ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್‌ ಸಂಪರ್ಕಕ್ಕೆ ರೈತರ ಜಾಗರಣೆ

Last Updated 27 ನವೆಂಬರ್ 2017, 6:43 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಪಡಿತರ ಚೀಟಿಗೆ ಆಧಾರ್‌ ಸಂಖ್ಯೆ ನೋಂದಣಿ ಮಾಡಿಸಲು ಬಂದ ರೈತರು ನೆಟ್‌ವರ್ಕ್ ಸಮಸ್ಯೆಯಿಂದಾಗಿ ಇಲ್ಲಿನ ಕೊಡಸೋಗೆ ಗ್ರಾಮದಲ್ಲಿ ಗ್ರಾಮಪಂಚಾಯಿತಿ ಕಚೇರಿ ಎದುರು ಮೂರು ದಿನಗಳಿಂದ ರಾತ್ರಿಯಿಡೀ ಕಾದು ಪರಿತಪಿಸುವಂತಾಯಿತು.

ಅರ್ಹ ಫಲಾನುಭವಿಗಳಿಗೆ ಪಡಿತರ ವಿತರಿಸಲು ಆಧಾರ್‌ ಸಂಖ್ಯೆ ಸಂಪರ್ಕಿಸುವುದನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಡ್ಡಾಯಗೊಳಿಸಿದೆ. ಈ ನಿಟ್ಟಿನಲ್ಲಿ ತಾಲ್ಲೂಕಿನ ತೆರಕಣಾಂಬಿ ಹೋಬಳಿಯ ಕೊಡಸೋಗೆ ಗ್ರಾಮ ಪಂಚಾಯಿತಿಯಲ್ಲಿ ಆಧಾರ್‌ ಸಂಖ್ಯೆ ಸಂಪರ್ಕಿಸಲು ಜನರು ಕಾದು ಕಂಗೆಟ್ಟರು.

ದೇಪಾಪುರ ಗ್ರಾಮದಲ್ಲಿ ನೆಟ್‌ವರ್ಕ್‌ ಸಮಸ್ಯೆ ಇರುವುದರಿಂದ ಅಲ್ಲಿನ ನೂರಾರು ಗ್ರಾಮಸ್ಥರು ಮೂರು ದಿನಗಳಿಂದ ಕೊಡಸೋಗೆ ಗ್ರಾಮಕ್ಕೆ ಬಂದು ಸಂಖ್ಯೆ ನೋಂದಣಿಗೆ ಸರತಿಯಲ್ಲಿ ನಿಂತಿದ್ದರು. ಆಗಾಗ ಸರಿಹೋಗುವ ನೆಟ್‌ವರ್ಕ್‌ನಿಂದ ಕೆಲವೇ ಮಂದಿಯ ಆಧಾರ್‌ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತಿತ್ತು. ಹೀಗಾಗಿ ಜನರು ನಿದ್ದೆಗೆಟ್ಟು ರಾತ್ರಿಯಿಡೀ ಕಚೇರಿಯ ಎದುರೇ ಕಾದಿದ್ದರು.

ಕೂಲಿ ಕೆಲಸಗಳನ್ನು ಬಿಟ್ಟು ಇಲ್ಲಿ ಬಂದು ಕಾಯುವಂತಾಗಿದೆ. ಮನೆಯಲ್ಲಿ ಮಕ್ಕಳು, ಬಾಣಂತಿ ಇದ್ದಾರೆ. ಅವರನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಅಧಿಕಾರಿಗಳಿಗೆ ಈ ಸಮಸ್ಯೆ ಬಗ್ಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ’ ಎಂದು ಗ್ರಾಮದ ಗೌರಮ್ಮ ಅಳಲು ತೋಡಿಕೊಂಡರು.

ಅನೇಕ ಗ್ರಾಮಗಳಲ್ಲಿ ಇಂಟರ್‌ನೆಟ್‌ ಸಂಪರ್ಕ ಸಮಸ್ಯೆ ಇದೆ. ನೆಟ್‌ವರ್ಕ್‌ ವೇಗ 10 ಕೆಬಿಪಿಎಸ್‌ಗಿಂತಲೂ ಕಡಿಮೆ ಇರುತ್ತದೆ. ಇದರಿಂದ ಯಾವ ಕೆಲಸಗಳನ್ನೂ ಮಾಡಲು ಸಾಧ್ಯವಾ ಗುತ್ತಿಲ್ಲ. ಕೆಲವೊಮ್ಮೆ ದಿನಕ್ಕೆ 10–15 ಜನರ ಆಧಾರ್ ಸಂಖ್ಯೆಯನ್ನು ಸಂಪರ್ಕ ಮಾಡುವುದೂ ಕಷ್ಟವಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿ ಬಿ. ರಾಮು ಮತ್ತು ತಹಶೀಲ್ದಾರ್‌ ಕೆ. ಸಿದ್ದು ಅವರಿಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಲಾಗಿದೆ. ಆದರೆ ಅವರು ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದರು. ‘ಈ ಸಮಸ್ಯೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಿಮ್ಮಿಂದಲೇ ಗೊತ್ತಾಗಿದೆ. ಈ ಕುರಿತು ಪರಿಶೀಲಿಸುತ್ತೇನೆ’ ಎಂದು ತಹಶೀಲ್ದಾರ್‌ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT