ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರ ಹಫೀಜ್‌ ಬಿಡುಗಡೆ ಪಾಕ್‌ ಮುಖವಾಡ ಬಯಲು

Last Updated 26 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದ ಭಯೋತ್ಪಾದಕರು ಮುಂಬೈ ಮೇಲೆ ನಡೆಸಿದ ಭೀಕರ ದಾಳಿಗೆ ನಿನ್ನೆ ಬರೋಬ್ಬರಿ 9 ವರ್ಷ ತುಂಬಿತು. ಜಮಾತ್‌ ಉದ್‌ ದವಾ ಎಂಬ ಉಗ್ರವಾದಿ ಸಂಘಟನೆಯ ಮುಖಂಡ ಮತ್ತು ಲಷ್ಕರ್‌ ಎ ತಯಬಾ ಸಂಸ್ಥಾಪಕ ಹಫೀಜ್‌ ಸಯೀದ್‌ ಈ ದಾಳಿಯ ಮುಖ್ಯ ಸಂಚುಕೋರ. ಕಾಕತಾಳೀಯ ಎಂದರೆ, ದಾಳಿಯ ಕರಾಳ ನೆನಪುಗಳ ವರ್ಷಾಚರಣೆಯ ಬರೀ ಎರಡು ದಿನಗಳ ಮೊದಲು ಅಂದರೆ ಶುಕ್ರವಾರ ಈತ ಪಾಕಿಸ್ತಾನದ ಲಾಹೋರ್‌ನಲ್ಲಿ ಗೃಹಬಂಧನದಿಂದ ಬಿಡುಗಡೆಯಾಗಿದ್ದಾನೆ. ಭಾರತ ಮಾತ್ರವಲ್ಲ ವಿಶ್ವಸಂಸ್ಥೆ ಮತ್ತು ಅಮೆರಿಕ ಕೂಡ ಇವನನ್ನು ಅಂತರರಾಷ್ಟ್ರೀಯ ಭಯೋತ್ಪಾದಕ ಎಂದು ಹೆಸರಿಸಿವೆ. ಅಮೆರಿಕ ಸರ್ಕಾರ ಇವನ ತಲೆಗೆ ಒಂದು ಕೋಟಿ ಡಾಲರ್‌ (ಅಂದಾಜು ₹ 65 ಕೋಟಿ) ಇನಾಮು ಘೋಷಿಸಿದೆ. ಪಾಕಿಸ್ತಾನ ಕೂಡ ಮೇಲ್ನೋಟಕ್ಕೆ ಈತನ ಸಂಘಟನೆಗಳನ್ನು ನಿಷೇಧಿಸಿದೆ. ಇಷ್ಟಿದ್ದರೂ ಇವನ ಬಂಧನ ಅವಧಿ ಮುಂದುವರಿಸಲು ಆ ಸರ್ಕಾರ ಮನಪೂರ್ವಕವಾಗಿ ಪ್ರಯತ್ನಿಸಲಿಲ್ಲ.

‘ಇವನ ಮೇಲೆ ಬೇರೆ ಆರೋಪಗಳು ಇಲ್ಲದೇ ಹೋದರೆ ಬಿಡುಗಡೆ ಮಾಡಬೇಕು’ ಎಂದು ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ನ್ಯಾಯಾಂಗ ಪರಿಶೀಲನಾ ಮಂಡಳಿ ಬುಧವಾರ ಆದೇಶಿಸಿತ್ತು. ಭಯೋತ್ಪಾದಕರು ಮತ್ತು ಅವರ ಚಟುವಟಿಕೆಗಳ ಬಗ್ಗೆ ಸಹಾನುಭೂತಿ ಹೊಂದಿರುವ ಪಾಕ್‌ ಸರ್ಕಾರಕ್ಕೆ ಇಷ್ಟು ಸಾಕಾಯಿತು. ಹಫೀಜ್‌ನನ್ನು ಬಿಡುಗಡೆ ಮಾಡಬಾರದು ಎಂಬ ಭಾರತದ ಆಗ್ರಹ ಯಾವ ಪರಿಣಾಮವನ್ನೂ ಬೀರಲಿಲ್ಲ. ಆತನನ್ನು ಮತ್ತೆ ಬಂಧಿಸಿ ಕಾನೂನಿನ ಕಟಕಟೆಯಲ್ಲಿ ನಿಲ್ಲಿಸಬೇಕು ಎಂಬ ಅಮೆರಿಕದ ಸೂಚನೆಗೂ ಪಾಕ್‌ ಸರ್ಕಾರ ಮಣಿದಿಲ್ಲ. ಭಯೋತ್ಪಾದನೆಗೆ ಅಲ್ಲಿನ ಸರ್ಕಾರ ಮತ್ತು ಸೇನೆಯೇ ಕುಮ್ಮಕ್ಕು ಕೊಡುತ್ತಿದೆ ಎನ್ನುವುದು ಇಡೀ ವಿಶ್ವಕ್ಕೆ ಗೊತ್ತಿರುವ ಸಂಗತಿ. ಹೀಗಿರುವಾಗ ಅದರ ಈ ನಡೆಯಲ್ಲಿ ಅಚ್ಚರಿಯೇನೂ ಕಾಣಿಸುತ್ತಿಲ್ಲ.

ಭಯೋತ್ಪಾದನೆ ಎನ್ನುವುದು ಇಡೀ ವಿಶ್ವವನ್ನು ನಾನಾ ರೂಪಗಳಲ್ಲಿ ಕಾಡುತ್ತಿದೆ. ಅದಕ್ಕೆ ಪಾಕಿಸ್ತಾನವು ಅತಿ ದೊಡ್ಡ ಕೊಡುಗೆ ಕೊಡುತ್ತಿದೆ. ಏಕೆಂದರೆ ಉಗ್ರಗಾಮಿ ಚಟುವಟಿಕೆ ನಡೆಸುವ ಏಕೈಕ ಉದ್ದೇಶದ ಅನೇಕ ಸಂಘಟನೆಗಳು ಅಲ್ಲಿವೆ. ಅಂತರರಾಷ್ಟ್ರೀಯ ಒತ್ತಡ ಮತ್ತು ದಿಗ್ಬಂಧನದ ಭಯದಿಂದಾಗಿ ಅವುಗಳ ಮೇಲೆ ಆಗಾಗ ಕ್ರಮ ಕೈಗೊಂಡಂತೆ ಪಾಕಿಸ್ತಾನ ನಟಿಸುತ್ತದೆ. ಆದರೆ ಅದು ಬರೀ ತೋರಿಕೆಗೆ. ಅದರ ಹಿಂದೆ ಪ್ರಾಮಾಣಿಕತೆಯೇ ಇಲ್ಲ. ಕಾಶ್ಮೀರದ ವಿಷಯಕ್ಕೆ ಬಂದರಂತೂ ಅದು ಪ್ರತ್ಯೇಕತಾವಾದಿಗಳ ಹಿಂಸಾತ್ಮಕ ಚಳವಳಿಯನ್ನು ತನು ಮನ ಧನದಿಂದ ಬೆಂಬಲಿಸುತ್ತಿದೆ. ಈ ವಿಷಯದಲ್ಲಿ ಅದಕ್ಕೆ ಎಳ್ಳಷ್ಟೂ ಪಶ್ಚಾತ್ತಾಪ ಇಲ್ಲ.

ಇತ್ತೀಚಿನ ವರ್ಷಗಳಲ್ಲಿ ಅದೂ ಉಗ್ರರ ಹಾವಳಿಯನ್ನು ಎದುರಿಸುತ್ತಿದೆ. ಅಲ್ಲಿ ಮಹಿಳೆಯರು ಮಕ್ಕಳೆನ್ನದೆ ಅಸಂಖ್ಯಾತ ಅಮಾಯಕ ನಾಗರಿಕರನ್ನು ಭಯೋತ್ಪಾದಕರು ಕೊಂದಿದ್ದಾರೆ. ಇಷ್ಟಾದರೂ ಅದು ಪಾಠ ಕಲಿತಿಲ್ಲ ಎನ್ನಲು ಹಫೀಜ್‌ ಸಯೀದ್‌ ಬಿಡುಗಡೆ ಒಂದು ತಾಜಾ ನಿದರ್ಶನ. ಬಿಡುಗಡೆಯ ಬಳಿಕ ಆತ ಎಳ್ಳಷ್ಟೂ ಭಯ ಇಲ್ಲದೆ ಪ್ರಚೋದನಕಾರಿಯಾಗಿ ಮಾತನಾಡಿದ್ದಾನೆ. ಕಾಶ್ಮೀರದ ವಿಮೋಚನೆಯೇ ತನ್ನ ಗುರಿ ಎಂದು ಸಾರಿದ್ದಾನೆ. ಆದರೆ ಅವನಿಗೆ ಲಗಾಮು ಹಾಕಲು ಸರ್ಕಾರ ಮುಂದಾಗಿಲ್ಲ. ಆದ್ದರಿಂದ ಉಗ್ರರ ದಮನಕ್ಕೆ ಪಾಕಿಸ್ತಾನ ಕೈಜೋಡಿಸುತ್ತದೆ ಎಂದು ನಾವು ನೆಚ್ಚಿಕೊಳ್ಳುವಂತಿಲ್ಲ. ಕಾಶ್ಮೀರದಲ್ಲಿ ಪ್ರಾರಂಭಿಸಿರುವ ಶಾಂತಿ ಪ್ರಕ್ರಿಯೆಗೆ ಮತ್ತಷ್ಟು ಬಲ ತುಂಬಬೇಕು. ಉಗ್ರಗಾಮಿಗಳು ಮತ್ತು ಅವರ ಬೆಂಬಲಿಗರು ಎಲ್ಲಿಯೇ ಇರಲಿ, ಯಾವುದೇ ಮುಖವಾಡ ಹಾಕಿಕೊಂಡಿರಲಿ... ಅವರನ್ನು ಸದೆ ಬಡಿಯುವ ಕಾರ್ಯ ನಮ್ಮ ಕಡೆಯಿಂದ ನಿರಂತರವಾಗಿ ನಡೆಯಬೇಕು. ಪಾಕಿಸ್ತಾನದಂತಹ ಕೆಲವು ದೇಶಗಳು, ಐಎಸ್‌ ಮತ್ತು ಲಷ್ಕರ್‌ನಂತಹ ಕೆಲವು ಸಂಘಟನೆಗಳನ್ನು ಬಿಟ್ಟರೆ ಇಡೀ ಜಗತ್ತು ಭಯೋತ್ಪಾದನೆಯ ವಿರುದ್ಧ ಟೊಂಕ ಕಟ್ಟಿ ನಿಂತಿದೆ. ಅದು ನಿಜವಾಗಿಯೂ ನಮಗೊಂದು ಶಕ್ತಿ. ಹಫೀಜ್‌ ವಿಷಯದಲ್ಲಿ ಪಾಕ್‌ ಸರ್ಕಾರದಿಂದ ಆದ ಲೋಪವನ್ನು ಜಗತ್ತಿಗೆ ಮನವರಿಕೆ ಮಾಡಿಕೊಡಬೇಕು. ಉಗ್ರರನ್ನು ಬೆಂಬಲಿಸುವುದು ಹಸಿದ ಹುಲಿಯ ಮೇಲಿನ ಸವಾರಿಗೆ ಸಮ ಎನ್ನುವುದನ್ನು ಪಾಕಿಸ್ತಾನಕ್ಕೂ ಅರ್ಥ ಮಾಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT