ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಕನ್ನಡ ಅನುಷ್ಠಾನಕ್ಕೆ ಅಧಿಕಾರಿಗಳು ಅಡ್ಡಿ’

ವಿದ್ಯುನ್ಮಾನ ಆಡಳಿತಕ್ಕೆ ವಿರೋಧ, ಯುನಿಕೋಡ್‌ ಜಾರಿಗೆ ನಕಾರ
Last Updated 26 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ರಾಜ್ಯದಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿ ಜಾರಿಗೊಳಿಸುವುದಕ್ಕೆ ಹಾಗೂ ಕನ್ನಡ ಯುನಿಕೋಡ್‌ ಅನುಷ್ಠಾನಕ್ಕೆ ಐಎಎಸ್ ಅಧಿಕಾರಿಗಳು ಅಡ್ಡಿಯಾಗಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎ.ದಯಾನಂದ ಬೇಸರ ವ್ಯಕ್ತಪಡಿಸಿದರು.

‘ಕನ್ನಡ ತಂತ್ರಜ್ಞಾನ’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ರಾಜ್ಯ ಸರ್ಕಾರದ ಶೇ 25ಕ್ಕೂ ಕಡಿಮೆ ವೆಬ್‌ಸೈಟ್‌ಗಳು ಕನ್ನಡೀಕರಣಗೊಂಡಿವೆ. ಬಾಕಿ ವೆಬ್‌ಸೈಟ್‌ಗಳನ್ನು ಕನ್ನಡೀಕರಣಗೊಳಿಸುವುದು ದೊಡ್ಡ ವಿಚಾರವಲ್ಲ. ಮನಸು ಮಾಡಿದರೆ 1 ತಿಂಗಳೊಳಗೆ ಮುಗಿಸಬಹುದು. ಆದರೆ, ಆಡಳಿತ ವರ್ಗಕ್ಕೆ ಮನಸ್ಸಿಲ್ಲದಿರುವುದೇ ದೊಡ್ಡ ತೊಡಕು’ ಎಂದರು.

ಕನ್ನಡ ಬಾರದ ಐಎಎಸ್‌ ಅಧಿಕಾರಿಗಳು ಕನ್ನಡ ಜಾರಿಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ‘ಅನುಮೋದನೆ ನೀಡಲಾಗಿದೆ’ ಎಂದು ಕನ್ನಡದಲ್ಲಿ ಬರೆಯುವುದನ್ನು ಕಲಿಯುವುದರಲ್ಲೇ ಅರ್ಧ ಸೇವೆ ಮುಗಿಸಿರುತ್ತಾರೆ. ಇಂತಹವರಿಂದ ಕನ್ನಡದ ಅಭಿವೃದ್ಧಿ ನಿರೀಕ್ಷೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಯುನಿಕೋಡ್‌ ಸಮಸ್ಯೆಯೂ ದೊಡ್ಡದಿದೆ. ನುಡಿ–ಬರಹ ತಂತ್ರಾಂಶಗಳಲ್ಲಿನ ಬರವಣಿಗೆ ಎಲ್ಲ ಕಂಪ್ಯೂಟರ್‌ಗಳಲ್ಲಿ ತೆರೆದುಕೊಳ್ಳುವುದಿಲ್ಲ. ಇದಕ್ಕಾಗಿ ಎಲ್ಲ ಕಚೇರಿಗಳಲ್ಲಿ ಕನ್ನಡದ ಯುನಿಕೋಡ್ ತಂತ್ರಾಂಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸರ್ಕಾರ ಆದೇಶಿಸಿದೆ. ಆದರೆ, ಯಾವುದೇ ಕಚೇರಿಯಲ್ಲೂ ಯುನಿಕೋಡ್ ಇನ್ನೂ ಬಳಕೆಯಾಗುತ್ತಿಲ್ಲ. ಈ ಕುರಿತು ಆದೇಶ ನೀಡಿರುವ ಮುಖ್ಯ ಕಾರ್ಯದರ್ಶಿ ಕಚೇರಿಯಲ್ಲೂ ಯುನಿಕೋಡ್‌ ಜಾರಿಗೊಂಡಿಲ್ಲ ಎಂದು ವಿಷಾದದಿಂದ ಹೇಳಿದರು.

‘ಪಾರಂಪರಿಕ ಮನಸ್ಥಿತಿಯಿಂದ ಅಧಿಕಾರಿಗಳು ಹೊರಬರಬೇಕಿದೆ. ಇ–ಆಡಳಿತ ಅನುಷ್ಠಾನವಾಗಬೇಕು’ ಎಂಬ ಚರ್ಚೆ ನಡೆಯುತ್ತಿದ್ದಾಗ ಐಎಎಸ್‌ ಅಧಿಕಾರಿಯೊಬ್ಬರು, ‘ನಿನ್ನೆ ಬರೆದಿರುವ ರಸೀದಿಯನ್ನು ಇಂದು ನಿಮ್ಮ ಇ–ಆಡಳಿತದಲ್ಲಿ ಹರಿದುಹಾಕಲು ಸಾಧ್ಯವೇ ಎಂದು ಪ್ರಶ್ನಿಸಿದ್ದರು. ಇಂಥಹ ಮನಸ್ಥಿತಿ ಹಿರಿಯ ಅಧಿಕಾರಿಗಳಲ್ಲಿ ಹೋಗದೇ ಇದ್ದಲ್ಲಿ ಆಡಳಿತ ಸುಧಾರಣೆಯನ್ನು ನಿರೀಕ್ಷಿಸುವುದೂ ಅಸಾಧ್ಯ; ಭ್ರಷ್ಟಾಚಾರ ನಿಯಂತ್ರಣವೂ ಕಷ್ಟ’ ಎಂದರು.

***

‘ಕಿಂಡಲ್‌’ನಲ್ಲಿ ಕನ್ನಡ ಬೇಕು

‘ಅಮೇಜಾನ್‌ನ ಕಿಂಡಲ್‌ನಲ್ಲಿ ಕನ್ನಡ ಸೇವೆಯೇ ಇಲ್ಲ’ ಎಂದು ಕನ್ನಡಪರ ಹೋರಾಟಗಾರ ವಸಂತಶೆಟ್ಟಿ ಹೇಳಿದರು.

‘ಕನ್ನಡ ಗ್ರಂಥ ಡಿಜಿಟಲೈಸೇಷನ್‌’ ಕುರಿತು ಅವರು ವಿಚಾರಮಂಡಿಸಿ ಮಾತನಾಡಿದರು.

ವಸುಧೇಂದ್ರ ಅವರ ‘5 ಪೈಸೆ ವರದಕ್ಷಿಣೆ’ ಕೃತಿಯು ಕೆಲವು ದಿನಗಳ ಹಿಂದೆ ‘ಕಿಂಡಲ್‌’ನಲ್ಲಿ ಲಭ್ಯವಿತ್ತು. ಹಲವರು ಕೃತಿಯನ್ನು ಖರೀದಿಸಿ ಓದಲು ಆರಂಭಿಸಿದ್ದರು. ಆದರೆ, ಇದ್ದಕ್ಕಿದ್ದಂತೆ ಅದು ಮಾಯವಾಯಿತು ಎಂದರು.

ಈ ಕುರಿತು ‘ಕಿಂಡಲ್‌’ ಅನ್ನು ಸಂಪರ್ಕಿಸಿದಾಗ, ‘ಕನ್ನಡ ಸೇವೆಯನ್ನು 2018ರಿಂದ ನೀಡಲಿದ್ದೇವೆ’ ಎಂಬ ಉತ್ತರ ಸಿಕ್ಕಿತು. ಕಿಂಡಲ್‌ನಂತಹ ಸಂಸ್ಥೆಗಳು ಕೇಳುವುದು ಗ್ರಾಹಕರ ಮಾತನ್ನು ಮಾತ್ರ. ಕನ್ನಡದ ಗ್ರಾಹಕರು ಹೆಚ್ಚಾದಾಗ ಜಾಗತಿಕ ವೇದಿಕೆಗಳಲ್ಲಿ ಕನ್ನಡ ಕಾಣಿಸಿಕೊಳ್ಳುತ್ತದೆ ಎಂದು ತಿಳಿಸಿದರು.

***

‘ಸಹಜ ಭಾಷಾ ಸಂಸ್ಕರಣೆ’ ಬೇಕು

ಕನ್ನಡದಲ್ಲಿ ‘ಸಹಜ ಭಾಷಾ ಸಂಸ್ಕರಣೆ’ ಅಗತ್ಯವಿದೆ ಎಂದು ಯು.ಬಿ.ಪವನಜ ಹೇಳಿದರು.

‘ಪಠ್ಯ ಕಣಜಗಳಿದ್ದರೆ ಮಾತ್ರ ಅಂತರ್ಜಾಲದಲ್ಲಿ ಕನ್ನಡ ಕಾರ್ಯನಿರ್ವಹಿಸುತ್ತದೆ. ಇಲ್ಲದಿದ್ದಲ್ಲಿ ಅಂತರ್ಜಾಲಕ್ಕೆ ಕನ್ನಡ ಅರ್ಥವಾಗದೇ ಹಲವು ಸೇವೆಗಳು ಕೆಲಸ ಮಾಡುವುದಿಲ್ಲ. ‘ಬೆಂಗಳೂರಿನ ಹವಾಮಾನ ಹೇಗಿದೆ?‘ ಎಂದು ಟೈಪಿಸಿದರೆ ಯಾವುದೇ ಉತ್ತರ ಸಿಗುವುದಿಲ್ಲ. ಅದನ್ನೇ ಇಂಗ್ಲಿಷಿನಲ್ಲಿ ಕೇಳಿದರೆ ಸಿಗುತ್ತದೆ. ಇದಕ್ಕೆ ಬೇಕಾದ ತೆರೆಯ ಹಿಂದಿನ ಭಾಷಾಕಾರ್ಯವಾದಲ್ಲಿ ಮಾತ್ರ ಇದು ಸಾಧ್ಯ’ ಎಂದು ತಿಳಿಸಿದರು.

ವಿಶ್ವಜ್ಞಾನವನ್ನು ಕನ್ನಡಕ್ಕೆ ತರುವ ಕೆಲಸವನ್ನು ಪೂರ್ಣಚಂದ್ರ ತೇಜಸ್ವಿ, ಶಿವರಾಮ ಕಾರಂತ ಬಿಟ್ಟರೆ ಬೇರಾವ ಕನ್ನಡಿಗ ಸಾಹಿತಿಯೂ ಮಾಡಿಲ್ಲ. ವಿಕಿಪೀಡಿಯಾದಲ್ಲಿ ಕನ್ನಡ ಬರಹಗಳನ್ನು ಹಾಕುವಲ್ಲೂ ನಿರಾಸಕ್ತಿ ಇದೆ. ಸಂಭಾವನೆ ಸಿಗುವುದಿಲ್ಲ ಎಂದು ಬರೆಯದೇ ಇದ್ದರೆ ಹೇಗೆ ಎಂದವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT