ವಾಸ್ತವ ಆಧರಿಸಿ ಹೂಡಿಕೆ ಮಾಡಿ

ಇತ್ತೀಚೆಗಷ್ಟೇ ಮೂಡೀಸ್ ಸಂಸ್ಥೆಯು ಭಾರತದ ಆರ್ಥಿಕತೆಯ ಬದಲಾವಣೆಗಳನ್ನು ಗಮನಿಸಿ   ರೇಟಿಂಗನ್ನು ಉನ್ನತೀಕರಿಸಿದ್ದು 'ಬಿಎಎ 3' ಮಟ್ಟದಿಂದ 'ಬಿಎಎ 2' ಮಟ್ಟಕ್ಕೆ ಏರಿಸಿದೆ. ಶುಕ್ರವಾರ ಮತ್ತೊಂದು ಪ್ರಮುಖ ರೇಟಿಂಗ್ ಸಂಸ್ಥೆ ಈ ಹಿಂದೆ ನೀಡಿದ್ದ 'ಬಿಬಿಬಿ - 'ನ್ನು ಮುಂದುವರೆಸಿದೆ.

ಅಂತರರಾಷ್ಟ್ರೀಯ  ರೇಟಿಂಗ್ ಸಂಸ್ಥೆಗಳಲ್ಲಿ ಮೂಡೀಸ್,  ಸ್ಟ್ಯಾಂಡರ್ಡ್ ಅಂಡ್ ಪೂರ್, ಫಿಚ್  ಪ್ರಮುಖವಾಗಿ ಜಾಗತಿಕ ಮನ್ನಣೆ ಪಡೆದು ವಲಯವನ್ನು ನಿಯಂತ್ರಿಸುತ್ತಿವೆ. ಅಮೆರಿಕದ ಮೂಡೀಸ್ ಮತ್ತು ಸ್ಟ್ಯಾಂಡರ್ಡ್ ಅಂಡ್ ಪೂರ್ಸ್‌ಗಳು   ಅಗ್ರಮಾನ್ಯ ರೇಟಿಂಗ್ ಸಂಸ್ಥೆಗಳಾಗಿದ್ದು ಶೇ 75 ರಿಂದ 80 ರ ರೇಟಿಂಗ್ ಕಾರ್ಯವನ್ನು ತಮ್ಮದಾಗಿಸಿಕೊಂಡಿರುವ ಸಂಸ್ಥೆಗಳಾಗಿವೆ.

ಇತ್ತೀಚೆಗಷ್ಟೇ ಮೂಡೀಸ್ ಸಂಸ್ಥೆಯು ಭಾರತದ ಆರ್ಥಿಕತೆಯ ಬದಲಾವಣೆಗಳನ್ನು ಗಮನಿಸಿ   ರೇಟಿಂಗನ್ನು ಉನ್ನತೀಕರಿಸಿದ್ದು 'ಬಿಎಎ 3' ಮಟ್ಟದಿಂದ 'ಬಿಎಎ 2' ಮಟ್ಟಕ್ಕೆ ಏರಿಸಿದೆ. ಶುಕ್ರವಾರ ಮತ್ತೊಂದು ಪ್ರಮುಖ ರೇಟಿಂಗ್ ಸಂಸ್ಥೆ ಈ ಹಿಂದೆ ನೀಡಿದ್ದ 'ಬಿಬಿಬಿ - 'ನ್ನು ಮುಂದುವರೆಸಿದೆ.  2018-20 ರ ಅವಧಿಯಲ್ಲಿ ಭಾರತದ ಆರ್ಥಿಕತೆ  ಪ್ರಗತಿಯ ಹಾದಿಯಲ್ಲಿ ಇರುತ್ತದೆ ಎಂಬ ಸಕಾರಾತ್ಮಕ ವರದಿ ನೀಡಿದೆ.

ಒಂದು ದೇಶದ ಆರ್ಥಿಕ ಸ್ಥಿತಿ ಮಾಪನ ಮಾಡುವ ಎರಡು ಪ್ರಮುಖ ರೇಟಿಂಗ್ ಸಂಸ್ಥೆಗಳು ವಿಭಿನ್ನ ರೀತಿಯಲ್ಲಿ ರೇಟಿಂಗ್ ನೀಡಿರುವಾಗ ಒಂದು ಕಂಪನಿಯ ಸಾಧನೆಯ, ಭವಿಷ್ಯದ ಬಗ್ಗೆ ವಿಶ್ಲೇಷಿಸುವ  ಪ್ರಕ್ರಿಯೆಯು ಸಹ ವಿಭಿನ್ನವಾಗಿರುತ್ತವೆ.  ಆದ್ದರಿಂದ ಒಂದು ವಿಶ್ಲೇಷಣೆಯನ್ನು ಸಂಪೂರ್ಣವಾಗಿ ನಂಬಿ ನಿರ್ಧರಿಸದೆ ವಾಸ್ತವಾಂಶದ ಆಧಾರದ ಮೇಲೆ ಹೂಡಿಕೆದಾರರು ನಿರ್ಧರಿಸಬೇಕು.

ಸೋಮವಾರ ಸಂವೇದಿ ಸೂಚ್ಯಂಕ ಕೇವಲ 17 ಅಂಶಗಳ ಏರಿಕೆ ಕಂಡಿತು. ಈ ವಾತಾವರಣದಲ್ಲಿ ಮಿಂಚಿದ ಕಂಪನಿ ಎಂದರೆ ಬಾಂಬೆ ಬರ್ಮಾ ಟ್ರೇಡಿಂಗ್ ಕಾರ್ಪ್ ಲಿಮಿಟೆಡ್.  ಈ ಕಂಪನಿಯ ಷೇರಿನ ಬೆಲೆಯೂ ದಿನದ ಆರಂಭಿಕ ಕ್ಷಣಗಳಲ್ಲಿ ಹಿಂದಿನ ದಿನದ ₹1,458 ರ ಸಮೀಪದಿಂದ ₹1,426 ರವರೆಗೂ ಕುಸಿಯಿತು. ನಂತರ ದಿನದ ಮಧ್ಯಂತರದಲ್ಲಿ ₹1,537 ರವರೆಗೂ ಜಿಗಿತ ಕಂಡು ₹1,521 ರಲ್ಲಿ ಕೊನೆಗೊಂಡಿತು.

ಕ್ವೆಸ್ ಕಾರ್ಪ್ ಲಿಮಿಟೆಡ್ ಎಂಬ ಕೆಳಮಧ್ಯಮ ಶ್ರೇಣಿ ಕಂಪನಿಯ ಷೇರಿನ ಬೆಲೆ ಈ ವಾರ ₹820 ರ ಸಮೀಪದಿಂದ ₹977 ರವರೆಗೂ ಏರಿಕೆ ಪ್ರದರ್ಶಿಸಿ ₹925 ರ ಸಮೀಪ ವಾರಾಂತ್ಯ ಕಂಡಿದೆ. ಗುರುವಾರ ₹ 857 ರ ಸಮೀಪ ಕೊನೆಗೊಂಡಿದ್ದು ಶುಕ್ರವಾರ ಈ ಷೇರು ₹977 ರವರೆಗೂ ಏರಿಕೆ ಕಂಡಿರುವ ವೇಗದ ಹಿಂದೆ ಕಂಪನಿಯು ಶುಕ್ರವಾರ ರಿಟೇಲ್ ಹೂಡಿಕೆದಾರರಿಗೆ ಪ್ರತಿ ಷೇರಿಗೆ ₹800 ರ ಕನಿಷ್ಠ ಬೆಲೆಯಲ್ಲಿ ಷೇರು ವಿತರಣೆಯನ್ನು ಆಫರ್ ಫಾರ್ ಸೇಲ್ ಮೂಲಕ ಷೇರು ವಿನಿಮಯ ಕೇಂದ್ರದ ವಿಶೇಷ ಗವಾಕ್ಷಿ ಮೂಲಕ ವಿತರಣೆ ಮಾಡಿದೆ.

ಪೇಟೆಯ ಚಲನೆ ಎಷ್ಟು ಸಹಜವೋ ಅಥವಾ ಕಾಕತಾಳಿಯವೋ ಎಂಬುದು ನಿರ್ಧರಿಸು ಅಸಾಧ್ಯವಾಗಿದೆ.  ಬಾಲಕೃಷ್ಣ ಇಂಡಸ್ಟ್ರೀಸ್ ಕಂಪನಿ ಇತ್ತೀಚಿಗೆ 1:1 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆಯಲ್ಲದೆ ಷೇರುದಾರರಿಗೆ ಪ್ರತಿ ಷೇರಿಗೆ ₹2.50 ಯಂತೆ ಲಾಭಾಂಶ ಪ್ರಕಟಿಸಿ ನವೆಂಬರ್ 17ನಿಗದಿತ ದಿನವೆಂದು ಸಹ ಘೋಷಿಸಿತು.  ನವೆಂಬರ್ 16 ರಿಂದ ಲಾಭಾಂಶ ರಹಿತ ವಹಿವಾಟು ಆರಂಭವಾಗುವದೆಂದು ಪ್ರಕಟಿಸಿತು. ವಿಸ್ಮಯಕಾರಿ ಅಂಶ ಎಂದರೆ ನವೆಂಬರ್ 15 ರಂದು ಷೇರಿನ ಬೆಲೆಯು ₹2,247 ರ ವಾರ್ಷಿಕ ಗರಿಷ್ಠ ತಲುಪಿ ನಂತರದ ದಿನಗಳಲ್ಲಿ ಇಳಿಕೆ ಕಂಡು ₹2,060 ರವರೆಗೂ ತಲುಪಿದೆ. ಕೇವಲ ₹2.50 ರ ಲಾಭಾಂಶವು ಷೇರಿನ ಬೆಲೆಯನ್ನು ಸುಮಾರು ಇನ್ನೂರು  ರೂಪಾಯಿಗಳಷ್ಟು ಇಳಿಕೆ  ಕಾಣುವಂತೆ ಮಾಡಿರುವುದು ವಿಚಿತ್ರವೆನಿಸುತ್ತದೆ.

ಒಟ್ಟಾರೆ ಈ ವಾರ ಸಂವೇದಿ ಸೂಚ್ಯಂಕ 336 ಅಂಶಗಳನ್ನು ಸತತವಾದ ಏರಿಕೆಯಿಂದ ಪಡೆದುಕೊಂಡಿದೆ. ಮಧ್ಯಮ ಶ್ರೇಣಿ ಸೂಚ್ಯಂಕವು 2,621 ಅಂಶ ಮತ್ತು ಕೆಳಮಧ್ಯಮ ಶ್ರೇಣಿ ಸೂಚ್ಯಂಕ 419 ಅಂಶ ಏರಿಕೆ ಪಡೆದುಕೊಂಡವು. ಸ್ವದೇಶಿ ವಿತ್ತೀಯ ಸಂಸ್ಥೆಗಳು ₹2,925 ಕೋಟಿ ಮೌಲ್ಯದ ಹೂಡಿಕೆ ಮಾಡಿದರೆ ವಿದೇಶಿ ವಿತ್ತೀಯ ಸಂಸ್ಥೆಗಳು ₹1,870 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿವೆ. ಪೇಟೆಯ ಬಂಡವಾಳ ಮೌಲ್ಯವು ₹147 ಲಕ್ಷ ಕೋಟಿ ತಲುಪಿ ಸಾರ್ವಕಾಲಿಕ ದಾಖಲೆ ನಿರ್ಮಿಸಿ ವಾರಾಂತ್ಯ ಕಂಡಿತು.

ಬೋನಸ್ ಷೇರು:  ವಕ್ರಾಂಗಿ ಲಿಮಿಟೆಡ್ ಕಂಪನಿ 1:1 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ. ಮಹಿಂದ್ರಾ ಅಂಡ್ ಮಹಿಂದ್ರಾ ಕಂಪನಿ ವಿತರಿಸಲಿರುವ 1:1 ರ ಅನುಪಾತದ ಬೋನಸ್ ಷೇರಿಗೆ ಡಿಸೆಂಬರ್ 21 ನಿಗದಿತ ದಿನ.

ಹಕ್ಕಿನ ಷೇರು:  ಲಕ್ಷ್ಮಿ ವಿಲಾಸ್ ಬ್ಯಾಂಕ್ ತನ್ನ ಷೇರುದಾರರಿಗೆ 1:3 ಅನುಪಾತದಲ್ಲಿ ಪ್ರತಿ ಷೇರಿಗೆ ₹122  ರಂತೆ ಹಕ್ಕಿನ ಷೇರು ವಿತರಿಸಲು ಡಿಸೆಂಬರ್ 6 ನಿಗದಿತ ದಿನ.

ವ್ಯವಸ್ಥಿತ ಯೋಜನೆ: ಪ್ಯೂಚರ್‌ ರಿಟೇಲ್ ಲಿ., ಕಂಪನಿಯು ತನ್ನ ಹೋಮ್ ರಿಟೇಲ್ ವ್ಯವಹಾರವನ್ನು ಪ್ರಾಕ್ಸಿಸ್ ಹೋಮ್ ರಿಟೇಲ್ ಲಿಮಿಟೆಡ್ ಕಂಪನಿಗೆ ವರ್ಗಾಯಿಸಲು ಈ ತಿಂಗಳ 30 ನಿಗದಿತ ದಿನ. ಈ ಯೋಜನೆಯ ಪ್ರಕಾರ ₹ 2 ರ ಮುಖಬೆಲೆಯ ಪ್ರತಿ 20 ಫ್ಯೂಚರ್‌ ರಿಟೇಲ್ ಷೇರಿಗೆ ₹5 ರ ಮುಖಬೆಲೆಯ ಒಂದು ಪ್ರಾಕ್ಸಿಸ್ ಹೋಮ್ ರಿಟೇಲ್ ಷೇರನ್ನು ನೀಡಲಾಗುವುದು.

ಷೇರುಪೇಟೆಯ ವಹಿವಾಟಿಗೂ ಆಧಾರ್ ಕಡ್ಡಾಯ:  ಡಿಸೆಂಬರ್ ಅಂತ್ಯದೊಳಗೆ ಪ್ರತಿಯೊಂದು ಆರ್ಥಿಕ ಚಟುವಟಿಕೆಗೆ ಆಧಾರ್ ಸಂಖ್ಯೆ ನೋಂದಾಯಿಸಿಕೊಂಡಿರುವುದು ಕಡ್ಡಾಯವಾಗಿದೆ. ಅದರಂತೆ ಷೇರುಪೇಟೆಯ ವಹಿವಾಟಿಗೂ ಆಧಾರ್
ಕಡ್ಡಾಯವಾಗಿದ್ದು, ತಮ್ಮ ತಮ್ಮ ಬ್ರೋಕಿಂಗ್ ಸಂಸ್ಥೆಯಲ್ಲಿ ಆಧಾರ್ ಸಂಖ್ಯೆಯನ್ನು
ನೋಂದಾಯಿಸಿಕೊಳ್ಳಬೇಕು.

(ಮೊ: 9886313380,ಸಂಜೆ 4.30 ರನಂತರ)

ವಾರದ ವಿಶೇಷ /ಪ್ರಾಫಿಟ್ ಬುಕಿಂಗ್ ಏಕೆ ಬೇಕು?

ಈ ತಿಂಗಳ ಆದಿಯಲ್ಲಿ ಭಾರ್ತಿ ಏರ್ ಟೆಲ್ ಷೇರಿನ ಬೆಲೆಯು ವಾರ್ಷಿಕ ಗರಿಷ್ಠ ಮಟ್ಟಕ್ಕೆ ಜಿಗಿತ ಕಂಡಿತ್ತು. ನವೆಂಬರ್ 3 ರಂದು ₹565  ತಲುಪಿದ ಹಿನ್ನೆಲೆಯಲ್ಲಿ ಖತಾರ್‌ನ ಸಂಸ್ಥೆಯೊಂದು ತನ್ನಲ್ಲಿದ್ದ ಶೇ 5  ರ ಭಾಗಿತ್ವ ಅಂದರೆ 19.90 ಕೋಟಿ ಷೇರನ್ನು ಗಜಗಾತ್ರದ ವಹಿವಾಟಿನ ಮೂಲಕ ಪರಿಸ್ಥಿತಿಯ ಲಾಭ ಮಾಡಿಕೊಂಡಿತು.

21 ರಂದು ಸಿಟಿಗ್ರೂಪ್ ಗ್ಲೋಬಲ್ ಮಾರ್ಕೆಟ್ಸ್ ಮಾರಿಷಸ್ ಸಂಸ್ಥೆ 3.51 ಕೋಟಿ ಎಲ್ ಅಂಡ್ ಟಿ ಫೈನಾನ್ಸ್ ಹೋಲ್ಡಿಂಗ್ಸ್ ಷೇರನ್ನು ಮಾರಾಟ ಮಾಡಿತು.

ವಿತ್ತೀಯ ಸಂಸ್ಥೆಗಳ ಚಟುವಟಿಕೆ ಹೇಗಿರುತ್ತದೆ ಎಂಬುದಕ್ಕೆ ಶುಕ್ರವಾರ ಭಾರತೀಯ ಸ್ಟೇಟ್ ಬ್ಯಾಂಕ್ ಇಂಡಿಯಾ 10.14 ಲಕ್ಷ  ಶ್ರೀ ಅಧಿಕಾರಿ ಬ್ರದರ್ಸ್ ಟೆಲಿವಿಷನ್ ನೆಟ್ ವರ್ಕ್ ಲಿಮಿಟೆಡ್ ಷೇರನ್ನು  ₹14 ರಂತೆ ಮಾರಾಟ ಮಾಡಿದೆ. ಈ ಕಂಪನಿಯ ಷೇರಿನ ಬೆಲೆಯೂ ಶುಕ್ರವಾರ ₹13.45 ರ ವಾರ್ಷಿಕ ಕನಿಷ್ಠಕ್ಕೆ ಕುಸಿದು ಚೇತರಿಕೆ ಕಂಡಾಗ ಎಸ್‌ಬಿಐ ಷೇರು ಮಾರಾಟ ಮಾಡಿದೆ.

ಶ್ರೀ ಅಧಿಕಾರಿ ಬ್ರದರ್ಸ್ ಟೆಲಿವಿಷನ್ ನೆಟ್ ವರ್ಕ್ ಷೇರಿನ ಬೆಲೆಯು  ಜನವರಿ 2017 ರಲ್ಲಿ ₹303 ರ ವಾರ್ಷಿಕ ಗರಿಷ್ಠದಲ್ಲಿದ್ದು, ಕಳೆದ ಒಂದು ತಿಂಗಳಿನಲ್ಲಿ ₹38 ರಿಂದ ₹14 ರ ಸಮೀಪಕ್ಕೆ ಬಂದಾಗ ಗಜಗಾತ್ರದ  ಷೇರು ಮಾರಾಟ ಮಾಡಿರುವುದು ಬ್ಯಾಂಕ್ ಗೆ ಆಗುವ ಅಗಾಧ ಪ್ರಮಾಣದ ಹಾನಿ ಅರಿವಾಗಬಹುದು.   ಸಣ್ಣ ಹೂಡಿಕೆದಾರರು ಒಂದು ಸಂಸ್ಥೆಯ ಚಟುವಟಿಕೆಯನ್ನಾಧರಿಸಿ ತಮ್ಮ ಹೂಡಿಕೆ ಬಗ್ಗೆ ನಿರ್ಧರಿಸುವುದು ಸರಿಯಲ್ಲ.

ಬಾಟಾ ಇಂಡಿಯಾ ಕಂಪನಿಯು ಸಹ ವಾರದ ಕನಿಷ್ಠ ಬೆಲೆ ₹723 ಕ್ಕೆ ಕುಸಿಯಿತು.  ₹740 ರ ಸಮೀಪ ವಾರಾಂತ್ಯ ಕಂಡಿದೆ. ಇದರ ಹಿಂದೆ ಅಂದರೆ ಬುಧವಾರ ಷೇರಿನ ಬೆಲೆಯು ₹794 ರವರೆಗೂ ಜಿಗಿತ ಕಂಡಿತ್ತು.

ಒಂದೇ ದಿನ ₹745ಕುಸಿತಕ್ಕೊಳಗಾಗಿರುವುದು ಪೇಟೆಯಲ್ಲಿರುವ ತ್ವರಿತ ಹಣ ಮಾಡುವ ದಾಹಕ್ಕೆ ಅಗ್ರಮಾನ್ಯ ಕಂಪನಿಗಳು ಬಲಿಯಾಗುತ್ತಿರುವುದು ಹೂಡಿಕೆ ಎಂಬ ಪದದ ಅರ್ಥವನ್ನೇ ಬದಲಿಸುತ್ತಿರುವಂತಿದೆ.

ಹಿಂದಿನ ವಾರ ₹402 ರ ವಾರ್ಷಿಕ ಗರಿಷ್ಠ ತಲುಪಿ ವಿಜೃಂಭಿಸಿದ ರೇನ್ ಇಂಡಸ್ಟ್ರೀಸ್ ಷೇರಿನ ಬೆಲೆಯು ಈ ವಾರ  ₹294 ರವರೆಗೂ ಕೆಳಗಿನ ಅವರಣಮಿತಿಯೊಂದಿಗೆ, ಷೇರುದಾರರಿಗೆ ಹೊರಬರುವ ಅವಕಾಶ  ನೀಡದೆ, ಕುಸಿಯಿತು. ಅಲ್ಲಿಂದ ದಿಸೆ ಬದಲಿಸಿ ಶುಕ್ರವಾರ ₹344 ರವರೆಗೂ ಏರಿಕೆ ಕಂಡು ₹327 ರ ಸಮೀಪ ವಾರಾಂತ್ಯಕಂಡಿದೆ. ಇಷ್ಟು ತ್ವರಿತ ಬದಲಾವಣೆಯನ್ನು ಪ್ರದರ್ಶಿಸುವ ಈ ಪೇಟೆಯಲ್ಲಿ ಚಟುವಟಿಕೆ ನಡೆಸುವಾಗ ವಾಸ್ತವಿಕ ಸನ್ನಿವೇಶ ಗಮನಿಸುವುದು ಅತ್ಯವಶ್ಯಕ.

ವ್ಯಾಲ್ಯೂ ಪಿಕ್ - ಪ್ರಾಫಿಟ್ ಪ್ರಕ್ರಿಯೆ ಎಷ್ಟು ವೇಗವಾಗಿ ನಡೆಯುತ್ತಿದೆ ಎಂದರೆ ಕಲ್ಪನೆಯನ್ನು ಮೀರಿಸುವ ವೇಗದಲ್ಲಿದೆ.  ಬುಧವಾರ ಕೆಳಮಧ್ಯಮ ಶ್ರೇಣಿ ಕಂಪನಿ ಗ್ರಾಫೈಟ್ ಇಂಡಿಯಾ ಲಿಮಿಟೆಡ್ ₹530 ರ ಸಮೀಪದಿಂದ ₹580 ರವರೆಗೂ ಜಿಗಿತ ಕಂಡಿತು. ನಂತರದ ದಿನ ₹600 ರ ಗಡಿ ದಾಟಿತಾದರೂ ಅಲ್ಲಿಂದ ₹579 ರ ಸಮೀಪ ವಾರಾಂತ್ಯ ಕಂಡಿತು. ಇಂತಹ ವೇಗದ ಏರಿಳಿತಗಳಲ್ಲಿ ಚಟುವಟಿಕೆ ನಡೆಸುವಾಗ ಹೆಚ್ಚಿನ ಎಚ್ಚರ ಅಗತ್ಯ.

Comments
ಈ ವಿಭಾಗದಿಂದ ಇನ್ನಷ್ಟು
ಒತ್ತಡದಲ್ಲಿ ಷೇರುಪೇಟೆ ವಹಿವಾಟು

ಷೇರು ಸಮಾಚಾರ
ಒತ್ತಡದಲ್ಲಿ ಷೇರುಪೇಟೆ ವಹಿವಾಟು

12 Mar, 2018
ಹೂಡಿಕೆದಾರರಲ್ಲಿ ಮೂಡಿದ ಗೊಂದಲ

ಷೇರು ಸಮಾಚಾರ
ಹೂಡಿಕೆದಾರರಲ್ಲಿ ಮೂಡಿದ ಗೊಂದಲ

5 Mar, 2018
ಎಣಿಕೆಗೆ ನಿಲುಕದ ಪೇಟೆಯ ಚಲನೆ

ಷೇರು ಸಮಾಚಾರ
ಎಣಿಕೆಗೆ ನಿಲುಕದ ಪೇಟೆಯ ಚಲನೆ

26 Feb, 2018

ಷೇರು ಸಮಾಚಾರ
ಲಾಭ ನಗದೀಕರಣಕ್ಕೆ ದೊರೆತ ಅವಕಾಶ

ಷೇರುಪೇಟೆಯಲ್ಲಿನ ಕೆಲವು ಬೆಳವಣಿಗೆಗಳು ಕೇವಲ ಭಾಷಣ, ವಿಶ್ಲೇಷಣೆಗೆ ಮಾತ್ರ ಸೀಮಿತವಾಗಿದ್ದು ಅವನ್ನು ಕೈಗೆ ಎಟುಕಿಸಿಕೊಳ್ಳಲು ಸಾಧ್ಯವಿಲ್ಲದಂತಿರುತ್ತವೆ.

18 Feb, 2018
ಸಣ್ಣ ಹೂಡಿಕೆದಾರರಿಗೆ ಉತ್ತಮ ಅವಕಾಶ

ಷೇರು ಸಮಾಚಾರ
ಸಣ್ಣ ಹೂಡಿಕೆದಾರರಿಗೆ ಉತ್ತಮ ಅವಕಾಶ

12 Feb, 2018