ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂತಪಂಕ್ತಿ ಜೋಡಣೆ: ಐತಿಹಾಸಿಕ ಸಾಧನೆ

Last Updated 26 ನವೆಂಬರ್ 2017, 8:51 IST
ಅಕ್ಷರ ಗಾತ್ರ

ಹೊಸದುರ್ಗ: ಗ್ರಾಮೀಣ ಭಾಗದಲ್ಲಿ 24 ಗಂಟೆಗಳ ಒಳಗೆ 200ಕ್ಕೂ ಅಧಿಕ ಮಂದಿಗೆ ದಂತ ಜೋಡಣೆ ಮಾಡಿರುವುದು ಐತಿಹಾಸಿಕ ದಾಖಲೆಯಾಗಿದೆ ಎಂದು ‘ಇಂಡಿಯಾ ಬುಕ್ ಆಫ್ ರೆಕಾರ್ಡ್‌’ನ ತೀರ್ಪುಗಾರ ಹರೀಶ್ ತಿಳಿಸಿದರು.

ತಾಲ್ಲೂಕಿನ ಶ್ರೀರಾಂಪುರದಲ್ಲಿ ಬಿ.ಜಿ.ಅಭಿಮಾನಿ ಬಳಗ, ಸರ್ಕಾರಿ ದಂತ ಮಹಾವಿದ್ಯಾಲಯ, ಜಿ.ಡಿ.ಸಿ.ಆರ್.ಐ ಅಲೋಮಿನಿ ಸಂಸ್ಥೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಉಚಿತ ದಂತ ಪಂಕ್ತಿ ಜೋಡಣೆ ಶಿಬಿರದಲ್ಲಿ ಅವರು ಮಾತನಾಡಿದರು.

ಆಹಾರ ಪದಾರ್ಥ ಜಗಿಯಲು, ಮುಖದ ಸೌಂದರ್ಯಕ್ಕೆ ಹಲ್ಲುಗಳು ಅವಶ್ಯಕ ಎಂದು ಹೇಳಿದ ಅವರು, ಸ್ಥಳೀಯ ಜನಪ್ರತಿನಿಧಿಗಳು ಹಲ್ಲುಗಳ ಸಮಸ್ಯೆಯಿಂದ ಬಳಲುತ್ತಿರುವ
ಗ್ರಾಮೀಣ ಭಾಗದ ಜನರಿಗೆ ಹಲ್ಲು ಜೋಡಣೆ ಕೆಲಸ ಮಾಡಿಸುತ್ತಿರುವುದು ಶ್ಲಾಘನೀಯ ಎಂದು ಅವರು ಮೆಚ್ಚುಗೆ ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಅನಂತ ಮಾತನಾಡಿ, ‘ಸರ್ಕಾರದ ಮಹತ್ವಾಕಾಂಕ್ಷಿಯ ದಂತಭಾಗ್ಯ ಯೋಜನೆಯ ಸೌಲಭ್ಯವನ್ನು ತಾಲ್ಲೂಕಿನ ಜನರಿಗೆ ತಲುಪಿಸುವ ಹಾಗೂ ವಿಶ್ವದಾಖಲೆಯ ಉದ್ದೇಶದಿಂದ ಈ ಶಿಬಿರ ಆಯೋಜಿಸಲಾಗಿತ್ತು’ ಎಂದು ಹೇಳಿದರು.

ಹಲ್ಲು ನೋವಿನಿಂದ ಬಳಲುತ್ತಿರುವ ಸ್ಥಳೀಯ ಜನರ ಸಮಸ್ಯೆ ನಿವಾರಣೆ ಮಾಡಬೇಕು. ಆ ಮೂಲಕ ಎಲ್ಲರೂ ಆರೋಗ್ಯವಂತರಾಗಿ ಜೀವಿಸಬೇಕು ಎಂಬ ಗುರಿ ಇಟ್ಟುಕೊಂಡು ಒಂದು ವರ್ಷದಿಂದ ಉಚಿತ ಶಿಬಿರ ಆಯೋಜಿಸುವ ಯೋಜನೆ ರೂಪಿಸಲಾಗಿತ್ತು. ಒಂದೇ ದಿನದಲ್ಲಿ 200ಕ್ಕೂ ಅಧಿಕ ಜನರಿಗೆ ದಂತ ಜೋಡಣೆ ಮಾಡಲಾಗುತ್ತಿದೆ. ಇದರಿಂದ ಸಾಕಷ್ಟು ಹಣ ಖರ್ಚು ಮಾಡಿ ಹಲ್ಲು ಕಟ್ಟಿಸಿಕೊಳ್ಳಲು ಸಾಧ್ಯವಾಗದ ಬಿಪಿಎಲ್ ಪಡಿತರ ಫಲಾನುಭವಿಗಳಿಗೆ ನೆರವಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭ ಶಾಸಕ ಬಿ.ಜಿ.ಗೋವಿಂದಪ್ಪ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶಾಂತಲಾ ಗಿರೀಶ್, ಉಪಾಧ್ಯಕ್ಷೆ ನೇತ್ರಾವತಿ ದೇವರಾಜು, ಜಿಲ್ಲಾ ಪಂಚಾಯ್ತಿ ಸದಸ್ಯರಾದ ವಿಶಾಲಾಕ್ಷಿ ನಟರಾಜು, ವಿಜಯಲಕ್ಷ್ಮಿ ಪ್ರಕಾಶ್, ಚೇತನಾ ಪ್ರಸಾದ್, ಮಮತಾ ಕುಮಾರಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಬಿ.ವಿ.ನೀರಜ್, ಬೆಂಗಳೂರಿನ ಸರ್ಕಾರಿ ದಂತ ಮಹಾ ವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ.ಫಯಾಜುದ್ದೀನ್, ಅಧಿಕಾರಿಗಳು ಹಾಜರಿದ್ದರು.

ನಾಲ್ಕು ಹಂತಗಳಲ್ಲಿ ದಂತ ಜೋಡಣೆ
ಶ್ರೀರಾಂಪುರ ಹೊಸ ಬಸ್ ನಿಲ್ದಾಣದ ಮಳಿಗೆಗಳಲ್ಲಿ ತಾತ್ಕಾಲಿಕವಾಗಿ ಆಧುನಿಕ ರೀತಿಯಲ್ಲಿ 10 ಕ್ಲಿನಿಕ್ ತೆರೆಯಲಾಗಿತ್ತು. ಪ್ರತಿ ಕ್ಲಿನಿಕ್‌ನಲ್ಲಿ 25 ಮಂದಿ ದಂತ ಸಮಸ್ಯೆ ಇರುವವರಿಗೆ ಹಲ್ಲು ಜೋಡಣೆ ಅಳತೆ, ಮಾದರಿ ತಯಾರಿ, ಪ್ರಾತ್ಯಕ್ಷಿಕೆ ಹಾಗೂ ಜೋಡಣೆ ಸೇರಿದಂತೆ ನಾಲ್ಕು ಹಂತಗಳಲ್ಲಿ ಚಿಕಿತ್ಸೆ ನೀಡಲಾಯಿತು.

ಒಬ್ಬ ರೋಗಿ ಕ್ಲಿನಿಕ್ ಒಳಗೆ ಹೋದರೆ, ಹಲ್ಲು ಜೋಡಿಸಿಕೊಂಡೇ ಹೊರಗೆ ಬರುವಂತಹ ವ್ಯವಸ್ಥೆ ಮಾಡಲಾಗಿತ್ತು. ದಂತಪಕ್ತಿ ಜೋಡಣೆ ಉಚಿತ ಶಿಬಿರದ ಆಯೋಜನೆ ಬಗ್ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಆರೋಗ್ಯ ಇಲಾಖೆಯ 240ಕ್ಕೂ ಅಧಿಕ ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT