ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕಿಗೊಂದು ವಿದ್ಯುತ್‌ ಟಿ.ಸಿ ದುರಸ್ತಿ ಕೇಂದ್ರ

Last Updated 24 ನವೆಂಬರ್ 2017, 7:09 IST
ಅಕ್ಷರ ಗಾತ್ರ

ಧಾರವಾಡ: ‘ಮೇಲಿಂದ ಮೇಲೆ ವಿದ್ಯುತ್‌ ಪೂರೈಕೆಯಲ್ಲಿ ಉಂಟಾಗುತ್ತಿರುವ ತೊಂದರೆ ತಪ್ಪಿಸಲುಪ್ರತಿ ತಾಲ್ಲೂಕಿಗೊಂದು ಟ್ರಾನ್ಸ್‌ಫಾರ್ಮರ್‌(ಟಿ.ಸಿ)
ದುರಸ್ತಿ ಕೇಂದ್ರಗಳನ್ನು ಆರಂಭಿಸಲಾಗುವುದು. ಈಗಾಗಲೇ 140 ದುರಸ್ತಿ ಕೇಂದ್ರಗಳು ಕಾರ್ಯಾರಂಭ ಮಾಡಿವೆ’ ಎಂದು ಇಂಧನ ಸಚಿವ ಡಿ.ಕೆ ಶಿವಕುಮಾರ ಹೇಳಿದರು.

ತಾಲ್ಲೂಕಿನ ಶೆಡಬಾಳ ಗ್ರಾಮದಲ್ಲಿ 110/11 ಕೆ.ವಿ ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರಕ್ಕೆ ಗುರುವಾರ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ‘ಇದರ ಜತೆಗೆ ಪ್ರತಿ ತಾಲ್ಲೂಕಿಗೆ ಒಂದರಂತೆ ಟ್ರಾನ್ಸ್‌ಫಾರ್ಮರ್‌ ಬ್ಯಾಂಕ್‌ ಆರಂಭಿಸಲಾಗುವುದು. ಅಲ್ಲದೇ, ಸದ್ಯ ಇರುವ ಟ್ರಾನ್ಸ್‌ಫಾರ್ಮರ್‌ಗಳು ಹೆಚ್ಚು ವಿದ್ಯುತ್‌ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಆಗುತ್ತಿರುವ ನಷ್ಟ ಕಡಿಮೆ ಮಾಡಲು ಅವುಗಳನ್ನು ಕಡಿಮೆ ವಿದ್ಯುತ್‌ ಬಳಸುವಂತೆ ಪರಿವರ್ತಿಸಲು ಆದೇಶಿಸಲಾಗಿದೆ’ ಎಂದರು.

‘ರಾಜ್ಯದ ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ 120 ತಾಲ್ಲೂಕುಗಳನ್ನು ಆಯ್ಕೆ ಮಾಡಿ ಸೌರ ವಿದ್ಯುತ್‌ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗಿದೆ. ಒಂದು ಸಾವಿರಕ್ಕೂ ಹೆಚ್ಚು ಮೆಗಾವಾಟ್‌ ವಿದ್ಯುತ್‌ ಉತ್ಪಾದನೆ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗ ರಾಜ್ಯದ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 14 ಸಾವಿರ ಮೆಗಾವಾಟ್‌ ಇತ್ತು.

ಕಳೆದ ನಾಲ್ಕು ವರ್ಷಗಳಲ್ಲಿ ಇದು 20 ಸಾವಿರ ಮೆಗಾವಾಟ್‌ಗೆ ಹೆಚ್ಚಳವಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಇಷ್ಟೊಂದು ಉತ್ಪಾದನೆ ಹೆಚ್ಚಾಗಿರುವುದು ಒಂದು ದಾಖಲೆ. ಹಲವು ತೊಂದರೆಗಳ ನಡುವೆಯೂ ರಾಜ್ಯದಲ್ಲಿ ವಿದ್ಯುತ್‌ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಕೇಂದ್ರ ಸರ್ಕಾರ ಕಲ್ಲಿದ್ದಲು ಸಮಸ್ಯೆ ಸೃಷ್ಟಿಸುತ್ತಿದೆ. ರಾಜ್ಯ ಸರ್ಕಾರ ಛತ್ತೀಸಗಡದೊಂದಿಗಿನ ಒಪ್ಪಂದ ರದ್ದು ಮಾಡಿಕೊಂಡಿದೆ ಎಂದು ಕೇಂದ್ರ ಸಚಿವ ರಮಣಸಿಂಗ್ ನೀಡಿದ ಹೇಳಿಕೆ ತಪ್ಪು ಮಾಹಿತಿಯಿಂದ ಕೂಡಿದ್ದು. ಕೇಂದ್ರ ಸರ್ಕಾರವೇ ಕಲ್ಲಿದ್ದಲು ಬ್ಲಾಕ್‌ ಹಂಚಿಕೆ ಮಾಡಬೇಕು. ಕಲ್ಲಿದ್ದಲು ಸಮಸ್ಯೆ ನೀಗಿಸಲು ಈಗಾಗಲೇ ಹೊರಗಿನಿಂದ ಖರೀದಿ ಮಾಡಲು ಟೆಂಡರ್‌ ಕರೆಯಲಾಗಿದೆ’ ಎಂದು ಅವರು ಹೇಳಿದರು.

‘ಕಾಂಗ್ರೆಸ್‌ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಂದ ಧೃತಿಗೆಟ್ಟಿರುವ ವಿರೋಧಪಕ್ಷಗಳ ನಾಯಕರು ಹಾದಿ, ಬೀದಿಯಲ್ಲಿ ಆರೋಪ ಮಾಡುತ್ತಾರೆ. ಜನ ಅವರನ್ನು ಆಯ್ಕೆ ಮಾಡಿ ವಿಧಾನಸಭೆಗೆ ಕಳಿಸಿರುವುದು ಆಡಳಿತ ಪಕ್ಷ ತಪ್ಪು ಮಾಡಿದಾಗ ಅದನ್ನು ಕಿವಿ ಹಿಂಡಿ ಸರಿಪಡಿಸಬೇಕು ಎನ್ನುವ ಕಾರಣಕ್ಕೆ. ಆದರೆ, ಆಧಾರ ರಹಿತ ಆರೋಪಗಳನ್ನು ಮಾಡುವ ಬಿಜೆಪಿ ನಾಯಕರು ವಿಧಾನಸಭೆಯಲ್ಲಿ ಮೌನದ ಮೊರೆ ಹೋಗುತ್ತಾರೆ’ ಎಂದು ಟೀಕಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲನಗೌಡ ಭಾವಿಕಟ್ಟಿ, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಾವೇದ ಅಖ್ತರ್‌, ಬಾಗಲಕೋಟೆ ವಿಭಾಗದ ಮುಖ್ಯ ಎಂಜಿನಿಯರ್ ನೀಲಾ ನಾಯ್ಕ, ರಮೇಶ ಬೆಂಡಿಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT