ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಸಾಂಸ್ಕೃತಿಕ ಧೀಮಂತ ಸಾಹಿತಿ

Last Updated 26 ನವೆಂಬರ್ 2017, 7:36 IST
ಅಕ್ಷರ ಗಾತ್ರ

ಸಂಕಮ್ಮ ಜಿ. ಎಸ್ , ಬ್ಯಾಡಗಿ

ಡಿ. 16 ಮತ್ತು 17 ರಂದು ನಡೆಯ ಲಿರುವ ಹಾವೇರಿ ಜಿಲ್ಲಾ 10 ನೇ ಸಾಹಿತ್ಯ ಸಮ್ಮೇಳನದಲ್ಲಿ 2 ವಿಶೇಷಗಳಿವೆ. ಪ್ರತಿವರ್ಷ ನುಡಿಹಬ್ಬ ಆಯೋಜಿಸುವ ಮೂಲಕ ಸಾಂಸ್ಕೃತಿಕ ನಗರವಾಗಿ ರೂಪುಗೊಂಡ ಅಕ್ಕಿಆಲೂರಿನ ಆತಿಥ್ಯ ಹಾಗೂ ಬಂಡಾಯದ ಗಟ್ಟಿಧ್ವನಿ, ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿ ಸತೀಶ ಕುಲಕರ್ಣಿ ಅಧ್ಯಕ್ಷತೆ.

ಸತೀಶ ಕುಲಕರ್ಣಿ ಆಯ್ಕೆಗೆ ಜಿಲ್ಲೆ ಯಲ್ಲಿ ಸಂಭ್ರಮ ಮನೆ ಮಾಡಿದೆ. ಇದಕ್ಕೆ ಕಾರಣ ಅವರ ವ್ಯಕ್ತಿತ್ವ. ಜಿಲ್ಲೆಯು ಸಾಹಿತ್ಯ, ಕಲೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸದಾ ಪ್ರಜ್ವಲಿಸು ವಂತೆ ಮಾಡುವ ಅವರ ಪ್ರಯತ್ನ. ಕವಿ ಯಾಗಿ, ನಾಟಕಕಾರನಾಗಿ ನಟ ನಾಗಿ, ಹೋರಾಟಗಾರನಾಗಿ ಹತ್ತು ಹಲವುಗಳಲ್ಲಿ ಹರಡಿಕೊಂಡ ವ್ಯಕ್ತಿತ್ವ ಅವರದ್ದು. ಇವಕ್ಕೆಲ್ಲ ಕಳಸವಿಟ್ಟಂತಿದೆ ಅವರಲ್ಲಿರುವ ಸಂಘಟನಾಶಕ್ತಿ. ಸದಾ ಸಂಘಟನೆಯಲ್ಲೇ ಸುಖ ಕಂಡ ಸಂತೃಪ್ತಿ ಜೀವಿ.

1951ರ ಜುಲೈ 13ರಂದು ನೀಲಕಂಠರಾವ್ ಮತ್ತು ಲೀಲಾಬಾಯಿ ದಂಪತಿ ಪುತ್ರನಾಗಿ ಗುಡಗೇರಿಯಲ್ಲಿ ಜನಿಸಿದರು. ತಂದೆ ಸರ್ಕಾರಿ ಕೆಲಸ ದಲ್ಲಿ ಇದ್ದ ಕಾರಣ ಊರೂರು ಅಲೆದಾಟ ಅನಿವಾರ್ಯವಾಗಿತ್ತು. ಹೀಗಾಗಿ ಇವರ ಪ್ರಾಥಮಿಕ ಓದು ಬೆಳಗಾವಿ, ರಾಯಭಾಗ, ಕಲಘಟಗಿ ಸವಣೂರಿನಲ್ಲಿ ಆಯಿತು. ಹಾವೇರಿ ಜಿ. ಎಚ್ ಕಾಲೇಜಿಲ್ಲಿ ಪಿ.ಯು.ಸಿ ಮುಗಿಸಿ. ಬಿ.ಎಸ್ಸಿ ಗೆ ಹುಬ್ಬಳ್ಳಿಯ ಜಾಬಿನ್ ಸೈನ್ಸ್‌ ಕಾಲೇಜು ಸೇರಿದರು. ಇಲ್ಲಿ ಸರಜೂ ಕಾಟ್ಕರ್ ಗೆಳೆಯರಾದರು. ಅಲ್ಲದೇ, ಕಾವ್ಯದ ಖಯಾಲಿ ಶುರುವಾ ಯಿತು. ಮಾರ್ಗದರ್ಶಕರಾಗಿ ಡಾ. ಬುದ್ದಣ್ಣ ಹಿಂಗಮಿರೆ ಸಿಕ್ಕರು. ನಂತರ ಎಂ.ಎ (ಬಾಹ್ಯ) ಪದವಿ ಪಡೆದರು. ಕೆಇಬಿ ಯಲ್ಲಿ ವೃತ್ತಿ ಆರಂಭಿಸಿದ ಸತೀಶರು ಸಾಹಿತ್ಯವನ್ನು ಪ್ರವೃತ್ತಿಯಾಗಿಸಿ ಕೊಂಡರು.

ಹಾವೇರಿ ಕೆಇಬಿಗೆ ಬಂದ ನಂತರ ಹೊಸ ಸಂಚಲನ ಸೃಷ್ಟಿಸಿದರು. ಹಾವೇರಿ ಕೆಇಬಿ ತಂಡ ಕಟ್ಟಿಕೊಂಡು ಮಾಡಿದ ನಾಟಕಗಳು, ಗಳಿಸಿದ ಪ್ರಶಸ್ತಿಗಳು ಅಪರಿಮಿತ. ರಾಜ್ಯದ ಸಾಹಿತ್ಯ ದಿಗ್ಗಜರೆಲ್ಲಾ ಕೆಇಬಿ ಹೊಕ್ಕು ಹೋಗುವಂತಾಯಿತು.

‘ಕಟ್ಟತ್ತೇವ ನಾವು ಕಟ್ಟೇಕಟ್ಟ ತೇವ...’ ಕ್ರಾಂತಿಗೀತೆಯಾಗಿ ನಾಡಿ ನಾದ್ಯಂತ ಪಸರಿಸಿದೆ. ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ ಪ್ರಕಾಶರು ಶಾಸಕರ ದಿನಾಚರಣೆಯಲ್ಲಿ ಗುಂಪು ಕಟ್ಟಿಕೊಂಡು ಹಾಡಿದ್ದನ್ನು ಕೇಳಿ ರೋಮಾಂಚನಗೊಂಡಿದ್ದೆವು. ಗೌರಿ ಲಂಕೇಶರ ಅಂತ್ಯಕ್ರಿಯೆಯಲ್ಲೂ ಕ್ರಾಂತಿಯ ಕೂಗಾಗಿ ಮೊಳಗಿತ್ತು.

ಅನೇಕ ಸಮ್ಮೇಳನ, ಉತ್ಸವ ಗಳಲ್ಲಿ ಪ್ರಬಂಧ ಮಂಡನೆ, ಕವನ ವಾಚನ, ಗೋಷ್ಠಿಗಳ ಅಧ್ಯಕ್ಷತೆ ವಹಿಸಿದ ಶ್ರೇಯಸ್ಸು ಇವರದ್ದು. ಇವರು ಅಭಿನಯಿಸಿದ ನಿರ್ದೇಶಿಸಿದ ನಾಟಕಗಳು ಅಗಣಿತ. ಲಂಕೇಶರ ತೆರೆಗಳು, ಕಂಬಾರರ ಜೋಕುಮಾರ ಸ್ವಾಮಿ, ಚಂಪಾರ ಕುಂಟಾಕುಂಟಾ ಕುರವತ್ತಿ ಮುಖ್ಯ ವಾದವುಗಳಾದರೆ ತಾವೇ ರಚಿಸಿದ ಬಂಗಾರದ ಕೊಡ, ಗಾಂಧಿ ಹಚ್ಚಿದ ಗಿಡ, ಪರಪ್ಪನ ಕಥೆ, ಮರ ಮಾತಾಡಿತು, ಬೋರ್‌ ವೆಲ್, ಗಾಡಿಬಂತು ಗಾಡಿ, ನೆರಳು ಹೀಗೆ ಹಲವಾರು ನಾಟಕಗಳು ಜನಪ್ರಿಯವಾಗಿವೆ. ದೂರದರ್ಶನ ಧಾರವಾಹಿಗಳಾದ ಬೇಂದ್ರೆಯವರ ಭಾಗ್ಯಶ್ರೀ, ಗಿರೀಶ ಕಾಸರವಳ್ಳಿ ನಿರ್ದೇಶನದ ಸ್ವಾತಂತ್ರ ಸಂಗ್ರಾಮದ ಪುಟಗಳು, ಮೂಡಲಮನೆಗಳಲ್ಲಿ ಅಭಿನಯಿಸಿದ್ದಾರೆ.

ಇಂಗಳೆಯ ಮಾರ್ಗ, ಜುಲೈ 22 ,1947, ಸಾವಿತ್ರಿಬಾಯಿ ಪುಲೆ ಸಿನಿಮಾಗಳಿಗೆ ಗೀತರಚನೆಕಾರರಾಗಿ, ನಟರಾಗಿ ಹೆಸರು ತಂದಿದ್ದಾರೆ. ಆಕಾಶ ವಾಣಿ ನಾಟಕ ಕಲಾವಿದರಾಗಿ ಸಾಹಿತಿ ಸತ್ಯಕಾಮರ ಸಂದರ್ಶನ ಮಾಡಿದ್ದರು.

ಬಂಗಾರದ ಕೊಡ ನಾಟಕಕ್ಕಾಗಿ ಶ್ರೇಷ್ಠ ನಟ, ನಿರ್ದೇಶಕ ಪ್ರಶಸ್ತಿ, ಸಾಹೇಬರ ನಾಯಿ ನಾಟಕಕ್ಕೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಸುವರ್ಣರಂಗ ಪ್ರಶಸ್ತಿ ಹಾವೇರಿ ಜಿಲ್ಲಾಡಳಿತದಿಂದ ರಾಜ್ಯೋ ತ್ಸವ ಪ್ರಶಸ್ತಿ... ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ.

ವಾರಂಬಳ್ಳಿ, ಹಾವನೂರ ಪ್ರತಿ ಷ್ಠಾನಗಳ ಮೂಲಕವೂ ಕೊಡುಗೆ ನೀಡಿದ್ದಾರೆ. ಹಾನಗಲ್‌ನ ಶೇಷಗಿರಿ ಸುಂದರ ರಂಗ ಗ್ರಾಮವಾಗಿ ರೂಪು ಗೊಳ್ಳುವಲ್ಲಿ ಶ್ರಮಿಸಿದರು. ಪತ್ನಿ ಕಾಂಚನಾ, ಮಗ ನವೀನ, ಮಗಳು ಕಾವ್ಯಾರೊಂದಿಗಿನ ಸುಂದರ ಸಂಸಾರ.

’ಕಾಗೆಯೊಂದಗುಳ ಕಂಡೊಡೆ ಕೂಗಿ ಕರೆಯದೇ ತನ್ನ ಬಳಗವನು’ ಎಂಬಂತೆ ಏನೇ ಇದ್ದರೂ ಎಲ್ಲರಿಗೂ ಹಂಚುವ ಹೃದಯವಂತ. ನಾವೂ ಎಲ್ಲರನ್ನು ಕರೆದುಕೊಂಡು ಸಮ್ಮೇಳನಕ್ಕೆ ಹೋಗೋಣ.

ಪ್ರಕಟಿತ ಕೃತಿಗಳು...
ಒಡಲಾಳದ ಕಿಚ್ಚು, ವಿಷಾದ ಯೋಗ, ಗಾಂಧಿ ಗಿಡ, ಛಿನ್ನ ಅಲ್ಲದೇ, ಬಂಡಾಯದ ಗಟ್ಟಿಧ್ವನಿ ಬರಗೂರ ರಾಮಚಂದ್ರಪ್ಪ. ಹಾವೇರಿ ತಾಲ್ಲೂಕು ದರ್ಶನ, ಕರ್ನಾಟಕ ಏಕೀಕರಣದಲ್ಲಿ ಹಾವೇರಿ ಜಿಲ್ಲೆ, ತ್ರಿಪದಿ ಸ್ಮರಣ ಸಂಚಿಕೆ, ನೆಲದ ನೆನಪುಗಳು, ಓದೊಳಗಿನ ಓದು, ಹಾವೇರಿ ಜಿಲ್ಲಾ ರಂಗ ಮಾಹಿತಿ ಹೀಗೆ ಹಲವಾರು ಕಾವ್ಯ, ಕೃತಿ, ಲೇಖನಗಳನ್ನು ಸತೀಶ ಕುಲಕರ್ಣಿ ಬರೆದಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ, ಕರ್ನಾಟಕ ನಾಟಕ ಅಕಾಡೆಮಿ ಜಿಲ್ಲಾ ಸಂಚಾಲಕ, ಡಾ. ವಿ.ಕೃ.ಗೋಕಾಕ ರಾಷ್ಟ್ರೀಯ ಟ್ರಸ್ಟ್, ಹುತಾತ್ಮ ಮಹದೇವ ಮೈಲಾರ ರಾಷ್ಟ್ರೀಯ ಟ್ರಸ್ಟ ಸದಸ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಸದಸ್ಯ, ಕರ್ನಾಟಕ ರಂಗಭೂಮಿ ಪರಿಷತ್ತಿನ ವಲಯದ ಕಾರ್ಯದರ್ಶಿ ಮತ್ತಿತರೆಡೆ ಅಪಾರ ಸೇವೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT