ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣದ ಲೋಕದ ನಂಟು ಎಂದಿಗೂ ಜಾರದ ಅಂಟು

Last Updated 26 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನಾನು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯವನು. ಅಲ್ಲಿಯೇ ನನ್ನ ಬಾಲ್ಯದ ದಿನಗಳು ಕಳೆದಿದ್ದು. ನನ್ನ ಅಪ್ಪ ಸರ್ಕಾರಿ ಇಲಾಖೆಯೊಂದರಲ್ಲಿ ಜೀಪ್‌ ಡ್ರೈವರ್ ಆಗಿದ್ದರು. ನಮ್ಮದು ಬಡ ಕುಟುಂಬ. ಓದಿದ್ದೆಲ್ಲಾ ಸರ್ಕಾರಿ ಶಾಲೆಯಲ್ಲೇ. ನನ್ನ ವಿದ್ಯಾಭ್ಯಾಸ ಮುಗಿಯುವ ಮೊದಲೇ ಅಪ್ಪ ನಿವೃತ್ತರಾಗಿದ್ದರು.

ಶಾಲೆಗೆ ಹೋಗುವ ದಾರಿಯಲ್ಲಿ ಸಿಗುವ ತೋಟವೊಂದರಲ್ಲಿ ನಾನು ಮತ್ತು ನನ್ನ ಸ್ನೇಹಿತರು ಕಾರೇಹಣ್ಣು, ಬೋರೆ ಹಣ್ಣು ಕಿತ್ತುಕೊಂಡು ಹೋಗುತ್ತಿದ್ದೆವು. ನಮ್ಮಜ್ಜಿ ರಾಗಿರೊಟ್ಟಿ ಮುರಿದುಕೊಡುತ್ತಿದ್ದರು. ಅದನ್ನು ಜೇಬಿನಲ್ಲಿಟ್ಟುಕೊಂಡು ಶಾಲೆಗೆ ಹೋಗುತ್ತಿದ್ದೆ. ಅವೆಲ್ಲಾ ಸಂಭ್ರಮದ ದಿನಗಳು...

ಏಳನೇ ತರಗತಿಯಲ್ಲಿದ್ದಾಗ ಶಾಲೆಯ ಶಾರದಾ ಪೂಜಾ ಸಮಾರಂಭದಲ್ಲಿ ’ಗಂಡಸಲ್ವೇ ಗಂಡಸು’ ಅನ್ನೋ ನಾಟಕ ತಾಲೀಮು ಶುರುವಾಯಿತು. ಅದರಲ್ಲಿ ಬೋಡಮ್ಮನ ಪಾತ್ರವೊಂದಿತ್ತು. ಅದನ್ನು ಆ ಪಾತ್ರಧಾರಿ ಸರಿಯಾಗಿ ಮಾಡುತ್ತಿರಲಿಲ್ಲ. ಆಗ ಮೇಷ್ಟ್ರಿಗೆ ಮನವಿ ಮಾಡಿಕೊಂಡು ಬೋಡಮ್ಮ ಅಜ್ಜಿಯ ಪಾತ್ರ ಮಾಡುವ ಅವಕಾಶ ಗಿಟ್ಟಿಸಿಕೊಂಡೆ. ಪ್ರಥಮ ಬಹುಮಾನ ಪಡೆದೆ. ಅಂದು ಅಂಟಿದ ಬಣ್ಣದ ಬದುಕಿನ ನಂಟು ಇಂದಿಗೂ ಮುಂದುವರಿಯುತ್ತಿದೆ.

ಹಬ್ಬ–ಹರಿದಿನಗಳಲ್ಲಿ ಸ್ನೇಹಿತರೆಲ್ಲಾ ಸೇರಿ ನಾಟಕವಾಡುತ್ತಿದ್ದೆವು. ಊರಿನಲ್ಲಿ ‘ಯುವ ಕನ್ನಡ ಸಂಘ’ ಅಂತ ತಂಡ ಕಟ್ಟಿದೆ. ನಮ್ಮೂರಿನ ಯಾರದೇ ಮನೆಯಲ್ಲಿ ಹಸಿರು ಕಂಬ ಬಿದ್ದರೂ ನಾವೇ, ಯಾರದೇ ಮನೆಯಲ್ಲಿ ಸಾವಾದರೂ ನಾವೇ ಅನ್ನುವಷ್ಟು ನಮ್ಮ ತಂಡ ಹೆಸರಾಗಿತ್ತು.

ಎಸ್‌ಎಸ್‌ಎಲ್‌ಸಿಯಲ್ಲಿ ಫೇಲಾಗಿಬಿಟ್ಟೆ. ನಮ್ಮೂರಿನ ವೈದ್ಯರಾದ ಡಾ.ಶಂಕರ್‌ ಶೆಟ್ಟಿ ಅವರ ತೋಟಕ್ಕೆ ಕೂಲಿಗೆ ಹೋಗತೊಡಗಿದೆ. ಕೂಲಿ ಪಡೆಯಲು ಒಮ್ಮೆ ಸರತಿಯಲ್ಲಿ ನಿಂತಿದ್ದಾಗ ವೈದ್ಯರು ನನ್ನನ್ನು ಗಮನಿಸಿ, ‘ಏನೋ ಎಸ್ಎಸ್‌ಎಲ್‌ಸಿ ಪಾಸ್ ಮಾಡಲಿಲ್ವೇ?’ ಅಂದ್ರು. ‘ಇಲ್ಲಾ ಸಾರ್’ ಅಂದೆ. ಸರಿ ನಾಳೆ ನನ್ನನ್ನು ಭೇಟಿ ಮಾಡು ಅಂದ್ರು. ಮರುದಿನ ಅವರ ಮನೆಗೆ ಹೋದೆ. ಹೊಳಲ್ಕೆರೆಯ ಶ್ರೀಜಯಲಕ್ಷ್ಮಿ ಬ್ಯಾಂಕ್‌ನಲ್ಲಿ ಅಟೆಂಡರ್ ಕೆಲಸ ಕೊಡಿಸಿದರು.

ಆಗ ನನಗೆ ತಿಂಗಳಿಗೆ 50 ರೂಪಾಯಿ ಸಂಬಳ ಬರುತ್ತಿತ್ತು. ಎರಡನೇ ಬಾರಿ ಪರೀಕ್ಷೆ ಬರೆದು ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿದೆ. ಬ್ಯಾಂಕಿನ ಸಂಬಳ 50 ರೂಪಾಯಿಯಿಂದ 96 ರೂಪಾಯಿಗೆ ಏರಿತು.

ಒಮ್ಮೆ ಹೊಳಲ್ಕೆರೆಗೆ 'ಎಡೆಯೂರು ಸಿದ್ದಲಿಂಗೇಶ್ವರ ನಾಟ್ಯ ಸಂಘ’ ಕಂಪೆನಿ ಬಂತು. ಆ ಕಂಪೆನಿ ನಷ್ಟದಲ್ಲಿತ್ತು. ನನ್ನ ಬಗ್ಗೆ ಊರಿನವರು ಕಂಪೆನಿ ಮಾಲೀಕ ಸೋಮಣ್ಣನವರಿಗೆ ಹೇಳಿದ್ದರು. ಅವರು ನನ್ನ ಬಳಿ ಬಂದು ’ಗೌಡ್ರ ಗದ್ಲ’ ನಾಟಕದಲ್ಲಿ ಪಾತ್ರ ಮಾಡಬೇಕೆಂದು ಕೋರಿದರು. ಆಗ ನಟಿ ಬಿ.ಜಯಾ (ಕುಳ್ಳಿ ಜಯಮ್ಮ) ನನ್ನ ಜೋಡಿಯಾಗಿದ್ದರು. ನನ್ನ ಪಾತ್ರದ ಜನಪ್ರಿಯತೆ ಇತರ ನಾಟಕ ಕಂಪೆನಿಗಳಿಗೂ ಹರಡಿತು.

ಕಂಪೆನಿ ನಾಟಕದಲ್ಲಿ ಅಭಿನಯಿಸಲು ಆಗಾಗ ಬ್ಯಾಂಕಿಗೆ ರಜೆ ಹಾಕಿ ಹೋಗುತ್ತಿದ್ದೆ. ಇದು ಮನೆಯವರ ಕೋಪಕ್ಕೆ ಕಾರಣವಾಯಿತು. ಮದುವೆ ಮಾಡಿದರೆ ಮಗ ಸರಿ ಹೋಗಬಹುದೆಂದು ತಿಳಿದು 1969ರಲ್ಲಿ ನನ್ನ ಮದುವೆ ಮಾಡಿದರು. ಆದರೆ, ನಮ್ಮ ಮನೆಯವರ ಲೆಕ್ಕಾಚಾರ ತಪ್ಪಾಯಿತು. ನಾಟಕದ ಚಟ ಅಷ್ಟು ಸುಲಭವಾಗಿ ನನ್ನನ್ನು ಬಿಡಲಿಲ್ಲ.

ಒಮ್ಮೆ ‘ಗೌಡ್ರ ಗದ್ಲ’ ನಾಟಕ ನೋಡಲು ನಟ ಧೀರೇಂದ್ರ ಗೋಪಾಲ್ ಅವರು ನಮ್ಮೂರಿಗೆ ಬಂದರು. ನನ್ನ ಅಭಿನಯ ನೋಡಿ ಮೆಚ್ಚಿಕೊಂಡ ಅವರು ಬೆಳ್ಳಿತೆರೆಗೆ ಬರುವಂತೆ ಆಹ್ವಾನವಿತ್ತರು. ಒಮ್ಮೆ ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಿದ್ದಾಗ ಅವರನ್ನು ಭೇಟಿ ಮಾಡಿದೆ. ಆಗ ‘ಸಾಹಸ ಸಿಂಹ’ ಶೂಟಿಂಗ್‌ ನಡೆಯುತ್ತಿತ್ತು. ಗೋಪಾಲ್ ಅವರೇ ನಿರ್ದೇಶಕ ಜೋಸೈಮನ್, ಸಂಭಾಷಣೆಕಾರ ಕುಣಿಗಲ್ ನಾಗಭೂಷಣ, ಅಜಂತಾ ಕಂಬೈನ್ಸ್‌ನ ರಾಜು ಅವರಿಗೆ ಪರಿಚಯಿಸಿದರು. ಪಾತ್ರವನ್ನೂ ದೊರಕಿಸಿಕೊಟ್ಟರು. ವಜ್ರಮನಿಯ ಐವರು ಬಾಡಿ ಗಾರ್ಡ್‌ಗಳಲ್ಲಿ ನಾನೂ ಒಬ್ಬನಾಗಿದ್ದೆ. ಧೀರೇಂಧ್ರ ಗೋಪಾಲ್ ಕೂಡಾ ಆ ಸಿನಿಮಾದಲ್ಲಿ ವಿಲನ್.

ಮೊದಲೇ ನಾಟಕದ ಚಟವಿದ್ದ ನನಗೆ ಈಗ ಸಿನಿಮಾ ಸೆಳೆತವೂ ಶುರುವಾಗಿಬಿಟ್ಟಿತು. ಮನೆ ಮತ್ತು ಬ್ಯಾಂಕ್‌ನಲ್ಲಿ ಬೈಗುಳಗಳ ಸುರಿಮಳೆ. ಶೂಟಿಂಗ್ ಒಂದೇ ದಿನದಲ್ಲಿ ಮುಗಿಯುತ್ತಿರಲಿಲ್ಲ. ‘ಊರಿಗೆ ಉಪಕಾರಿ’ ನನ್ನ ಮೊದಲ ಸಿನಿಮಾ. ಸಿನಿಮಾದ ಮೊದಲ ದೃಶ್ಯವೇ ನಾಯಕ ವಿಷ್ಣುವರ್ಧನ್ ಜತೆ ಇತ್ತು. ಅವರು ಊರಿನೊಳಗೆ ಪ್ರವೇಶ ಮಾಡುವುದನ್ನು ತಡೆಯುವ ದೃಶ್ಯ. ಕ್ಯಾಮೆರಾ ಅಂದರೇನು ಅಂತ ಗೊತ್ತಿಲ್ಲದ ನನಗೆ ಮೊದಲೇ ಫಜೀತಿಯಾಗಿತ್ತು. ‘ನಮ್ಮ ಗೌಡ್ರು ಪರ್ಮೀಷನ್ ಇಲ್ದೆ ಊರೊಳಗೆ ಒಂದ್ ಇರುವೆನೂ ಬರಬಾರದು, ನೀನು ಯಾರು, ಯಾಕೆ ಬಂದಿದ್ದೀಯಾ ಅಂತ ಹೇಳು. ನಮ್ ಗೌಡ್ರು ಹೂಂ ಅಂದ್ರೆ ನೀನು ಊರೊಳಗೆ ಬರಬಹುದು’ ಇದು ನಾನು ಒಪ್ಪಿಸಬೇಕಿದ್ದ ಸಂಭಾಷಣೆ. ನಾಟಕದ ಅನುಭವ ಇದ್ದುದ್ದರಿಂದ ಒಂದೇ ಟೇಕ್‌ಗೆ ದೃಶ್ಯ ಓಕೆ ಮಾಡಿಬಿಟ್ಟೆ. ವಿಷ್ಣುವರ್ಧನ್ ಮೆಚ್ಚಿಕೊಂಡರು. ನನಗೂ ಖುಷಿಯಾಯಿತು.

ಅಂದಿನಿಂದ ಜೋಸೈಮನ್ ಯಾವುದೇ ಸಿನಿಮಾ ಮಾಡಿದರೂ, ಕುಣಿಗಲ್ ನಾಗಭೂಷಣ್‌ ಯಾವುದೇ ಚಿತ್ರಕ್ಕೆ ಸಂಭಾಷಣೆ ಬರೆದರೂ, ಅಜಂತಾ ಕಂಬೈನ್ಸ್ ಯಾವುದೇ ಸಿನಿಮಾ ಮಾಡಿದರೂ ನಾನು ಇದ್ದೇ ಇರುತ್ತಿದ್ದೆ. ಎಲ್ಲವೂ ಸಣ್ಣ–ಪುಟ್ಟ ಪಾತ್ರಗಳೇ.

ಹೀಗೆ ಸ್ವಲ್ಪ ದಿನ ಬ್ಯಾಂಕ್, ಸ್ವಲ್ಪ ದಿನ ಸಿನಿಮಾ ಹೀಗೆ ಓಡಾಡುತ್ತಲೇ ನೂರು ಸಿನಿಮಾ ಮಾಡಿಬಿಟ್ಟೆ. ಊರಿನವರು ನನ್ನ ಸಣ್ಣ ಪಾತ್ರಗಳನ್ನು ನೋಡಿ ಬೇಸರಿಸಿಕೊಳ್ಳುತ್ತಿದ್ದರು. ತಂದೆ ತೀರಿಹೋದರು. ಬ್ಯಾಂಕಿನಲ್ಲಿ ತೊಂದರೆ ಜಾಸ್ತಿಯಾಯಿತು. ಬೆಂಗಳೂರಿಗೆ ವರ್ಗಾವಣೆ ಮಾಡಿಸಿಕೊಂಡೆ. ಒಂದು ಬಾಡಿಗೆ ಮನೆ ಮಾಡಿದೆ. ಮೂರು ಹೆಣ್ಣು, ಒಂದು ಗಂಡು ಮಕ್ಕಳಾಗಿದ್ದರು. ಸಂಬಳ ಬರುತ್ತಿರಲಿಲ್ಲ ಬರೀ ಲಾಸ್‌ ಆಫ್ ಪೇ ಮಾಡಿಕೊಂಡು ನಾಟಕ, ಸಿನಿಮಾ ಮಾಡುತ್ತಿದ್ದೆ. ಅಲ್ಲಿ ನೀಡುತ್ತಿದ್ದ ಚಿಕ್ಕಾಸು ಹೊಟ್ಟೆ ತುಂಬುತ್ತಿತ್ತು.

ಬ್ಯಾಂಕಿನಲ್ಲಿ ಜಾಸ್ತಿ ಸಂಬಳ ಸಿಗುತ್ತಿದ್ದರೂ ಇದೇ ಕಡೆಗೆ ಹೆಚ್ಚು ಮನ ಮಿಡಿಯುತ್ತಿತ್ತು. ಹೊಳಲ್ಕೆರೆಯಲ್ಲಿ ಅಪ್ಪ ಕಷ್ಟಪಟ್ಟು ಮಾಡಿದ್ದ ಮನೆಯನ್ನು ಮಾರಿದೆ. ದೊಡ್ಮಗಳು ವಯಸ್ಸಿಗೆ ಬಂದಿದ್ದಳು. ಮದುವೆ ಮಾಡಬೇಕು. ಮನೆಯ ಜವಾಬ್ದಾರಿ ಹೀಗೆ.

ಎಷ್ಟೆಲ್ಲಾ ಸಿನಿಮಾ ಮಾಡಿದರೂ ಜನಾರ್ದನನೇ ಬೇಕು ಅಂತಾಗಲಿಲ್ಲ. ತುಂಬಾ ಬೇಸರವಾಗುತ್ತಿತ್ತು. ಜಡ್ಜ್‌, ಕಾನ್‌ಸ್ಟೇಬಲ್, ಪೊಲೀಸ್ ಹೀಗೆ ನೂರು ಸಿನಿಮಾಗಳಲ್ಲಿ ರಾಜ್‌ಕುಮಾರ್ ಅವರಿಂದ ಹಿಡಿದು ಹೊಸನಟರ ಸಿನಿಮಾಗಳಲ್ಲೂ ಪಾತ್ರ ಮಾಡಿದೆ. ಆದರೆ, ಗುರುತು ಆಗಲಿಲ್ಲ ಸಿನಿಮಾದ ಸಹವಾಸವೇ ಸಾಕು ಎಂದು ಆರು ತಿಂಗಳು ಚಿತ್ರರಂಗದಿಂದ ದೂರವಿದ್ದೆ. ಅಷ್ಟೊತ್ತಿಗೆ ಬ್ಯಾಂಕ್‌ನಲ್ಲಿ ಬಡ್ತಿ ಸಿಕ್ಕಿತ್ತು. ಬೇರೆ ಊರಿಗೆ ಹೋಗಬೇಕಾಗುತ್ತದೆ ಅಂತ ಬಡ್ತಿ ನಿರಾಕರಿಸಿದೆ.

ಅಷ್ಟೊತ್ತಿಗೆ ಬ್ಯಾಂಕ್‌ ಮ್ಯಾನೇಜರ್ ಹುದ್ದೆ ಸಿಕ್ಕಿತು. ಸಿನಿಮಾ ಬಿಟ್ಟು ಬ್ಯಾಂಕ್‌ ಕಡೆ ಗಮನ ಹರಿಸಿದೆ. ಮನೆಯವರು ಮತ್ತು ಬ್ಯಾಂಕಿನವರೆಲ್ಲಾ ಖುಷಿಯಾಗಿಬಿಟ್ಟರು.

ಒಂದು ದಿನ ಬ್ಯಾಂಕ್‌ಗೆ ಕೃಷ್ಣ ನಾಡಿಗ್ ಅಂತ ಒಬ್ಬರು ಬಂದರು. ಸರ್ ನಿಮ್ಮನ್ನು ಕಾಶೀನಾಥ್ ಕರೆಯುತ್ತಿದ್ದಾರೆ ಅಂದರು. ಅವರ ಗರಡಿಯಲ್ಲಿ ಘಟನಾಘಟಾನಿಗಳೇ ಪಳಗಿದ್ದರು. ಮನದಲ್ಲೆಲ್ಲೊ ಮತ್ತೆ ಆಸೆ ಮೊಳೆಯಿತು. ಆಗಾಗಲೇ ಅವರ ಜತೆ ಕೆಲಸ ಮಾಡಿದ್ದೆ. ಅಜಗಜಾಂತರ ಸಿನಿಮಾಕ್ಕೆ ಕಾಮಿಡಿ ರೋಲ್‌ಗೆ ನನಗೆ ಮೇಕಪ್ ಮಾಡಿಸಿ, ವಿಗ್‌ ಹಾಕಿಸಿ, ಡೈಲಾಗ್‌ ಅನ್ನೂ ಕೊಟ್ಟರು. ಟೆಸ್ಟ್‌ ಮುಗಿದ ಮೇಲೆ ಹೇಳಿಕಳಿಸ್ತೀನಿ ಅಂದರು. ಅದನ್ನು ನಾನು ಮರೆತುಬಿಟ್ಟಿದ್ದೆ. ಹದಿನೈದು ದಿನವಾದ ಮೇಲೆ ಮತ್ತೆ ನಾಡಿಗ ಬಂದರು. ಕೊನೆಗೆ ಬ್ರೋಕರ್ ಭೀಮಯ್ಯ ಅಂತ ಕಾಮಿಡಿ ರೋಲ್‌ ನಿಮ್ಮದು. ಬರೀ ಕಾಮಿಡಿ ಅಲ್ಲ ಜತೆಗೆ ವಿಲನ್ ಕೂಡಾ ಅಂದ್ರು.

ಇಡೀ ಸಿನಿಮಾ ನಿಮ್ಮ ಮೇಲೆ ನಿಂತಿರುತ್ತೆ ಅಂದ್ರು. ಅಷ್ಟೊತ್ತಿಗೆ ಬ್ಯಾಂಕ್‌ನವರು ಕನಕಪುರಕ್ಕೆ ವರ್ಗಾವಣೆ ಮಾಡಿಬಿಟ್ಟರು. ಕಾಶೀನಾಥ್ ಬೇರೆ 40 ದಿನಗಳ ಶೆಡ್ಯೂಲ್ ಮಾಡಿದ್ದರು. ನನ್ನ ಪಾಲಿನ ಡೇಟ್‌ಗಳನ್ನು ಹೊಂದಿಸಿಕೊಟ್ಟರು. ಕೊನಗೆ ಬ್ಯಾಂಕಿನಿಂದ ನೋಟಿಸ್, ಸಸ್ಪೆಂಡ್ ಎಲ್ಲವೂ ಆಯಿತು. ಬ್ಯಾಂಕಿನಲ್ಲಿ ಕೆಲಸವಿತ್ತು ಆದರೆ, ಸಂಬಳ ಬರುತ್ತಿರಲಿಲ್ಲ. ವಿಜಯ ಬ್ಯಾಂಕ್‌ನಲ್ಲಿ ನಾನು ವಿದೂಷಕನಂತೆ ಇದ್ದೆ. ಆಗಿನ್ನೂ ಅದು ರಾಷ್ಟ್ರೀಕೃತ ಆಗಿರಲಿಲ್ಲ. ಹಾಗಾಗಿ, ಕೆಲಸದಿಂದ ನನ್ನನ್ನ ತೆಗೆದಿರಲಿಲ್ಲ.

‘ಅಜಗಜಾಂತರ’ ಸಿನಿಮಾ 100 ದಿನ ಯಶಸ್ವಿ ಕಂಡಿತ್ತು. ಆ ಸಿನಿಮಾದಲ್ಲಿ ನಟ ಉಪೇಂದ್ರ ಅವರು ಕಾಶೀನಾಥ್ ಅವರಿಗೆ ಸಹಾಯಕರಾಗಿದ್ದರು. ಮುಂದೆ ಅವರು ‘ತರ್ಲೆ ನನ್ಮಗ’ ಸಿನಿಮಾ ನಿರ್ದೇಶಿಸಿದಾಗ ನಾನು, ಜಗ್ಗೇಶ್‌ ಅಪ್ಪ–ಮಗನ ಪಾತ್ರ ಮಾಡಿದೆವು. ಜಗ್ಗೇಶ್‌ ಮತ್ತು ನಾನು ಮೊದಲಿನಿಂದಲೂ ಸ್ನೇಹಿತರು.

ಇಬ್ಬರೂ ಸ್ಟುಡಿಯೊ, ನಿರ್ದೇಶಕರ ಲಾಡ್ಜ್‌ಗೆ ಅಲೆಯೋದು ಸಾಮಾನ್ಯವಾಗಿತ್ತು. ಇಬ್ಬರ ಬಳಿಯೂ ದುಡ್ಡಿರುತ್ತಿರಲಿಲ್ಲ. ಇಬ್ಬರೂ  ಬೈಕ್‌ನಲ್ಲಿ ಬಂದು ನಿರ್ದೇಶಕರನ್ನು ಭೇಟಿ ಮಾಡಿ, ನಿರಾಸೆಯಿಂದ ಎರಡೂವರೆ ರೂಪಾಯಿಗೆ ಬೈಟು ಟೀ ಕುಡಿದು ಹೋಗುತ್ತಿದ್ದೆವು.  ಅಷ್ಟರಲ್ಲಿ ‘ತರ್ಲೆ ನನ್ಮಗ’ ಸಿನಿಮಾ ಯಶಸ್ವಿಯಾಯಿತು. ಅಲ್ಲಿಂದ ನಾವಿಬ್ಬರೂ ಕ್ಲಿಕ್ ಆದೆವು. ಪಾತ್ರದೊಳಗೆ ನುಗ್ಗಿದೆವೇ ಹೊರತು ದುಡ್ಡು ಗಳಿಸಲಿಲ್ಲ. ಒಂದೊಂದು ಸಿನಿಮಾಕ್ಕೂ ಬರೀ ಐದೈದು ಸಾವಿರ ರೂಪಾಯಿ ಮಾತ್ರ ಸಿಗುತ್ತಿತ್ತು.

ವಿಷ್ಣುವರ್ಧನ್ ಅವರ ಜತೆಯಲ್ಲೇ 100 ಸಿನಿಮಾ ಮಾಡಿದೆ. ರಾಜ್‌ಕುಮಾರ್‌ ಅವರಿಂದ ಹಿಡಿದು ಅಂದಿನ ನಾಯಕ ನಟರಾದ ಅನಂತನಾಗ್, ಜಗ್ಗೇಶ್, ದೇವರಾಜ್, ಶಶಿಕುಮಾರ್, ರವಿಚಂದ್ರನ್‌ ಹೀಗೆ ದೊಡ್ಡ ದೊಡ್ಡ ನಟರೆಲ್ಲಾ ಅವರ ಸಿನಿಮಾಗಳಲ್ಲಿ ನಾನೇ ಇರಬೇಕೆಂದು ಬಯಸುತ್ತಿದ್ದರು. ಕನ್ನಡ ಕಲಾವಿದರೇ ಬೇಕು ಅನ್ನುತ್ತಿದ್ದರು ಇವರೆಲ್ಲಾ.

ನಂತರದ ದಿನಗಳಲ್ಲಿ ಉಪೇಂದ್ರ ಅವರ ಜತೆ ‘ಶ್‌’ ಸಿನಿಮಾ ಮಾಡಿದೆ. ಅದರಲ್ಲಿ ಸದಾ ಬಯ್ಯುವ ಸಬ್ ಇನ್‌ಸ್ಪೆಕ್ಟರ್ ಪಾತ್ರ ನನ್ನದು. ಈ ಸಿನಿಮಾ 100 ದಿನ ಓಡಿತು. ‘ಓಂ’ ಸಿನಿಮಾ ಮಾಡಲು ಉಪೇಂದ್ರ ಅವರಿಗೆ ಅವಕಾಶ ನೀಡುವ ಮೊದಲು ರಾಜ್‌ಕುಮಾರ್ ‘ಶ್‌’ ಸಿನಿಮಾವನ್ನು ಮುರು ಬಾರಿ ನೋಡಿದ್ದರಂತೆ. ಅವರು ಎಲ್ಲೆ ಸಿಗಲಿ ಬ್ಯಾಂಕ್‌ ಬಿಡ್ಬೇಡಿ, ಪಾತ್ರ ಮಾಡಿ ಅನ್ನುತ್ತಿದ್ದರು. ಎಲ್ಲೇ ಕಂಡರೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಮಕ್ಕಳೆಲ್ಲಾ ದೊಡ್ಡವರಾದರು. ಆಗ ಆಗಿನ ಸಮಯಕ್ಕೆ ಸರಿಯಾಗಿ ದುಡ್ಡಿರುತ್ತಿತ್ತು. ಅಲ್ಲಿಂದಲ್ಲಿಗೆ ಸರಿಹೋಗುತ್ತಿತ್ತು. ಬ್ಯಾಂಕಿನಿಂದ ಸಂಬಳ ಬರುವುದಿರಲಿ, ನಾನೇ ಬ್ಯಾಂಕಿಗೆ ದುಡ್ಡು ಕಟ್ಟಬೇಕಿತ್ತು. ಸಿನಿಮಾಗಳಲ್ಲಿ ಜನಪ್ರಿಯವಾಗುತ್ತಿದ್ದಂತೆ. ತುಸು ದುಡ್ಡು ಕಂಡೆ 1990ರಿಂದ 2000ರವರೆಗೆ ಚೆನ್ನಾಗಿ ಸಿನಿಮಾಗಳಲ್ಲಿ ಜಮಾಯಿಸಿಬಿಟ್ಟೆ. ಇಂದಿನವರೆಗೆ 750 ಸಿನಿಮಾಗಳಲ್ಲಿ ನಟಿಸಿದೆ. ಆ ಸಿನಿಮಾಗಳ ಹೆಸರುಗಳನ್ನೆಲ್ಲಾ ಬರೆದಿಟ್ಟಿರುವೆ. ಕೊನೆಗೆ ಮಕ್ಕಳ ಮದುವೆ ಮಾಡಿದೆ. ನಂತರ ಸಿನಿಮಾಗಳಲ್ಲಿ ತೊಡಗಿಕೊಂಡೆ. ಇನ್ನೇನು ಬ್ಯಾಂಕಿನವರು ನನ್ನನ್ನು ಕೆಲಸದಿಂದ ತೆಗೆದುಹಾಕುತ್ತಾರೆ ಅಂದಾಗ ರಾಜೀನಾಮೆ ಕೊಟ್ಟೆ. ಆಗ ಬ್ಯಾಂಕಿಗೆ ಸರಿಯಾಗಿ ಹೋಗಿದ್ದರೆ (35 ವರ್ಷ) ₹ 30 ಲಕ್ಷ ನಿವೃತ್ತಿ ಹಣ ಬರುತ್ತಿತ್ತು. ಆದರೆ, ನನ್ನ ಕೈಗೆ ಸಿಕ್ಕಿದ್ದು ಬರೀ ₹ 12 ಲಕ್ಷ ಮಾತ್ರ. ಅದರಲ್ಲೇ ಮನೆಯನ್ನು ಕಟ್ಟಿದೆ.

ಬ್ಯಾಂಕ್‌ ಬಿಟ್ಟ ಮೇಲೆ ನಾಟಕ ಕಂಪೆನಿಗಳಿಗೆ ಹೋಗತೊಡಗಿದೆ. ಒಮ್ಮೆಮ್ಮೊ ನಾಲ್ಕೈದು ಕಂಪೆನಿಗಳ ನಾಟಕಗಳಿಗೆ ಪಾತ್ರ ಮಾಡುತ್ತೇನೆ. ಇಂದು ಕಲಾವಿದರನ್ನು ಪ್ರೀತಿಸುವುದನ್ನು ಉತ್ತರ ಕರ್ನಾಟಕವೇ ಮುಂಚೂಂಣಿ. ಆ ಜನರ ಖುಷಿ, ಸಂಭ್ರಮವನ್ನು ನೋಡುವುದಕ್ಕಾಗಿಯೇ ನಾನು ಉತ್ತರ ಕರ್ನಾಟಕಕ್ಕೆ ಹೋಗುತ್ತೇನೆ. ಅವರಿಗೆ ಕಲಾವಿದರೆಂದರೆ ಅಷ್ಟೊಂದು ಪ್ರೀತಿ.

ಬಣ್ಣ ಕಲಾಬಳಗ ಎನ್ನುವ ತಂಡ ಕಟ್ಟಿಕೊಂಡಿದ್ದೇನೆ. ಈ ತಂಡದಿಂದ ರಾಜ್ಯ, ರಾಷ್ಟ್ರ, ವಿದೇಶಗಳಲ್ಲಿ ಕಾರ್ಯಕ್ರಮಗಳನ್ನು ಕೊಟ್ಟಿದ್ದೇನೆ. ನನ್ನನ್ನೇ ನಂಬಿ ಎಂಟ್ಹತ್ತು ಕಲಾವಿದರಿದ್ದಾರೆ. ಈಗ ತಲೆಮಾರು ಬದಲಾಗಿದೆ. ನಮ್ಮಂಥ  ಹಿರಿಯ ನಟರಿಗೆ ಅವಕಾಶಗಳಿಲ್ಲ. ದರ್ಶನ್, ಸುದೀಪ್ ಇವರೆಲ್ಲಾ ನನ್ನ ಮುಂದೆಯೇ ದೊಡ್ಡ ನಟರಾಗಿ ಬೆಳೆದವರು. ಅವರ ಯಶಸ್ಸು ಕಂಡು ಈಗ ಖುಷಿಯಾಗುತ್ತೆ.

ಸುದೀಪ್ ಮೊದಲ ಚಿತ್ರ ‘ತಾಯವ್ವ’ದಲ್ಲಿ ನಾನು ಉಮಾಶ್ರೀ ಜೋಡಿಯಾಗಿ ನಟಿಸಿದ್ದೆವು. ಅವರ ಕಂಠಸಿರಿ ಕಂಡು ಅಮಿತಾಭ್‌ ಥರ ಜನಪ್ರಿಯರಾಗುತ್ತೀರಿ ಬಿಡಿ ಎಂದು ಹೇಳುತ್ತಿದ್ದೆ. 

ಈಗ ಹೀರೊಗಳೇ ಹಾಸ್ಯನಟನ ಪಾತ್ರವನ್ನೂ ಮಾಡುತ್ತಿದ್ದಾರೆ. ಇದರಿಂದ ನಮ್ಮ ಹಾಸ್ಯ ಕಲಾವಿದರು ಅವಕಾಶದಿಂದ ವಂಚಿತರಾಗುವುದು ವಿಷಾದನೀಯ. ಇಂದಿನ ನಿರ್ದೇಶಕರಿಗೆ ನಾವು ಗೊತ್ತೇ ಇಲ್ಲ. ಆದರೆ, ಹೀರೊಗಳು ನಮ್ಮವರಲ್ಲವೇ? ಅವರಾದರೂ ನಮಗೆ ಅವಕಾಶ ಕೊಡಬಹುದಲ್ಲವೇ? ಆಸ್ಪತ್ರೆಗೆ ಸೇರಿದಾಗ ಸತ್ತಾಗ ದುಡ್ಡು ಕೊಡುವ ಬದಲು ಬದುಕಿದ್ದಾಗಲೇ ಅವರ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಕೊಟ್ಟರೆ ನಮ್ಮ ಜೀವನವೂ ನಡೆಯುತ್ತದೆ. ಸತ್ಯಜಿತ್ ಅವರನ್ನು ನೋಡಿದರೆ ಎಷ್ಟೊಂದು ಸಂಕಟವಾಗುತ್ತದೆ. ನಮ್ಮ ಕನ್ನಡದ ಹೀರೊಗಳು ಈಗಲಾದರೂ ನಮ್ಮನ್ನು ನೆನಪಿಸಿಕೊಳ್ಳಬೇಕಲ್ಲವೇ?

ವಿಲನ್ ಆಗಬೇಕೆಂದೇ ಬಯಸಿ ಬಣ್ಣದ ಬದುಕಿಗೆ ಕಾಲಿಟ್ಟವನು ನಾನು. ಆದರೆ, ದಿಕ್ಕು ಬದಲಾಯಿತು ಅಷ್ಟೇ. ಬ್ರಹ್ಮಾಸ್ತ್ರ ಅನ್ನುವ ಸಿನಿಮಾದಲ್ಲಿ ಅಂಬರೀಷ್ ಮೇಲೆ ಫೈಟ್ ಮಾಡುವಾಗ ಕಾಲಿಗೆ ಪೆಟ್ಟಾಯಿತು. ಆಗ ಜೀವನ ಎಷ್ಟೊಂದು ನಶ್ವರ ಅಂತ ಅನಿಸಿ. ವಿಲನ್ ಪಾರ್ಟ್‌ಗೆ ಗುಡ್‌ಬೈ ಹೇಳಿದೆ. ಅಂದು ಬಿದ್ದ ನೋವು ಇಂದಿಗೂ ಕಾಡುತ್ತಿದೆ.

ಪೋಷಕ ನಟನಾಗಿ ಉಳಿದುಬಿಡುತ್ತೇನೇನೋ ಅನ್ನುವ ಕಾಲಕ್ಕೆ ನಿರ್ದೇಶಕ ಕಾಶೀನಾಥ್ ಅವರು ನನಗೆ ಹಾಸ್ಯ ಪಾತ್ರ ನೀಡಿ ತಿರುವು ಕೊಟ್ಟರು. ಶ್‌ ಸಿನಿಮಾದಲ್ಲಿನ ಇನ್‌ಸ್ಟೆಕ್ಟರ್ ಪಾತ್ರ ಎಷ್ಟೊಂದು ಜನಪ್ರಿಯವಾಗಿದೆ ಎಂದರೆ ಈಗಲೂ ಉತ್ತರ ಕರ್ನಾಟಕದಲ್ಲಿ ನಾಟಕ ಮಾಡಲು ಹೋದಾಗ ಜನರು ಸರ್ ಆ ಪಾತ್ರದ ಸಂಭಾಷಣೆ ಹೇಳಿ ಅಂತಾರೆ. ಏನ್ರಪ್ಪಾ ಕರೆದು ಬೈಯಿರಿ ಅಂತೀರಲ್ಲಾ  ಅಂದರೆ, ಬೈಯಿರಿ ಸರ್ ಚೆನ್ನಾಗಿ ಬೈತಿರಿ ಅಂತಾರೆ.

ಇದುವರೆಗೆ 750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ‘ಜನಾರ್ದನ ಆರಾಮಾಗಿದ್ದಾನೆ’ ಎಂದು ಜನರು ಭಾವಿಸುತ್ತಾರೆ. ಆದರೆ ಇಂದಿಗೂ ಏನಾದರೂ ತೆಗೆದುಕೊಳ್ಳಬೇಕಾದರೆ ಇನ್‌ಸ್ಟಾಲ್‌ಮೆಂಟ್‌ನಲ್ಲಿ ತಗೋಬೇಕು. ಒಳಗಿನ ನೋವು ನಮಗೇ ಗೊತ್ತು.

ಇದುವರೆಗೂ ಯಾವ ಪ್ರಶಸ್ತಿಗೂ ಅರ್ಜಿ ಹಾಕಲಿಲ್ಲ. ನಮ್ಮ ಜತೆಯೇ ಇದ್ದು ಇಂದು ರಾಜಕೀಯವಾಗಿ ದೊಡ್ಡ ಸ್ಥಾನಕ್ಕೇರಿದವರು ಗುರುತಿಸಿ ಗೌರವಿಸಲಿಲ್ಲ ಅನ್ನುವ ನೋವಂತೂ ನನಗಿದೆ. 

***

ಸಂಕ್ಷಿಪ್ತ ಪರಿಚಯ

ಜನನ: ಮಾರ್ಚ್‌ 2, 1949

ಪತ್ನಿ: ದಿವಂಗತ ಜಾನಕಿಬಾಯಿ

ಮಕ್ಕಳು: ಜ್ಯೋತಿ, ಪವಿತ್ರಾ, ಸೋನಾ, ಗುರುಪ್ರಸಾದ್

ಮೊಮ್ಮಕ್ಕಳು: ಗಗನ, ಭಾವನಾ

ಅಭಿನಯಿಸಿದ ಸಿನಿಮಾಗಳ ಸಂಖ್ಯೆ: 752ಕ್ಕೂ ಹೆಚ್ಚು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT