ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಮೀಟರ್‌: ಜಿಲ್ಲಾಧಿಕಾರಿ ಆದೇಶಕ್ಕೂ ಕಿಮ್ಮತ್ತಿಲ್ಲ!

Last Updated 25 ನವೆಂಬರ್ 2017, 7:32 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ 2015ರ ಜುಲೈನಲ್ಲಿ ನಡೆಸಿದ ಸಭೆಯಲ್ಲಿ ಎಲ್ಲ ಆಟೊ ಚಾಲಕರೂ ಮೀಟರ್‌ ಅಳವಡಿಕೆಗೆ ಒಪ್ಪಿಕೊಂಡಿದ್ದರೂ ಇನ್ನೂ ಜಾರಿಯಾಗುವ ಲಕ್ಷಣಗಳು ಕಾಣುತ್ತಿಲ್ಲ.

ಹಲವು ಬಾರಿ ಈ ಸಂಬಂಧ ಜಿಲ್ಲಾ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಹಾಗೂ ಪ್ರಾಧಿಕಾರದ ಕಾರ್ಯದರ್ಶಿಯಾಗಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿ ಸೂಚನೆಗಳನ್ನು ನೀಡಿದರೂ ಆಟೊ ಚಾಲಕರು ಮಾತ್ರ ಆಟೊ ಮೀಟರ್‌ನಲ್ಲಿ ತೋರಿಸಿದಷ್ಟು ಮೊತ್ತವನ್ನು ಪಡೆಯಲು ಒಪ್ಪುತ್ತಿಲ್ಲ. ಅಸಲಿಗೆ ಮೀಟರ್‌ ಹಾಕುವುದೇ ಇಲ್ಲ ಎಂಬ ದೂರುಗಳು ಪ್ರಯಾಣಿಕರಿಂದ ಕೇಳಿ ಬರುತ್ತಿವೆ.

ಮೀಟರ್‌ ದುರಸ್ತಿಯಾಗಿಲ್ಲ. ತೂಕ ಮತ್ತು ಮಾಪನ ಇಲಾಖೆಯಿಂದ ಪ್ರಮಾಣಪತ್ರ ದೊರೆತಿಲ್ಲ (ಕ್ಯಾಲಿಬರೇಶನ್‌ ಸರ್ಟಿಫಿಕೇಟ್‌) ಎಂಬ ಸಬೂಬು ಹೇಳುತ್ತಲೇ ಆಟೊ ಚಾಲಕರು ದಿನಗಳನ್ನು ತಳ್ಳುತ್ತಿರುವುದು ಪ್ರಯಾಣಿಕರು ರೋಸಿ ಹೋಗುವಂತೆ ಮಾಡಿದೆ.

ಸಾರ್ವಜನಿಕರ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಈ ತಿಂಗಳ ಮೊದಲ ವಾರದಲ್ಲಿ ಸಾರಿಗೆ ಇಲಾಖೆಯ ಧಾರವಾಡ (ಪಶ್ಚಿಮ) ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ರವೀಂದ್ರ ಕವಲಿ ಅವರು, ಆಟೊ ರಿಕ್ಷಾಗಳಿಗೆ ಕಡ್ಡಾಯವಾಗಿ ಮೀಟರ್‌ ಅಳಡಿಸಬೇಕು ಹಾಗೂ ಮೀಟರ್‌ ದರದಂತೆಯೇ ಪ್ರಯಾಣಿಕರಿಂದ ಹಣ ಪಡೆಯಬೇಕು ಎಂಬ ಹಳೆ ಆದೇಶವನ್ನು ಎಲ್ಲ ಆಟೊ ಚಾಲಕರ ಗಮನಕ್ಕೆ ತಂದರು.

ಇದರಿಂದ ಏನಾದರೂ ಬದಲಾವಣೆ ಆಗಿದೆಯೇ ಎಂಬುದನ್ನು ಅರಿಯಲು ‘ಪ್ರಜಾವಾಣಿ’ ಶುಕ್ರವಾರ ಹುಬ್ಬಳ್ಳಿಯಲ್ಲಿ ರಿಯಾಲಿಟಿ ಚೆಕ್‌ ನಡೆಸಿತು. ಬಹುತೇಕ ಆಟೊ ಚಾಲಕರ ಮೀಟರ್‌ಗಳು ಸುಸ್ಥಿತಿಯಲ್ಲಿದ್ದರೂ ಮೀಟರ್‌ ಹಾಕಲು ಒಪ್ಪಲಿಲ್ಲ. ಇನ್ನೂ ಕೆಲ ಆಟೊಗಳಿಗೆ ಮೀಟರ್‌ಗಳೇ ಇರಲಿಲ್ಲ.

ಈ ಹಿಂದೆ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿದ್ದ (ಆರ್‌ಟಿಒ) ಜೆ. ಪುರುಷೋತ್ತಮ ಅವರು ತಮ್ಮ ಕಚೇರಿಯಲ್ಲಿ ಸರಣಿ ಸಭೆಗಳನ್ನು ನಡೆಸಿ ಮೀಟರ್‌ ಹಾಕುವಂತೆ ಆಟೊ ಚಾಲಕರ ಮನವೊಲಿಸಿದ್ದರು. ಆದರೆ, ಇದು ಹೆಚ್ಚು ದಿನ ನಡೆಯಲಿಲ್ಲ. ಸಂಚಾರ ವಿಭಾಗದ ಪೊಲೀಸರು ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಮೀಟರ್‌ ಅಳವಡಿಸದ ಆಟೊಗಳನ್ನು ಜಪ್ತಿ ಮಾಡಿ ದಂಡ ವಿಧಿಸಿದರಾದರೂ ಅದಕ್ಕೂ ಆಟೊ ಚಾಲಕರು ಜಗ್ಗಲಿಲ್ಲ.

‘ಈಗಲೂ ಆಟೊ ಚಾಲಕರು ಮೀಟರ್‌ ದರದಷ್ಟೇ ಹಣ ಪಡೆಯಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಇದರಿಂದಾಗಿ ನಿತ್ಯ ಅವರೊಂದಿಗೆ ವಾಗ್ವಾದ ಸಾಮಾನ್ಯವಾಗಿದೆ. ಆದರೇನು ಮಾಡುವುದು ನಾವು ತುರ್ತಾಗಿ ಹೋಗಬೇಕಿರುತ್ತದೆ. ಹಾಗಾಗಿ, ಕೇಳಿದಷ್ಟು ಕೊಟ್ಟು ಹೋಗುವುದು ಅನಿವಾರ್ಯ. ಇದನ್ನೇ ಆಟೊ ಚಾಲಕರು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ’ ಎಂದು ಹಿಡಿಶಾಪ ಹಾಕುತ್ತಾರೆ ಕನಕದಾಸ ನಗರದ ನಿವಾಸಿ ಭಾಗ್ಯಜ್ಯೋತಿ

ಮೊದಲ1.5 ಕಿ.ಮೀ ಗೆ ₹ 23
ಬಹಳ ವರ್ಷಗಳಿಂದ ಪರಿಷ್ಕರಣೆ ಮಾಡದ ಆಟೊ ಮೀಟರ್‌ ದರವನ್ನು 2015ರಲ್ಲಿ ಸಾರಿಗೆ ಪ್ರಾಧಿಕಾರ ಪರಿಷ್ಕರಿಸಿತ್ತು. ಅದರಂತೆ, ಮೊದಲ ಒಂದೂವರೆ ಕಿ.ಮೀ.ಗೆ ₹ 23 ಹಾಗೂ ನಂತರದ ಪ್ರತಿ ಕಿ.ಮೀ.ಗೆ ₹ 13 ನಿಗದಿ ಮಾಡಲಾಗಿತ್ತು. ಇದೇ ದರವನ್ನು ಕಡ್ಡಾಯವಾಗಿ ಪಡೆಯಬೇಕು ಎಂದೂ ಸೂಚಿಸಲಾಗಿತ್ತು. ಆದರೆ, ಇದರ ದುಪ್ಪಟ್ಟು ಹಣವನ್ನು ಆಟೊ ಚಾಲಕರು ವಸೂಲಿ ಮಾಡುತ್ತಿದ್ದಾರೆ ಎಂದು ವಿಜಯನಗರದ ನಿವಾಸಿ ಗುರುನಾಥ ಹೊಸಮನಿ ಟೀಕಿಸುತ್ತಾರೆ.

ಹೊಸ ಸ್ಪರ್ಧಿ ಓಲಾ...
ಆಟೊ ಚಾಲಕರ ವಿರೋಧದ ಮಧ್ಯೆಯೂ ಅವಳಿ ನಗರದಲ್ಲಿ ಸೇವೆ ಆರಂಭಿಸಿರುವ ಓಲಾ ಕ್ಯಾಬ್‌ನಿಂದ ದೂರ ಪ್ರಯಾಣ ಕೈಗೊಳ್ಳುವವರಿಗೆ ಕೊಂಚ ನೆಮ್ಮದಿ ದೊರಕಿದೆ. ಎಷ್ಟು ದರ ಆಗುತ್ತದೆಯೋ ಅಷ್ಟನ್ನು ಪಾರದರ್ಶಕವಾಗಿ ಮೊಬೈಲ್‌ ಮೂಲಕ ಸಂದೇಶ ರವಾನಿಸುತ್ತಾರೆ. ಅಷ್ಟನ್ನೇ ಪಡೆಯುತ್ತಾರೆ. ಆದರೆ, ಆಟೊದವರು ಬಾಯಿಗೆ ಸಿಕ್ಕಷ್ಟು ಕೇಳುತ್ತಾರೆ ಎಂದು ವಿಮಾನ ನಿಲ್ದಾಣದಿಂದ ಕೇಶ್ವಾಪುರಕ್ಕೆ ಓಲಾದಲ್ಲಿ ಪ್ರಯಾಣಿಸಿದ ರಮೇಶ್‌ ಬಿರಾದಾರ ಹೇಳಿದರು.

* * 

ಬಿಆರ್‌ಟಿಎಸ್‌ ಕಾಮಗಾರಿ ನಡೆಯುತ್ತಿರುವುದರಿಂದ ಬಹುತೇಕ ರಸ್ತೆಗಳು ಕೆಟ್ಟು ಹೋಗಿವೆ. ಹೀಗಾಗಿ, ಆಟೊ ರಿಕ್ಷಾ ಮೇಲಿಂದ ಮೇಲೆ ಕೆಡುತ್ತದೆ. ಮೀಟರ್‌ ಹಾಕಿದರೆ ನಮಗೆ ಗಿಟ್ಟುವುದಿಲ್ಲ
ಮೈನುದ್ದೀನ್‌ ಸಂಕನಾಳ
ಆಟೊ ಚಾಲಕ, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT