ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ವಾನ್‌ಗಳ ಮಹಾಪೂರದಲ್ಲಿ ಗದ್ವಾಲ್ ಮಾರ್ಗ

Last Updated 26 ನವೆಂಬರ್ 2017, 6:27 IST
ಅಕ್ಷರ ಗಾತ್ರ

ರಾಯಚೂರು: ನಗರಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲೊಂದಾದ ಗದ್ವಾಲ್ ಮಾರ್ಗದ ರಸ್ತೆಯು ಅಭಿವೃದ್ಧಿಯಿಂದ ವಂಚಿತವಾಗಿದ್ದು, ಪ್ರತಿದಿನ ಸಂಚಾರ ಸಂಕಷ್ಟ ಸೃಷ್ಟಿಸುತ್ತಿದೆ.

ನಗರದ ಮಧ್ಯೆಭಾಗ ಜನನಿಬಿಡ ಪ್ರದೇಶ ಚಂದ್ರಮೌಳೇಶ್ವರ ವೃತ್ತದಿಂದ ಎಪಿಎಂಸಿ ಆವರಣಕ್ಕೆ ಹೊಂದಿಕೊಂಡು ಗದ್ವಾಲ್ ಮಾರ್ಗದ ರಸ್ತೆ ಸಾಗುತ್ತದೆ. ಸುಮಾರು ಮೂರು ಕಿಲೋ ಮೀಟರ್ ರಸ್ತೆ ನಗರ ವ್ಯಾಪ್ತಿಯಲ್ಲಿದ್ದು, ಎಡಬಲಕ್ಕೆ ಜನದಟ್ಟೆಯ ವಸತಿಪ್ರದೇಶಗಳಿವೆ. ಜನರ ಓಡಾಟ ಹಾಗೂ ವ್ಯಾಪಾರು ವಹಿವಾಟುಗಳೆಲ್ಲವೂ ರಸ್ತೆಗೆ ಹೊಂದಿಕೊಂಡು ನಡೆಯುತ್ತದೆ. ನಗರ ವ್ಯಾಪ್ತಿಯಿಂದ ಹೊರಗೆ ಹೋಗುವುದಕ್ಕೆ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಹರಸಾಹಸ ಪಡಬೇಕಾಗಿದೆ. ರಸ್ತೆ ಇಕ್ಕಟ್ಟಾಗಿದ್ದು, ಸಾಕಷ್ಟು ರಸ್ತೆ ಗುಂಡಿಗಳು ನಿರ್ಮಾಣವಾಗಿವೆ.

ಪ್ರಮುಖವಾಗಿ ಬಸವನಬಾವಿ ವೃತ್ತ, ಸಿಟಿ ಟಾಕೀಜ್ ರೋಡ್, ಮುನ್ನೂರುಕಾಪು ಕಲ್ಯಾಣ ಮಂಟಪ, ಅಯ್ಯಾಳಪ್ಪ ವೃತ್ತ, ಪಂಚಲಿಂಗೇಶ್ವರ ದೇವಸ್ಥಾನ ಹಾಗೂ ಅನೇಕ ಕೈಗಾರಿಕೆಗಳು ಗದ್ವಾಲ್ ಮಾರ್ಗದಲ್ಲಿದ್ದು, ನಿತ್ಯವೂ ಜನರು ಹಾಗೂ ವಾಹನಗಳಿಂದ ಈ ಪ್ರದೇಶಗಳು ಸಂಚಾರ ದಟ್ಟಣೆ ನಿರ್ಮಿಸುತ್ತಿವೆ.

ರಾಯಚೂರು ಹಾಗೂ ಗದ್ವಾಲ್ ಮಧ್ಯೆ ಸಾಕಷ್ಟು ಜನಸಂಪರ್ಕವಿದೆ. ಹೀಗಾಗಿ ಪ್ರತಿನಿತ್ಯ ಬಸ್, ರೈಲು ಹಾಗೂ ಖಾಸಗಿ ವಾಹನಗಳ ಮೂಲಕ ನೂರಾರು ಜನರು ಸಂಚರಿಸುತ್ತಾರೆ. ಗದ್ವಾಲ್ ಸುತ್ತಮುತ್ತ ಬೆಳೆಯುವ ತರಕಾರಿ, ಹಣ್ಣು-ಹಂಪಲು ಹಾಗೂ ಇನ್ನಿತರೆ ಉತ್ಪನ್ನಗಳ ಮಾರಾಟಕ್ಕೆ ರಾಯಚೂರು ನಗರಕ್ಕೆ ತರಲಾಗುತ್ತದೆ. ಗದ್ವಾಲ್ ಮತ್ತು ಸುತ್ತಮುತ್ತಲಿನ ತೆಲಂಗಾಣ ರಾಜ್ಯದ ರೈತರು ಹತ್ತಿ, ಈರುಳ್ಳಿ, ಭತ್ತಗಳನ್ನು ರಾಯಚೂರು ಎಪಿಎಂಸಿಯಲ್ಲಿ ಮಾರಾಟ ಮಾಡುವುದಕ್ಕೆ ತರುತ್ತಾರೆ. ತೆಲಂಗಾಣದ ಗಡಿಗ್ರಾಮಗಳ ಜನರ ಒಡನಾಟ ರಾಯಚೂರಿನೊಂದಿಗೆ ನಿಕಟವಾಗಿದೆ. ರಾಯಚೂರಿನ ಜನರು ಕೂಡಾ ವಿವಿಧ ಉದ್ದೇಶಕ್ಕಾಗಿ ಗದ್ವಾಲ್ ಮಾರುಕಟ್ಟೆಗೆ ಹೋಗಿ ಬರುತ್ತಾರೆ.

ರಾಯಚೂರಿನ ಕಾಲೇಜೊಂದರದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಾಗಾರವೊಂದರಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ನ್ಯಾಯಮೂರ್ತಿ ಸಿ.ಜಿ. ಹುನಗುಂದ ಅವರು ಗದ್ವಾಲ್ ರಸ್ತೆ ದುಃಸ್ಥಿತಿ ಬಗ್ಗೆ ಪ್ರಸ್ತಾಪಿಸಿದರು. ’೨೦೦೪ ರಲ್ಲಿ ಗದ್ವಾಲ್ ರಸ್ತೆ ನೋಡಿದ್ದೆ. ಪರಿಸ್ಥಿತಿ ಏನೂ ಸುಧಾರಿಸಿಲ್ಲ. ಸರ್ಕಾರಗಳು ಸ್ವಚ್ಛ ಭಾರತ, ನಿರ್ಮಲ ಭಾರತ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಅಭಿಯಾನಗಳಿಗೆ ತದ್ವಿರುದ್ಧ ಪರಿಸ್ಥಿತಿ ರಾಯಚೂರಿನ ಗದ್ವಾಲ್ ರಸ್ತೆಯುದ್ದಕ್ಕೂ ಇದೆ. ಉತ್ತಮ ರಸ್ತೆ, ಉತ್ತಮ ಪರಿಸರ ಹೊಂದಬೇಕು ಎನ್ನುವ ಹಕ್ಕು ಸಾಧಿಸಲು ಜನರು ಎಚ್ಚೆತ್ತುಕೊಳ್ಳದಿದ್ದರೆ ಜನಪ್ರತಿನಿಧಿಗಳು ಏನೂ ಕೆಲಸ ಮಾಡುವುದಿಲ್ಲ’ ಎಂದು ಹೇಳಿದರು.

ಗದ್ವಾಲ್‌ಗೆ ಮಾರ್ಗದಲ್ಲಿ ಬಡವರು ವಾಸಿಸುವ ಪ್ರದೇಶಗಳು ಬಹಳಷ್ಟಿವೆ. ಆದರೆ ವಿಶಾಲವಾದ ರಸ್ತೆಗಳನ್ನು ಮಾಡಿಸುವುದಕ್ಕೆ ನಗರಸಭೆಯವರು ಏನೂ ಮಾಡಿಲ್ಲ. ಹೊಟ್ಟೆಪಾಡಿಗಾಗಿ ದಿನಗೂಲಿ ಮಾಡಿ ಬದುಕುವ ಜನರು ರಸ್ತೆ ಕೊಡಿ, ನೀರು ಕೊಡಿ ಎಂದು ಹೋರಾಟ ಮಾಡುವುದಕ್ಕೆ ಆಗುವುದಿಲ್ಲ. ಹೋರಾಟಕ್ಕೆ ಹೋದರೆ ಅಂದು ಊಟವಿಲ್ಲದೆ ಉಪವಾಸ ಇರಬೇಕಾಗುತ್ತದೆ. ರಾಯಚೂರಿನಲ್ಲಿ ಬೇರೆ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿ ಮಾಡಿದಂತೆ ಈ ರಸ್ತೆಯನ್ನು ಅಭಿವೃದ್ಧಿ ಮಾಡಬೇಕು; ತಾರತಮ್ಯ ಮಾಡಬಾರದು ಎನ್ನುತ್ತಾರೆ ತಿಮ್ಮಾಪುರಪೇಟ್ ನಿವಾಸಿ ಚನ್ನಬಸವ ಅವರು.

* * 

ರಸ್ತೆ ಅಭಿವೃದ್ಧಿ ಮಾಡುವುದಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ನಗರದೊಳಗೆ ಬೇರೆ ಎಲ್ಲಾ ಕಡೆಗೂ ರಸ್ತೆಗಳು ವಿಶಾಲವಾಗಿವೆ. ಆದರೆ ಗದ್ವಾಲ್ ರಸ್ತೆಯನ್ನು ಕಡೆಗಣಿಸಿದ್ದಾರೆ.
ವಿಜಯಪ್ರಸಾದ್
ಬಸವನಬಾವಿ, ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT