇತ್ರದಲ್ಲಿ ಪಕ್ಷವಾರು ಸ್ಪರ್ಧೆಗಿಂತಲೂ ಈಗ ಬಿಜೆಪಿ ಮುಖಂಡರ ನಡುವಣ ಪೈಪೋಟಿಯೇ ಕುತೂಹಲದ ಬಿಂದುವಾಗಿದೆ. ಇದರ ಪರಿಣಾಮ ಕಾರ್ಯಕರ್ತರ ಮೇಲಾಗುತ್ತಿದ್ದು, ಬಣಗಳ ಪ್ರತಿಷ್ಠೆಯ ಕಾರಣ ಮತಗಳನ್ನು ಕಳೆದುಕೊಳ್ಳುವ ಭೀತಿ ಪಕ್ಷದ ಹಿರಿಯ ನಾಯಕರಲ್ಲಿ ಮೂಡಿದೆ.

‘ಹೊರಗಿನವರು’: ತಮ್ಮ ಎದುರು ಕಣಕ್ಕಿಳಿಯಲು ಬಯಸುತ್ತಿರುವ ಅಭ್ಯರ್ಥಿಗಳು ‘ಹೊರಗಿನವರು’ ಎನ್ನುವುದನ್ನು ಹಾಲಿ ಶಾಸಕ, ಕಾಂಗ್ರೆಸ್‌ನ ಆರ್. ನರೇಂದ್ರ ಪ್ರಮುಖ ದಾಳವನ್ನಾಗಿ ಬಳಸಿಕೊಳ್ಳಲು ಉದ್ದೇಶಿಸಿದ್ದಾರೆ. ಇವರು ಯಾರೂ ಮೂಲ ಬಿಜೆಪಿಗರಲ್ಲ ಎನ್ನುವುದೂ ಅವರಿಗೆ ವರದಾನವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ವಿ. ಸೋಮಣ್ಣ ಆಗಾಗ್ಗೆ ಭೇಟಿ ನೀಡಿ ಕಾರ್ಯಕರ್ತರ ಸಭೆ ನಡೆಸುತ್ತಿದ್ದರೂ, ಅವರು ನಮ್ಮವರೇ ಎಂಬ ಭಾವನೆ ಜನರಲ್ಲಿ ಮೂಡಬೇಕಿದೆ. ಪರಿಮಳಾ ನಾಗಪ್ಪ ಸ್ಥಳೀಯರೇ ಆಗಿದ್ದರೂ, ಸದ್ಯ ಬೆಂಗಳೂರಿನಲ್ಲಿರುವ ಅವರ ಮಗ ಡಾ. ಪ್ರೀತಂ, ಕ್ಷೇತ್ರದ ಜನರಿಗೆ ಪರಿಚಿತರಲ್ಲ. ಇದುವರೆಗೂ ಅವರು ರಾಜಕೀಯ ವೇದಿಕೆಗಳಲ್ಲಿ ಕಾಣಿಸಿಕೊಂಡಿಲ್ಲ. ರಾಜೇಂದ್ರ ಕುಮಾರ್‌ ಮತ್ತು ಜೆಡಿಎಸ್‌ ಅಭ್ಯರ್ಥಿ ಎಂದು ಬಹುತೇಕ ಖಚಿತವಾಗಿರುವ ಲೋಕೇಶ್‌ ಮೌರ್ಯ ಕೂಡ ಹೊರಗಿನವರಾಗಿದ್ದಾರೆ.

ಲಾಭದ ಲೆಕ್ಕಾಚಾರದಲ್ಲಿ ನರೇಂದ್ರ: ಕಮಲ ಪಾಳಯದಲ್ಲಿನ ಒಳಜಗಳ ಆರ್. ನರೇಂದ್ರ ಅವರಿಗೆ ತುಸು ನೆಮ್ಮದಿ ಮೂಡಿಸಿದೆ. ಪರಿಮಳಾ ನಾಗಪ್ಪ ಕುಟುಂಬದಿಂದ ಯಾರೇ ಸ್ಪರ್ಧಿಸಿದರೂ ಅವರು ತಮಗೆ ಪ್ರಬಲ ಎದುರಾಳಿ ಆಗಲಾರರು ಎನ್ನುವುದು ಅವರ ವಿಶ್ವಾಸ. ಆದರೆ, ಸೋಮಣ್ಣ ಅವರನ್ನು ಎದುರಿಸುವುದು ಸುಲಭವಲ್ಲ. ಸೋಮಣ್ಣ ಸ್ಪರ್ಧೆ ಖಚಿತವಾದರೆ ತಮ್ಮ ಗೆಲುವು ಕಷ್ಟವಾಗಲಿದೆ. ಹೀಗಾಗಿ, ಅವರ ಪ್ರಭಾವಳಿ ಬಗ್ಗೆ ಎಚ್ಚರವಹಿಸುವಂತೆ ನರೇಂದ್ರ ಅವರು ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಪರಿಮಳಾ ಅವರನ್ನು ವಿಧಾನಪರಿಷತ್‌ಗೆ ಆಯ್ಕೆ ಮಾಡುವ ಭರವಸೆ ನೀಡಿ, ಸೋಮಣ್ಣ ಅವರ ಹಾದಿ ಸುಗಮಗೊಳಿಸುವ ಉದ್ದೇಶ ಮುಖಂಡರದು. ಮತ್ತೆ ರಾಜಕೀಯ ಅಸ್ತಿತ್ವ ಕಂಡುಕೊಳ್ಳಲು ಬಯಸುತ್ತಿರುವ ಪರಿಮಳಾ ಇದನ್ನು ಒಪ್ಪಿಕೊಳ್ಳುತ್ತಾರೆ ಎಂಬ ಲೆಕ್ಕಾಚಾರ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT