ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಸಿಬಿ ತಂದು ಪೈಪ್‌ ಜೋಡಿಸಿದರು!

Last Updated 27 ನವೆಂಬರ್ 2017, 6:01 IST
ಅಕ್ಷರ ಗಾತ್ರ

ಬಾದಾಮಿ: ಸಮೀಪದ ಬನಶಂಕರಿ ದೇವಾಲಯದ ಎದುರಿನ ಹರಿದ್ರಾತೀರ್ಥ ಹೊಂಡಕ್ಕೆ ನೀರು ತುಂಬಿಸುವ ಕಾಮಗಾರಿಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅನುಮತಿ ನೀಡುವಲ್ಲಿ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದ ರೈತರು ಭಾನುವಾರ ಸೇರಿ ಕಾಮಗಾರಿ ಪೂರ್ಣಗೊಳಿಸಿದ್ದಾರೆ.

ರೈತ ಸಂಘ, ಹಸಿರು ಸೇನೆ , ಕನ್ನಡ ಯುವಸೇನೆ ಮತ್ತು ನಗರ ಅಭಿವೃದ್ಧಿ ಹೋರಾಟ ಸಮಿತಿಯ 200ಕ್ಕೂ ಅಧಿಕ ಸದಸ್ಯರು ಭಾನುವಾರ ಜೆಸಿಬಿ ತಂದು ಹೊಂಡಕ್ಕೆ ಕೊಳವೆ ಜೋಡಿಸುವ ಕಾಮಗಾರಿ ಪೂರ್ಣಗೊಳಿಸಿದರು.

ಸ್ಮಾರಕದ ಸುತ್ತ 300 ಮೀಟರ್ ಅಂತರದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಬಾರದು ಎಂದು ಸೂಚಿಸಿದ್ದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಕಾಮಗಾರಿಯನ್ನು ಸ್ಥಗಿತಗೊಳಿಸಿತ್ತು. ಕೊನೆಗೆ ಸ್ಥಳೀಯರ ಮನವಿ ಪರಿಗಣಿಸಿದ್ದ ಸ್ಥಳೀಯ ಅಧಿಕಾರಿಗಳು ಅನುಮತಿ ನೀಡುವ ಬಗ್ಗೆ ದೆಹಲಿ ಕಚೇರಿಗೆ ಪ್ರಸ್ತಾವ ಕಳುಹಿಸಿದ್ದರು. ಅಲ್ಲಿಂದ ಹಸಿರು ನಿಶಾನೆ ಬರುವುದು ವಿಳಂಬವಾದ ಕಾರಣ ರೈತರು ಸ್ವಯಂ ಪ್ರೇರಿತರಾಗಿ ಬಂದು ಕೆಲಸ ಮುಗಿಸಿದ್ದಾರೆ.

ಮಲಪ್ರಭಾ ಎಡದಂಡೆ ಕಾಲುವೆಯಿಂದ ಬನಶಂಕರಿಯ ಹರಿದ್ರಾ ತೀರ್ಥ ಹೊಂಡಕ್ಕೆ ನೀರು ತುಂಬಿಸುವ ಯೋಜನೆ ಕಾಮಗಾರಿಯನ್ನು ಸಣ್ಣ ನೀರಾವರಿ ಇಲಾಖೆ ₹ 3.25 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿದೆ. ಈಗಾಗಲೇ ಶೇ 90ರಷ್ಟು ಕಾಮಗಾರಿ ಪೂರ್ಣ ಗೊಂಡಿದೆ. ಆದರೆ ತೇರಿನ ಬಯಲು ಜಾಗೆಯಿಂದ ಹೊಂಡಕ್ಕೆ 40 ಮೀಟರ್‌ ವ್ಯಾಪ್ತಿಯಲ್ಲಿ ಪೈಪ್‌ ಜೋಡಣೆ ಮಾತ್ರ ಬಾಕಿ ಉಳಿದಿತ್ತು.

‘ಜನವರಿ ತಿಂಗಳಲ್ಲಿ ಬನಶಂಕರಿ ದೇವಿ ಜಾತ್ರೆ ಇದೆ. ಕೇಂದ್ರ ಸರ್ಕಾರದ ಇಲಾಖೆಯಿಂದ ಯಾವುದೇ ಅನು ಮತಿ ಬಂದಿಲ್ಲ. ಲಕ್ಷಾಂತರ ಭಕ್ತರು ಜಾತ್ರೆಗೆ ಬರಲಿದ್ದಾರೆ. ಅವರ ಅನುಕೂಲಕ್ಕಾಗಿ ನಾವೇ ಕಾಮಗಾರಿ ಪೂರ್ಣಗೊಳಿಸಿದ್ದೇವೆ’ ಎಂದು ರೈತರು ಮುಖಂಡರು ಹೇಳಿದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ವಸಂತ ಜಡಿಯನ್ನವರ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಅಶೋಕ ಸಾತನ್ನವರ, ರೈತ ಸಂಘದ ಮುಖಂಡರಾದ ಯಲ್ಲಪ್ಪ ಮುದೇನಗುಡಿ, ಟೋಪಣ್ಣ ಮೆಣಸಗಿ, ಕನ್ನಡ ಯುವಸೇನೆ ಅಧ್ಯಕ್ಷ ಮಾರುತಿ ವಾಲಿಕಾರ, ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್‌. ಹಿರೇಹಾಳ, ಹನುಮಂತ ಮಣ್ಣೂರ, ಈಶ್ವರ ಗೋಡಿ, ಮಹಾಂತೇಶ ಕಡಿಗೌಡ್ರ ಸೇರಿದಂತೆ 200ಕ್ಕೂ ಅಧಿಕ ರೈತರು ಇದ್ದರು.

* * 

ಪೈಪ್‌ ಜೋಡಣೆ ಮಾಡಿದವರು ಇಲಾಖೆಯಿಂದ ಅನುಮತಿ ಪಡೆದಿಲ್ಲ. ಹಾಗಾಗಿ ಅಲ್ಲಿ  ಕೆಲಸ ಬಂದ್‌ ಮಾಡಿಸಲು ಪೊಲೀಸರಿಗೆ ದೂರು ನೀಡಲಾಗುವುದು.
ಪ್ರಮೋದ ಬಿಂಗಿ
ಸಹಾಯಕ ನಿರ್ದೇಶಕ, ಪುರಾತತ್ವ ಇಲಾಖೆ ಬಾದಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT