ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಮ್ರಾನ್‌ ಅಡುಗೆಯಲ್ಲಿ ಉಪ್ಪು, ಹುಳಿ, ಖಾರ!

Last Updated 24 ನವೆಂಬರ್ 2017, 15:27 IST
ಅಕ್ಷರ ಗಾತ್ರ

ಸಿನಿಮಾ: ಉಪ್ಪು ಹುಳಿ ಖಾರ

ನಿರ್ದೇಶನ: ಇಮ್ರಾನ್ ಸರ್ದಾರಿಯಾ

ನಿರ್ಮಾಪಕ: ಎಂ. ರಮೇಶ್ ರೆಡ್ಡಿ

ತಾರಾಗಣ: ಮಾಲಾಶ್ರೀ, ಅನುಶ್ರೀ, ಜಯಶ್ರೀ ರಾಮಯ್ಯ, ಶರತ್, ಶಶಿ ದೇವರಾಜ್, ಧನಂಜಯ್

ಸಂಗೀತ: ಪ್ರಜ್ವಲ್ ಪೈ

ಇಮ್ರಾನ್ ಸರ್ದಾರಿಯಾ ಅವರಿಗೆ ಒಂದು ಕಥೆ ಹೇಳಬೇಕಿತ್ತು. ಕಥೆಯ ಮೂಲಕ ಒಂದು ಸಂದೇಶ ನೀಡಬೇಕು ಎಂಬ ಆಸೆ ಅವರಿಗಿತ್ತು. ಆದರೆ, ಸಂದೇಶವನ್ನು ಒಂದಿಷ್ಟು ಮಸಾಲೆಯ ಲೇಪದೊಂದಿಗೆ ಕೊಡಬೇಕು ಎಂದೂ ಅವರು ನಿರ್ಧರಿಸಿದಂತೆ ಇತ್ತು. ಹಾಗಾಗಿಯೇ ಅವರು ‘ಉಪ್ಪು, ಹುಳಿ, ಖಾರ’ ಎಂಬ ಸಿನಿಮಾ ಮಾಡಿದರು!

ಈ ಸಿನಿಮಾದಲ್ಲಿ ಮಾಲಾಶ್ರೀ ಇದ್ದಾರೆ – ಪೊಲೀಸ್ ಅಧಿಕಾರಿಯ ಗೆಟಪ್‌ನಲ್ಲಿ. ಆಗಾಗ ಚಹಾ ಕುಡಿಯುತ್ತ, ಉತ್ತರ ಕರ್ನಾಟಕದ ಒಂದಿಷ್ಟು ಡೈಲಾಗ್‌ಗಳನ್ನು ಹೇಳುತ್ತಿರುತ್ತಾರೆ. ಮಾಲಾಶ್ರೀ ಇರುವಿಕೆ ಈ ಸಿನಿಮಾದ ಒಂದು ವಿಶೇಷ.

ಸಿನಿಮಾ ಕಥೆ ತೀರಾ ಹೊಸದು ಎನ್ನುವ ಹಾಗಿಲ್ಲ. ಮೂವರು ಯುವಕರಲ್ಲಿ ವ್ಯವಸ್ಥೆಯ ಬಗ್ಗೆ ಆಕ್ರೋಶ ಮೂಡಿರುತ್ತದೆ. ಪ್ರತಿಭೆ, ಅರ್ಹತೆಗಿಂತಲೂ ದುಡ್ಡಿಗೇ ಹೆಚ್ಚು ಆದ್ಯತೆ ಎಂಬುದು ಅವರ ಅನುಭವಕ್ಕೆ ಬಂದಿರುತ್ತದೆ. ಇಂತಹ ವ್ಯವಸ್ಥೆ ಬಗ್ಗೆ ತಮ್ಮಲ್ಲಿ ಮೂಡಿದ ಆಕ್ರೋಶವನ್ನು ಇಡೀ ಸಮಾಜಕ್ಕೆ ಗಟ್ಟಿಯಾಗಿ ಕೇಳಿಸುವಂತೆ ಹೇಳಬೇಕು ಅಂತ ಅವರಿಗೆ ಅನಿಸಲು ಆರಂಭವಾಗುತ್ತದೆ.

ಆದರೆ ಹಾಗೆ ಗಟ್ಟಿಯಾಗಿ ಹೇಳಲು ಅವರಿಗೆ ತಮ್ಮದೇ ಆದ ವೇದಿಕೆ ಇರುವುದಿಲ್ಲ. ವೇದಿಕೆ ಸೃಷ್ಟಿಸಿಕೊಳ್ಳಲು ಕಾನೂನು ಭಂಜನೆಯ ಮಾರ್ಗ ಹಿಡಿಯುತ್ತಾರೆ. ಪೊಲೀಸರ ಕೈಗೆ ಸಿಕ್ಕಿಬಿದ್ದು, ತಾವು ಬಯಸಿದ ವೇದಿಕೆಯನ್ನು ಸೃಷ್ಟಿಸಿಕೊಳ್ಳುತ್ತಾರೆ.

ಮೂರೂ ಜನ ಯುವಕರಿಗೆ (ಶರತ್, ಶಶಿ ದೇವರಾಜ್ ಮತ್ತು ಧನಂಜಯ್) ಜೊತೆಗಾರ್ತಿಯರ ಪಾತ್ರಗಳನ್ನು ಅನುಶ್ರೀ, ಜಯಶ್ರೀ ಮತ್ತು ಮಾಶಾ ನಿಭಾಯಿಸಿದ್ದಾರೆ. ಸಿನಿಮಾ ಮೊದಲಾರ್ಧದ ಬಹುಪಾಲು ಅವಧಿಯು ಮೂರು ಜೋಡಿಗಳ ನಡುವೆ ಪ್ರೀತಿ ಚಿಗುರಿದ್ದರ ಬಗೆಗಿನ ವಿವರಣೆಯಲ್ಲಿಯೇ ಕಳೆದುಹೋಗುತ್ತದೆ. ಇಮ್ರಾನ್ ಅವರು ಕಥೆಯನ್ನು ಸರಿಯಾಗಿ ಹೇಳಲು ಆರಂಭಿಸುವುದು ಸಿನಿಮಾದ ದ್ವಿತೀಯಾರ್ಧದಲ್ಲಿ! ಆದರೆ, ಮೊದಲಾರ್ಧ ಪೂರ್ಣಗೊಳ್ಳುವುದರ ಹೊತ್ತಿಗೆ ಕಥೆಯ ಸಸ್ಪೆನ್ಸ್ ಅಂಶದ ಬಗ್ಗೆ ಕುತೂಹಲ ಹುಟ್ಟಿಸಿರುತ್ತಾರೆ.

ಯುವಕರಲ್ಲಿ ವ್ಯವಸ್ಥೆಯ ಬಗ್ಗೆ ಆಕ್ರೋಶ ಇರುವುದು, ಅದನ್ನು ವ್ಯಕ್ತಪಡಿಸಿಲು ನಾನಾ ಮಾರ್ಗಗಳನ್ನು ಕಂಡುಕೊಳ್ಳುವುದು ಸಿನಿಮಾ ನಿರ್ದೇಶಕರ ಇಷ್ಟದ ಕಥೆಗಳಲ್ಲಿ ಒಂದು. ಈ ಸಿನಿಮಾದಲ್ಲಿ ಇಮ್ರಾನ್ ಅವರು ಇಂಥದ್ದೇ ಒಂದು ಕಥೆಯನ್ನು ‘ಉಪ್ಪು, ಹುಳಿ, ಖಾರ’ ಸವರಿ ಕೊಟ್ಟಿದ್ದಾರೆ. ಹಾಸ್ಯವನ್ನು ‘ಉಪ್ಪು’ ಎಂದು, ಸಸ್ಪೆನ್ಸನ್ನು ‘ಹುಳಿ’ಯೆಂದು, ಆ್ಯಕ್ಷನ್‌ಅನ್ನು ‘ಖಾರ’ವೆಂದು ಭಾವಿಸಿ, ಸಿನಿಮಾ ವೀಕ್ಷಿಸಿ ಇವೆಲ್ಲವೂ ವೀಕ್ಷಕನ ಬಾಯಿರುಚಿಗೆ ತಕ್ಕಷ್ಟು ಇವೆಯೇ ಎಂಬುದನ್ನು ಪರಿಶೀಲಿಸಬಹುದು!

ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ಈ ಸಿನಿಮಾದಲ್ಲಿ ನ್ಯಾಯಾಧೀಶೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಪ್ಪು ಹಣವನ್ನು ನಗದು ರೂಪದಲ್ಲಿ ಹೊಂದಿದ್ದ ಕೆಲವರು ನೋಟು ರದ್ದತಿಯ ನಂತರ ಹಣಕಾಸು ಸಂಸ್ಥೆಗಳ ಮೂಲಕ ಅವನ್ನು ಸಕ್ರಮಗೊಳಿಸಲು ಯತ್ನಿಸಿದ ಬಗ್ಗೆಯೂ ಸಿನಿಮಾ ಮಾತನಾಡುತ್ತದೆ. ಆದರೆ ಆ ವಿಷಯದ ಆಳಕ್ಕೆ ಇಳಿಯುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT