ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿಯಲ್ಲಿ ಬಂಡಾಯ ಶಾಸಕರು ಕಾಂಗ್ರೆಸ್‌ ಸೇರ್ಪಡೆ– ಬಂಡಿಸಿದ್ದೇಗೌಡ

Last Updated 26 ನವೆಂಬರ್ 2017, 6:18 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ನಾವು ಏಳೂ ಜನ ಜೆಡಿಎಸ್‌ ಬಂಡಾಯ ಶಾಸಕರು ಜನವರಿ ಕೊನೆಯ ವಾರದಲ್ಲಿ ಕಾಂಗ್ರೆಸ್‌ ಸೇರಲಿದ್ದೇವೆ’ ಎಂದು ಜೆಡಿಎಸ್‌ ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಬಳಿ ಕಾವೇರಿ ನೀರಾವರಿ ನಿಗಮದಿಂದ ಲೋಕಪಾವನಿ ನದಿಗೆ ತಡೆಗೋಡೆ ಮತ್ತು ಸೋಪಾನಕಟ್ಟೆ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ‘ಕಾಂಗ್ರೆಸ್‌ ಪಕ್ಷಕ್ಕೆ ಸೇರುವ ಕುರಿತು ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಮಾತನಾಡಿದ್ದು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಎಐಸಿಸಿ ಉಪಾಧ್ಯಕ್ಷರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಪಕ್ಷ ಸೇರ್ಪಡೆಯ ದಿನಾಂಕ ನಿಗದಿಯಾಗಲಿದೆ’ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಕಾವೇರಿ ನೀರಾವರಿ ನಿಗಮದಿಂದ ಸುಮಾರು ₹ 2 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಲೋಕಪಾವನಿ ನದಿಗೆ ₹ 20 ಲಕ್ಷ ವೆಚ್ಚದಲ್ಲಿ 20 ಮೀಟರ್‌ ಉದ್ದದ ತಡೆಗೋಡೆ ಮತ್ತು ಸೋಪಾನ ಕಟ್ಟೆ ನಿರ್ಮಿಸಲಾಗುತ್ತಿದೆ. ₹ 20 ಲಕ್ಷ ವೆಚ್ಚದಲ್ಲಿ ರಾಮಚಾರಿ ಪಿಕ್‌–ಅಪ್‌ ಅಭಿವೃದ್ಧಿಯಾಗಲಿದೆ. ಮರಳಾಗಾಲ ಮತ್ತು ಅರಕೆರೆ ಬಳಿ ಎತ್ತಿನ ಗಾಡಿ ಸಂಚಾರಕ್ಕೆ ಸೇತುವೆ, ಗೆಂಡೆಹೊಸಹಳ್ಳಿ ಬಳಿ ಸೋಪಾನ ಕಟ್ಟೆ ಮತ್ತು ರಸ್ತೆ ನಿರ್ಮಿಸಲಾಗುವುದು’ ಎಂದರು. ‘ಲೋಕಪಾವನಿ ನದಿಗೆ ಸೇತುವೆ ನಿರ್ಮಿಸುವುದಕ್ಕಾಗಿ ಅಂದಾಜು ಸಿದ್ಧಪಡಿಸಿ ಸಲ್ಲಿಸುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗೆ ಅವರು ಸೂಚಿಸಿದರು.

ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಬಸವರಾಜೇಗೌಡ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಎಲ್‌.ಲಿಂಗರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯ ದೇವರಾಜು, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀಕಂಠಯ್ಯ, ಬಿ.ಚಂದ್ರಶೇಖರ್‌, ಡಾ.ನರಸಿಂಹಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT