ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ಬದುಕಿಗೆ ನೆರವಾಗುವ ‘ಶಾಲಾ ಬ್ಯಾಂಕು’

Last Updated 24 ನವೆಂಬರ್ 2017, 8:59 IST
ಅಕ್ಷರ ಗಾತ್ರ

ಯಾದಗಿರಿ: ಆ ಮಕ್ಕಳು ನಿತ್ಯ ಚಾಕೊಲೇಟ್‌, ಬಿಸ್ಕತ್, ಬಟಾಣಿ ಇತರೆ ಕುರುಕಲು ತಿಂಡಿಯನ್ನು ಮೆಲ್ಲುತ್ತಿದ್ದರು. ಅದನ್ನು ಗಮನಿಸುತ್ತಿದ್ದ ಮುಖ್ಯೋಪಾಧ್ಯಾಯರಿಗೆ ಮಕ್ಕಳು ಕುರುಕಲು ತಿಂಡಿಗೆ ವ್ಯಯಿಸುವ ಹಣವನ್ನು ಹೇಗಾದರೂ ಮಾಡಿ ಉಳಿತಾಯ ಮಾಡಿ ಮಕ್ಕಳಿಗೆ ಉಪಯೋಗವಾಗುವಂತೆ ಮಾಡಬೇಕು ಎಂಬ ಆಲೋಚನೆ ಬಂತು. ಆಗ ಹೊಳೆದದ್ದೇ ‘ಮಕ್ಕಳ ಶಾಲಾ ಬ್ಯಾಂಕು’.

ಜಿಲ್ಲಾ ಕೇಂದ್ರದಿಂದ 15 ಕಿಲೋ ಮೀಟರ್ ದೂರದಲ್ಲಿರುವ ಹೊರುಂಚಾ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಶಾಲಾ ಬ್ಯಾಂಕ್‌ ಸ್ಥಾಪನೆಯಾಗಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಈ ಶಾಲಾ ಬ್ಯಾಂಕಿನಲ್ಲಿ ಒಟ್ಟು ₹5,000 ಸಾವಿರ ಹಣ ಸಂಗ್ರಹವಾಗಿದೆ. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ‘ಉಳಿತಾಯ’ ದ ಬಗ್ಗೆ ಅರಿವು ಕೂಡ ಸಿಕ್ಕಿದೆ.

‘ತಾಂಡಾದ ಶಾಲೆಯಲ್ಲಿ ಒಟ್ಟು 74 ವಿದ್ಯಾರ್ಥಿಗಳಿದ್ದಾರೆ. ನಿತ್ಯ ಮಕ್ಕಳ ಇಚ್ಛಾನುಸಾರ ಶಾಲಾ ಬ್ಯಾಂಕಿಗೆ ಹಣ ಜಮಾ ಮಾಡುತ್ತಾ ಬಂದಿದ್ದಾರೆ. ಕೆಲವರು ₹1ರಿಂದ ₹5 ವರೆಗೆ ಜಮಾ ಮಾಡಿದರೆ; ಕೆಲವರು ನಾಲ್ಕೈದು ದಿನಗಳ ನಂತರ ₹10, ₹20 ಬ್ಯಾಂಕಿಗೆ ತುಂಬಿದ್ದಾರೆ. ಶಿಕ್ಷಕರು ಹಣವನ್ನು ಆಯಾ ವಿದ್ಯಾರ್ಥಿಯ ಹೆಸರಿನಲ್ಲಿ ಜಮಾ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಈ ಹಣವನ್ನು ಶಿಕ್ಷಕರು ಯಾದಗಿರಿ ನಗರದ ಪ್ರಮುಖ ಬ್ಯಾಂಕಿನಲ್ಲಿ ಉಳಿತಾಯ ಖಾತೆ ತೆರೆದು ಜಮಾ ಮಾಡಿದ್ದಾರೆ. ಮಕ್ಕಳಿಗೆ ಶೈಕ್ಷಣಿಕ ಪರಿಕರ ಬೇಕೆಂದಾಗ ವಿದ್ಯಾರ್ಥಿಗಳ ಅನುಮತಿ ಮೇರೆಗೆ ಹಣವನ್ನು ವಿನಿಯೋಗಿಸುತ್ತಾ ಬಂದಿದ್ದಾರೆ. ಉಳಿದ ಹಣ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಉಪಯೋಗಿಸಲಾಗುತ್ತಿದೆ’ ಎನ್ನುತ್ತಾರೆ ಮುಖ್ಯೋಪಾಧ್ಯಾಯ ಇಮ್ಯಾನುವೆಲ್.

‘ಹೊರುಂಚಾ ತಾಂಡಾದಲ್ಲಿ ಬಡವರೇ ಹೆಚ್ಚು. ನೂರಾರು ರೂಪಾಯಿ ನೀಡಿ ಪ್ರವಾಸಕ್ಕೆ ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಾರೆ. ಇದರಿಂದ ಗೆಳೆಯರೊಂದಿಗೆ ಪ್ರವಾಸ ಹೊರಡುವ ಅವಕಾಶದಿಂದ ಅನೇಕ ವಿದ್ಯಾರ್ಥಿಗಳು ವಂಚಿತರಾಗುತ್ತಾ ಬಂದಿದ್ದಾರೆ. ಹೀಗಾಗಿ, ಶಾಲಾ ಬ್ಯಾಂಕಿನಲ್ಲಿ ವಿದ್ಯಾರ್ಥಿಗಳು ಉಳಿತಾಯ ಮಾಡುವ ಹಣ ಅವರ ಶೈಕ್ಷಣಿಕ ಪ್ರವಾಸಕ್ಕೆ ನೆರವಾಗುತ್ತಿದೆ’ ಎನ್ನುತ್ತಾರೆ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ ವಿಶ್ವನಾಥ ಮರತೂರ.

‘ಶಾಲಾ ಬ್ಯಾಂಕಿಗೆ ಮಕ್ಕಳು ಕಡ್ಡಾಯವಾಗಿ ಹಣ ತುಂಬುವಂತೆ ಒತ್ತಡವಿಲ್ಲ. ಅವರಿಗೆ ತಿಳಿದಷ್ಟು ಹಣ ತುಂಬುತ್ತಾರೆ. ಮೊದಲು ಮಕ್ಕಳಿಂದ ಆಸಕ್ತಿ ಕಡಿಮೆ ಇತ್ತು. ಈಗ ಮಕ್ಕಳ ಮಧ್ಯೆ ಉಳಿತಾಯಕ್ಕೆ ಪೈಪೋಟಿ ಏರ್ಪಟ್ಟಿದೆ. ಶಾಲಾ ಬ್ಯಾಂಕು ಉಳಿತಾಯ ಆರ್ಥಿಕ ನೀತಿ ಬಗ್ಗೆ ಅರಿವು ಮೂಡಿಸಿದ ಮೇಲೆ ಮಕ್ಕಳು ಕುರುಕಲು ತಿಂಡಿ ತಿನ್ನುವುದನ್ನು ಬಿಟ್ಟಿದ್ದಾರೆ. ಬಿಸಿಯೂಟಕ್ಕೆ ಗೈರು ಹಾಜರಾಗುಗುತ್ತಿದ್ದವರು ಈಗ ಕಡ್ಡಾಯವಾಗಿ ಹಾಜರಾಗುತ್ತಿದ್ದಾರೆ’ ಎನ್ನುತ್ತಾರೆ ಶಿಕ್ಷಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT