ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ನಿರೀಕ್ಷೆಯ ಹೊಸ್ತಿಲಲ್ಲಿ ಮಹಿಳಾ ಕ್ರಿಕೆಟ್‌...

Last Updated 26 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನಾಲ್ಕು ವರ್ಷಗಳ ಹಿಂದೆ ಭಾರತದಲ್ಲಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ ನಡೆದಿತ್ತು. ಮುಂಬೈನ ಬ್ರೆಬೋರ್ನ್‌, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ಮತ್ತು ಮಿಡ್ಲ್‌ ಇನ್‌ಕಮ್‌ ಗ್ರೂಪ್‌ ಕ್ಲಬ್‌ನ ಮೈದಾನದಲ್ಲಿ ಪಂದ್ಯಗಳು ನಡೆದಿದ್ದವು. ಕಟಕ್‌ನ ಬಾರಾಬತಿ ಹಾಗೂ ಡ್ರಿಮ್ಸ್‌ ಕ್ರಿಕೆಟ್‌ ಮೈದಾನದಲ್ಲಿಯೂ ಪಂದ್ಯಗಳು ಆಯೋಜನೆಯಾಗಿದ್ದವು. ಇವೆಲ್ಲವೂ ಚಿಕ್ಕ ಚಿಕ್ಕ ಕ್ರೀಡಾಂಗಣಗಳೇ. ಆದರೂ ಪಂದ್ಯಗಳನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಇರಲಿಲ್ಲ.

ಕ್ರಿಕೆಟ್‌ ಪಾಲಿಗೆ ಒಲಿಂಪಿಕ್ಸ್‌ ಎನಿಸಿರುವ ವಿಶ್ವಕಪ್‌ನ ಪಂದ್ಯಗಳನ್ನು ನೋಡಲು ಜನರೇ ಇಲ್ಲವೆಂದರೆ ಅಚ್ಚರಿಯಲ್ಲವೇ? ಅದೇ ಟೂರ್ನಿ ಪುರುಷರದ್ದಾಗಿದ್ದರೆ ಟಿಕೆಟ್‌ಗಾಗಿ ಹಗಲಿರುಳು ಎನ್ನದೇ ಕಾಯುತ್ತಿದ್ದರು. ಎಷ್ಟೇ ಹಣ ಖರ್ಚಾದರೂ ಟಿಕೆಟ್‌ ಗಿಟ್ಟಿಸುತ್ತಿದ್ದರು. ಮಹಿಳಾ ಪಂದ್ಯಗಳನ್ನು ನೋಡಲು ಉಚಿತ ಪ್ರವೇಶವಿದ್ದರೂ ಹೆಚ್ಚು ಜನ ಮೈದಾನದ ಕಡೆ ಸುಳಿಯುವುದೇ ಇಲ್ಲ. ಏಕೆ ಹೀಗೆ? ಈ ತಾರತಮ್ಯ ಹೋಗುವುದು ಯಾವಾಗ?

ಭಾರತ ತಂಡದ ಮಾಜಿ ನಾಯಕಿ ಕರ್ನಾಟಕದ ಮಮತಾ ಮಾಬೆನ್‌ ಅವರ ಮುಂದೆ ಈ ಪ್ರಶ್ನೆ ಇಟ್ಟಾಗ ‘ಜನರೇ ಮಹಿಳಾ ಕ್ರಿಕೆಟ್‌ ಗೆಲ್ಲಿಸಬೇಕು. ಜನ ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ’ ಎಂದು ಉತ್ತರಿಸಿದರು.

ಅವರ ಮಾತಿನಲ್ಲಿಯೂ ನಿಜವಿದೆ. ಪುರುಷರ ಕ್ರಿಕೆಟ್‌ ಈಗ ಬೆಳೆದಿರುವ ಎತ್ತರಕ್ಕೆ ಜನರ ಪ್ರೀತಿ ಮತ್ತು ಅಭಿಮಾನ ಕಾರಣ. ಅದೇ ರೀತಿ ಮಹಿಳಾ ಕ್ರಿಕೆಟ್‌ಗೂ ಅಭಿಮಾನಿಗಳ ಬೆಂಬಲ ಲಭಿಸಿದ್ದರೆ ವನಿತೆಯರಿಗೆ ಈಗಿರುವುದಕ್ಕಿಂತ ಇನ್ನೂ ಹೆಚ್ಚಿನ ತಾರಾ ಪಟ್ಟ ಸಿಗುತ್ತಿತ್ತು. ಅವರ ಶ್ರಮ ಸಾರ್ಥಕ ಎನಿಸುತ್ತದೆ. ಇದೆಲ್ಲವೂ ಸರಿ. ಆದರೆ ಭಾರತದಲ್ಲಿ ಮಹಿಳಾ ತಂಡದವರಿಗೆ ಹೆಚ್ಚು ಟೂರ್ನಿಗಳೇ ನಡೆಯುವುದಿಲ್ಲವಲ್ಲ?

ಮಹಿಳಾ ತಂಡಕ್ಕೆ ಹೆಚ್ಚು ಅಂತರರಾಷ್ಟ್ರೀಯ ಮತ್ತು ದೇಶಿ ಟೂರ್ನಿಗಳು ಇಲ್ಲ ಎನ್ನುವ ಅಂಶ ಬಿಸಿಸಿಐಗೂ ಗೊತ್ತಿದೆ. ಅದರಲ್ಲಿಯೂ ಕಳೆದ 15 ವರ್ಷಗಳಿಂದ ‘ಎ’ ದರ್ಜೆಯ ಟೂರ್ನಿಗಳಂತೂ ನಡೆದೇ ಇಲ್ಲ. ಆದ್ದರಿಂದ ಈ ಬಾರಿಯ ಏಕದಿನ ವಿಶ್ವಕಪ್‌ ಟೂರ್ನಿಯ ಬಳಿಕ ಬಿಸಿಸಿಐ ಕ್ರಿಕೆಟ್‌ ಆಡಳಿತ ಸಮಿತಿ ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ಹಲವು ಯೋಜನೆಗಳನ್ನು ರೂಪಿಸಿದೆ.

(ಹರ್ಮನ್ ಪ್ರೀತ್ ಕೌರ್‌)

19 ಮತ್ತು 23 ವರ್ಷದ ಒಳಗಿನವರಿಗೆ ಬಿಸಿಸಿಐ ಪ್ರತಿ ವರ್ಷ ದೇಶಿ ಟೂರ್ನಿಗಳನ್ನು ನಡೆಸುತ್ತಿದೆ. ಈ ವರ್ಷದಿಂದ 16 ವರ್ಷದ ಒಳಗಿನವರಿಗೂ ಪ್ರತ್ಯೇಕ ಟೂರ್ನಿ ಆರಂಭಿಸಿದೆ. ಮುಂದಿನ ವರ್ಷ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿ ಮೊದಲ ಬಾರಿಗೆ ಭಾರತ ಮತ್ತು ಬಾಂಗ್ಲಾದೇಶ ‘ಎ’ ತಂಡಗಳ ನಡುವೆ ಏಕದಿನ ಮತ್ತು ಟಿ–20 ಸರಣಿಗಳನ್ನು ಆಯೋಜಿಸಿದೆ. 2018ರಲ್ಲಿ ಐಸಿಸಿ ಏಕದಿನ ಚಾಂಪಿಯನ್‌ಷಿಪ್‌ ನಡೆಯಲಿದೆ.

ಐಸಿಸಿ ಮಾನ್ಯತೆ ಹೊಂದಿರುವ ಎಲ್ಲಾ ದೇಶಗಳ ಕ್ರಿಕೆಟ್‌ ಮಂಡಳಿಗಳು ಒಂದು ವರ್ಷದ ಅವಧಿಯಲ್ಲಿ ಪ್ರತಿ ದೇಶದ ಎದುರು ಕನಿಷ್ಠ ಒಂದು ಬಾರಿಯಾದರೂ ದ್ವಿಪಕ್ಷೀಯ ಸರಣಿ ಆಡಬೇಕು ಎನ್ನುವ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರಲು ಐಸಿಸಿ ಚಿಂತಿಸುತ್ತಿದೆ.

ಆದ್ದರಿಂದ ಬಿಸಿಸಿಐ ಎಲ್ಲಾ ದೇಶಗಳ ಕ್ರಿಕೆಟ್‌ ಮಂಡಳಿಗಳಿಗೆ ಪತ್ರ ಬರೆದು ಸರಣಿ ಆಡಲು ಆಹ್ವಾನಿಸಿದೆ. ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ತಂಡಗಳು ಇದಕ್ಕೆ ಸಾಕಾರಾತ್ಮಕವಾಗಿ ಸ್ಪಂದಿಸಿವೆ. 2006ರಲ್ಲಿ ಮಹಿಳಾ ಕ್ರಿಕೆಟ್‌ ಬಿಸಿಸಿಐ ಸುಪರ್ದಿಗೆ ಬಂದ ಬಳಿಕ ಆರಂಭದ ವರ್ಷಗಳಲ್ಲಿ ಹೇಳಿಕೊಳ್ಳುವಷ್ಟು ಬದಲಾವಣೆ ಕಂಡುಬಂದಿರಲಿಲ್ಲ. ಆದರೆ ಇತ್ತೀಚೆಗೆ ನಾಲ್ಕೈದು ವರ್ಷಗಳಿಂದ ಮೊದಲಿಗಿಂತಲೂ ಸುಧಾರಣೆಯಾಗಿದೆ. ಆಟಗಾರ್ತಿಯರು ನೀಡುವ ಪ್ರದರ್ಶನದ ಆಧಾರದ ಮೇಲೆ ಅವರಿಗೆ ಬಿಸಿಸಿಐ ‘ಗ್ರೇಡ್‌’ ನಿಯಮ ಜಾರಿಗೆ ತಂದು ಗುತ್ತಿಗೆ ಪದ್ಧತಿ ಅನುಸಾರವಾಗಿ ವೇತನ ನೀಡುತ್ತಿದೆ. ಇದರಿಂದ ಮಹಿಳಾ ಕ್ರಿಕೆಟ್‌ನಲ್ಲಿ ವೃತ್ತಿಪರತೆ ಹೆಚ್ಚಾಗುತ್ತಿದೆ. ಆದರೆ ಪುರುಷರ ಕ್ರಿಕೆಟ್‌ಗೆ ಸರಿಸಮಾನವಾಗಿ ಬೆಳೆಯುವುದು ಸದ್ಯಕ್ಕಂತೂ ದೂರದ ಮಾತು.

(ಜೂಲನ್ ಗೋಸ್ವಾಮಿ)

ಇದರ ಬಗ್ಗೆ ಮಾತನಾಡಿರುವ ಮಮತಾ ‘ಪುರುಷರ ಮತ್ತು ಮಹಿಳೆಯರ ಕ್ರಿಕೆಟ್‌ಗೆ ಹೋಲಿಕೆ ಮಾಡುವುದು ಸರಿ ಅಲ್ಲ. ಇವೆರೆಡೆರ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಖುಷಿಯ ವಿಚಾರವೆಂದರೆ ಮೊದಲಿಗಿಂತಲೂ ನಾವು ಒಂದಷ್ಟು ಹೆಜ್ಜೆ ಈಗ ಮುಂದೆ ಇದ್ದೇವೆ. ಮಹಿಳಾ ಪಂದ್ಯಗಳನ್ನು ನೋಡುವವರ ಸಂಖ್ಯೆ ಹೆಚ್ಚಾಗಿದೆ. ಬಿಸಿಸಿಐ ಕೂಡ ಮಹಿಳಾ ಕ್ರಿಕೆಟ್‌ ಪ್ರಗತಿಗೆ ಯೋಜನೆಗಳನ್ನು ರೂಪಿಸಿದೆ’ ಎಂದರು.

‘ಈ ಬಾರಿಯ ವಿಶ್ವಕಪ್‌ನಲ್ಲಿ ರನ್ನರ್‌ ಅಪ್‌ ಆದ ಬಳಿಕ ಆಟಗಾರ್ತಿಯರಿಗೆ ಸಿಕ್ಕ ಪ್ರಚಾರ, ಪ್ರಾಮುಖ್ಯತೆ ನೋಡಿದರೆ ಗೊತ್ತಾಗುತ್ತದೆ. ತಂಡದಲ್ಲಿದ್ದ ಆಟಗಾರ್ತಿಯರನ್ನು ಈಗ ಎಲ್ಲರೂ ಗುರುತಿಸುತ್ತಾರೆ. ತಮ್ಮೂರಿಗೆ ಕರೆಯಿಸಿ ಸನ್ಮಾನಿಸುತ್ತಿದ್ದಾರೆ. ಇದರಿಂದ ಹೊಸಬರು ವೃತ್ತಿಪರ ಕ್ರಿಕೆಟಿಗರಾಗಲು ಹಾತೊರೆಯುತ್ತಿದ್ದಾರೆ. ಕ್ಲಬ್‌ಗಳಲ್ಲಿಯೂ ಆಟಗಾರ್ತಿಯರ ಸಂಖ್ಯೆ ಹೆಚ್ಚಾಗುತ್ತಿದೆ’ ಎಂದೂ ಅವರು ಹೇಳಿದರು.

**

ಹುಬ್ಬಳ್ಳಿಯಲ್ಲಿ ಮೊದಲ ಬಾರಿಗೆ ಟೂರ್ನಿ

ಮಹಿಳಾ ತಂಡಗಳ ನಡುವೆ ‘ಎ’ ಮಾದರಿಯ ಟೂರ್ನಿ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ಆಯೋಜನೆಯಾಗಿದೆ. ಭಾರತ ಮತ್ತು ಬಾಂಗ್ಲಾದೇಶ ‘ಎ’ ತಂಡಗಳ ನಡುವೆ ಮೂರು ಏಕದಿನ ಮತ್ತು ಮೂರು ಟ್ವೆಂಟಿ–20 ಪಂದ್ಯಗಳ ಸರಣಿ ನಡೆಯಲಿದೆ. ಡಿ. 2ರಂದು ಮೊದಲ ಪಂದ್ಯ ನಡೆಯಲಿದೆ. ಏಕದಿನ ಪಂದ್ಯಗಳಿಗೆ ಹುಬ್ಬಳ್ಳಿಯ ರಾಜನಗರದಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಟಿ–20 ಪಂದ್ಯಗಳು ಬೆಳಗಾವಿಯಲ್ಲಿ ಜರುಗಲಿವೆ.

ಇದೇ ವರ್ಷದ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ರನ್ನರ್ಸ್‌ ಅಪ್‌ ಆಗಿತ್ತು. ಆಗ ತಂಡದಲ್ಲಿದ್ದ ವಿಜಯಪುರದ ರಾಜೇಶ್ವರಿ ಗಾಯಕವಾಡ್‌, ಕಡೂರಿನ ವೇದಾ ಕೃಷ್ಣಮೂರ್ತಿ ಅವರಿಂದ ಪ್ರಭಾವಿತರಾದ ಅನೇಕ ಯುವತಿಯರು ತಾವೂ ಕ್ರಿಕೆಟ್‌ನಲ್ಲಿ ಎತ್ತರದ ಸಾಧನೆ ಮಾಡಬೇಕು ಎಂದುಕೊಂಡು ಅಭ್ಯಾಸ ಮಾಡುತ್ತಿದ್ದಾರೆ. ಹುಬ್ಬಳ್ಳಿಯ ಪುಷ್ಪಾ ಕಿರೇಸೂರ ಅವರಂಥ ಪ್ರತಿಭೆಗಳು ಇತ್ತೀಚೆನ ವರ್ಷಗಳಲ್ಲಿ ರಾಜ್ಯ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಲಾಭ, ನಷ್ಟದ ಲೆಕ್ಕಾಚಾರದಲ್ಲಿ ಬಿಸಿಸಿಐ?

ವಿಶ್ವದ ಶ್ರೀಮಂತ ಕ್ರಿಕೆಟ್‌ ಮಂಡಳಿ ಬಿಸಿಸಿಐ ಲಾಭ, ನಷ್ಟದ ಲೆಕ್ಕಾಚಾರದ ನಡುವೆಯೇ ಮಹಿಳಾ ಟೂರ್ನಿಗಳನ್ನು ಆಯೋಜಿಸುತ್ತದೆ ಎನ್ನುವ ದೂರು ಇದೆ.

ಭಾರತ ಪುರುಷರ ತಂಡ ಯಾವ ತಂಡದ ಜೊತೆ ಆಡಿದರೂ ಜಾಹೀರಾತು, ಪ್ರಾಯೋಜಕತ್ವ ಹೀಗೆ ವಿವಿಧ ಮೂಲಗಳಿಂದ ಕೋಟ್ಯಂತರ ರೂಪಾಯಿ ಹಣ ಬರುತ್ತದೆ. ಇದರಿಂದ ಕ್ರಿಕೆಟ್‌ ಮಂಡಳಿಗೂ ಸಾಕಷ್ಟು ಲಾಭವಾಗುತ್ತದೆ. ವಿಶ್ವದ ಕ್ರಿಕೆಟ್‌ನ ದೊಡ್ಡಣ್ಣ ಎನಿಸಿರುವ ಭಾರತ ತಂಡ ಎಲ್ಲಿಯೇ ಆಡಿದರೂ ಜನ ಕ್ರೀಡಾಂಗಣಕ್ಕೆ ಬಂದು ಪಂದ್ಯಗಳನ್ನು ನೋಡುತ್ತಾರೆ. ಅದರಲ್ಲಿಯೂ ಟ್ವೆಂಟಿ–20 ಟೂರ್ನಿಗಳು ಬಿಸಿಸಿಐ ಹೆಚ್ಚು ಲಾಭ ತಂದುಕೊಡುತ್ತವೆ.

ಆದರೆ ಪುರುಷರ ಕ್ರಿಕೆಟ್‌ ಟೂರ್ನಿಗಳಿಂದ ಸಿಗುವಷ್ಟು ಲಾಭ ಮಹಿಳಾ ಟೂರ್ನಿಗಳಿಂದ ಸಿಗುವುದಿಲ್ಲ. ಮಹಿಳಾ ಪಂದ್ಯಗಳಿಗೆ ಪ್ರಾಯೋಜಕರು ಸಿಗುವುದು ಅಷ್ಟಕ್ಕಷ್ಟೇ. ಹೆಚ್ಚು ಜನ ಕ್ರೀಡಾಂಗಣಗಳಿಗೆ ಬರುವುದಿಲ್ಲ. ಆದ್ದರಿಂದ ಟಿಕೆಟ್‌ ಹಣದಿಂದಲೂ ಬಿಸಿಸಿಐಗೆ ಲಾಭ ಮಾಡಿಕೊಳ್ಳಲು ಆಗುವುದಿಲ್ಲ. ಆದ್ದರಿಂದ ಬಿಸಿಸಿಐ ಹೆಚ್ಚು ಮಹಿಳಾ ಟೂರ್ನಿಗಳನ್ನು ಆಯೋಜಿಸುವುದಿಲ್ಲ ಎನ್ನುವ ಆರೋಪ ಕೂಡ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT