ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆಗಳ ಲಗ್ಗೆ: ತೋಟ ನಾಶ

Last Updated 25 ನವೆಂಬರ್ 2017, 8:48 IST
ಅಕ್ಷರ ಗಾತ್ರ

ಬಂಗಾರಪೇಟೆ: ತಾಲ್ಲೂಕಿನ ಗಡಿಯೊಳಕ್ಕೆ ನುಗ್ಗಿರುವ ಕಾಡಾನೆಗಳ ಹಿಂಡು ಎರಡು ದಿನದಿಂದ ಅಪಾರ ಬೆಳೆ ನಾಶ ಮಾಡಿದೆ. ತಾಲ್ಲೂಕಿನ ಚಿಕ್ಕಕಳವಂಚಿ ಗ್ರಾಮದ ಹೊಲ ಗದ್ದೆ, ತೋಟಗಳಿಗೆ ಲಗ್ಗೆಯಿಟ್ಟಿರುವ 5 ಆನೆಗಳ ಹಿಂಡು ಟೊಮೆಟೊ, ಭತ್ತ, ರಾಗಿ, ಪಪ್ಪಾಯ, ಬೀನ್ಸ್ ಬೆಳೆ ನಾಶ ಮಾಡಿವೆ. ಅಲ್ಲದೆ ಡ್ರಿಪ್ ಪೈಪ್ಸ್, ಮೋಟಾರ್, ಪೈಪ್‌ಗಳನ್ನು ಕೆಡವಿದೆ.

ಚಿಕ್ಕಕಳವಂಚಿಯ ವೀರಭದ್ರಪ್ಪ, ನಾಗೇಗೌಡ, ಚಿನ್ನಸ್ವಾಮಿ ಅವರ ಭತ್ತ, ಚಲಪತಿ ಅವರ ಬೀನ್ಸ್‌ ತೋಟ, ಟೊಮೆಟೊ, ಗೋವಿಂದಪ್ಪ ಅವರ ಟೊಮೆಟೊ ಬೆಳೆ ನಾಶ ಮಾಡಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಕಳೆದ ಎರಡು ದಿನದಿಂದ ದೊಡ್ಡಪನ್ನಾಂಡಹಳ್ಳಿ, ಬಂಗಾನತ್ತ, ಚಾಮನಹಳ್ಳಿ ಹೊಲಗಳ ಮೂಲಕ ಸಂಚರಿಸಿರುವ ಆನೆ ಹಿಂಡು ಶುಕ್ರವಾರ ಚಿಕ್ಕಕಳವಂಚಿ ಸಮೀಪದ ಕರ್ನಾಟಕ ರಾಜ್ಯ ಅರಣ್ಯದಲ್ಲಿ ಬೀಡುಬಿಟ್ಟಿವೆ. ಅರಣ್ಯ ಸಿಬ್ಬಂದಿ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಅವರ ಕಣ್ಣು ತಪ್ಪಿಸಿ ಅರಣ್ಯದ ಅಂಚಿನ ತೋಟಗಳಿಗೆ ಲಗ್ಗೆಯಿಡುತ್ತಿವೆ.

ಕಳೆದ ಎರಡು ದಿನದ ಹಿಂದೆ ತಮಟಮಾಕನಹಳ್ಳಿ ಸಮೀಪ ಗಡಿಯೊಳಕ್ಕೆ ನುಸಳಿರುವ ಆನೆಗಳು ಡಿ.ಕೆ.ಹಳ್ಳಿ, ಚಾಮನಹಳ್ಳಿ, ತೊಪ್ಪನಹಳ್ಳಿ ಮಾರ್ಗವಾಗಿ ಗುರುವಾರ ರಾತ್ರಿ ಚಿಕ್ಕಕಳವಂಚಿ ತಲುಪಿವೆ. ವರ್ಷದಲ್ಲಿ ಹಲ ಬಾರಿ ಆನೆಗಳು ಈ ಮಾರ್ಗದಲ್ಲಿ ಸಂಚರಿಸಿ, ಗಡಿ ಭಾಗದ ಕುಪ್ಪಂ, ವಿಕೋಟೆ ಅರಣ್ಯದ ಮೂಲಕ ಆಂಧ್ರಪ್ರದೇಶದತ್ತ ತೆರಳುವುದು ಸಾಮಾನ್ಯವಾಗಿದೆ.

ಆನೆಗಳ ಪ್ರಿಯವಾದ ಆಹಾರ ಬಿದಿರು ಮತ್ತು ನೀರು ಈ ಮಾರ್ಗದಲ್ಲಿ ಹೇರಳವಾಗಿ ಸಿಗುವುದರಿಂದ ಪದೇ ಪದೆ ಸಂಚರಿಸುತ್ತಿದೆ. ಹಾಗಾಗಿ ಅರಣ್ಯ ಇಲಾಖೆ ಆ ಮಾರ್ಗವನ್ನು ಆನೆ ಪಥ ಎಂದು ಗುರುತಿಸಿದೆ. ಆನೆ ದಾಳಿಯಿಂದ ಬೆಳೆ ನಷ್ಟ ಅಲ್ಲದೆ ಪ್ರಾಣ ಹಾನಿಯೂ ಸಂಭವಿಸಿದೆ. ಐದಾರು ವರ್ಷಗಳಿಂದ ಆನೆ ದಾಳಿಗೆ ಸಿಲುಕಿ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT