ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಟ್ಟೆ ಪ್ರಿಯರಿಗೆ ತಟ್ಟಿದ ಬೆಲೆ ಏರಿಕೆ ಕಾವು

Last Updated 24 ನವೆಂಬರ್ 2017, 8:30 IST
ಅಕ್ಷರ ಗಾತ್ರ

ಕೋಲಾರ: ಮಾರುಕಟ್ಟೆಯಲ್ಲಿ ಕೋಳಿ ಮೊಟ್ಟೆ ದರವು ದಾಖಲೆಯ ಏರಿಕೆ ಕಂಡಿದ್ದು, ಕುಕ್ಕುಟ ಉದ್ಯಮಿಗಳ ಮೊಗದಲ್ಲಿ ಸಂತಸ ಮೂಡಿದೆ. ಮೊಟ್ಟೆ ಜತೆಗೆ ಕೋಳಿ ಮಾಂಸದ ಬೆಲೆಯು ಏರು ಗತಿಯಲ್ಲಿ ಸಾಗಿದ್ದು, ಮೊಟ್ಟೆ ಹಾಗೂ ಮಾಂಸ ಪ್ರಿಯರಿಗೆ ದರ ಏರಿಕೆ ಬಿಸಿ ತಟ್ಟಿದೆ.

20 ದಿನಗಳಿಂದ ಮೊಟ್ಟೆ ಬೆಲೆಯು ಹೆಚ್ಚುತ್ತಲೇ ಇದ್ದು, ಬೇಕರಿ, ಹೋಟೆಲ್‌, ಡಾಬಾ ಹಾಗೂ ಚಿಲ್ಲರೆ ಅಂಗಡಿ ಮಾಲೀಕರು ತತ್ತರಿಸಿದ್ದಾರೆ. ಸ್ಥಳೀಯ ಮಾರುಕಟ್ಟೆಯಲ್ಲಿ ಅಕ್ಟೋಬರ್‌ನಲ್ಲಿ 100 ಮೊಟ್ಟೆಗಳ ಸಗಟು ದರ ₹ 350 ಇತ್ತು. ಈಗ ₹ 560 ಇದೆ. ಈ ಹಿಂದೆ ₹ 3.50 ಇದ್ದ ಪ್ರತಿ ಮೊಟ್ಟೆಯ ಚಿಲ್ಲರೆ ಮಾರಾಟ ದರ ಈಗ ₹ 6ಕ್ಕೆ ಏರಿದೆ. ಅದೇ ರೀತಿ ಕೋಳಿ ಮಾಂಸದ ಬೆಲೆ ಕೆ.ಜಿಗೆ ₹ 130ರಿಂದ ₹ 170ಕ್ಕೆ ಜಿಗಿದಿದೆ.

ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಎಲ್ಲೆಡೆ ತರಕಾರಿ ಮತ್ತು ಸೊಪ್ಪಿನ ಬೆಳೆಗಳು ನೆಲ ಕಚ್ಚಿವೆ. ಹೀಗಾಗಿ ಮಾರುಕಟ್ಟೆಯಲ್ಲಿ ತರಕಾರಿ ಮತ್ತು ಸೊಪ್ಪುಗಳ ಆವಕ ಕುಸಿದು ಬೆಲೆ ಗಗನಮುಖಿಯಾಗಿದ್ದು, ಮಾಂಸಹಾರಿಗಳು ಮೊಟ್ಟೆ ಮತ್ತು ಕೋಳಿ ಮಾಂಸದತ್ತ ಮುಖ ಮಾಡಿದ್ದಾರೆ. ಇದರಿಂದ ಸಹಜವಾಗಿಯೇ ಮೊಟ್ಟೆ ಮತ್ತು ಮಾಂಸಕ್ಕೆ ಬೇಡಿಕೆ ಹೆಚ್ಚಿದೆ.

ಕಾರ್ತಿಕ ಮತ್ತು ಶ್ರಾವಣ ಮಾಸವಾದ ನವೆಂಬರ್‌ನಲ್ಲಿ ಮೊಟ್ಟೆ ಮತ್ತು ಮಾಂಸದ ಬಳಕೆ ಕಡಿಮೆ ಇರುತ್ತದೆ. ಕ್ರಿಸ್‌ಮಸ್‌ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಡಿಸೆಂಬರ್‌ನಲ್ಲಿ ಮೊಟ್ಟೆ ಮತ್ತು ಕೋಳಿ ಮಾಂಸಕ್ಕೆ ಬೇಡಿಕೆ ಹೆಚ್ಚುತ್ತದೆ. ಆದರೆ, ಈಗ ಸೊಪ್ಪು ಮತ್ತು ತರಕಾರಿಗಳು ತುಟ್ಟಿಯಾಗಿರುವುದರಿಂದ ಮಾಂಸಹಾರಿಗಳು ಮೊಟ್ಟೆ ಮತ್ತು ಮಾಂಸ ಖರೀದಿಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.

ಉತ್ಪಾದನೆ ಕಡಿಮೆ: ಜಿಲ್ಲೆಯಲ್ಲಿ 485 ನೊಂದಾಯಿತ ಕೋಳಿ ಫಾರಂಗಳಿದ್ದು, ಬ್ರಾಯ್ಲರ್‌ (ಮಾಂಸದ ಉದ್ದೇಶದ್ದು) ಮತ್ತು ಲೇಯರ್‌ (ಮೊಟ್ಟೆಯ ಉದ್ದೇಶದ್ದು) ಕೋಳಿಗಳನ್ನು ಪ್ರಮುಖವಾಗಿ ಸಾಕಲಾಗುತ್ತಿದೆ. ಜಿಲ್ಲಾ ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರದ ಮಾಹಿತಿ ಪ್ರಕಾರ ಜಿಲ್ಲೆಯ ಫಾರಂಗಳಲ್ಲಿ ಸುಮಾರು 2.14 ಕೋಟಿ ಬ್ರಾಯ್ಲರ್‌ ಕೋಳಿ ಹಾಗೂ 82 ಲಕ್ಷ ಲೇಯರ್‌ ಕೋಳಿಗಳಿವೆ. ಕೆಲವೆಡೆ ಅಲ್ಪ ಪ್ರಮಾಣದಲ್ಲಿ ನಾಟಿ ಕೋಳಿಗಳನ್ನು ಸಾಕಲಾಗಿದೆ.

ಜಿಲ್ಲೆಯ ಬೇಡಿಕೆಗೆ ಹೋಲಿಸಿದರೆ ಕೋಳಿ ಮೊಟ್ಟೆ ಮತ್ತು ಮಾಂಸದ ಉತ್ಪಾದನೆ ಕಡಿಮೆ ಇದೆ. ಹೀಗಾಗಿ ತಮಿಳುನಾಡಿನ ನಾಮಕ್ಕಲ್‌, ಕರೂರು, ಕೃಷ್ಣಗಿರಿ ಮತ್ತು ಆಂಧ್ರಪ್ರದೇಶದಿಂದ ಜಿಲ್ಲೆಗೆ ಮೊಟ್ಟೆ ಮತ್ತು ಮಾಂಸವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.

‘ಕೋಳಿ ಮೊಟ್ಟೆ ಮತ್ತು ಮಾಂಸದ ಉತ್ಪಾದನೆ ಕುಸಿದಿಲ್ಲ. ತರಕಾರಿ ಮತ್ತು ಸೊಪ್ಪುಗಳ ಬೆಲೆ ಗಗನಕ್ಕೇರಿರುವ ಕಾರಣ ಮಾಂಸಹಾರಿಗಳು ಮೊಟ್ಟೆ ಹಾಗೂ ಮಾಂಸ ಖರೀದಿಗೆ ಆಸಕ್ತಿ ತೋರುತ್ತಿರುವುದರಿಂದ ಬೇಡಿಕೆ ಹೆಚ್ಚಿದೆ. ಅದಕ್ಕೆ ಅನುಗುಣವಾಗಿ ಬೆಲೆ ಏರಿಕೆಯಾಗಿದೆ’ ಎಂದು ಜಿಲ್ಲಾ ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಟಿ.ಜಯರಾಮ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾಂಸಹಾರಿ ಹೋಟೆಲ್‌ ಮತ್ತು ಡಾಬಾಗಳಲ್ಲಿ ಎಗ್‌ ರೈಸ್, ಆಮ್ಲೆಟ್, ಎಗ್‌ ರೋಲ್‌, ಎಗ್‌ ಬುರ್ಜಿ ಸೇರಿದಂತೆ ವಿವಿಧ ಖಾದ್ಯಗಳಿಗೆ ಮೊಟ್ಟೆಯನ್ನು ಬಳಸಲಾಗುತ್ತದೆ. ಅದೇ ರೀತಿ ಬೇಕರಿಗಳಲ್ಲಿ ಎಗ್‌ ಪಪ್ಸ್‌ ಮತ್ತು ಕೇಕ್‌ ತಯಾರಿಕೆಗೆ ಮೊಟ್ಟೆ ಬೇಕೇಬೇಕು.

ಮೊಟ್ಟೆ ದರ ಏರಿಕೆಯಾಗಿರುವುದರಿಂದ ಹೋಟೆಲ್‌, ಡಾಬಾ ಮತ್ತು ಬೇಕರಿ ಮಾಲೀಕರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬಿದ್ದಿದೆ. ಈ ಕಾರಣಕ್ಕೆ ತಿಂಡಿ ತಿನಿಸುಗಳ ಬೆಲೆ ಏರಿಕೆ ಮಾಡಿದರೆ ವಹಿವಾಟು ಕುಸಿಯುವ ಸಾಧ್ಯತೆ ಇರುವುದರಿಂದ ಮಾಲೀಕರು ಬೆಲೆ ಪರಿಷ್ಕರಣೆ ಮಾಡಿಲ್ಲ. ಬೆಲೆ ಇಳಿಯಬಹುದೆಂಬ ನಿರೀಕ್ಷೆಯಲ್ಲೇ ವಹಿವಾಟು ಮುಂದುವರಿಸಿದ್ದಾರೆ.

* * 

ಕೋಳಿ ಮೊಟ್ಟೆ ದರ ಏರಿಕೆಯಾಗಿದೆ ಎಂಬ ಕಾರಣಕ್ಕೆ ತಿಂಡಿ ತಿನಿಸುಗಳ ಬೆಲೆ ಹೆಚ್ಚಿಸಿದರೆ ವಹಿವಾಟು ಕುಸಿಯುತ್ತದೆ. ಎಂದು ಗ್ರಾಹಕರು ಪ್ರಶ್ನಿಸುತ್ತಾರೆ.
ವೆಂಕಟೇಶ್‌,
ನ್ಯೂ ಅಯ್ಯಂಗಾರ್‌ ಬೇಕರಿ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT