ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್ ಮಾದರಿ ಮಾವು ಕೃಷಿ

Last Updated 25 ನವೆಂಬರ್ 2017, 7:12 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಸಾಂಪ್ರದಾಯಿಕ ಮಾವು ಬೆಳೆಯ ಬದಲು ಹೆಚ್ಚು ಗಿಡಗಳನ್ನು ಬೆಳೆಸುವ ಇಸ್ರೇಲ್‌ ಮಾದರಿಯಲ್ಲಿ ಮಾವು ಬೆಳೆಯಲು ರೈತ ಮಲ್ಲಿಕಾರ್ಜುನ್ ಹೆಜ್ಜೆ ಇಟ್ಟಿದ್ದಾರೆ. ಮೂರು ವರ್ಷಗಳ ಹಿಂದೆ ಗಿಡ ನೆಟ್ಟಿದ್ದು, ಈಗ ಫಸಲು ಕೈಗೆ ಬರಲು ಆರಂಭವಾಗಿದೆ.

ಸಾಂಪ್ರದಾಯಿಕ ಪದ್ಧತಿಯಲ್ಲಿ ಒಂದು ಎಕರೆಯಲ್ಲಿ 40 ರಿಂದ 50 ಮಾವು ಸಸಿಗಳು ಇರುತ್ತವೆ. ಇಸ್ರೇಲ್ ಪದ್ಧತಿಯಲ್ಲಿ ಎಕರೆಗೆ 200ರಿಂದ 400 ಮಾವು ಸಸಿಗಳನ್ನು ಬೆಳೆಸಲು ಸಾಧ್ಯ. ಪಿ.ಆರ್.ಮಲ್ಲಿಕಾರ್ಜುನ್  ಅವರು ಮೂರು ವರ್ಷಗಳ ಹಿಂದೆ ಎರಡೂವರೆ ಎಕರೆಯಲ್ಲಿ 500 ಆಲ್ಫೋನ್ಸೊ ತಳಿ ಮಾವು ನೆಟ್ಟಿದ್ದಾರೆ. ಮೂರನೇ ವರ್ಷದಲ್ಲಿಯೇ ಅಲ್ಪ ಆದಾಯ ಬಂದಿದೆ. ಈ ಬಾರಿ ಎಲ್ಲ ಗಿಡಗಳಲ್ಲಿ ಮಾವು ಬೆಳೆಯುವ ನಿರೀಕ್ಷೆಯಲ್ಲಿದ್ದಾರೆ.

‘ಕೊಳವೆ ಬಾವಿಯಲ್ಲಿ ನೀರು ಕೊರತೆಯಿಂದ ಅಡಿಕೆ ತೋಟ ಒಣಗಿತು. ಹಾಗಾಗಿ ಅಡಿಕೆ ತೆರವುಗೊಳಿಸಿ ಕಡಿಮೆ ನೀರು ಬೇಡುವ ಮಾವು ಬೆಳೆಗೆ ಬದಲಾದೆವು. ಕೊಳವೆ ಬಾವಿಯಲ್ಲಿನ ಕೇವಲ ಒಂದೂವರೆ ಇಂಚು ನೀರಲ್ಲಿ 500 ಮಾವಿನ ಗಿಡಗಳು ಸಮೃದ್ಧವಾಗಿ ಬೆಳೆದಿವೆ. ಮಾವಿನ ಗಿಡದ ದಾಯ (ಗಿಡದಿಂದ ಗಿಡಕ್ಕಿರುವ ಉದ್ದಗಲ) ಕೇವಲ 12.5 ಅಡಿ ಹಾಗು 15 ಅಡಿ ಇರಿಸಲಾಗಿದೆ’ ಎಂದು ಮಲ್ಲಿಕಾರ್ಜುನ್ ವಿವರಿಸಿದರು.

ಹೂವು ಬಿಡುವ ಕಾಲಕ್ಕೆ ಹನಿ ನೀರಾವರಿ ಅಳವಡಿಸಿ ನೀರು ಹರಿಸಲಾಗುವುದು. ಅಲ್ಪ ಪ್ರಮಾಣದ ಕೋಳಿ ಗೊಬ್ಬರ ನೀಡುವುದರಿಂದ ಇಳುವರಿ ಹೆಚ್ಚಲಿದೆ. 5 ವರ್ಷಗಳವರೆಗೆ ಮಾವಿನ ಗಿಡಗಳು ಸ್ವಚ್ಛಂದ ಬೆಳೆಯಲು ಬಿಡಬೇಕು. ಆನಂತರ ಪ್ರತಿ ಎರಡು ವರ್ಷಕ್ಕೊಮ್ಮೆ ಕೊಂಬೆಗಳನ್ನು ಕಟಾವು ಮಾಡುವ ಮೂಲಕ ಹೆಚ್ಚು ಹರಡದಂತೆ ತಡೆಯಬೇಕು. ಮಾವಿನ ಕಾಯಿ ಕಿತ್ತ ಮೇಲೆ ರೆಂಬೆ ತುದಿ ಮುರಿಯಬೇಕು. ಇದರಿಂದ ಹೆಚ್ಚು ಟಿಸಿಲು ಒಡೆಯುವ ಮೂಲಕ ಇಳುವರಿ ಹೆಚ್ಚಿಸಲು ಸಾಧ್ಯ ಎಂದು ಮಾಹಿತಿ ನೀಡಿದರು.

‘ಹೊಸಪೇಟೆ ಬಳಿ ಒಣ ಬಳ್ಳಾರಿ ಎಂಬ ಗ್ರಾಮದ ರೈತರೊಬ್ಬರು ಇಸ್ರೇಲ್‌ಗೆ ಭೇಟಿ ನೀಡಿ ತಮ್ಮ ಜಮೀನಿನಲ್ಲಿ ಮಾವು ಬೆಳೆದಿದ್ದರು. ಅಲ್ಲಿ ಕೇವಲ 3 ಎಕರೆಯಲ್ಲಿ 1200 ಮಾವಿನ ಗಿಡಗಳಿವೆ. ವರ್ಷಕ್ಕೆ ₹ 7ಲಕ್ಷದ ವರೆಗೆ ಆದಾಯ ಗಳಿಸುತ್ತಿದ್ದಾರೆ. ಏಳೂವರೆ ಅಡಿ ಅಂತರಕ್ಕೆ ಒಂದು ಗಿಡದ ಹಾಗೆ ಮಾವು ಕೃಷಿ ನಡೆಸಿದ್ದಾರೆ. ಇದರಿಂದ ಪ್ರಭಾವಿತನಾದೆ. ಈಗ ನನ್ನ ಕೃಷಿ ನೋಡಿ ಸುತ್ತಮುತ್ತಲಿನ ಕೃಷಿಕರು ಪ್ರಭಾವಿತರಾಗುತ್ತಿದ್ದಾರೆ’ ಎಂದು ವಿಷಯ ಬಿಚ್ಚಿಟ್ಟರು.

ಜಿಲ್ಲೆಯ ಮಾವಿನ ಕಣಜ ಎಂದು ಸಂತೇಬೆನ್ನೂರನ್ನು ಕರೆಯಲಾಗುತ್ತದೆ. ಸುಮಾರು 3 ಸಾವಿರ ಹೆಕ್ಟೇರ್ ಮಾವು ಬೆಳೆ ಹೋಬಳಿಯಲ್ಲಿದೆ. ಆದರೆ ಮಾವು ಕೃಷಿಯಲ್ಲಿ ಪ್ರಯೋಗಶೀಲತೆ ಇಲ್ಲದೆ ಸೊರಗಿದೆ. ಅತ್ಯಲ್ಪ ನೀರನ್ನು ಸದ್ಬಳಕೆ ಮೂಲಕ ಉತ್ತಮ ಇಳುವರಿ ಪಡೆಯಲು ಚಿಂತಿಸಬೇಕು. ರೈತರು ಆರ್ಥಿಕವಾಗಿ ಸುಧಾರಣೆಗೊಳ್ಳಬೇಕು. ಸಾಂಪ್ರದಾಯಿಕ ಪದ್ಧತಿಯಲ್ಲಿ ಕಡಿಮೆ ಬೆಳೆ, ಕಡಿಮೆ ಹಣ. ಮಳೆ ಬಂದರೆ ಬೆಳೆ. ಇಲ್ಲವಾದರೆ ನಷ್ಟ. ತೋಟಗಾರಿಕಾ ಇಲಾಖೆ ಹೊಸ ವಿಧಾನದಲ್ಲಿ ಅಧಿಕ ಲಾಭ ಗಳಿಸುವ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎನ್ನುತ್ತಾರೆ ಮಾವು ಬೆಳೆಗಾರ ಎಚ್.ಸಿ.ಪ್ರಸನ್ನ, ಎಚ್‌.ಸಿ.ನಾಗರಾಜ್.

* * 

ಪ್ರತಿ ಎಕರೆ ವ್ಯಾಪ್ತಿಯಲ್ಲಿ ಹೆಚ್ಚು ಸಾಂದ್ರತೆಯಲ್ಲಿ ಮಾವು ಬೆಳೆಯಿಂದ ಖರ್ಚು ಕಡಿಮೆ. ಅಧಿಕ ಇಳುವರಿ ಸಾಧ್ಯ.
ಗಂಗಾ ಪ್ರಸಾದ್
ಪ್ರಾಧ್ಯಾಪಕ. ಕೃಷಿ ವಿ.ವಿ. ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT