ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆ ಕುಸಿತ

Last Updated 25 ನವೆಂಬರ್ 2017, 8:49 IST
ಅಕ್ಷರ ಗಾತ್ರ

ಮಾಲೂರು: ಹಸಿರು ಮೇವು ಹೊರತುಪಡಿಸಿ ಇತರೆ ಪಶು ಆಹಾರಗಳಿಂದ ಹಾಲಿನ ಗುಣಮಟ್ಟ ಸುಧಾರಿಸಲು ಸಾಧ್ಯವಿಲ್ಲ ಎಂದು ಕೋಚಿಮುಲ್ ಅಧ್ಯಕ್ಷ ಎನ್‌.ಜಿ.ಬ್ಯಾಟಪ್ಪ ಹೇಳಿದರು.

ಹೈನೋದ್ಯಮದಲ್ಲಿ ತೊಡಗಿರುವ ರೈತರಿಗೆ ಕೋಚಿಮುಲ್ ವತಿಯಿಂದ ತಾಲ್ಲೂಕಿನ ಕಾಟೇರಿ ಸೊಣ್ಣಹಳ್ಳಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹಸಿರು ಮೇವಿನ ಬೆಳೆಗಳ ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿ, ‘ರೈತರ ಅಭಿವೃದ್ಧಿಗಾಗಿ ಒಕ್ಕೂಟವು ಸುಮಾರು ₹ 40 ಕೋಟಿ ವೆಚ್ಚದಲ್ಲಿ ಪ್ರೋತ್ಸಾಹ ಯೋಜನೆಗಳನ್ನು ರೂಪಿಸಿದೆ’ ಎಂದರು.

ಹಿಂದಿನ ವರ್ಷ ಮಳೆ ಕೊರತೆಯಿಂದ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿ ಒಕ್ಕೂಟದಲ್ಲಿ ದಿನಕ್ಕೆ 11 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಆದರೆ, ಈ ವರ್ಷ ಉತ್ತಮ ಮಳೆಯಾಗಿದೆ. ಆದರೂ ಹಾಲಿನ ಉತ್ಪಾದನೆ 10 ಲಕ್ಷಕ್ಕೆ ಕುಸಿದಿದೆ. ರೈತರು ವಾಣಿಜ್ಯ ಬೆಳೆಗಳತ್ತ ಮುಖ ಮಾಡಿರುವುದೇ ಇದಕ್ಕೆ ಕಾರಣ ಎಂದು ತಿಳಿಸಿದರು.

ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ವೈಜ್ಞಾನಿಕವಾಗಿ ಹೆಚ್ಚು ಅರಿವು ಪಡೆಯಬೇಕು. ಪಶುಗಳಿಗೆ ಹಸಿರು ಮೇವು ಕೊಡಬೇಕು. ಇದರಿಂದ ಹಾಲಿನ ಗುಣಮಟ್ಟ ಮತ್ತು ಉತ್ಪಾದನೆ ಸುಧಾರಿಸುತ್ತದೆ. ಹಿಂದಿನ ವರ್ಷ ಮೇವಿನ ಸಮಸ್ಯೆಯ ನಿವಾರಣೆಗಾಗಿ ಒಕ್ಕೂಟದಿಂದ ರೈತರಿಗೆ 2 ಸಾವಿರ ಕ್ವಿಂಟಾಲ್ ಮೇವಿನ ಬೀಜ ವಿತರಿಸಲಾಗಿತ್ತು. ಇದರಿಂದ ಜಿಲ್ಲೆಯಲ್ಲಿ ಮೇವಿನ ಕ್ರಾಂತಿ ಸೃಷ್ಟಿಯಾಯಿತು ಎಂದು ವಿವರಿಸಿದರು.

ಪಟ್ಟಣದಲ್ಲಿ ₹ 2 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಕ್ಯಾಂಪ್‌ ಕಚೇರಿಯು ಮಾದರಿ ಕಟ್ಟಡವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕಟ್ಟಡವನ್ನು ಉದ್ಘಾಟಿಸುತ್ತಾರೆ. ಇತರೆ ತಾಲ್ಲೂಕುಗಳಲ್ಲೂ ಇಂತಹ ಕಟ್ಟಡಗಳನ್ನು ನಿರ್ಮಿಸಬೇಕು ಎಂದರು.

ಬ್ಯಾಟಪ್ಪ ಅವರು ಮಾಲೂರು ಕ್ಷೇತ್ರದಲ್ಲಿನ ರೈತರ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ತಾಲ್ಲೂಕು ಮಟ್ಟದಲ್ಲಿ ಹಮ್ಮಿಕೊಳ್ಳಬೇಕು. ಇದರಿಂದ ಎಲ್ಲಾ ರೈತರಿಗೆ ಅನುಕೂಲವಾಗುತ್ತದೆ ಎಂದು ಕೋಚಿಮುಲ್ ನೀರ್ದೇಶಕ ಕೆ.ವೈ.ನಂಜೇಗೌಡ ಸಲಹೆ ನೀಡಿದರು.

ಪಶು ವೈದ್ಯಾಧಿಕಾರಿಗಳಾದ ಡಾ.ಸೀನಪ್ಪ, ಡಾ.ಮಂಜುನಾಥ್‌, ಡಾ.ರಾಜು ಹಸಿರು ಮೇವಿನ ಬಗ್ಗೆ ರೈತರಿಗೆ ಅರಿವು ಮೂಡಿಸಿದರು. ಕೋಚಿಮುಲ್‌ ಉಪ ವ್ಯವಸ್ಥಾಪಕ ಡಾ.ಕೆ.ವಿ.ವಿಶ್ವನಾಥ್, ಸೊಣ್ಣಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎಸ್.ವಿ.ಗೋವರ್ದನರೆಡ್ಡಿ, ಕಾರ್ಯದರ್ಶಿ ಹನುಮಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT