ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿಯೂ ಬ್ರಹ್ಮನೇ ಹೌದು

Last Updated 31 ಜುಲೈ 2018, 10:47 IST
ಅಕ್ಷರ ಗಾತ್ರ

ಸರಸ್ವತಿಯ ಅನುಸಂಧಾನದಲ್ಲಿದ್ದ ವಾಲ್ಮೀಕಿ ಮಹರ್ಷಿಯ ಮುಂದೆ ಚತುರ್ಮುಖ ಬ್ರಹ್ಮ ಪ್ರತ್ಯಕ್ಷನಾದ.

ಆಶ್ರಮಕ್ಕೆ ಹಿಂದಿರುಗಿದ ವಾಲ್ಮೀಕಿಮಹರ್ಷಿ ಎಂದಿನಂತೆ ನಿತ್ಯದ ಕಲಾಪಗಳಲ್ಲಿ ತೊಡಗಿದ್ದರಾದರೂ ಮನಸ್ಸು ಮಾತ್ರ
‘ಮಾ ನಿಷಾದ’ ಶ್ಲೋಕದಲ್ಲಿಯೇ ಮುಳುಗಿತ್ತು. ಅಂಥ ಸಮಯದಲ್ಲಿ ಬ್ರಹ್ಮ ಪ್ರತ್ಯಕ್ಷನಾದುದು.

ಬ್ರಹ್ಮನನ್ನು ವರ್ಣಿಸಲು ಕವಿ ವಾಲ್ಮೀಕಿ ಬಳಸಿರುವ ವಿಶೇಷಣಗಳು ‘ಲೋಕಕರ್ತಾ’, ‘ಸ್ವಯಂಪ್ರಭು’, ‘ಚತುರ್ಮುಖ’ ಮತ್ತು ‘ಮಹಾತೇಜಾ’ – ಲೋಕಗಳ ಸೃಷ್ಟಿಕರ್ತ, ಲೋಕಕ್ಕೆ ತಾನೇ ಒಡೆಯ ಎನಿಸಿದವನು, ನಾಲ್ಕು ಮುಖಗಳನ್ನು ಹೊಂದಿದವನು ಮತ್ತು ಅಪೂರ್ವವಾದ ಬೆಳಕಿನಿಂದ ಬೆಳಗುತ್ತಿರುವವನು. ಬ್ರಹ್ಮ ನಡೆಸುವ ಚಟುವಟಿಕೆಗಳಿಗೂ ಈ ಹೆಸರುಗಳಿಗೂ ನಂಟಿರುವುದು ಎದ್ದುಕಾಣುವ ವಿವರವೇ.

ಮಹರ್ಷಿಗಳಿಗೆ ದೈವವು ಸಾಕ್ಷಾತ್ಕಾರವಾಗುವುದು ವಿಶೇಷ ವಿದ್ಯಮಾನವೇನಲ್ಲವೆನ್ನಿ! ಆದರೆ ಈಗ ಮಾತ್ರ ವಾಲ್ಮೀಕಿ ಮಹರ್ಷಿಗೆ ಬ್ರಹ್ಮನನ್ನು ಕಂಡು ಆಶ್ಚರ್ಯವಾಯಿತು. ಏನು ಮಾತನಾಡಲೂ ತೋಚಲಿಲ್ಲವಂತೆ! ಮಾತಿನ ಬಗ್ಗೆಯೇ ಆಲೋಚನೆಯಲ್ಲಿದ್ದವನಿಗೆ ಕೂಡಲೇ ಯಾವ ಮಾತನ್ನು ಆಡಬೇಕೆಂದು ಹೊಳೆಯಲಿಲ್ಲ ಎನ್ನುವುದೇ ಸ್ವಾರಸ್ಯಕರವಾದ ವಿವರ. ಮಾತಿನ ಶಕ್ತಿ ಗೊತ್ತಿದ್ದವರಿಗೆ ಅದನ್ನು ಬಳಸುವಾಗ ಎಚ್ಚರ ಮೂಡುವುದು ಸಹಜ.

ಬ್ರಹ್ಮನನ್ನು ಕಂಡ ಕೂಡಲೇ ವಾಲ್ಮೀಕಿ ಮಹರ್ಷಿ ಥಟ್ಟನೆ ಎದ್ದು, ವಿನಯದಿಂದ ಕೈಮುಗಿದು ನಿಂತ. ಅನಂತರ ಪಾದ್ಯ, ಅರ್ಘ್ಯ ಮತ್ತು ಆಸನವನ್ನು ಸಮರ್ಪಿಸಿ, ನಮಸ್ಕಾರ ಮಾಡಿದ. ಕುಶಲವನ್ನು ವಿಚಾರಿಸಿದ. ಬ್ರಹ್ಮದೇವ ಪೀಠದಲ್ಲಿ ಕುಳಿತ; ವಾಲ್ಮೀಕಿಯನ್ನೂ ಕುಳಿತುಕೊಳ್ಳುವಂತೆ ಸೂಚಿಸಿದ. ಬ್ರಹ್ಮನು ಕುಳಿತುಕೊಂಡ ಮೇಲೆ ವಾಲ್ಮೀಕಿ ಕೂಡ ಕುಳಿತ. ಪಾದ್ಯ, ಅರ್ಘ್ಯ, ನಮನ – ಇವೆಲ್ಲವೂ ವಾಲ್ಮೀಕಿಗೆ ಅಪರೂಪದ ಚಟುವಟಿಕೆಗಳಲ್ಲ; ದಿನಪೂರ್ತಿ ಅದೆಷ್ಟೋ ಸಲ ನಡೆಯುವಂಥವೇ ಇವು.

ಈಗಲೂ ಅವನ್ನು ಕವಿಮಹರ್ಷಿ ಆಚರಿಸಿದ್ದು ಹೌದು; ಆದರೆ ಈಗ ಅವೆಲ್ಲವೂ ಯಾಂತ್ರಿಕವಾಗಿದ್ದವು. ಅವನ ಮನಸ್ಸು ಮಾತ್ರ ಬೇಡನ ಪ್ರಸಂಗದಲ್ಲಿಯೇ ಮುಳುಗಿತ್ತು. ‘ಪಾಪಾತ್ಮನಾದ ಬೇಡ ಎಂಥ ಕೆಲಸವನ್ನು ಮಾಡಿಬಿಟ್ಟ. ಇಂಪಾಗಿ ಧ್ವನಿ ಮಾಡುತ್ತಿದ್ದ ಆ ಕ್ರೌಂಚಪಕ್ಷಿಯನ್ನು ನಿಷ್ಕಾರಣವಾಗಿ ಕೊಂದುಬಿಟ್ಟನಲ್ಲ! ಹೆಣ್ಣುಹಕ್ಕಿಗೆ ಎಂಥ ಕಷ್ಟ ಒದಗಿತಲ್ಲ!!’ ಎಂದು ಶೋಕಿಸುತ್ತ, ಮತ್ತೆ ‘ಮಾ ನಿಷಾದ ಪ್ರತಿಷ್ಠಾಂ ತ್ವಂ...’ ಶ್ಲೋಕವನ್ನು ಮನಸ್ಸಿನಲ್ಲಿಯೇ ಗುನುಗಿಕೊಂಡ. ಆದರೆ ಈಗ ಆ ಶ್ಲೋಕವನ್ನು ಹಾಡಿಕೊಂಡದ್ದು ಅವನು ಸಂತೋಷಕ್ಕಾಗಿಯೇ ಹೊರತು ಶಾಪದ ಗುರಿ ಅದಕ್ಕಿರಲಿಲ್ಲ.

ಬ್ರಹ್ಮನಿಗೆ ಎಲ್ಲವೂ ತಿಳಿದಿದೆ; ಹೀಗೆ ತಿಳಿದಿರುವವನೇ ‘ಬ್ರಹ್ಮ’ ಎನಿಸಬಲ್ಲನಷ್ಟೆ. ಅವನು ಮುಗುಳ್ನಗೆಯನ್ನು ಬೀರುತ್ತ ಮಾತನಾಡಲು ತೊಡಗಿದ. ಎಲ್ಲವನ್ನೂ ತಿಳಿದಿರುವವರು ಏನನ್ನೂ ತಿಳಿಯದ ಸ್ಥಿತಿಯಲ್ಲಿರುವವರೊಡನೆ ಮಾತನಾಡುವ ಮೊದಲು ಹೀಗೆ ಮುಗುಳ್ನಗೆಯನ್ನು ಚೆಲ್ಲುವುದಾದರೂ ಏಕೆ? ಭಗವದ್ಗೀತೆಯ ಪ್ರಸಂಗ ಇಲ್ಲಿ ನೆನಪಾಗುವುದು.

ವಿಷಾದದಲ್ಲಿರುವ ಅರ್ಜುನನಿಗೆ ಕೃಷ್ಣನು ಮುಗುಳ್ನಗೆಯನ್ನು ಚೆಲ್ಲಿಯೇ ಉಪದೇಶವನ್ನು ಮಾಡಲು ತೊಡಗಿದ್ದು. ನಗುವಿಗೂ ಅರಿವಿಗೂ ಉಪದೇಶಕ್ಕೂ ಏನಾದರೂ ನಂಟಿರಬಹುದೆ? ಇರಲಿ, ಈ ವಿವರಗಳನ್ನು ಆಮೇಲೆ ನೋಡೋಣ. ನಗೆಯನ್ನು ಬೀರುತ್ತಿದ್ದ ಬ್ರಹ್ಮನು ವಾಲ್ಮೀಕಿ ಮಹರ್ಷಿಗೆ ಹೀಗೆ ಹೇಳಿದ:

‘ಮಹರ್ಷಿಯೆ! ನೀನು ಹೇಳಿದ ವಾಕ್ಯವು ಛಂದೋಬದ್ಧವಾದ ಶ್ಲೋಕವೇ ಹೌದು. ನನ್ನ ಇಚ್ಛೆಯಿಂದಲೇ ಈ ಮಾತು (ಮೂಲದಲ್ಲಿ ‘ಸರಸ್ವತೀ’ ಎಂದೇ ಇದೆ) ನಿನ್ನ ಮುಖದಿಂದ ಹೊರಬಂದಿತು. ರಾಮನ ಚರಿತ್ರೆಯನ್ನು ನೀನು ಸಂಪೂರ್ಣವಾಗಿ ವಿರಚಿಸು. ಅವನು ಧರ್ಮಾತ್ಮ, ಗುಣಶಾಲಿ. ಅವನು ಪ್ರಜ್ಞಾವಂತನೂ ಹೌದು; ಧೀರನೂ ಹೌದು. ಈ ಲೋಕದಲ್ಲಿ ರಾಮನು ನಡೆಸಿದ ಚರಿತ್ರೆಯನ್ನು ನಾರದನು ತಿಳಿಸಿದಂತೆ ವರ್ಣಿಸು.

ರಾಮ, ಸೀತೆ, ಲಕ್ಷ್ಮಣ ಮತ್ತು ರಾವಣ ಮೊದಲಾದ ರಾಕ್ಷಸರು – ಇವರ ಚರಿತ್ರೆಯು ಏಕಾಂತದಲ್ಲಾಗಲೀ ಬಹಿರಂಗದಲ್ಲಾಗಲೀ ಹೇಗೆ ನಡೆಯಿತೋ ಅದೇ ಬಗೆಯಲ್ಲಿ ನಿನಗೆ ಗೋಚರಿಸಲಿ. ನಾರದನು ಹೇಳಿರುವ ಸಂದರ್ಭವೂ ನಿನಗೆ ತಿಳಿಯಲಿ. ನೀನು ಬರೆಯುವ ಕಾವ್ಯದಲ್ಲಿ ಯಾವ ಮಾತು ಕೂಡ ಸುಳ್ಳಾಗಲಾರದು. ಎಲೈ ವಾಲ್ಮೀಕಿಯೆ! ಶ್ರೀರಾಮನ ಪುಣ್ಯಕಥೆಯನ್ನು ಶ್ಲೋಕಗಳಿಂದ ಮನೋಹರವಾಗಿ ಚಿತ್ರಿಸು.

ಈ ಭೂಮಿಯಲ್ಲಿ ಎಲ್ಲಿಯ ತನಕ ಪರ್ವತಗಳೂ ನದಿಗಳೂ ಇರುವವೋ ಅಲ್ಲಿಯ ತನಕ ನಿನ್ನ ರಾಮಾಯಾಣ ಕೂಡ ಪ್ರಚಾರದಲ್ಲಿರುವುದು. ನಿನ್ನ ಕಾವ್ಯವು ಪ್ರಚಾರದಲ್ಲಿರುವವರೆಗೂ ನೀನು ನನ್ನ ಲೋಕದಲ್ಲಿ (ಎಂದರೆ ಬ್ರಹ್ಮಲೋಕದಲ್ಲಿ) ಎಲ್ಲಿ ಬೇಕಾದರೂ ವಿಹರಿಸಿಕೊಂಡು ವಾಸಿಸಬಹುದು’.

ಹೀಗೆ ಹೇಳಿ ಭಗವಾನ್‌ ಬ್ರಹ್ಮ ಅಂತರ್ಧಾನನಾದ. ಈ ಮಾತುಗಳನ್ನು ಕೇಳಿದ ವಾಲ್ಮೀಕಿಯೂ ಅವನ ಶಿಷ್ಯರೂ ವಿಸ್ಮಿತರಾದರು. ಎಲ್ಲರೂ ‘ಮಾ ನಿಷಾದ ಪ್ರತಿಷ್ಠಾಂ ತ್ವಂ’ ಶ್ಲೋಕವನ್ನು ಮತ್ತೆ ಮತ್ತೆ ಹಾಡಿಕೊಳ್ಳಲು ತೊಡಗಿದರು.

ಬ್ರಹ್ಮನ ಮಾತುಗಳು ವಾಲ್ಮೀಕಿಯನ್ನು ‘ಕವಿ’ಯಾಗಿ ಘೋಷಿಸಿದ್ದು ಮಾತ್ರವಲ್ಲ, ಕವಿ ಮತ್ತು ಕಾವ್ಯದ ಲಕ್ಷಣವನ್ನೂ ನಿರ್ದೇಶಿಸಿವೆ. ಜೊತೆಗೆ ಕವಿಗೆ ಇರಬೇಕಾದ ಅರ್ಹತೆ, ಕವಿದೃಷ್ಟಿಗೆ ಒದಗಬೇಕಾದ ಇತಿವೃತ್ತದ ವಿವರಗಳನ್ನೂ ಸೂಚಿಸಿವೆ. ಮಾತ್ರವಲ್ಲ, ಕಾವ್ಯವನ್ನು ಕಾವ್ಯವನ್ನಾಗಿಯೇ, ಎಂದರೆ ಮನೋಹರವಾಗಿ ವಿರಚಿಸಿದರೆ ಆಗ ಕವಿಯ ಹೆಸರು ಶಾಶ್ವತವಾಗಿಯೂ ಇರಬಲ್ಲದು ಎಂಬ ಆಶ್ವಾಸನೆಯನ್ನೂ ನೀಡಿವೆ. ಕವಿ ಮತ್ತು ಕಾವ್ಯದ ಬಗ್ಗೆ ಇಷ್ಟೆಲ್ಲ ಲಕ್ಷಣಗಳನ್ನು ಸೃಷ್ಟಿಕರ್ತನಾದ ಬ್ರಹ್ಮನೇ ಹೇಳಿರುವುದು ಮನನೀಯವಾಗಿದೆ. ಆನಂದವರ್ಧನನ ‘ಧ್ವನ್ಯಾಲೋಕ’ದಲ್ಲಿ ಕವಿಯನ್ನೂ ಬ್ರಹ್ಮನನ್ನೂ ಸಮೀಕರಿಸಿ ಹೇಳಿರುವ ಈ ಮಾತುಗಳು ಇಲ್ಲಿ ಉಲ್ಲೇಖಾರ್ಹ:

ಅಪಾರೇ ಕಾವ್ಯಸಂಸಾರೇ ಕವಿರೇವ ಪ್ರಜಾಪತಿಃ |
ಯಥಾಸ್ಮೈ ರೋಚತೇ ವಿಶ್ವಂ ತಥೇದಂ ಪರಿವರ್ತತೇ ||
ಭಾವಾನಚೇತನಾನಪಿ ಚೇತನವಶ್ಚೇತನಾನಚೇತನವತ್‌|
ವ್ಯವಹಾರಯತಿ ಯಥೇಷ್ಟಂ ಸುಕವಿಃ ಕಾವ್ಯೇ ಸ್ವತಂತ್ರತಯಾ ||

‘ಅಪಾರವಾದ ಕಾವ್ಯಜಗತ್ತಿನಲ್ಲಿ ಕವಿಯೇ ಸೃಷ್ಟಿಕರ್ತ. ತನಗೆ ಹೇಗೆ ರುಚಿಸುವುದೋ ಹಾಗೆ ವಿಶ್ವವನ್ನು ರೂಪಾಂತರಗೊಳಿಸುತ್ತಾನೆ. ಅಚೇತನವಾದ ವಸ್ತುಗಳನ್ನು ಸಚೇತನವನ್ನಾಗಿಯೂ ಸಚೇತನವಾದುವುಗಳನ್ನು ಅಚೇತನವಾಗಿಯೂ ತನಗೆ ಇಷ್ಟಬಂದ ಸ್ವತಂತ್ರತೆಯಿಂದ ವ್ಯವಹಾರಗೊಳಿಸುತ್ತಾನೆ.’ (ಅನುವಾದ: ತೀನಂಶ್ರೀ)

ಎಂದರೆ ಕವಿಯೂ ಸೃಷ್ಟಿಕರ್ತನಾದ ಬ್ರಹ್ಮನಿಗೆ ಸಮ ಎಂದಾಯಿತು. ಇದು ಹೇಗೆ?

ವಾಲ್ಮೀಕಿ ಮಹರ್ಷಿಯು ಯಾವ ಮಾತುಗಳನ್ನು ಶೋಕಾವೇಶದಿಂದ ನುಡಿದಿದ್ದರೋ ಆ ಮಾತುಗಳಲ್ಲಿ ಗುರು–ಲಘು ಮುಂತಾದ ಸಮಾಕ್ಷರಗಳಿಂದ ಕೂಡಿದ ನಾಲ್ಕು ಪಾದಗಳಿದ್ದವು. ಅದನ್ನೇ ಪುನಃ ಪುನಃ ಹಾಡಿದ್ದರಿಂದ, ಶೋಕಮಯವಾದ ಮಾತು ಶ್ಲೋಕರೂಪವಾಗಿ ನಿಂತಿತು (ಶೋಕಃ ಶ್ಲೋಕತ್ವಮಾಗತಃ).

ಹಾಡಲು ಒದಗುವ ಶ್ಲೋಕಗಳಿಂದಲೇ ರಾಮಾಯಣವನ್ನು ರಚಿಸಬೇಕೆಂದು ಆಗ ವಾಲ್ಮೀಕಿಮಹರ್ಷಿಗೆ ಬುದ್ಧಿಯುಂಟಾಯಿತಂತೆ. ಆ ಬಳಿಕ ಅವರು ಅಂತೆಯೇ ಶ್ರೀರಾಮನ ಯಶಸ್ಸನ್ನು ಹೊಗಳುವ ಕಾವ್ಯವನ್ನು ಅನೇಕ ಶ್ಲೋಕಗಳಿಂದ ರಚಿಸಿದರು. ಆ ಶ್ಲೋಕಗಳಲ್ಲಿ ದೋಷರಹಿತವಾದ ವರ್ಣವಿನ್ಯಾಸವಿದೆ; ರಸಭಾವಗಳಿಗೆ ಅನುರೂಪವಾದ ಶಬ್ದಾರ್ಥಗಳಿಂದ ತುಂಬಿಕೊಂಡು ಮನೋಹರವಾಗಿವೆ. ಈ ಕಾವ್ಯದಲ್ಲಿ ರಘುನಾಥನ ಚರಿತ್ರೆಯಿದೆ; ರಾವಣನನ್ನು ಕೊಂದ ಪ್ರಸಂಗವಿದೆ. ರಚನೆಯಲ್ಲಿ ಸಂಧಿ–ಸಮಾಸಗಳ ವ್ಯವಸ್ಥೆಯಿದೆ; ಸಮತಾ, ಮಾಧುರ್ಯ ಮುಂತಾದ ಕಾವ್ಯಗುಣಗಳಿವೆ.

ಕಾವ್ಯಮೀಮಾಂಸೆಯ ಹಲವು ಗುಣ–ಲಕ್ಷಣಗಳನ್ನು ಇಲ್ಲಿ ಕಾಣಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT