ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟಿಪ್ಪು ಚರ್ಚೆಗೆ ಬೇಕಿದೆ ಹೊಸ ನೋಟ’

ಆಧುನಿಕ ಕರ್ನಾಟಕ ನಿರ್ಮಾಣ: ಮೈಸೂರು ರಾಜರ ಕೊಡುಗೆ
Last Updated 24 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ಟಿಪ್ಪು ಸುಲ್ತಾನ್ ಬಗ್ಗೆ ಪ್ರಸ್ತುತ ನಡೆಯುತ್ತಿರುವ ಚರ್ಚೆಗಳು ಅವಾಸ್ತವ ಎಂದು ನಿರಾಕರಿಸುವ ಹಾಗಿಲ್ಲ. ಇಲ್ಲಿ ಧಾರ್ಮಿಕ ಕಾರಣಗಳಿಗಿಂತ ರಾಜಕೀಯ ಕಾರಣಗಳು ಹೆಚ್ಚು ಮುಖ್ಯವಾಗುತ್ತವೆ ಎಂದು ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪೃಥ್ವಿದತ್ತ ಚಂದ್ರಶೋಭಿ ವ್ಯಾಖ್ಯಾನಿಸಿದರು.

ಸಾಹಿತ್ಯ ಸಮ್ಮೆಳನದ ಆರಂಭಿಕ ಗೋಷ್ಠಿ ‘ಆಧುನಿಕ ಕರ್ನಾಟಕ ನಿರ್ಮಾಣ: ಮೈಸೂರು ರಾಜರ ಕೊಡುಗೆ’ ವಿಷಯದಲ್ಲಿ ಹೈದರಾಲಿ–ಟಿಪ್ಪು ಆಡಳಿತ ಕುರಿತು ಅವರು ಮಾತನಾಡಿದರು.

ಟಿಪ್ಪುವಿನ ಬಗ್ಗೆ ಮೌಢ್ಯದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಚರ್ಚೆಗಳು ನಿಜವಲ್ಲ ಎಂದು ಹೇಳಲು ಸಾಧ್ಯವಾಗದಿದ್ದರೂ, ಅವುಗಳನ್ನು ಹೇಗೆ ಪ್ರಸ್ತುತಪಡಿಸಬೇಕು ಎಂಬುದನ್ನು ಚರ್ಚಿಸಬೇಕಾದ ಅಗತ್ಯ ಇದೆ ಎಂದು ಹೇಳಿದರು.

18ನೇ ಶತಮಾನದಲ್ಲಿ ಎರಡು ಪಲ್ಲಟಗಳನ್ನು ನಾವು ಕಾಣುತ್ತೇವೆ. ದೇಶದಲ್ಲಿ ಅರಾಜಕತೆ ಉಂಟಾದುದರ ಜೊತೆಗೆ ಹೊಸ ರಾಜಕೀಯ ಶಕ್ತಿಗಳು ಹುಟ್ಟಿಕೊಂಡವು. ಎರಡನೆಯದು ಗ್ಲೋಬಲ್‌ ಟ್ರೇಡ್‌ ಶುರುವಾದದ್ದು. ಈ ಪಲ್ಲಟಗಳನ್ನು ಹೈದರಾಲಿ–ಟಿಪ್ಪು ಸಮರ್ಥವಾಗಿ ನಿಭಾಯಿಸಿದರು. ಅಣ್ಣನ ಸೈನ್ಯದ ಉತ್ತರಾಧಿಕಾರಿಯಾಗಿ ಬಂದ ಹೈದರಾಲಿ ನಾಲ್ಕೇ ವರ್ಷದಲ್ಲಿ ಸರ್ವಾಧಿಕಾರಿಯಾಗಿ ಬೆಳೆಯುತ್ತಾನೆ. ಮುಂದಿನ 40 ವರ್ಷದ ಆಡಳಿತದಲ್ಲಿ ಹೈದರ್‌ ಮತ್ತು ಟಿಪ್ಪು ಜಾಗತಿಕ ಮಟ್ಟದಲ್ಲಿ ಮೈಸೂರು ಗುರುತಿಸಿಕೊಳ್ಳುವಂತೆ ಮಾಡುತ್ತಾರೆ. ಅನಕ್ಷರಸ್ಥನಾಗಿದ್ದ ಹೈದರಾಲಿ ರಾಜತಾಂತ್ರಿಕ ವ್ಯವಹಾರಗಳನ್ನು ಸೂಕ್ಷ್ಮವಾಗಿ ಅರಿತಿದ್ದ ಎಂದರು.

18ನೇ ಶತಮಾನದ 2ನೇ ಭಾಗದಲ್ಲಿ ಬ್ರಿಟಿಷರನ್ನು ಕಾಡಿದ ಎರಡು ದೊಡ್ಡ ಅಪಾಯಗಳಲ್ಲಿ ಒಂದು ಹೈದರ್‌–ಟಿಪ್ಪು, ಇನ್ನೊಂದು ಅಮೆರಿಕದ ಸ್ವಾತಂತ್ರ್ಯ ಹೋರಾಟಗಾರರು. ಜಾಗತಿಕ ಮಟ್ಟದಲ್ಲಿ ಇಷ್ಟು ದೊಡ್ಡ ರಾಜಕೀಯ ಶಕ್ತಿಯಾಗಿ ಬೆಳೆದ ಈ ಇಬ್ಬರೂ ನವಕರ್ನಾಟಕ ನಿರ್ಮಾಣದಲ್ಲಿ ಪ್ರಮುಖರಾಗಿ ನಿಲ್ಲುತ್ತಾರೆ ಎಂದರು.

1,821 ರೂಪಾಯಿಯಲ್ಲಿ ಸಮ್ಮೇಳನ!

‘1930ರಲ್ಲಿ ಮೈಸೂರಿನಲ್ಲಿ ನಡೆದ ಸಮ್ಮೇಳನದಲ್ಲಿ ಮೂರು ದಿನಗಳ ಕಾರ್ಯಕ್ರಮಕ್ಕೆ ₹ 1,821 ಖರ್ಚಾಗಿತ್ತು’ ಎಂದು ಟಿ.ವಿ.ವೆಂಕಟಾಚಲಶಾಸ್ತ್ರಿ ಅಂದಿನ ಸಮ್ಮೆಳನದ ಖರ್ಚು– ವೆಚ್ಚಗಳ ಪಟ್ಟಿ ಮುಂದಿಟ್ಟಾಗ ಸಾರ್ವಜನಿಕರು ಕಣ್ಣರಳಿಸಿದರು.

* ಆಧುನಿಕ ಕರ್ನಾಟಕ ನಿರ್ಮಾಣದಲ್ಲಿ ಅರಸರಷ್ಟೇ ಪ್ರಮುಖವಾಗಿ ದಿವಾನರು ಗೋಚರಿಸುತ್ತಾರೆ. ಮಹಾರಾಜರಿಗೆ ಒತ್ತಾಸೆ ಹಾಗೂ ಸ್ಫೂರ್ತಿದಾಯಕವಾಗಿ ದಿವಾನರು ಕಾರ್ಯನಿರ್ವಹಿಸಿದ್ದಾರೆ

-ಜಯಪ್ಪಗೌಡ, ಪ್ರಾಧ್ಯಾಪಕ

* ಸಂಸ್ಕೃತಿ ಮತ್ತು ಚಿಂತನೆ ಜತೆ ಜತೆಗೆ ಮೈಸೂರು ಸಂಸ್ಥಾನ ಆಧುನಿಕತೆಗೆ ತೆರೆದುಕೊಂಡಿದೆ. ಕೃಷಿ ಮತ್ತು ಕೈಗಾರಿಕೆ ಎರಡು ಒಟ್ಟೊಟ್ಟಿಗೆ ಬೆಳೆಯುವ ಸಾಧ್ಯತೆಯನ್ನು ಮೈಸೂರನ್ನು ಆಳಿದ ಅರಸರು ತೋರಿಸಿಕೊಟ್ಟಿದ್ದಾರೆ

-ಎಸ್‌.ಆರ್. ವಿಜಯಶಂಕರ್, ವಿಮರ್ಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT