ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದ್ದಿ ಮನೆಯವರ ಆಪ್ತ ಕಥೆ ‘ಅತಿರಥ’

Last Updated 24 ನವೆಂಬರ್ 2017, 11:53 IST
ಅಕ್ಷರ ಗಾತ್ರ

ಚಿತ್ರ: ಅತಿರಥ

ನಿರ್ಮಾಪಕರು: ಪ್ರೇಮ್, ಡಾ.ವೇಣುಗೋ‍ಪಾಲ್, ಗಂಡಸಿ ಮಂಜುನಾಥ್‌

ನಿರ್ದೇಶನ: ಮಹೇಶ್‌ಬಾಬು

ತಾರಾಗಣ: ಚೇತನ್‌, ಲತಾ ಹೆಗಡೆ, ಅವಿನಾಶ್‌, ಅಚ್ಯುತ್‌ಕುಮಾರ್‌, ಕಬೀರ್‌ಸಿಂಗ್, ಸಾಧುಕೋಕಿಲ, ಪ್ರಶಾಂತ್‌ ಸಿದ್ಧಿ

‌ನಕಲಿ ಪದವಿ ಪ್ರಮಾಣಪತ್ರಗಳ ತಯಾರಿಕೆ ಜಾಲ ಕುರಿತು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವುದು ಸರ್ವೇಸಾಮಾನ್ಯ. ನಕಲಿ ಪ್ರಮಾಣಪತ್ರದ ಕೊಳೆ ಜನಸಾಮಾನ್ಯರಿಂದ ಹಿಡಿದು ಪ್ರಧಾನಿ ಹುದ್ದೆಗೇರಿದವರ ಬೆನ್ನಿಗೂ ಮೆತ್ತಿಕೊಂಡು ಸುದ್ದಿಯಾಗಿದ್ದು ಉಂಟು. ನಕಲಿ ದಾಖಲಾತಿ ಸಲ್ಲಿಸಿ ನೌಕರಿ‌‌ ಪಡೆದವರು ಸಾಕಷ್ಟಿದ್ದಾರೆ. ಆದರೆ, ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳು ಈ ದಂಧೆ ವಿರುದ್ಧ ಹೋರಾಡಿ ಹೈರಾಣಾಗುವುದು ಹರಳುಗಟ್ಟಿರುವ ಭ್ರಷ್ಟ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿಬಿಟ್ಟಿದೆ.

ಪ್ರಾಮಾಣಿಕವಾಗಿ ಪದವಿ ಪಡೆದ ಪತ್ರಕರ್ತನೊಬ್ಬ ಈ ಜಾಲದ ಸುಳಿಗೆ ಸಿಲುಕಿ ಕೊನೆಗೆ ಅವರದೆ ಮಾರ್ಗದಲ್ಲಿ ಹೋಗಿ ಬುದ್ಧಿ ಕಲಿಸುವುದನ್ನು ‘ಅತಿರಥ’ ಚಿತ್ರದ ಮೂಲಕ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಮಹೇಶ್‌ಬಾಬು. ಸುದ್ದಿಮನೆಯಲ್ಲಿನ ಪತ್ರಕರ್ತರ ತಾಕಲಾಟ, ಆತಂಕ, ಅವರು ಸೃಷ್ಟಿಸುವ ಅವಾಂತರ ಕುರಿತು ಹೇಳುತ್ತಾ ಮಾಧ್ಯಮಗಳ ಹೊಣೆಗಾರಿಕೆ ಬಗ್ಗೆಯೂ ಸೂಚ್ಯವಾಗಿ ಎಚ್ಚರಿಸುತ್ತಾರೆ.

ಆಕಾಶ್‌ ಬಿ.ಇ ಕಂಪ್ಯೂಟರ್‌ ಪದವೀಧರ. ಮುತ್ತಾತ, ತಾತ, ಅಪ್ಪ ಎಲ್ಲರೂ ಸುದ್ದಿಮನೆಯಲ್ಲಿ ದುಡಿದವರೇ. ಆತನಿಗೆ ಬಿ.ಬಿ.ಸಿ.ಯಲ್ಲಿ ಕೆಲಸ ಮಾಡುವ ಆಸೆ. ಇದಕ್ಕೆ ಅಪ್ಪನ ವಿರೋಧ. ಪುತ್ರ ಕಾರ್ಪೋರೇಟ್‌ ಜಗತ್ತು ಪ್ರವೇಶಿಸಬೇಕು ಎಂಬುದು ಅವರ ಒತ್ತಾಯ. ಕೊನೆಗೆ, ಮಗ ಆರಿಸಿಕೊಳ್ಳುವುದು ಸುದ್ದಿಮನೆ. ಸ್ಪೈ ಟಿ.ವಿ.ಯಲ್ಲಿ ವರದಿಗಾರನಾಗಿ ಕೆಲಸ ಆರಂಭಿಸುವ ಆತನಿಗೆ ನಾಯಕಿ ಅದಿತಿಯ ಪರಿಚಯವಾಗುತ್ತದೆ. ಇಬ್ಬರ ನಡುವೆ ಪ್ರೇಮ ಅಂಕುರವಾಗುತ್ತದೆ. ಅದೇ ವೇಳೆಗೆ ಆತನ ಹೆಸರಿನಲ್ಲಿ ನಕಲಿ ಪದವಿ ಪ್ರಮಾಣಪತ್ರ ಸೃಷ್ಟಿಸಿ ಬ್ಯಾಂಕ್‌ನಲ್ಲಿ ಸಾಲ ಪಡೆದಿರುವುದು ಬಯಲಾಗುತ್ತದೆ. ಸುದ್ದಿ ಮಾಡುವ ವರದಿಗಾರನೇ ಸುದ್ದಿವಾಹಿನಿಗಳಿಗೆ ಆಹಾರವಾಗುತ್ತಾನೆ.

ಆತ ಬಂಧನಕ್ಕೆ ಒಳಗಾದಾಗ ಇಡೀ ಕುಟುಂಬ ಕಂಗಾಲು. ಆತನಿಗೆ ನ್ಯಾಯಾಲಯ ಶಿಕ್ಷೆ ವಿಧಿಸುತ್ತದೆ. ಜಾಮೀನಿನ ಮೇಲೆ ಹೊರಬರುವ ಆಕಾಶ್‌ ಈ ಜಾಲದ ವಿರುದ್ಧ ಸಮರಕ್ಕೆ ಇಳಿಯುತ್ತಾನೆ. ಇದಕ್ಕೆ ಸ್ನೇಹಿತರು, ಕುಟುಂಬದ ಸದಸ್ಯರು, ತಾನು ಕೆಲಸ ಮಾಡುವ ಸಂಸ್ಥೆಯಿಂದ ಬೆಂಬಲ. ಈ ದಂಧೆಯ ರೂವಾರಿ ಸರ್ಕಾರ್‌. ಜಾಲದ ಕಬಂಧಬಾಹು ಎಲ್ಲ ಕ್ಷೇತ್ರಕ್ಕೂ ವಿಸ್ತರಿಸಿರುವುದು ನಾಯಕನನ್ನು ಅಸಹಾಯಕನನ್ನಾಗಿಸುತ್ತದೆ. ಕೊನೆಗೆ, ಮೈಂಡ್‌ ಗೇಮ್‌ ಮೂಲಕ ದಂಧೆಗೆ ಇತಿಶ್ರೀ ಹಾಡುತ್ತಾನೆ.

ಚಿತ್ರದ ಮೊದಲಾರ್ಧ ನಕಲಿ ಪ್ರಮಾಣಪತ್ರದಿಂದಾಗುವ ದುಷ್ಪರಿಣಾಮ, ಭಾವುಕ ಸನ್ನಿವೇಶಗಳಿಗೆ ಸೀಮಿತ. ದ್ವಿತೀಯಾರ್ಧದಲ್ಲಿ ಚೇತನ್‌ ಅವರದು ಪಕ್ಕಾ ಆ್ಯಕ್ಷನ್ ಹೀರೊನ ಅವತಾರ. ಪಂಚಿಂಗ್‌ ಡೈಲಾಗ್‌ಗಳ ಮೂಲಕ ಅಭಿಮಾನಿಗಳಿಂದ ಚಪ್ಪಾಳೆ ಗಿಟ್ಟಿಸುತ್ತಾರೆ. ಸಿನಿಮಾ ಮುಗಿದ ಮೇಲೂ ಕೆಲವು ಸಂಭಾಷಣೆಗಳು ಕಾಡುತ್ತಿರುತ್ತವೆ. ಚಿತ್ರದ ಕೊನೆಯಲ್ಲಿ ನಕಲಿ ವೈದ್ಯ ನೀಡಿದ ಔಷಧಿಯಿಂದಲೇ ಸರ್ಕಾರ್‌ ಸಾವು ಕಾಣುವುದು ವ್ಯವಸ್ಥೆಯ ವ್ಯಂಗ್ಯ.

ನಾಯಕಿ ಲತಾ ಹೆಗಡೆ ಅವರ ಅಭಿನಯಕ್ಕೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ. ಅವಿನಾಶ್‌, ಅಚ್ಯುತ್‌ಕುಮಾರ್, ಕಬೀರ್‌ಸಿಂಗ್, ಸಾಧುಕೋಕಿಲ, ರವಿಶಂಕರ್, ಪ್ರಶಾಂತ್‌ ಸಿದ್ಧಿ ಅವರದು ಅಚ್ಚುಕಟ್ಟಾದ ಅಭಿನಯ. ಸುಗಾರ್‌ ಸಂಗೀತ ಚಿತ್ರಕ್ಕೆ ಹೊಸದೇನನ್ನು ಕಟ್ಟಿಕೊಟ್ಟಿಲ್ಲ. ಜೈಆನಂದ್‌ ಅವರ ಛಾಯಾಗ್ರಹಣದ ಕೆಲವು ದೃಶ್ಯಗಳು ಮನಸ್ಸನ್ನು ಆರ್ದ್ರಗೊಳಿಸುತ್ತವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT