ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲು ಭೂರಿಭೋಜನ; ಕೊನೆಗೆ ಅನ್ನ–ಸಾರು!

Last Updated 24 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ಸಾಹಿತ್ಯ ಸಮ್ಮೇಳನದ ಊಟದ ವ್ಯವಸ್ಥೆಯಲ್ಲಿ ಮೊದಲ ದಿನವೇ ಅವ್ಯವಸ್ಥೆ ಕಾಡಿತು. ಸಾರ್ವಜನಿಕರಿಗಾಗಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ಹಾಕಿದ ಕೌಂಟರ್‌ಗಳಲ್ಲಿ ಅಡುಗೆ ಬೇಗ ಖಾಲಿಯಾದ್ದರಿಂದ ಅನ್ನ ಮತ್ತು ಸಾರನ್ನು ಮಾತ್ರ ಬಡಿಸಲಾಯಿತು.

ಸಮ್ಮೇಳನಕ್ಕೆ ಬಂದವರು ಬೆಳಿಗ್ಗೆ 11.30ರ ಹೊತ್ತಿಗೇ ಊಟದ ಕೌಂಟರ್‌ಗಳತ್ತ ಧಾವಿಸಿದರು. ಮಧ್ಯಾಹ್ನ 2ರವರೆಗೂ ಜನ ಕಡಿಮೆ ಇದ್ದುದರಿಂದ ಅಚ್ಚುಕಟ್ಟಾಗಿ ಊಟ ಬಡಿಸಲಾಯಿತು. ಪುರುಷರು, ಮಹಿಳೆಯರು ಹಾಗೂ ಅಂಗವಿಕಲರಿಗಾಗಿ ಪ್ರತ್ಯೇಕ ವ್ಯವಸ್ಥೆಯಿತ್ತು.

ಸಾರ್ವಜನಿಕರಿಗಾಗಿ 73 ಕೌಂಟರ್‌ ತೆರೆಯಲಾಗಿತ್ತು. ಮೊದಲು ಬಂದ ಎಲ್ಲರೂ ಬಿಸಿಬಿಸಿ ಕಜ್ಜಾಯ, ಚಪಾತಿ, ಪೂರಿ–ಸಾಗು, ಅನ್ನ–ಸಾರು, ಬಾತು, ಮೊಸರನ್ನವನ್ನು ನಾಲಿಗೆ ಚಪ್ಪರಿಸಿ ಸವಿದರು.

ವಿಶಾಲ ಮೈದಾನದಲ್ಲಿ ಗಟ್ಟಿ ಮುಟ್ಟಾದ ಪೆಂಡಾಲ್‌ ಹಾಕಿ ನೆರಳು ಮಾಡಲಾಗಿತ್ತು. ದೂಳು ಏಳದಂತೆ ನೆಲಹಾಸು ಹಾಕಲಾಗಿತ್ತು. ಊಟದ ವಿವರ, ಕಾರ್ಯಕ್ರಮದ ವಿವರಗಳನ್ನೂ ಮೈಕಿನ ಮೂಲಕ ನಿರಂತರವಾಗಿ ನೀಡಲಾಯಿತು. ಮಧ್ಯೆಮಧ್ಯೆ ಕೇಳಿಬಂದ ಕನ್ನಡ ಭಾವಗೀತೆಗಳು ಭೋಜನಕ್ಕೆ ಇನ್ನಷ್ಟು ರುಚಿ ನೀಡಿದವು.

ಉದ್ಘಾಟನಾ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಅಪಾರ ಜನ ಮೈದಾನಕ್ಕೆ ಬಂದರು. ಇದರಿಂದಾಗಿ ಪೂರಿ, ಕಜ್ಜಾಯ, ಮೊಸರನ್ನ ಮಧ್ಯಾಹ್ನ 2.30ರ ನಂತರ ಖಾಲಿಯಾಯಿತು. ಕೊನೆಕೊನೆಗೆ ಅನ್ನ–ಸಾಂಬಾರು ಅಷ್ಟೇ ಉಳಿಯಿತು.

ಹಸಿದವರ ಸಾಲು ಕರಗದಿದ್ದರೂ ಕೌಂಟರ್‌ಗಳಲ್ಲಿ ಅಡುಗೆ ಇರಲಿಲ್ಲ. ಹೀಗಾಗಿ, ಬೆಳಗಿನ ಉಪಾಹಾರಕ್ಕೆ ಮಾಡಿದ್ದ ಸಿಹಿ ಪೊಂಗಲ್‌ ಹಾಗೂ ಖಾರ ಪೊಂಗಲ್‌ ಬಡಿಸಲಾಯಿತು.

ಗಣ್ಯರ ಕೌಂಟರ್‌ನತ್ತ ದೌಡು: ಸಾರ್ವಜನಿಕರ ಕೌಂಟರುಗಳಲ್ಲಿ ಅಡುಗೆ ಖಾಲಿಯಾಗಿದ್ದರಿಂದ ಗಣ್ಯರು, ಪತ್ರಕರ್ತರು ಹಾಗೂ ಸಮ್ಮೇಳನ ಪ್ರತಿನಿಧಿ
ಗಳ ಕೌಂಟರುಗಳತ್ತ ಜನರ ಗುಂಪುಗಳು ಧಾವಿಸಿದವು. ಅಲ್ಲಿ ಕೂಡ ನೂಕು ನುಗ್ಗಲು ಆರಂಭವಾಯಿತು. ಕೆಲವರು ಪೊಲೀಸರೊಂದಿಗೆ ವಾಗ್ವಾದಕ್ಕೆ ನಿಂತರು.

ಮೆನುವಿನಲ್ಲಿ ಏನೇನು?

ಬೆಳಿಗ್ಗೆ ಉಪಾಹಾರಕ್ಕೆ ಸಿಹಿ ಪೊಂಗಲ್‌ ಹಾಗೂ ಖಾರ ಪೊಂಗಲ್‌. ಮಧ್ಯಾಹ್ನದ ಊಟಕ್ಕೆ ಕಜ್ಜಾಯ, ಪೂರಿ–ಸಾಗು, ಬಾತ್‌–ಮೊಸರುಬಜ್ಜಿ, ಅನ್ನ–ಸಾರು, ಮೊಸರನ್ನ–ಉಪ್ಪಿನಕಾಯಿ ಶುಕ್ರವಾರದ ಮೆನುವಿನಲ್ಲಿದ್ದವು. ರಾತ್ರಿ ಹೋಳಿಗೆ ಊಟದ ವಿಶೇಷವಿತ್ತು.

* ನಿರೀಕ್ಷೆಗಿಂತ ಎರಡು ಪಟ್ಟು ಜನ ಉಟದ ಪೆಂಡಾಲಿನಲ್ಲಿ<br/>ದ್ದರು. ಯಾರೊಬ್ಬರೂ ಹಸಿದು ಕೊಂಡಿರದಂತೆ ನೋಡಿಕೊಂಡಿದ್ದೇವೆ

ಕಾ.ರಾಮೇಶ್ವರಪ್ಪ, ಹಿರಿಯ ಉಪನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ

* ಒಂದೂವರೆ ಲಕ್ಷ ಜನರ ಲೆಕ್ಕಹಾಕಿದ್ದೆವು. ಮುಂಜಾಗ್ರತೆಯಿಂದ 2 ಲಕ್ಷ ಜನರಿಗೆ ಸಾಲುವಷ್ಟು ಅಡುಗೆ ಮಾಡಿಸಿದ್ದೇವೆ

–ಧ್ರುವಕುಮಾರ್‌ ಅಧ್ಯಕ್ಷ, ಆಹಾರ ಸಮಿತಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT