ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ಮಂತ್ರ ಉದ್ದೀಪನ ತಂತ್ರ

Last Updated 26 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಕ್ರೀಡಾಪಟುಗಳು ಮತ್ತು ಅವರನ್ನು ಕಣಕ್ಕೆ ಇಳಿಸುವವರಿಗೆ ಈಗ ಸ್ಪರ್ಧೆಯ ವೇಳೆ ಗೆಲುವು ಒಂದೇ ಮಂತ್ರ. ಸಮಾಜದಲ್ಲಿ ಆಗಿರುವ ಬದಲಾವಣೆಯಿಂದಾಗಿ ಕ್ರೀಡೆ ಈಗ ಹಣ ಗಳಿಸುವ, ಖ್ಯಾತಿ ತಂದುಕೊಡುವ, ಉದ್ಯೋಗ–ಉತ್ತರೋತ್ತರ ಶ್ರೇಯಸ್ಸಿಗೆ ದಾರಿ ಮಾಡಿಕೊಡುವ ಸಾಧನವಾಗಿ ಬದಲಾಗಿದೆ.

ಸಾಧನೆಯ ಶಿಖರವೇರಬೇಕಾದರೆ ಗೆಲುವು ಮುಖ್ಯ. ಹೀಗಾಗಿ ಜಯಲಕ್ಷ್ಮಿಯನ್ನು ಒಲಿಸಿಕೊಳ್ಳಲು ಕ್ರೀಡಾಪಟುಗಳು ಅಡ್ಡದಾರಿ ಹಿಡಿಯುವುದು ಕೂಡ ಹೆಚ್ಚಾಗಿದೆ. ಈ ಅಡ್ಡ ದಾರಿಗಳಲ್ಲಿ ಪ್ರಮುಖವಾದದ್ದು, ಉದ್ದೀಪನ ಮದ್ದು.

ಉದ್ದೀಪನ ಮದ್ದು ಸೇವನೆಯಿಂದ ಪ್ರಶಸ್ತಿ ಗೆದ್ದರೂ ಗೆಲ್ಲಬಹುದು. ಖ್ಯಾತಿಯನ್ನೂ ಪಡೆಯಬಹುದು; ಹಣ ಗಳಿಸಬಹುದು. ಆದರೆ ಈ ಮದ್ದು ದೈಹಿಕ–ಮಾನಸಿಕ ಆರೋಗ್ಯದ ಮೇಲೆ ಉಂಟುಮಾಡುವ ದುಷ್ಪರಿಣಾಮ ಮತ್ತು ಸಿಕ್ಕಿ ಬಿದ್ದರೆ ವ್ಯಕ್ತಿತ್ವದ ಮೇಲೆ ಮಾಡುವ ಗಾಯ ಸಣ್ಣದೇನಲ್ಲ.

ದ್ದೀಪನ ಮದ್ದು ಸೇವನೆಯಿಂದ ಗೈನಾಕೊಮಾಸ್ಟಿಯಾ (ಎದೆ ಉಬ್ಬುವುದು), ಬೆಳವಣಿಗೆ ಕುಂಠಿತಗೊಳ್ಳುವುದು, ಕೂದಲು ಉದುರುವುದು, ಆಕ್ರಮಣಕಾರಿ ಸ್ವಭಾವ ಒಳಗೊಂಡಂತೆ ವ್ಯಕ್ತಿತ್ವದಲ್ಲಿ ಬದಲಾವಣೆಯಾಗುವುದು ಮುಂತಾದ ದುಷ್ಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ.

20 ಮತ್ತು 30 ವರ್ಷದೊಳಗಿನವರು ಉದ್ದೀಪನ ಮದ್ದು ಸೇವಿಸಿದರೆ ತೀವ್ರವಾದ ಹೃದಯ ಕಾಯಿಲೆಗೆ ಒಳಗಾಗಿ ಸಾಯುವ ಸಾಧ್ಯತೆ ಹೆಚ್ಚಿದೆ ಎಂದು ಇಂಗ್ಲೆಂಡ್‌ನಲ್ಲಿ ನಡೆದ ಅಧ್ಯಯನ ವರದಿಯೊಂದು ತಿಳಿಸಿದೆ.

ಉದ್ದೀಪನ ಮದ್ದು ಸೇವನೆಯಿಂದ ಆರೋಗ್ಯಕ್ಕೆ ಆಗುವ ದುಷ್ಪರಿಣಾಮದಿಂದಾಗಿ ಕ್ರೀಡಾಪಟುವಿನ ಸಾಮರ್ಥ್ಯದ ಮೇಲೆಯೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂಬುದು ಕೂಡ ಅಧ್ಯಯನಗಳಿಂದ ತಿಳಿದು ಬಂದಿದೆ.

‘ಆರೋಗ್ಯ ಸಮಸ್ಯೆಗಳ ಪರಿಹಾರಕ್ಕಾಗಿಯೇ ಅನೇಕ ಬಾರಿ ಮದ್ದು ಸೇವಿಸಲಾಗುತ್ತದೆ. ವಿಶೇಷವೆಂದರೆ ಈ ಮದ್ದು ಬಹುತೇಕ ಸಂದರ್ಭದಲ್ಲಿ ದೇಹದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಿ ವ್ಯಕ್ತಿಯ ಚಟುವಟಿಕೆಯನ್ನು ಕುಂಠಿತಗೊಳಿಸುತ್ತದೆ’ ಎಂದು ಅಧ್ಯಯನ ತಂಡದ ಮುಖ್ಯಸ್ಥ, ನ್ಯೂ ಸೌಥ್‌ವೇಲ್ಸ್‌ ವಿಶ್ವವಿದ್ಯಾಲಯದ ಶೇನ್ ಡಾರ್ಕ್ ಅಭಿಪ್ರಾಯಪಡುತ್ತಾರೆ.

ನ್ಯೂಸೌಥ್‌ ವೇಲ್ಸ್‌ನಲ್ಲಿ ಕಳೆದ 17 ವರ್ಷಗಳಲ್ಲಿ ಸಾವಿಗೀಡಾದ 22 ಮತ್ತು 48 ವರ್ಷದೊಳಗಿನವರಲ್ಲಿ 24 ಮಂದಿಯ ದೇಹದಲ್ಲಿ ಉದ್ದೀಪನ ಮದ್ದು ಇರುವುದು ಪತ್ತೆಯಾಗಿದೆ.

ಇವರ ಪೈಕಿ ಹೆಚ್ಚಿನವರು ಕ್ರೀಡೆಯಲ್ಲಿ ತೊಡಗಿಸಿಕೊಂಡವರು, ಮತ್ತು ದೇಹಾದರ್ಢ್ಯಪಟುಗಳಾಗಿದ್ದರು. ಮಾಂಸಖಂಡಗಳ ಅತಿಯಾದ ಬೆಳವಣಿಗೆಗಾಗಿ ಅವರು ಉದ್ದೀಪನ ಮದ್ದು ಸೇವನೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

‘ದೇಹವನ್ನು ಮತ್ತು ಆ ಮೂಲಕ ಹೃದಯವನ್ನು ‘ದಂಡಿಸಿ’ ಸಾವನ್ನು ಬರಮಾಡಿಕೊಳ್ಳುವವರಲ್ಲಿ ಪುರುಷರೇ ಮುಂದು. ಉದ್ದೀಪನ ಮದ್ದು ಸೇವಿಸುವ 30ರ ಆಸುಪಾಸಿನ ವಯಸ್ಸಿನವರ ಹೃದಯದ ಆರೋಗ್ಯ ತೀವ್ರ ಕಳವಳಕಾರಿಯಾಗಿದೆ’ ಎಂದು ಡಾರ್ಕ್‌ ಹೇಳುತ್ತಾರೆ.

ಕ್ರೀಡಾಪಟುಗಳ ಪೈಕಿ ಹೆಚ್ಚಿನವರು ನಿವೃತ್ತರಾದ ನಂತರ ಚಟುವಟಿಕೆಯನ್ನು ನಿಲ್ಲಿಸುತ್ತಾರೆ. ಆಟ ಆಡದೆ, ದೈಹಿಕ ಕಸರತ್ತು ನಡೆಸದೆ, ಮೈದಾನದ ಕಡೆಗೆ ಹೊರಳಿ ನೋಡದೆ ಕಾಲ ಕಳೆಯುತ್ತಾರೆ. ಆದರೆ ಉದ್ದೀಪನ ಮದ್ದು ಸೇವನೆಯ ಅಭ್ಯಾಸ ಬಿಡಲು ಅವರಿಗೆ ಆಗುವುದಿಲ್ಲ. ಇದು ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ. ಅನಾಡ್ರೋಲ್–50, ಟೆಸ್ಟೊಸ್ಟಿರಾನ್‌, ಡಯನಬಲ್‌, ಪ್ಯಾರಾಬೊಲನ್‌, ಹಾಲೊಟೆಸ್ಟಿನ್‌, ವಿನ್‌ಸ್ಟ್ರಾಲ್‌, ಅನಾವರ್‌, ಮ್ಯಾಕ್ಸಬೊಲಿನ್‌, ಪ್ರಿಮೊಬೊಲನ್‌ ಮತ್ತು ಡಿಕಾ ಡ್ಯುರಾಬಲಿನ್‌ ಮುಂತಾದವು ಆರೋಗ್ಯವನ್ನು ಛಿದ್ರ ಮಾಡಬಲ್ಲ ‘ತಾಕತ್ತು’ ಹೊಂದಿವೆ.

ಭಾರತದಲ್ಲೂ ಕ್ರೀಡಾಪಟುಗಳು ಉದ್ದೀಪನ ಮದ್ದು ಸೇವಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಈ ವರ್ಷ ಉದ್ದೀಪನ ಮದ್ದು ಸೇವನೆ ಮಾಡಿರುವುದು ಸಾಬೀತಾದ ಪ್ರಕರಣಗಳ ಸಂಖ್ಯೆಯಲ್ಲಿ ಭಾರತಕ್ಕೆ ವಿಶ್ವದಲ್ಲೇ ಮೂರನೇ ಸ್ಥಾನವಿದೆ. ಯುವ ಮನಸ್ಸುಗಳಿಗೆ ಸೂಕ್ತ ತಿಳಿವಳಿಕೆ ಮೂಡಿಸುವ ಕಾರ್ಯ ನಡೆದರೆ ಇದನ್ನು ತಡೆಗಟ್ಟುವುದು ಸುಲಭ.

**

ಕ್ರೀಡೆ, ಹೃದಯ ಮತ್ತು ದಿಢೀರ್‌ ಮರಣ

ಉದ್ದೀಪನ ಮದ್ದು ಸೇವಿಸದ ಕ್ರೀಡಾಪಟುಗಳು ಕೂಡ ದಾರುಣ, ದಿಢೀರ್‌ ಮರಣ ಹೊಂದಿದ ಉದಾಹರಣೆಗಳು ಸಾಕಷ್ಟು ಇವೆ. ವಿದೇಶದಲ್ಲಿ ಮಾತ್ರವಲ್ಲ, ಭಾರತದಲ್ಲೂ ಇಂಥ ಪ್ರಕರಣಗಳು ಸಾಕಷ್ಟು ಕಂಡುಬಂದಿವೆ. ಇದಕ್ಕೆ ವ್ಯಕ್ತಿಯ ಹೃದಯದಲ್ಲಿ ಕಂಡುಬರುವ ಸಮಸ್ಯೆಗಳೇ ಕಾರಣ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಕಳೆದ ವರ್ಷ ನಡೆದ ಕ್ರೀಡಾಕೂಟವೊಂದರಲ್ಲಿ ಪಾಲ್ಗೊಂಡ ಬಾಲಕನೊಬ್ಬ ಮೈದಾನದಲ್ಲೇ ಕುಸಿದು ಬಿದ್ದು ಸಾವಿಗೀಡಾಗಿದ್ದ. ಒಲಿಂಪಿಕ್ಸ್ ಸೇರಿದಂತೆ ದೊಡ್ಡ ಮಟ್ಟದ ಕ್ರೀಡಾಕೂಟಗಳಲ್ಲೂ ಯಮರಾಯ ಮರಣಮೃದಂಗ ಬಾರಿಸಿದ ಪ್ರಸಂಗಗಳು ಸಾಕಷ್ಟು ಇವೆ.

ರಕ್ತನಾಳಗಳು ಮತ್ತು ಹೃದಯದಲ್ಲಿ ’ಇಕ್ಕಟ್ಟು’ ನಿರ್ಮಾಣವಾಗುವುದೇ ಇಂಥ ಸಾವಿಗೆ ಕಾರಣ. ಈ ಸಮಸ್ಯೆಗೆ ಲಕ್ಷಣಗಳು ಇಲ್ಲದಿರುವುದು ವೈದ್ಯಲೋಕಕ್ಕೆ ಸವಾಲಾಗಿದೆ. ಹೃದಯದ ಸ್ನಾಯು ನಿಗದಿಗಿಂತ ಹೆಚ್ಚು ಉಬ್ಬುವುದು ಮತ್ತು ಅದರ ಪರಿಣಾಮ ಹೃದಯ ಬಡಿತದಲ್ಲಿ ಉಂಟಾಗುವ ಏರಿಳಿತ ಇಂಥ ಸಾವಿಗೆ ಪ್ರಮುಖ ಕಾರಣ. ಹೃದಯಕ್ಕೆ ರಕ್ತ ಸಾಗಿಸುವ ನಾಳಗಳಲ್ಲಿನ ತೊಂದರೆಯೂ ಕೆಲವೊಮ್ಮೆ ಕ್ಷಿಪ್ರ ಸಾವಿಗೆ ಕಾರಣವಾಗುತ್ತದೆ.

ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಅವರನ್ನು ಕ್ರೀಡಾ ವೈದ್ಯರು ಪರೀಕ್ಷೆಗೆ ಒಳಪಡಿಸುತ್ತಾರೆ. ಹೃದಯಾಘಾತ, ಹೃದಯಸ್ತಂಬನ ಮತ್ತಿತರ ಕಾರಣಗಳಿಂದ ಕುಟುಂಬದಲ್ಲಿ ಯಾರಾದರೂ ಸಾವಿಗೀಡಾಗಿದ್ದರೆ ಅಂಥ ಕ್ರೀಡಾಪಟುಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾದ ಅಗತ್ಯವಿದೆ. ಎದೆ ನೋವು, ಏದುಸಿರು ಬಿಡುವುದು, ತಲೆ ಸುತ್ತು, ಹೃದಯಬಡಿತ ಹೆಚ್ಚಾಗುವುದು, ಉಸಿರಾಟದ ತೊಂದರೆ ಇತ್ಯಾದಿ ಕಾಣಿಸಿಕೊಂಡರೆ ಕ್ರೀಡಾಪಟುಗಳು ತಕ್ಷಣ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT