ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲಕ್ಕೆ ಆರೋಗ್ಯ ಸೂತ್ರಗಳು

Last Updated 24 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಇದೀಗ ಕಾರ್ತಿಕಮಾಸದ ದೀಪಗಳ ಸಂಭ್ರಮದ ಹಬ್ಬ ಮುಗಿಯಿತು. ಮಾರ್ಗಶಿರ ಅಥವಾ ಮಾಗಿಯ ಚಳಿಯ ದಿನಗಳು ಕಾಲಿರಿಸಿವೆ. ಈ ಸಮಯದಲ್ಲಿ ದೇಹ ಮತ್ತು ಮನಸ್ಸಿನ ಆರೋಗ್ಯ ಕಾಪಾಡುವ ಸಂಗತಿಗಳು ಆಯುರ್ವೇದ ಗ್ರಂಥಗಳಲ್ಲಿವೆ. ಮಾಘಮಾಸದಿಂದ ಆರಂಭವಾಗುವ ಕುಂಭಸ್ನಾನವು ಸಮುದಾಯ ಆರೋಗ್ಯದ ಪರಂಪರೆಯ ಕಾಳಜಿ. ಎಳ್ಳಮವಾಸ್ಯೆಯ ತೀರ್ಥಸ್ನಾನ ತಿಳಿದಿದೆಯಲ್ಲ. ಅಂತಹ ಆಚರಣೆಗಳಲ್ಲಿವೆ ಚಳಿಗಾಲದ ದಿನಚರಿಯ ಪಾಠಗಳು. ರೋಗ ಬಂದ ಮೇಲೆ ಚಿಕಿತ್ಸೆಗಿಂತ ರೋಗದ ತಡೆ ಲೇಸಲ್ಲವೆ?

ಸೂರ್ಯೋದಯದ ವೇಳೆ ಹುಲ್ಲಿನ ಮಕಮಲ್ಲಿನ ಮೇಲೆ ಇಬ್ಬನಿ ಹನಿ ನೋಡಿದಿರಾ? ರಸ್ತೆ ಬದಿಯ ನೆಡು ಮರಗಳು ಬೋಳಾಗುವುದನ್ನು ಕಂಡಿರಾ? ಎಲೆಯೇ ಇಲ್ಲದ ಈ ಮರಗಳು ಮತ್ತೆ ಚಿಗುರುವ ತನಕ ಒಣಗಿರುತ್ತವಲ್ಲ. ಚಳಿಗಾಲದಲ್ಲಿ ದೇಹದಲ್ಲಿ ಕೂಡ ಇಂತಹದೇ ಬದಲಾವಣೆಗಳಾಗುತ್ತವೆ. ಸೂರ್ಯನ ಕಿರಣದ ಪ್ರಖರತೆ ಇಳಿಯುವ ಈ ದಿನಗಳು ಕೊಂಚ ತ್ರಾಸದ್ದೇ. ಬೀಸುವ ತಂಗಾಳಿಯಂತೂ ತನ್ನ ಸಂಗಡ ಧೂಳು ಮತ್ತು ಮಂಜಿನ ಕಣಗಳನ್ನು ಹೊತ್ತು ತರುತ್ತದೆ. ಈ ಗಾಳಿಯ ಸೇವನೆಯಿಂದ ಕೆಮ್ಮು, ನೆಗಡಿ, ದಮ್ಮು, ಗಂಟಲಿನ ಕಫ, ಉರಿಯೂತ ಕಾಯಿಲೆಗಳು ಉಲ್ಬಣ. ಅಂಗೈ ಅಂಗಾಲು ಬಿರಿತದ ಬಾಧೆ ಕಾಡುವ ದಿನಗಳಿವು. ಮೈ ಕೈ ನೋವು, ಸಣ್ಣ ಜ್ವರ, ಮೂತ್ರದ ಸೋಂಕು, ಉರಿ ಮೂತ್ರ ಮಾತ್ರವಲ್ಲ. ಇಂದು ಏನೂ ಮಾಡುವುದು ಬೇಡ ಎನ್ನುವಂತಹ ಸದಾ ಆಯಾಸದ ಭಾವನೆಗಳು ಚಳಿಗಾಲದ ಮೈಮನಗಳ ದಣಿವಿನ ಸೂಚಕಗಳು. ಅಂತಹ ತೊಂದರೆಗಳಿಗೆ ಸದಾ ವೈದ್ಯರ ಬಳಿಗೆ ಎಡತಾಕಬೇಕಾದ ಪ್ರಸಂಗ ಇಲ್ಲ. ಮನೆಯ ಉಪಚಾರ, ಆಹಾರದಲ್ಲಿ ಕೊಂಚ ಬದಲಾವಣೆ ಕ್ರಮ ಸಾಕು. ಈ ಚಳಿಗಾಲದ ಆರೋಗ್ಯಭಾಗ್ಯ ನಿಮ್ಮದಾಗುತ್ತದೆ.

ಅಲ್ಮೇರಾದಲ್ಲಿನ ದಪ್ಪನೆಯ ಕಂಬಳಿ, ಬೀರುವಿನ ಸ್ವೆಟರ್ ಇದೀಗ ಹೊರ ಹಾಕಲೇಬೇಕಲ್ಲ. ಚಳಿಯ ದೆಸೆಯಿಂದ ಚರ್ಮದ ರಕ್ತಸಂಚಾರ ಕಡಿಮೆ. ಆದರೆ ಅದನ್ನು ಸದಾ ಬೆಚ್ಚಗಿಡದೇ ಇದ್ದರೆ ಬಿರಿತ, ಉರಿ ಸಾಮಾನ್ಯ. ಎ.ಸಿ. ಮತ್ತು ಫ್ಯಾನ್ ಗಾಳಿಯ ಗೊಡವೆ ಈಗಿಲ್ಲ. ಇಡೀ ವಾತಾವರಣದ ಉಷ್ಣತೆ ರಾತ್ರಿ ವೇಳೆ ಕುಸಿಯುತ್ತದೆ. ನಡು ಮಧ್ಯಾಹ್ನ ಕೊಂಚ ಏರುತ್ತದೆ. ಆದರೆ ಋತುಸುಖ ಕೊಡುವ ಬಟ್ಟೆ ಬರೆ ಧರಿಸಲು, ಹೊದಿಯಲು ಮರೆಯದಿರಿ. ಕಹಿ, ಖಾರ ರಸಪ್ರಧಾನವಾದ ಹಲ್ಲುಜ್ಜುವ ಕಡ್ಡಿಗಳು ಈ ಋತುವಿಗೆ ಸೂಕ್ತ. ಬೇವು ಮತ್ತು ಹೊಂಗೆಯ ಕಡ್ಡಿಗಳಿಂದ ಹಲ್ಲು ಮತ್ತು ಬಾಯಿಯನ್ನು ಶುಚಿಗೊಳಿಸಿರಿ. ಎಳ್ಳೆಣ್ಣೆ, ಹರಳೆಣ್ಣೆ ಅಥವಾ ಕೊಬ್ಬರಿಎಣ್ಣೆಯನ್ನು ಹದ ಬಿಸಿ ಮಾಡಿರಿ. ಅದನ್ನು ತಲೆ ಮತ್ತು ದೇಹದ ಅಂಗಾಂಗಗಳಿಗೆ ಮೆದುವಾಗಿ ಉಜ್ಜುವ ರೀತಿಯಲ್ಲಿ ಹಚ್ಚಿರಿ. ದೀಪಾವಳಿಗೆ ಮಾತ್ರ ಅಂತಹದೇ ಅಭ್ಯಂಗಸ್ನಾನ ಮೀಸಲಲ್ಲ. ಅಂದಿನಿಂದ ಅದು ಆರಂಭ ಎನ್ನುವ ಸೂಚನೆ ಅದು. ಅರೆತಾಸು ಕಳೆದು ಹದ ಬಿಸಿ ನೀರಿನ ಸ್ನಾನದ ಕೂಡ ಒಳಿತು. ಮೈ ಉಜ್ಜಲು ಕಹಿ ಮತ್ತು ಖಾರ ರಸದ ಸೀಗೆಪುಡಿ, ಚಿಗರೆಪುಡಿ, ಅಂಟವಾಳದಪುಡಿ, ಬೇವಿನೆಲೆಪುಡಿ ಬಳಸಿರಿ. ಚರ್ಮಾರೋಗ್ಯಕ್ಕೆ ಇದಕ್ಕಿಂತ ಉತ್ತಮ ವಿಧಾನ ಬೇರೆ ಇಲ್ಲ. ದೇಹದ ಅತಿ ದೊಡ್ಡ ಅವಯವ ನಿಮ್ಮ ತ್ವಚೆ. ಅದರ ಆರೋಗ್ಯ ಮತ್ತು ಸರಿಯಾದ ರಕ್ತ ಸಂಚಲನೆಯಿಂದ ಹೃದಯದ ಕಾಯಿಲೆ ತಡೆ ಸಾಧ್ಯ ಎಂದು ನೆನಪಿಡಿರಿ. ಇದರಿಂದ ಚಳಿಗಾಲದ ಹೃದಯಾಘಾತ ತಡೆ ಕೂಡ ಖಂಡಿತ.

ನಿಮಗೆ ತಿಳಿದಿರಬೇಕಲ್ಲ – ಚಳಿಗಾಲದ ಹಸಿವೆ ಅತಿ ಹೆಚ್ಚು. ಏನಾದರೂ ತಿನ್ನುತ್ತಲೇ ಇರಬೇಕು ಎಂಬ ಬಾಯಿ ಚಪಲ ಈ ಕಾಲದಲ್ಲಿ ಋತು ಸ್ವಭಾವಜನ್ಯ. ವಾಯುವು ಒಳಶರೀರದಲ್ಲಿ ಹೆಚ್ಚು ಬೀಸಿ ಕಾಯಾಗ್ನಿ ಹೆಚ್ಚಳ. ಆದ್ದರಿಂದ ನಿಧಾನ ಜೀರ್ಣವಾಗುವ ಗುರು ಆಹಾರಸೇವನೆ ಸೂಕ್ತ. ಇಲ್ಲದಿದ್ದರೆ ದೇಹದ ರಸಧಾತುವನ್ನೇ ಅಂತಹ ಪ್ರಕುಪಿತ ವಾಯುವು ದಹಿಸತೊಡಗುತ್ತದೆ. ಸಸ್ಯಾಹಾರಿಗಳಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳು ಹೆಚ್ಚು ಪ್ರಶಸ್ತ. ಧಾರಾಳ ತುಪ್ಪದ ಬಳಕೆಗೆ ಒತ್ತು ನೀಡಿರಿ. ಉದ್ದು ಧಾರಾಳ ಬಳಸಿರಿ. ಅದರಿಂದ ತಯಾರಿಸಿದ, ಎಣ್ಣೆ ಮತ್ತು ತುಪ್ಪದಲ್ಲಿ ಕರಿದ ಸಿಹಿಖಾದ್ಯ ತಿನ್ನಿರಿ. ಬೆಲ್ಲದ ಸಿಹಿತಿಂಡಿ ಉತ್ತಮ. ಹೀಗೆ ದೇಹಕ್ಕೆ ಬೇಕಾದಷ್ಟು ಶಕ್ತಿಯನ್ನು ಚಳಿಗಾಲದಲ್ಲಿ ಪಡೆಯಿರಿ. ಹೊಟ್ಟೆ ತುಂಬ ಉಣುವುದನ್ನು ಮರೆಯದಿರಿ. ಮಾಂಸಾಹಾರಿಗಳಿಗೆ ಮೀನು ಮತ್ತು ಜಲೀಯ ಪ್ರಾಣಿ–ಪಕ್ಷಿಗಳ ಮಾಂಸಾಹಾರ ಲೇಸು. ಜೇನು ಬಳಕೆಗೆ ಈ ಕಾಲ ಉತ್ತಮ. ಕಡು ಬೇಸಿಗೆಯಲ್ಲ. ಬೆಚ್ಚನೆಯ ಒಳಮನೆ ವಾಸ ಮತ್ತು ಮಲಗುವುದು ಈ ಚಳಿಗಾಲಕ್ಕೆ ಹೇಳಿಮಾಡಿಸಿದ್ದು. ಇತರ ಕಾಲಗಳಿಗಿಂತ ಈ ಋತುವಿನಲ್ಲಿ ದೇಹ ಬಲ ಹೆಚ್ಚಿರುತ್ತದೆ. ಗ್ರಾಮ್ಯಧರ್ಮ ಅಂದರೆ ಗೃಹಸ್ಥನು ತನ್ನ ಬಾಳ ಸಂಗಾತಿಯೊಡನೆ ಕೂಡುವ ಪ್ರಕ್ರಿಯೆ. ಇದಕ್ಕೆ ಚಳಿಗಾಲದ ದಿನಗಳು ಹೆಚ್ಚು ಪ್ರಶಸ್ತ. ಇದನ್ನೇ ಸರ್ವಜ್ಞ ಕವಿ ಹೇಳಿದ್ದಾನಲ್ಲ – ‘ಬೆಚ್ಚನೆಯ ಮನೆಯಾಗಿ, ವೆಚ್ಚಕ್ಕೆ ಹೊನ್ನಾಗಿ ಇಚ್ಛೆಯನರಿತು ನಡೆಯುವ ಸತಿಯಾಗಿ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ!’

ಅತಿಯಾಗಿ ಹುಳಿ ಪದಾರ್ಥ, ಹುಳಿ ಮೊಸರು ಸೇವಿಸಬಾರದು. ರಸ್ತೆ ಬದಿಯ ಹುಳಿ ಚಾಟ್ ಗೊಡವೆ ಬೇಡ. ಬೇಳೆಗಳ ಅತಿಯೋಗ ನಿಷಿದ್ಧ. ಇದರಿಂದ ವಾತ ಹೆಚ್ಚುತ್ತದೆ. ಮುಂಜಾನೆಯ ಶೀತಗಾಳಿಯಲ್ಲಿ ಓಡಾಡದಿರಿ. ಸಂಜೆಯ ಬಿಸಿಲು ಖಂಡಿತ ಹಿತ. ಕಡಿಮೆ ಆಹಾರಸೇವನೆ ಸರಿಯಲ್ಲ. ಚಳಿಯ ದೆಸೆಯಿಂದ ನೀರು ಬೇಕೆನಿಸದು. ಆದರೆ ಕಡಿಮೆ ನೀರಿನ ಸೇವನೆಯಿಂದ ಹಾನಿಯಿದೆ. ಮೂತ್ರಾಶಯ ಸೋಂಕಿಗದು ಹಾದಿ. ಬಿಸಿ ನೀರು ಮತ್ತು ಪಾನೀಯಗಳು ಈ ಋತುವಿಗೆ ಸೈ. ಗೋಧಿಯ ಮತ್ತು ಹೊಸ ಅಕ್ಕಿಯ ಬಳಕೆ ಒಳ್ಳೆಯದು. ಕಾಳು ಮೆಣಸು, ಲವಂಗ, ಏಲಕ್ಕಿ, ಎಲೆ ಮತ್ತು ಚಕ್ಕೆ ದಾಲ್ಚೀನಿ, ಧನಿಯಾ, ಮೆಂತೆಯಂತಹ ಸಂಭಾರದ ಬಳಕೆ ಯೋಗ್ಯ. ಅರಿಶಿಣದ ಹೇರಳ ಬಳಕೆ ಖಂಡಿತ ಒಳಿತು. ಒಣ ಹಣ್ಣುಗಳನ್ನು ಆಬಾಲವೃದ್ಧರು ಬಳಸಿರಿ. ಹೆಚ್ಚು ಕೆಲರಿ ನೀಡಲು ಅವು ಸಮರ್ಥ. ಬೆಣ್ಣೆಯಂತೂ ಉತ್ತಮ ಅನ್ನಾಂಗಗಳ ತವರು. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅದು ಪೂರಕ. ನಿದ್ದೆಯ ವಿಷಯದಲ್ಲಿ ಚೌಕಾಸಿ ಬೇಡ. ಹಗಲು ನಿದ್ದೆ ಅನಗತ್ಯ. ರಾತ್ರಿಯ ಜಾಗರಣೆ ಖಂಡಿತ ನಿಷಿದ್ಧ. ಇಂತಹ ಸುಲಭ ಸೂತ್ರ ಅಳವಡಿಸಿರಿ. ನೂರ್ಕಾಲ ಬಾಳಿರಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT