ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಟ ಬಡಿಸಲು ಈ ದೇಸಕ್‌ ಬಂದೇವ...

Last Updated 24 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ‘ಜನ್‌ಗಳಿಗ್‌ ಉಣ್ಣಾಕ್‌ ಇಕ್‌ಲಿಕ್ಕ ನಮ್‌ ನಾಡಿಂದ ಈ ದೇಸಕ್‌ ಬಂದೇವ್‌ ನೋಡ್ರಿ. ಈ ಜನ್ರ ಹೊಟ್ಟಿ ತುಂಬಿದ್ರ ನಮ್ದೂ ತುಂಬಿದಂಗ’... ಹೀಗೆ ಹೇಳುತ್ತ ಸರತಿಯಲ್ಲಿ ನಿಂತಿದ್ದ ಅತಿಥಿಗಳಿಗೆ ಪಾಯಸ ಬಡಿಸಲು ಮುಂದಾದರು ಕಲಬುರ್ಗಿಯಿಂದ ಬಂದ ತುಳುಜಮ್ಮ.

‘ಯವ್ವ ಜೋಪಾನ, ಕೂಸ್‌ನ ಸೊಂಟ್ದಲ್ಲಿ ಸಂದಾಗ್‌ ಸಿಗಿಸ್ಕೊ. ಹಿಡಿ ಊಟದ್‌ ತಟ್ಟಿ. ಎರಡು ಕೈಲಿ ಹಿಡ್ಕೊ. ಪಾಯ್ಸ ಬಿಸಿ ಐತೆ ಯವ್ವ. ಕೈ ಗಿಯ್‌ ಸುಟ್ಕೊಂಡಿ’ ಕಂಕುಳಲ್ಲಿ ಮಗುವನ್ನು ಎತ್ತಿ ಕೊಂಡು ಬಂದ ಗೃಹಿಣಿಗೆ ಜಾಗೃತಿಯ ಮಾತು ಹೇಳುತ್ತಿದ್ದರು ಶೇಖ್ರಮ್ಮ.

ಕಾಳಜಿಯೇ ಮೈತಳೆದಂತೆ ಕಾಣಿಸುತ್ತಿದ್ದ ಆ ಹೆಣ್ಣುಮಕ್ಕಳು ಸಾಹಿತ್ಯ ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರಿಗೆ ಊಟ, ತಿಂಡಿಯ ಆತಿಥ್ಯ ನೀಡಲು ಕಲಬುರ್ಗಿಯಿಂದ ಇಲ್ಲಿಗೆ ಬಂದಿದ್ದಾರೆ. 150 ಮಹಿಳೆಯರು ಈ ಕಾರ್ಯದಲ್ಲಿ ನಿರತರಾಗಿದ್ದಾರೆ.

ಸಾಹಿತ್ಯ ಸಮ್ಮೇಳನದ ಯಶಸ್ಸು ಊಟ–ತಿಂಡಿಯ ವ್ಯವಸ್ಥೆಯನ್ನು ಅವಲಂಬಿಸಿದೆ. ಅದನ್ನು ಯಶಸ್ಸುಗೊಳಿಸಲು ಸಾವಿರಾರು ಕೈಗಳು ಕೆಲಸ ಮಾಡುತ್ತವೆ. ಉತ್ತರದಿಂದ ದಕ್ಷಿಣಕ್ಕೆ ಬಂದಿರುವ ಈ ಹೆಣ್ಣುಮಕ್ಕಳು ಆ ಯಶಸ್ಸಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಚಿಕ್ಕಮಕ್ಕಳಿಂದ ಹಿಡಿದು ಅರವತ್ತು ದಾಟಿದ ವೃದ್ಧೆಯರೂ ಕಾಯಕನಿರತರಾಗಿದ್ದಾರೆ. ಕುಟುಂಬ ಸಮೇತ ಮೈಸೂರು ನೋಡಲು ಬಂದವರೂ ಇದ್ದಾರೆ. ಕೆಲವರಿಗೆ ಇದು 2ನೇ ಸಮ್ಮೇಳನ. ಬಹಳಷ್ಟು ಮಂದಿಗೆ ಇದೇ ಮೊದಲನೆಯದ್ದು.

‘ಊರಲ್ಲಿ ಕೂಲಿ ಕೆಲಸ ಮಾಡ್ತೀವಿ. ತೊಗ್ರಿ ತರಿಯಾದು, ಗುಂಡಿ ತೆಗಿಯೊ ಕೆಲ್ಸ ಹಚ್ತೇವಿ. ಮೈಸೂರ್ಗ ಊಟ ಬಡಿಸಾಕ್‌ ಹೋಬ್ಗೇಕಂತ ಹೇಳಿ ಕರದ್ರು. ಇಲ್ಲಿಗ್ ಬಂದೇವಿ. ನಾವು ಸಾಹಿತ್ಯದ ಸೇವೆ ಮಾಡೋಣ್‌ ಅಂತ ಬಂದೇವಿ. ದುಡ್‌ ಎಷ್ಟ್‌ ಕೋಡ್ತಾರ್‌ ಅಂತ ಇನ್ನೂ ಹೇಳಿಲ್ರಿ’ ಎಂದರು ದಾನಮ್ಮ.

‘ಕೂತಿದ್ದು ಹಾಳಾಗೋ ಬದ್ಲು ದುಡ್‌ಕೊಂಡ್‌ ತಿನ್ನೋದು ನಮ್‌ ದೇಯ. ನಿಮ್‌ಕಡಿ ಇದ್ದಂಗ ನಮ್‌ಕಡಿ ಕಂಪ್ನಿ ಗಿಂಪ್ನಿ ಇಲ್ರಿ. ಬೆಂಗಳೂರಾಗ ಎಲ್ಲ ಕಂಪ್ನಿಗಳ್ನು ಮಡಿಕಂಡಿದ್ದೀರ. ನಮ್‌ಕಡೀನೂ ಇದ್ದಿದ್ದರ ನಾಕ್‌ ಅಕ್ಸರ ಕಲ್ತ ಹೆಣಮಕ್ಳು ನೌಕ್ರಿಗೆ ಹೋಗ್ತಿದ್ರು. ಈಗ್‌ ನೋಡ್ರಿ ಕಾಸು ಕೊಡ್ತಾರೆ ಅಂದ್ರ ಎಲ್ಲಿಗಾದರೂ ಹೋಗ್‌ಲಿಕ್ಕ ರೆಡಿಯಾಗಿರ್ಬೇಕು’ ಎನ್ನುತ್ತ ಉಸ್‌ ಎಂದರು ನಾಗವೇಣಿ. ಪಿಯುಸಿವರೆಗೆ ಓದಿರುವ ಅವರು ಕೂಲಿ ಕೆಲಸ ಮಾಡುತ್ತಿದ್ದಾರೆ.

ಸಮ್ಮೇಳನ ಅಂದ್ರ ಊಟ ಮಾಡೋದು

ಈ ಹೆಣ್ಣುಮಕ್ಕಳಲ್ಲಿ ಬಹುತೇಕರಿಗೆ ಸಾಹಿತ್ಯ ಸಮ್ಮೇಳನದ ನಿಜವಾದ ಅರ್ಥ ಗೊತ್ತಿಲ್ಲದಿದ್ದರೂ, ತಮ್ಮದೇ ನಿಲುವನ್ನು ಹೊಂದಿದ್ದಾರೆ. ‘ಸಮ್ಮೇಳನ ಅಂದ್ರ ಎಲ್ಲಾರೂ ಒಂದ್‌ಕಡಿ ಸೇರದು. ಊಟ ಮಾಡಾದು. ಮಾತುಕತೆ ಆಡಾದು. ದೊಡ್‌ ದೊಡ್‌ ವ್ಯಕ್ತಿಗಳು ಭಾಸ್ಣ ಮಾಡದು ನಮಗೆ ತಿಳಿಯಾಕಿಲ್ಲ’ ಎಂದು ಮುಗ್ದತೆಯಿಂದ ನುಡಿಯುತ್ತಾರೆ ನೀಲಮ್ಮ.

ಜಗದೇವಿ

* ರಾಯಚೂರು ಸಮ್ಮೇಳನದಲ್ಲೂ ನಾವು ಭಾಗವಹಿಸಿದ್ವಿ. ನಮ್ಮ ಆತಿಥ್ಯ ಮೆಚ್ಚಿಕೊಂಡು ಈ ವರ್ಷವೂ ನಮ್ಮನ್ನು ಇಲ್ಲಿಗೆ ಕರೆದ್ರು. ಪ್ರೀತಿಯಿಂದ ಉಣ್ಣಾಕ್‌ ಬಡ್ಸೋದು ನಮ್‌ಕೆಲ್ಸ

-ಜಗದೇವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT