ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಕಾರ್ಮಿಕರಿಗೆ ವಾಷಿಂಗ್‌ ಮಷಿನ್‌

Last Updated 24 ನವೆಂಬರ್ 2017, 8:17 IST
ಅಕ್ಷರ ಗಾತ್ರ

ಕಲಬುರ್ಗಿ: ಪೌರಕಾರ್ಮಿಕರು ತಮ್ಮ ಬಟ್ಟೆ ತೊಳೆದುಕೊಳ್ಳಲು ಮಹಾನಗರ ಪಾಲಿಕೆಯಿಂದ ವಾಷಿಂಗ್‌ ಮಷಿನ್‌ ವ್ಯವಸ್ಥೆ ಕಲ್ಪಿಸಿದೆ. ಕೆಲಸದ ಒತ್ತಡದಿಂದ ಬಳಲುವ ಅವರು ಕೆಲಕಾಲ ವಿರಮಿಸಲು ಶೆಡ್‌ ನಿರ್ಮಿಸಲಾಗಿದೆ. ಅಲ್ಲಿ ಸ್ತ್ರೀ ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯಗಳನ್ನು ಕಟ್ಟಲಾಗಿದೆ. ಪುರುಷರು–ಮಹಿಳೆಯರು ಪ್ರತ್ಯೇಕವಾಗಿ ಬಟ್ಟೆ ತೊಳೆಯಲು ಹಾಗೂ ಅವುಗಳನ್ನು ಒಣಗಿಸಲು ವ್ಯವಸ್ಥೆ ಮಾಡಲಾಗಿದೆ.

ಇಲ್ಲಿಯ ಸಾರ್ವಜನಿಕ ಉದ್ಯಾನವನ ಪ್ರದೇಶದ ಪಾಲಿಕೆಯ ವಾಹನ ನಿಲುಗಡೆ ಶೆಡ್‌ ಪಕ್ಕವೇ ಈ ಕಟ್ಟಡ ತಲೆ ಎತ್ತಿದೆ. ಇದಕ್ಕಾಗಿ ₹35 ಲಕ್ಷ ವೆಚ್ಚ ಮಾಡಲಾಗಿದೆ. ತ್ಯಾಜ್ಯ ವಿಲೇವಾರಿಗೆ ಮೀಸಲಿರುವ ನಿಧಿಯಲ್ಲಿ ₹20 ಲಕ್ಷ ಹಾಗೂ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ₹15 ಲಕ್ಷ ಅನುದಾನ ಬಳಸಿಕೊಳ್ಳಲಾಗಿದೆ.

ಈ ಶೆಡ್‌ನಲ್ಲಿಯೇ ಒಂದು ಕೋಣೆಯನ್ನು ನಿರ್ಮಿಸಲಾಗಿದೆ. ಅಲ್ಲಿ ಬೃಹದಾಕಾರದ ವಾಷಿಂಗ್‌ ಮಷಿನ್‌ ಅಳವಡಿಸಲಾಗಿದೆ. ಪೌರಕಾರ್ಮಿಕರು ಮತ್ತು ಪಾಲಿಕೆಯ ಕೆಳಹಂತದ ಸಿಬ್ಬಂದಿ ಕೈಯಿಂದ ಇಲ್ಲವೆ ವಾಷಿಂಗ್‌ ಮಷಿನ್‌ನಲ್ಲಿ ಬಟ್ಟೆ ತೊಳೆದುಕೊಳ್ಳಬಹುದು.

110 ಕೆ.ಜಿ.ಸಾಮರ್ಥ್ಯ: ‘ಕೈಗಾರಿಕೆಗಳಲ್ಲಿ ಬಳಸುವ ವಾಷಿಂಗ್‌ ಮಷಿನ್‌ ಇದು. 110 ಕೆ.ಜಿ. ಸಾಮರ್ಥ್ಯ ಹೊಂದಿದೆ. ಅದರ ಪಕ್ಕವೇ ಬಟ್ಟೆ ಒಣಗಿಸುವ ಯಂತ್ರ ಇದೆ. ಈ ವಾಷಿಂಗ್‌ ಮಷಿನ್‌ ಹಾಗೂ ಬಟ್ಟೆ ಒಣಗಿಸುವ ಯಂತ್ರಕ್ಕೆ ₹5 ಲಕ್ಷ ಪಾವತಿಸಲಾಗಿದೆ’ ಎಂದು ಪಾಲಿಕೆ ಪರಿಸರ ಎಂಜಿನಿಯರ್‌ ಮುನಾಫ್‌ ಪಟೇಲ್‌ ಹೇಳಿದರು.

‘ಈ ವಾಷಿಂಗ್‌ ಮಷಿನ್‌ ಹಾಗೂ ಬಟ್ಟೆ ತೊಳೆಯುವ ಸ್ಥಳಕ್ಕೆ ದಿನದ 24 ಗಂಟೆಗಳ ಕಾಲವೂ ನೀರು ಪೂರೈಸಲಾಗುತ್ತಿದೆ. ವಾಷಿಂಗ್‌ ಪೌಡರ್‌ನ್ನು ನಾವು ನೀಡುವುದಿಲ್ಲ. ಅದನ್ನು ಅವರೇ ತರಬೇಕು. ಇದರ ಬಳಕೆಯ ಬಗ್ಗೆ ಎಲ್ಲರಿಗೂ ತರಬೇತಿ ನೀಡಿದ್ದೇವೆ. ಪುರುಷ ಸಿಬ್ಬಂದಿ ಈಗಾಗಲೇ ಇದನ್ನು ಬಳಸುತ್ತಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

‘ನಾವು ಮನೆಗಳಲ್ಲಿಯೇ ಬಟ್ಟೆ ತೊಳೆದು ರೂಢಿ. ಇಲ್ಲಿಗೆ ಬಂದು ಬಟ್ಟೆ ತೊಳೆದುಕೊಂಡು ಮತ್ತೆ ಮನೆಗೆ ಹೋಗಲು ಆಗುವುದಿಲ್ಲ. ಎರಡೆರಡು ಬಾರಿ ಓಡಾಡಬೇಕಾಗುತ್ತದೆ. ಹೀಗಾಗಿ ಇನ್ನೂ ಇದನ್ನು ಬಳಸುತ್ತಿಲ್ಲ’ ಎಂದು ಪೌರಕಾರ್ಮಿಕರಾದ ಯಲ್ಲಮ್ಮ ಮತ್ತು ಪುಷ್ಪಾ ಪ್ರತಿಕ್ರಿಯಿಸಿದರು.

‘ವಾಷಿಂಗ್‌ ಮಷಿನ್‌ ಮತ್ತು ಡ್ರೈಯರ್‌ ನಮಗೆ ಅನುಕೂಲವಾಗಿದೆ. ನಾವು ಇಲ್ಲಿ ಬಟ್ಟೆ ತೊಳೆದುಕೊಳ್ಳುತ್ತಿದ್ದೇವೆ’ ಎಂದು ಪಾಲಿಕೆಯ ವಾಹನ ಚಾಲಕ ಕೈಲಾಸ ಮತ್ತು ನೌಕರ ಮಲ್ಲಿಕಾರ್ಜುನ ಹೇಳಿದರು.

‘ಇಲ್ಲಿ ಸ್ನಾನಗೃಹ ನಿರ್ಮಿಸಬೇಕು. ಸೋಲಾರ್‌ ವಾಟರ್‌ ಹೀಟರ್‌ ಅಳವಡಿಸಿ ಬಿಸಿನೀರು ಬರುವಂತೆ ವ್ಯವಸ್ಥೆ ಮಾಡಬೇಕು. ಹೀಗಾದರೆ ಕೆಲಸ ಮುಗಿದ ನಂತರ ಇಲ್ಲಿಗೆ ಬಂದು ಸ್ನಾನ ಮಾಡಿ, ಬಟ್ಟೆ ತೊಳೆದುಕೊಂಡು ಮನೆಗೆ ಹೋಗಬಹುದು’ ಎಂದು ಅಲ್ಲಿದ್ದ ಕೆಲ ಪುರುಷ ಸಿಬ್ಬಂದಿ ಹೇಳಿದರು.

* * 

ಪೌರಕಾರ್ಮಿಕರ ಕಲ್ಯಾಣ ಯೋಜನೆಯಲ್ಲಿ ಈ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶುದ್ಧ ಕುಡಿಯುವ ನೀರಿಗೆ ಆರ್‌.ಒ ಯಂತ್ರ ಪೂರೈಸಲಾಗಿದೆ.
ಪಿ.ಸುನೀಲಕುಮಾರ್‌,
ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT