ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಯಾಳ ಭಾಷಿಗನ ಕನ್ನಡ ಪ್ರೇಮ

Last Updated 26 ನವೆಂಬರ್ 2017, 8:59 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿಯೇ ಕನ್ನಡ ಅಳಿವಿನಂಚಿಗೆ ಸಾಗುತ್ತಿದೆ ಎಂಬ ಮಾತು ವ್ಯಾಪಕವಾಗಿ ಕೇಳಿಬರುತ್ತಿದೆ. ಈ ಮಧ್ಯೆ ಕನ್ನಡ ಉಳಿಸಬೇಕೆಂಬ ಚರ್ಚೆಗಳು ಸಾಕಷ್ಟು ನಡೆಯುತ್ತಿವೆ. ಆದರೆ, ತಾಲ್ಲೂಕಿನ ವ್ಯಾಪ್ತಿಯಲ್ಲಿ ಮಲಯಾಳಂ ಭಾಷಿಕರೊಬ್ಬರು ಕನ್ನಡದ ಬಗ್ಗೆ ಅಪಾರ ಅಭಿಮಾನ ಬೆಳೆಸಿಕೊಂಡು, ಸದ್ದಿಲ್ಲದೆ ಕನ್ನಡದ ಕಾಯ ಕದಲ್ಲಿ ತೊಡಗಿದ್ದಾರೆ.

ತಾಲ್ಲೂಕಿನ ರಾವೂರು ಗ್ರಾಮದ ಪಿ.ಸಿ.ಮ್ಯಾಥ್ಯೂ 14 ವರ್ಷದವರಾಗಿದ್ದಾಗ 1952ರಲ್ಲಿ ಕೇರಳದಿಂದ ಇಲ್ಲಿಗೆ ವಲಸೆ ಬಂದ ಇವರು, ಕನ್ನಡದ ಬಗ್ಗೆ ಮೊದಲಿ ನಿಂದಲೂ ಅಭಿಮಾನ ಬೆಳೆಸಿಕೊಂಡು ಬಂದಿದ್ದಾರೆ. ಕೃಷಿ ಇವರ ಹೊಟ್ಟೆಪಾಡಿನ ಮೂಲವಾದರೆ ಕನ್ನಡ ಸೇವೆ ಇವರ ಹವ್ಯಾಸಿ ಹಾಗೂ ಒಲವಿನ ವಿಚಾರವಾಗಿದೆ.

1982ರಿಂದಲೂ ಸಪ್ತಶ್ರೀ ಹವ್ಯಾಸಿ ಕಲಾರಂಗ ವನ್ನು ಕಟ್ಟಿ ನಾಟಕಗಳ ಮೂಲಕ ಕನ್ನಡ ಸೇವೆಯಲ್ಲಿ ತೊಡಗಿದ್ದಾರೆ. ಸ್ಥಳೀಯವಾಗಿ ನಾಟಕ ರಂಗಭೂಮಿ ಯಲ್ಲಿ ಹೆಚ್ಚು ಗುರುತಿಸಿಕೊಂಡಿರುವ ಮ್ಯಾಥ್ಯೂ, ತಾಲ್ಲೂಕಿನ ವ್ಯಾಪ್ತಿಯಲ್ಲಿ ನಾಟಕ ಮಥಾಯಿ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಈ ಹೆಸರು ಹೇಳಿದರೆ ಇವರ ಪರಿಚಯ ಇಲ್ಲದವರಿಲ್ಲ.

‘ಕೇರಳದಿಂದ ಬಂದ ಐದಾರು ವರ್ಷ ಕನ್ನಡ ಭಾಷೆ ಬಾರದೆ ಸಾಕಷ್ಟು ಕಷ್ಟವಾಗಿತ್ತು. ಕನ್ನಡ ಚಲನಚಿತ್ರ ನೋಡಿದರೆ ಕನ್ನಡ ಬೇಗ ಕಲಿಯಬಹುದೆಂದು ಸ್ನೇಹಿತ ರೊಬ್ಬರು ಸಲಹೆ ನೀಡಿದರು. ಅದರಂತೆ ಕನ್ನಡ ಚಿತ್ರ ನೋಡಲು ಪ್ರಾರಂಭಿಸಿದೆ. ಸಪ್ತಶ್ರೀ ಹವ್ಯಾಸಿ ಕಲಾ ರಂಗ, ಯುವಜನಮೇಳ, ವಯಸ್ಕರ ಶಿಕ್ಷಣದ ಮೂಲಕ ಕನ್ನಡ ಓದುವುದನ್ನು ಕಲಿತೆ. ಅಲ್ಲದೆ ಸ್ನೇಹಿತರೊಂದಿಗೆ ಜೀವನ ಕ್ಕಾಗಿ ಮೈಲಿಕಲ್ಲು (ಕಿ.ಮೀ)ಗಳಿಗೆ ಹೆಸರು ಬರೆಯುವ ವೃತ್ತಿಗೆ ಹೋದಾಗ ಕನ್ನಡ ಬರೆಯುವುದನ್ನು ಕಲಿತೆ’ ಎಂಬುದನ್ನು ಕುತೂ ಹಲಕರವಾಗಿ ವಿವರಿಸುತ್ತಾರೆ ಮ್ಯಾಥ್ಯೂ.

10 ವರ್ಷಗಳಿಂದ ಯಾವುದೇ ಕನ್ನಡದ ಕಾರ್ಯ ಕ್ರಮ ನಡೆದರೂ ಅಲ್ಲಿ ಇವರ ಕನ್ನಡದ ಅಭಿಮಾನದ ನಾಮಫಲಕ ರಾರಾಜಿಸುತ್ತವೆ, ‘ಪ್ರಮುಖ ಆಮಂತ್ರಣ ಪತ್ರಿಕೆಗಳನ್ನು ಕನ್ನಡದಲ್ಲಿ ಮುದ್ರಿಸಿ ಕನ್ನಡ ತನವನ್ನು ತೋರಿಸಿ’, ‘ಶುಭ ಸಮಾರಂಭಗಳಲ್ಲಿ ಕನ್ನಡ ಪುಸ್ತಕಗಳನ್ನು ಕೊಡುಗೆಯಾಗಿ ನೀಡುವ ಸಂಕಲ್ಪ ಮಾಡಿರಿ’, ‘ಭಾಷ ಅಲ್ಪಸಂಖ್ಯಾತರೆಲ್ಲರೂ ಬನ್ನಿ, ಕನ್ನಡಾಂಬೆಯ ತೇರು ಎಳೆಯ ಬನ್ನಿ’, ‘ತಾನಿರುವ ನೆಲದಲ್ಲಿ ಕನ್ನಡವನ್ನು ಉತ್ತಿ ಬಿತ್ತಿ ಬೆಳೆಯುವವನೆ ನಿಜವಾದ ಕನ್ನಡಿಗ’, ‘ಓ ಕನ್ನಡಿಗ ನೀನು ಕನ್ನಡ ವನ್ನು ಉಳಿಸುವುದು ಬೇಡ, ಬೆಳೆಸುವುದು ಬೇಡ ಬಳಸಿದರೆ ಸಾಕು’, ‘ಕನ್ನಡ ಒಂದು ಜಾತಿಯ ಒಂದು ಕೋಮಿನ ಸ್ವತ್ತಲ್ಲ, ಕನ್ನಡ ಎಂಬುದು ಸಂಸ್ಕೃತಿ’... ಇತ್ಯಾದಿ ತಾವೇ ಬರೆದ ಕನಿಷ್ಠ 30 ಕನ್ನಡ ಭಾಷೆ ಬೆಳೆಸುವ ಬಗ್ಗೆ ಮಾಹಿತಿ ಇರುವ ನಾಮ ಫಲಕಗಳನ್ನು ಹಾಕುತ್ತಾರೆ. ರಾಜ್ಯ ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಭಾಷಣದ ಪುಸಕ್ತವನ್ನು ಅಧ್ಯಯನ ಮಾಡಿ ಅದರ ಆಧಾರದ ಮೇಲೆ ಕನ್ನಡ ಅಭಿಮಾನದ ನಾಮಫಲಕ ಬರೆದೆ ಎನ್ನುತ್ತಾರೆ ಮ್ಯಾಥ್ಯೂ.

ಪರಭಾಷಿಕನಾದರೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಸದಸ್ಯನಾಗಿರುವ ಇವರು ಮನೆ ಅಂಗಳ ಕಾರ್ಯಕ್ರಮವನ್ನು ನಡೆಸಿ ಇತರರಿಗೆ ಮಾದರಿಯಾಗಿದ್ದಾರೆ. ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಂಡಿರುವಂತೆ ಇವರ ಪುತ್ರ ಪಿ.ಎಂ.ಜೋಳಿಸನ್ ಭಾರತೀಯ ಸೇನೆಯಲ್ಲಿ ಮೇಜರ್ ಆಗಿದ್ದು, ಪ್ರಸ್ತುತ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಇವರ ರಾಷ್ಟ್ರಪ್ರೇಮಕ್ಕೂ ಸಾಕ್ಷಿಯಾಗಿದೆ.

‘ಶಾಲೆಗಳಲ್ಲಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರಮುಖ ವೇದಿಕೆಯಲ್ಲಿ ಭಾಷಣ ಮಾಡಲು ಅವಕಾಶ ಕಲ್ಪಿಸಬೇಕು. ಸರ್ಕಾರಿ ಶಾಲೆಗಳಲ್ಲೂ ಖಾಸಗಿ ಶಾಲೆಗಳ ರೀತಿಯಲ್ಲಿಯೇ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಒದಗಿಸಿದರೆ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗುತ್ತವೆ. ಮಗು ಯಾವ ಭಾಷೆಯಲ್ಲಿ ಕಲಿಯಬೇಕು ಎಂಬುದನ್ನು ತಂದೆ, ತಾಯಿ ನಿರ್ಧರಿಸಬೇಕು. ಕನ್ನಡ ಎಂದೂ ನಾಶವಾಗುವುದಿಲ್ಲ ಜನಸಾಮಾನ್ಯರಿಂದಲೇ ಕನ್ನಡ ಉಳಿಯುತ್ತದೆ’ ಎಂಬುದು ಮ್ಯಾಥ್ಯೂ ಸ್ಪಷ್ಟ ನುಡಿ.

ಮ್ಯಾಥ್ಯೂ ಅವರ ಕನ್ನಡದ ಸಾಹಿತ್ಯದ ಕೃಷಿಗೆ ಪತ್ನಿ ಲೀಲಾ ಸಾಥ್ ನೀಡಿದ್ದಾರೆ. ಕನ್ನಡ ಕಟ್ಟುವ ಕಾಯಕದ ಜತೆಗೆ ನಟನಾ ಕೌಶಲವನ್ನು ಕಲಿತಿರುವ ಇವರು, ‘ಕಾನೂರಾಯಣ’ ಹಾಗೂ ಕಾಶಿನಾಥ್ ಅವರ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಇವರ ಕನ್ನಡದ ಕಾಯಕವನ್ನು ಮೆಚ್ಚಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕನ್ನಡಿಗರಾಗಿದ್ದು ಕನ್ನಡವನ್ನು ಮಾತನಾಡದೆ ಇರುವವರು, ಇಂಗ್ಲಿಷ್ ವ್ಯಾಮೋಹ ಬೆಳೆಸಿಕೊಂಡವರು, ಕನ್ನಡದ ಅಭಿಮಾನವನ್ನು ವೇದಿಕೆ ಭಾಷಣಕಷ್ಟೇ ಸೀಮಿತಗೊಳಿಸುವವರ ಮಧ್ಯೆ ಪರಭಾಷಿಕನಾಗಿದ್ದರೂ ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಂಡಿರುವ ಪಿ.ಸಿ.ಮ್ಯಾಥ್ಯೂ ಅಂತವರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಂಪರ್ಕ ಸಂಖ್ಯೆ 9449651723.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT