ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ರವೀಂದ್ರ ನಿರ್ಧಾರಕ್ಕೆ ಕಾರ್ಯಕರ್ತರ ವಿರೋಧ

Last Updated 27 ನವೆಂಬರ್ 2017, 7:08 IST
ಅಕ್ಷರ ಗಾತ್ರ

ಹರಪನಹಳ್ಳಿ: ಚುನಾವಣಾ ವೆಚ್ಚ ಭರಿಸಲು ಸಾಧ್ಯವಾಗದೇ ಇರುವುದು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದೇ ಇರಲು ಶಾಸಕ ಎಂ.ಪಿ. ರವೀಂದ್ರ ಕೈಗೊಂಡ ನಿರ್ಧಾರದಿಂದ ಭಾವೋದ್ವೇಗಕ್ಕೆ ಒಳಗಾದ ಕಾಂಗ್ರೆಸ್‌ ಕಾರ್ಯಕರ್ತರು ಭಾನುವಾರ ಇಲ್ಲಿ ಪ್ರತಿಭಟಿಸಿದರು.

ಪ್ರವಾಸಿ ಮಂದಿರದಲ್ಲಿ ರವೀಂದ್ರ ನಿರ್ಧಾರ ಪ್ರಕಟಿಸುತ್ತಿದ್ದಂತೆ ಅಸಮಾಧಾನಗೊಂಡ ಕಾರ್ಯಕರ್ತರು, ನಿರ್ಧಾರವನ್ನು ಹಿಂದಕ್ಕೆ ಪಡೆಯುವಂತೆ ಘೋಷಣೆಗಳನ್ನು ಕೂಗಿದರು. ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಕೆಲವರು ಬೆದರಿಕೆ ಹಾಕಿದ್ದು ಕಂಡುಬಂತು. ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ತಕ್ಷಣವೇ ಬಂದೋಬಸ್ತ್‌ ಮಾಡಿದರು.

ಪ್ರವಾಸಿ ಮಂದಿರದ ಹಿಂಬಾಗಿಲಿನಿಂದ ಹೊರಡಲು ಮುಂದಾದ ರವೀಂದ್ರ ಅವರ ಕಾರನ್ನು ಸುಮಾರು 30 ನಿಮಿಷಗಳ ಕಾಲ ಅಡ್ಡಿಗಟ್ಟಿದ ಕಾರ್ಯಕರ್ತರು, ನಿರ್ಧಾರವನ್ನು ಹಿಂದಕ್ಕೆ ಪಡೆಯುವಂತೆ ಪಟ್ಟು ಹಿಡಿದರು. ಕೆಲವರು ಕೈ ಮುಗಿದು ಪರಿಪರಿಯಾಗಿ ಮನವಿ ಮಾಡಿಕೊಳ್ಳುತ್ತಿರುವ ದೃಶ್ಯ ಕಂಡುಬಂತು.

ಕಾರಿನಿಂದ ಹೊರಬಂದ ಶಾಸಕರು ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು. ‘ನಿಮ್ಮ ನೋವು ನನಗೆ ಅರ್ಥವಾಗುತ್ತಿದೆ. ಶೀಘ್ರವೇ ಸಭೆ ಕರೆದು ನನ್ನ ಸಮಸ್ಯೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನನಗೆ ಈಗ ವಿಶ್ರಾಂತಿಯ ಅವಶ್ಯಕತೆ ಇದೆ. ನನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ನನ್ನನ್ನು ಬಿಟ್ಟುಬಿಡಿ’ ಎಂದು ರವೀಂದ್ರ ಮನವಿ ಮಾಡಿದರು. ಕಾರ್ಯಕರ್ತರನ್ನು ಸಮಾಧಾನಪಡಿಸಿ ಅಲ್ಲಿಂದ ಹೊರಟರು.

ಮೊದಲ ಬಾರಿಗೆ ಶಾಸಕ: ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಹೂವಿನಹಡಗಲಿ ಕ್ಷೇತ್ರದಿಂದ ದಿವಂಗತ ಎಂ.ಪಿ. ಪ್ರಕಾಶ್‌ ಅವರು ಹರಪನಹಳ್ಳಿ ಕ್ಷೇತ್ರಕ್ಕೆ ವಲಸೆ ಬಂದಿದ್ದರು. 2008ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಕರುಣಾಕರ ರೆಡ್ಡಿ ವಿರುದ್ಧ ಸೋಲು ಅನುಭವಿಸಿದ್ದರು. ಬಳಿಕ ಎಂ.ಪಿ. ಪ್ರಕಾಶ್‌ ನಿಧನರಾದರು. 2013ರಲ್ಲಿ ನಡೆದ ಚುನಾವಣೆಯಲ್ಲಿ ಮೊದಲ ಬಾರಿಗೆ ರಾಜಕೀಯ ಪ್ರವೇಶ ಮಾಡಿದ ರವೀಂದ್ರ ಅವರು ತಂದೆಯ ನಿಧನದ ಅನುಕಂಪ, ಬಿಜೆಪಿ ವಿರೋಧಿ ಅಲೆ, ಕೆಜೆಪಿ ಅಡ್ಡ ಮತದಾನದ ಪರಿಣಾಮ ಗೆಲುವು ಸಾಧಿಸಿದ್ದರು.

ತಾಯಿಯ ವಿರೋಧ
‘ಮೂರು ತಲೆಮಾರಿನಿಂದ ನಮ್ಮ ಕುಟುಂಬ ರಾಜಕಾರಣ ಮಾಡಿಕೊಂಡು ಬಂದಿದೆ. ಮಗನ ದಿಢೀರ್‌ ನಿರ್ಧಾರ ನನಗೆ ಆಶ್ಚರ್ಯ ಮತ್ತು ನೋವು ತಂದಿದೆ. ನಿರ್ಧಾರವನ್ನು ಬದಲಿಸಿ ರಾಜಕಾರಣದಲ್ಲಿ ಮುಂದುವರಿಯುವಂತೆ ಆತನಿಗೆ ಸಲಹೆ ನೀಡುತ್ತೇನೆ’ ಎಂದು ರವೀಂದ್ರ ಅವರ ತಾಯಿ ರುದ್ರಾಂಬಾ ಎಂ.ಪಿ.ಪ್ರಕಾಶ್‌ ತಮ್ಮ ತೋಟದ ಮನೆಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.

* * 

ಶಾಸಕ ಎಂ.ಪಿ.ರವೀಂದ್ರ ತೆಗೆದುಕೊಂಡ ನಿರ್ಧಾರ ಅಂತಿಮವಲ್ಲ.
ಮಂಜಣ್ಣ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT