ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಭಾಷೆಯ ಸೊಗಡಿನ ಸೊಬಗು

Last Updated 24 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಎಂದಿನಂತೆ ಕಾಲೇಜಿನತ್ತ ಓಡುತ್ತಾ ನಡೆದು ಹೋಗುತ್ತಿದ್ದೆ. ‘ಇಂದು ಸಮಾಜ, ವಿಜ್ಞಾನ ಮತ್ತು ಗಣಿತ ಪಾಠ ಮಾಡ್ತಾರೆ’ ಎಂದು ನನ್ನ ಮುಂದೆ ನಡೆಯುತ್ತಿದ್ದ ಶಾಲಾ ಹುಡುಗಿಯರ ಮಾತುಗಳು ನನ್ನ ಕಿವಿಗೆ ಬಿತ್ತು. ಸದಾ ‘ಸೋಷಿಯಲ್’, ‘ಸೈನ್ಸ್’, ಮತ್ತು ‘ಮ್ಯಾಥ್ಸ್‌’, ಎಂಬ ಪದಗಳನ್ನು ಕೇಳುವ ಕಿವಿಗಳಿಗೆ ಕನ್ನಡ ಪದಗಳನ್ನು ಕೇಳಿ ಅದೇನೋ ಹಿತವೆನಿಸಿತು. ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳನ್ನು ನೋಡಿದರೆ ಹೆಮ್ಮೆ ಮತ್ತು ಅವರ ಮಾತನ್ನು ಕೇಳುವುದೇ ಚೆಂದ.

ಬೆಂಗಳೂರು ಮತ್ತು ಇತರ ನಗರ ಪ್ರದೇಶದಲ್ಲಿ ಬೆಳೆಯುವ ಬಹುತೇಕ ಯುವಜನತೆ, ಕನ್ನಡದವರಾಗಿದ್ದು  ಕನ್ನಡವು, ಅವರು ಕಷ್ಟಪಟ್ಟು ಹೇಗಾದರೂ ‘ಪಾಸ್’ ಆಗಲೇಬೇಕೆಂದು ಓದುವ ಒಂದು ಭಾಷೆಯಾಗಿದೆಯೇ ಹೊರತು ಕನ್ನಡ ಸಾಹಿತ್ಯದಲ್ಲಿ ಅಡಗಿರುವ ಖುಷಿ ಎಂಬ ಖಜಾನೆಯನ್ನು ಹುಡುಕುವ ಪ್ರಯತ್ನವನ್ನು ಯಾರೊಬ್ಬರೂ ಮಾಡುತ್ತಿಲ್ಲ.‌

ಹಾಗೆಂದು ಅವರೇನು ಆಂಗ್ಲಪಂಡಿತ/ಪಂಡಿತೆಯರಾಗಿ ಬೆಳೆದು ನಿಂತಿಲ್ಲ. ಆಂಗ್ಲಮಾಧ್ಯಮದಲ್ಲಿ ಓದುವ ಹಲವರಿಗೆ ಆಂಗ್ಲಭಾಷಾ ಜ್ಞಾನವು ಕನ್ನಡಭಾಷಾಜ್ಞಾನಕ್ಕಿಂತಲೂ ಕಡಿಮೆ. ಒಮ್ಮೆ ನಮ್ಮ ಮನೆಗೆ ಬಂದಿದ್ದ ಸೇಲ್ಸ್‌ಮೆನ್‌ ಒಬ್ಬನ ಬಡ ಬಡ ಇಂಗ್ಲಿಷ್‌ ಮಾತನ್ನು ಕೇಳಿ ಅರ್ಥವಾಗದೆ ಏನೂ ಉತ್ತರಿಸದೆ ಓಡಿಬಂದಿದ್ದ ನನ್ನ ಆಂಗ್ಲಮಾಧ್ಯಮದಲ್ಲೇ ಓದಿದ್ದ ನನ್ನ ತಮ್ಮನೇ ಇದಕ್ಕೆ ಉದಾಹರಣೆ.

ಇತ್ತ ಕನ್ನಡವೂ ಬಾರದೇ, ಇಂಗ್ಲಿಷ್‌ ಕೂಡ ತಿಳಿಯದೇ, ಕೇವಲ ಭಾಷಾ ಅಂಗವಿಕಲರಾಗಿ ಯುವಜನತೆ ಮಾರ್ಪಾಡಾಗುತ್ತಿದೆ. ಎಷ್ಟೋ ಬಾರಿ ಕನ್ನಡದ ಪದಕ್ಕೆ ಇಂಗ್ಲಿಷ್‌ ಪರ್ಯಾಯ ಪದ ಮತ್ತು ಇಂಗ್ಲಿಷ್‌ನ ಪದಕ್ಕೆ ಕನ್ನಡದಲ್ಲಿ ಪರ್ಯಾಯ ಪದವನ್ನು ಹುಡುಕುವ ಪ್ರಯತ್ನದಲ್ಲಿ ವಿಫಲರಾಗುತ್ತಿದ್ದೇವೆ. ಹೀಗೆ ನಾವು ಭಾಷಾಜ್ಞಾನದಲ್ಲಿ ಅಲ್ಪಮತಿಯುಳ್ಳವರಾಗುತ್ತಿದ್ದೇವೆ.

ಕನ್ನಡ ಭಾಷೆಯ ಮೇಲೆ ಯಾರಿಗೂ ಅಭಿಮಾನವಿಲ್ಲವೆಂದಲ್ಲ, ತಮ್ಮ ತಮ್ಮ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಅಕೌಂಟ್‌ಗಳಲ್ಲಿ ‘ಕನ್ನಡಿಗ’, ‘ಕನ್ನಡತಿ’ ಎಂದು ಹಾಕುವ ಯುವಜನತೆಯೇ ಹೆಚ್ಚು ಹೊರತು ಕನ್ನಡದಲ್ಲಿ ಬರೆದ ಕತೆ, ಕವನಗಳನ್ನು ಓದಿ ಕನ್ನಡ ಭಾಷಾ ಸಾಹಿತ್ಯವನ್ನು ಬೆಳೆಸುವ ಪ್ರಯತ್ನವನ್ನು ಮಾಡುವವರಿಲ್ಲ.

‘ನಾವು ಕನ್ನಡಿಗರು ವಿಶಾಲ ಹೃದಯದವರು’ , ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಸಾಲುಗಳು ಹಲವರ ಬಾಯಲ್ಲಿ ಕೇಳುವುದು ಸಹಜ. ಅದರಲ್ಲೂ ನವೆಂಬರ್‌ ತಿಂಗಳು ಬಂದರಂತೂ ಕೇಳುವುದೇ ಬೇಡ. ಎತ್ತ ನೋಡಿದರತ್ತ ಹಳದಿ ಕೆಂಪು ರಾರಾಜಿಸುತ್ತಿರುತ್ತದೆ. ರಸ್ತೆ ರಸ್ತೆಗಳಲ್ಲಿ ರಾಜ್‌ಕುಮಾರ್, ವಿಷ್ಣುವರ್ಧನ್‌ರ ಹೆಸರಿನಲ್ಲಿ ಆರ್ಕೆಸ್ಟ್ರಾಗಳ ಹಾಡುಗಳು ಆರ್ಭಟಿಸುತ್ತಿರುತ್ತವೆ. ಇದೊಂದು ತಿಂಗಳು ಎಲ್ಲರಲ್ಲೂ ಕನ್ನಡಾಭಿಮಾನ ಹುಚ್ಚೆದ್ದು ಕುಣಿಯುತ್ತಿರುತ್ತದೆ. ಆದರೆ ಯಾರಿಗೂ ಕುಗ್ಗುತ್ತಿರುವ ಕನ್ನಡ ಸಾಹಿತ್ಯದತ್ತ ಕಣ್ತೆರೆದು ನೋಡುವ ಅರಿವು ಮೂಡಿಲ್ಲ. ಕನ್ನಡದಲ್ಲಿ ಓದುಗರ ಕೊರತೆಗೂ ಹೆಚ್ಚು ಬರಹಗಾರರ ಕೊರತೆ. ಎಲ್ಲರಿಗೂ ಇಂಗ್ಲಿಷ್‌ನಲ್ಲೇ ಬರೆಯುವ, ಮಾತನಾಡುವ ವ್ಯಾಮೋಹ. ತಮ್ಮ ಮನಸ್ಸಿನ ಮಾತುಗಳು ತಮ್ಮ ಭಾಷೆಯಲ್ಲಿ ಹರಿದು ಬಂದರೆ ಅದು ಅದ್ಭುತ ಸಾಹಿತ್ಯವಾಗುವುದೆಂದು ಮರೆತಿದ್ದಾರೆ.

ನವೆಂಬರ್ ಕೊನೆಯಾಗುತ್ತಲೇ ನಮ್ಮಲ್ಲಿನ ಕನ್ನಡಿಗನು ಡಿಸೆಂಬರ್‌ನ ಚಳಿಗೆ ಬೆಚ್ಚಗೆ ನಮ್ಮ ಮನಸ್ಸಿನ ಮೂಲೆಯಲ್ಲಿ ಮಲಗಿಬಿಡುತ್ತಾನೆ. ಆರ್ಕೆಸ್ಟ್ರಾದ ಹಾಡುಗಳ ಸದ್ದು ಮಂದವಾಗುತ್ತದೆ, ಹಳದಿ ಕೆಂಪು ಬಾವುಟಗಳು ಕಪಾಟಿನ ಬಾಗಿಲಿನ ಹಿಂದೆ ಭದ್ರವಾಗುತ್ತವೆ. ಎಷ್ಟೇ ಆದರೂ ಅವು ಬೆಲೆಬಾಳುವ ವಸ್ತುಗಳಲ್ಲವೇ? ಮುಂದಿನ ನವೆಂಬರ್‌ನಲ್ಲಿ ಮತ್ತೆ ಅವುಗಳಿಗೆ ಜೀವ ಬರುತ್ತದೆ. ನಮ್ಮಲ್ಲಿನ ಕನ್ನಡಿಗನು ಎಚ್ಚರಗೊಳ್ಳುತ್ತಾನೆ. ಇದೇ ಯುವ ಕನ್ನಡಗರ ಕನ್ನಡಪ್ರೇಮದ ಮತ್ತೊಂದು ಮುಖ. ಇವೆಲ್ಲದರ ನಡುವೆ ಗ್ರಂಥಾಲಯಗಳಲ್ಲಿ ದೂಳೆದ್ದು ಕೂತು ಕೆಚ್ಚೆದೆಯ ಕನ್ನಡಿಗರಿರಾಗಿ ಕಾಯುತ್ತಿರುವ ಕನ್ನಡ ಸಾಹಿತ್ಯ ಮತ್ತೆ ನಿರಾಸೆಗೊಳ್ಳುತ್ತಿದೆ, ಮತ್ತೊಂದು ರಾಜ್ಯೋತ್ಸವಕ್ಕಾಗಿ ಎದುರು ನೋಡುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT