ಕೃಷಿ ಕ್ಷೇತ್ರದ ಬಿಕ್ಕಟ್ಟು– ಅಕ್ಷರ ಜಾತ್ರೆಯಲ್ಲಿ ಪರಿಹಾರ ಹುಡುಕಾಟ

ರೈತರಿಗೆ ಮಾರಕವಾಗಲಿರುವ ಮಾರುಕಟ್ಟೆ ನೀತಿ

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ನಿಯಮಗಳಿಗೆ ತಿದ್ದುಪಡಿ ತಂದು ಹೊಸ ಕಾನೂನು ರೂಪಿಸುವ ಮೂಲಕ ಕೃಷಿ ಮಾರುಕಟ್ಟೆಯನ್ನು ಸರ್ವನಾಶ ಮಾಡುವ ಪ್ರಯತ್ನ ನಡೆದಿದೆ ಎಂದು ರೈತ ಮುಖಂಡ ಡಾ.ಸಿದ್ದನಗೌಡ ಪಾಟೀಲ ಇಲ್ಲಿ ಶನಿವಾರ ಆತಂಕ ವ್ಯಕ್ತಪಡಿಸಿದರು.

ವಿಚಾರ ಗೋಷ್ಠಿಯಲ್ಲಿ ಡಾ.ನಾರಾಯಣಗೌಡ, ಪ್ರೊ.ಬಿಸಲಯ್ಯ, ಡಾ.ವಸಂತಕುಮಾರ್ ತಿಮಕಾಪುರ, ಡಾ.ಸಿದ್ದನಗೌಡ ಪಾಟೀಲ

ಮೈಸೂರು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ನಿಯಮಗಳಿಗೆ ತಿದ್ದುಪಡಿ ತಂದು ಹೊಸ ಕಾನೂನು ರೂಪಿಸುವ ಮೂಲಕ ಕೃಷಿ ಮಾರುಕಟ್ಟೆಯನ್ನು ಸರ್ವನಾಶ ಮಾಡುವ ಪ್ರಯತ್ನ ನಡೆದಿದೆ ಎಂದು ರೈತ ಮುಖಂಡ ಡಾ.ಸಿದ್ದನಗೌಡ ಪಾಟೀಲ ಇಲ್ಲಿ ಶನಿವಾರ ಆತಂಕ ವ್ಯಕ್ತಪಡಿಸಿದರು.

83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ‘ಕರ್ನಾಟಕ ಕೃಷಿ – ಸಂಕ್ರಮಣ ಸ್ಥಿತಿ’ ಕುರಿತ ವಿಚಾರಗೋಷ್ಠಿಯಲ್ಲಿ ‘ಕೃಷಿ ಮಾರುಕಟ್ಟೆ ಸವಾಲುಗಳು’ ವಿಚಾರ ಮಂಡಿಸಿ ಮಾತನಾಡಿದರು. ಪ್ರಸ್ತುತ ದಿನಮಾನಗಳಲ್ಲಿ ಮಾರುಕಟ್ಟೆ ವಲಯದಲ್ಲಿ ಆಗುತ್ತಿರುವ ಬದಲಾವಣೆ, ತಲ್ಲಣಗಳನ್ನು ವಿಶ್ಲೇಷಿಸಿದರು.

ಕೃಷಿ ಮಾರುಕಟ್ಟೆಯನ್ನು ಕಂಪೆನಿ ಕಾಯಿದೆ ವ್ಯಾಪ್ತಿಗೆ ತರಲಾಗುತ್ತಿದೆ. ಹೊಸ ನಿಯಮ ಜಾರಿಗೆ ಬಂದರೆ ಕೃಷಿ ಭೂಮಿ ಹಾಗೂ ಹಿಡುವಳಿದಾರರು ಕಂಪೆನಿಗಳ ವ್ಯಾಪ್ತಿಗೆ ಬರುತ್ತಾರೆ. ಕೊನೆಗೆ ಜಮೀನು ಇಲ್ಲದ ರೈತರನ್ನಾಗಿ ಮಾಡಿ ಬೀದಿಗೆ ನಿಲ್ಲಿಸಲಾಗುತ್ತದೆ ಎಂದು ಎಚ್ಚರಿಸಿದರು.

‘ರೈತರಿಗೆ ಹೆಚ್ಚು ಆದಾಯ ತಂದುಕೊಡಲು ಸಾಮೂಹಿಕ ಕೃಷಿ ಪದ್ಧತಿ ಜಾರಿಗೆ ತರಲಾಗುತ್ತಿದ್ದು, 2025ರ ವೇಳೆಗೆ ವರಮಾನ ದುಪ್ಪಟ್ಟಾಗಲಿದೆ. ಅದಕ್ಕಾಗಿ ಕಂಪೆನಿ ಕಾಯಿದೆ ವ್ಯಾಪ್ತಿಗೆ ಕೃಷಿ ಮಾರುಕಟ್ಟೆಯನ್ನು ತರಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ವ್ಯವಸ್ಥೆ ಜಾರಿಗೆ ಬಂದರೆ ರೈತರು ಬೀದಿಯಲ್ಲಿ ನಿಲ್ಲಬೇಕಾಗುತ್ತದೆ. ಆದರೆ ಯಾರಿಗೂ ಈ ಸತ್ಯ ಅರ್ಥವೇ ಆಗುತ್ತಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

ವ್ಯವಸಾಯ ಬೇಡ: ‘ಪರ್ಯಾಯ ಕೃಷಿ ಮಾದರಿಗಳು ಮತ್ತು ಸಾಧ್ಯತೆಗಳು’ ಕುರಿತು ವಿಶ್ರಾಂತ ಕುಲಪತಿ ಡಾ.ನಾರಾಯಣಗೌಡ ಮಾತನಾಡಿ, ‘ರೈತರು ಕೃಷಿ ಬೇಡ, ಯಾವುದಾರೂ ಒಂದು ಸಣ್ಣ ಉದ್ಯೋಗ ಸಿಕ್ಕರೂ ಸಾಕು ಎನ್ನುತ್ತಿದ್ದಾರೆ. ಬಹುತೇಕರು ವ್ಯವಸಾಯ ತೊರೆಯಲು ಮುಂದಾಗಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದೊಂದು ದಿನ ಆಹಾರಕ್ಕಾಗಿ ಹೊರದೇಶದ ಮುಂದೆ ಕೈಚಾಚಿ ನಿಲ್ಲುವ ಪರಿಸ್ಥಿತಿ ಬರಲಿದೆ’ ಎಂದು ಕೃಷಿ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಕನ್ನಡಿ ಹಿಡಿದರು.

ಸಮಗ್ರ ಕೃಷಿ ಪದ್ಧತಿಯನ್ನು ಪ್ರೋತ್ಸಾಹಿಸಿ, ಉಂಟಾಗಿರುವ ಬಿಕ್ಕಟ್ಟು ಪರಿಹರಿಸಬೇಕು. ಕೊಯ್ಲು ಸಮಯದಲ್ಲಿ ಆಹಾರ ಪೋಲಾಗುವುದನ್ನು ತಡೆದು, ಉತ್ಪನ್ನಗಳ ಮೌಲ್ಯವರ್ಧನೆ ಮಾಡುವಂತಹ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಸಂದರ್ಭ ರೈತರ ಪರವಾಗಿಲ್ಲ: ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಕುಲಪತಿ ಪ್ರೊ.ಬಿಸಲಯ್ಯ, ‘2025ರ ವೇಳೆಗೆ ರೈತರ ಆದಾಯ ದುಪ್ಪಟ್ಟಾಗಲಿದೆ ಎಂದು ಸರ್ಕಾರಗಳು ಹೇಳುತ್ತಿವೆ. ಆದರೆ ಅಂತಹ ವಾತಾವರಣವೇ ಕಂಡುಬರುತ್ತಿಲ್ಲ. ಸರ್ಕಾರದ ನೀತಿಗಳು ಕೃಷಿಕರ ಪರವಾಗಿಲ್ಲ. ಕೃಷಿ ಕ್ಷೇತ್ರದಿಂದ ಶೇ 14ರಷ್ಟು ಆದಾಯ ಬರುತ್ತಿದ್ದು, ಶೇ 66ರಷ್ಟು ರೈತರು ಈ ಅತ್ಯಲ್ಪ ಆದಾಯದಲ್ಲಿ ಬದುಕಬೇಕಾಗಿದೆ’ ಎಂಬ ವಸ್ತುಸ್ಥಿತಿಯನ್ನು ಬಿಚ್ಚಿಟ್ಟರು.

ಕೃಷಿ ವಲಯ ಬಿಕ್ಕಟ್ಟಿಗೆ ಸಿಲುಕಿದ್ದು, ರೈತರ ಆತ್ಮಹತ್ಯೆಗಳು ಹೆಚ್ಚಾಗಿವೆ. ಕೃಷಿ ಮಾರುಕಟ್ಟೆ ವ್ಯವಸ್ಥೆಯನ್ನು ಬದಲಾಯಿಸಿ, ಲಾಭದಾಯಕ ಕ್ಷೇತ್ರವನ್ನಾಗಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕೃಷಿ ಉಳಿಸಿಕೊಳ್ಳುವುದು ಕಷ್ಟಕರ ಎಂದರು.

ಬರ ನಿರ್ವಹಣೆಯ ಪಾಠಗಳು ಕುರಿತು ಡಾ.ವಸಂತಕುಮಾರ್ ತಿಮಕಾಪುರ ಮಾತನಾಡಿದರು.

ಡೇರಿ ಮೂಲಕ ಮಾರುಕಟ್ಟೆ
ಹಾಲಿಗೆ ಮಾತ್ರ ಡೇರಿ ಆರಂಭಿಸಿ ಮಾರುಕಟ್ಟೆ ಕಲ್ಪಿಸಲಾಗಿದೆ. ಅದೇ ಮಾದರಿಯಲ್ಲಿ ಅಥವಾ ರಾಜ್ಯದಲ್ಲಿರುವ 14000 ಡೇರಿಗಳ ಮೂಲಕ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಬಹುದು ಎಂದು ಡಾ.ನಾರಾಯಣಗೌಡ ಹೇಳಿದರು.

ಬೆಳೆ ವಿಮೆ ಸಾಮಾನ್ಯ ರೈತರ ಕೈಗೆಟಕುತ್ತಿಲ್ಲ. ಪರ್ಯಾಯ ಬೆಳೆ ನೀತಿ ರೂಪಿಸಿ ಎಲ್ಲಾ ರೈತರನ್ನೂ ಒಳಗೊಳ್ಳುವಂತಾಗಬೇಕು ಎಂದರು.

**

ಕಂಪೆನಿ ಕಾಯಿದೆ ಜಾರಿಗೆ ಬಂದರೆ ರೈತರು ಸರ್ವನಾಶವಾಗುತ್ತಾರೆ. ಅದಕ್ಕೆ ಮುನ್ನುಡಿಯಾಗಿ ರಿಲೆಯನ್ಸ್ ಫ್ರೆಶ್, ಮೋರ್‌ನಂತಹ ಮಾಲ್‌ಗಳು ಬಂದಿವೆ.
–ಡಾ.ಸಿದ್ದನಗೌಡ ಪಾಟೀಲ, ರೈತ ಮುಖಂಡ

ನದಿ ನೀರು ಬಳಕೆಗೆ ಮುನ್ನ ಕುಡಿಯಲು ಆದ್ಯತೆ. ಉಳಿದರೆ ಕೃಷಿಗೆ ಎನ್ನಲಾಗುತ್ತದೆ. ಹೀಗಾದರೆ ಕೃಷಿ ಕ್ಷೇತ್ರ ಉದ್ದಾರ ಆಗುವುದೆ?
–ಪ್ರೊ.ಬಿಸಲಯ್ಯ, ವಿಶ್ರಾಂತ ಕುಲಪತಿ

Comments