ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯ ನಿರ್ಮಾಣಕ್ಕೆ ಸಿಬ್ಬಂದಿ ಸಾಹಸ

Last Updated 27 ನವೆಂಬರ್ 2017, 7:36 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯ ಎಲ್ಲ ನಗರ ಹಾಗೂ ಪಟ್ಟಣ ಪ್ರದೇಶಗಳನ್ನು ಬಯಲು ಬಹಿರ್ದೆಸೆ ಮುಕ್ತ ಪ್ರದೇಶ ಮಾಡಲು ಜಿಲ್ಲಾಡಳಿತ ಪಣ ತೊಟ್ಟರೆ, ಹಾವೇರಿ ನಗರಸಭೆ ಸಿಬ್ಬಂದಿ ‘ಚೆಂಬು ಹಿಡಿದವರ’ ಮನವೊಲಿಸಲು ಬೀದಿಗಿಳಿದಿದ್ದಾರೆ.

ನಗರದ 31 ವಾರ್ಡ್‌ಗಳ ಪೈಕಿ ಶೌಚಾಲಯ ರಹಿತ ಕುಟುಂಬಗಳು ಹೆಚ್ಚಿರುವ ನಾಗೇಂದ್ರನ ಮಟ್ಟಿಯ ನಾಲ್ಕು (3,4,5,14) ವಾರ್ಡ್‌ಗಳಲ್ಲಿ ವಾರದಿಂದ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಬಯಲು ಬಹಿರ್ದೆಸೆಗೆ ಹೆಚ್ಚಾಗಿ ತೆರಳುವ ಬೀದಿ ಬದಿ, ಗಿಡಗಂಟಿ, ಬೀಳು ಬಿದ್ದ ಜಾಗಗಳಿಗೇ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ.

ಪೌರಾಯುಕ್ತ ಶಿವಕುಮಾರಯ್ಯ ನೇತೃತ್ವದಲ್ಲಿ ನಸುಕಿನ ಜಾವ 5 ಗಂಟೆಗೆ ತೆರಳುವ ಸಿಬ್ಬಂದಿ, ಚೆಂಬು ಹಿಡಿದು ಹೊರಟವರ ಮನವೊಲಿಕೆಗೆ ಯತ್ನಿಸುತ್ತಾರೆ. ಒಪ್ಪದಿದ್ದರೆ, ಅವರ ಹಿಂದೆಯೆ ಹಲಿಗೆ ಬಾರಿಸುತ್ತಾ ಹೋಗುತ್ತಾರೆ. ಹಲಿಗೆ ನಾದಕ್ಕು ಜಗ್ಗದವರ ವಿಡಿಯೊ ಚಿತ್ರೀಕರಣ ಮಾಡಲು ಆರಂಭಿಸಿದ್ದಾರೆ.

‘ಸರ್ವೆ ಮೂಲಕ ನಗರದಲ್ಲಿ 2,174 ಶೌಚಾಲಯ ರಹಿತ ಕುಟುಂಬಗಳನ್ನು ಗುರುತಿಸಲಾಗಿತ್ತು. ಈ ಪೈಕಿ ಸ್ವಚ್ಛ ಭಾರತ ಅಭಿಯಾನದ ಅಡಿ 707 ಮಂದಿ ಶೌಚಾಲಯ ನಿರ್ಮಿಸಿಕೊಂಡರು. ಗುರಿ ಸಾಧಿಸಲು ಜಿಲ್ಲಾಧಿಕಾರಿಗಳ ಮಾರ್ಗದರ್ಶನ ಹಾಗೂ ಪೌರಾಯುಕ್ತರ ನೇತೃತ್ವದಲ್ಲಿ ಅಭಿಯಾನ ಆರಂಭಿಸಿದ್ದೇವೆ’ ಎಂದು ನಗರ ಸಭೆಯ ಪರಿಸರ ಎಂಜಿನಿಯರ್ ಚಂದ್ರಕಾಂತ ಗುಡ್ನೆವರ್ ತಿಳಿಸಿದರು.

‘ತಿಂಗಳಿಂದ ಅಭಿಯಾನ ತೀವ್ರಗೊಂಡಿದ್ದು, 924 ಕುಟುಂಬಗಳು ಶೌಚಾಲಯ ನಿರ್ಮಿಸಿಕೊಂಡಿವೆ. ಇನ್ನೂ 1,250 ಕುಟುಂಬಗಳು ಬಾಕಿ ಇವೆ. ಈ ಪೈಕಿ ನಾಗೇಂದ್ರನ ಮಟ್ಟಿಯ ನಾಲ್ಕು ವಾರ್ಡ್‌ಗಳಲ್ಲೇ 643 ಕುಟುಂಬಗಳಿವೆ. ಹೀಗಾಗಿ ಅವಿರತ ಪ್ರಯತ್ನದಲ್ಲಿ ತೊಡಗಿದ್ದೇವೆ. ಜೆಸಿಬಿ ಮೂಲಕ ಹೊಂಡ ಹಾಗೂ ಇತರ ಸಹಕಾರ ನೀಡುತ್ತಿದ್ದೇವೆ’ ಎನ್ನುತ್ತಾರೆ ಪೌರಾಯುಕ್ತ ಬಿ.ಎಸ್. ಶಿವಕುಮಾರಯ್ಯ.

‘ಕೆಲವರು ಶೌಚಾಲಯ ಇದ್ದರೂ ಬಳಸುತ್ತಿಲ್ಲ. ಮೌಢ್ಯಗಳ ಕಾರಣವೂ ಇದೆ. ಕೆಲವು ಬಾಡಿಗೆ ಮನೆಗಳಿಗೇ ಶೌಚಾಲಯ ಇಲ್ಲ. ಹಲವೆಡೆ ನಿರ್ಮಿಸಲು ಜಾಗವಿಲ್ಲ. ಹಲವರು ಹೊಸ ನಿವೇಶನದಲ್ಲಿ ನಿರ್ಮಿಸುತ್ತೇವೆ ಎಂದು ಸಬೂಬು ನೀಡುತ್ತಾರೆ. ಇನ್ನೂ ಕೆಲವರು ನಮ್ಮ ವಿರುದ್ಧವೇ ವಾಗ್ದಾಳಿ ನಡೆಸುತ್ತಾರೆ. ಒಟ್ಟಾರೆ, ಬೆಳಿಗ್ಗೆ 5 ಗಂಟೆಗೆ ‘ಮೂಗು ಮುಚ್ಚಿಕೊಂಡು’ ಅಭಿಯಾನ ಶುರು ಮಾಡುತ್ತೇವೆ’ ಎಂದು ಸಿಬ್ಬಂದಿ ಎಸ್.ಪಿ. ಕಮದೋಡ ಅನುಭವ ಹಂಚಿಕೊಂಡರು. ಪೌರ ಕಾರ್ಮಿಕರು ಸಾಥ್ ನೀಡುತ್ತಿದ್ದಾರೆ.

ಅಭಿಯಾನ: ‘ಹಲವರಿಗೆ ಆಶ್ರಯ ವಸತಿ ಮಂಜೂರಾಗಿದೆ. ಹೀಗಾಗಿ, ಅಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುವ ಭರವಸೆ ನೀಡಿದ್ದಾರೆ. ಆದರೆ, ಅಧಿಕಾರಿಗಳು ಉತ್ತಮ ಅಭಿಯಾನ ಹಮ್ಮಿಕೊಂಡಿದ್ದು, ಯಶಸ್ವಿಯಾಗುತ್ತಿದೆ. ಆದರೆ, ಹಣ ಪಾವತಿ ತ್ವರಿತಗತಿಯಲ್ಲಿ ಮಾಡಬೇಕು’ ಎನ್ನುತ್ತಾರೆ 3ನೇವಾರ್ಡ್‌ ಸದಸ್ಯ ಮಲ್ಲೇಶಪ್ಪ ಪಟ್ಟಣಶೆಟ್ಟಿ. ಈ ಅಭಿಯಾನದ ಅಡಿಯಲ್ಲಿ ಅತಿ ಹೆಚ್ಚು ಶೌಚಾಲಯ (202) ಅವರ ವಾರ್ಡ್‌ನಲ್ಲಿ ನಿರ್ಮಾಣಗೊಂಡರೆ, ಎರಡನೇ ಶ್ರೇಯ ಐ.ಯು. ಪಠಾಣ್‌ ಅವರ 12ನೇ (105) ವಾರ್ಡ್‌ಗಿದೆ.

ಶೌಚಾಲಯ ಹೊಂದಿರುವ (ಸಾಧನೆ)ವಾರ್ಡ್‌ಗಳು

ಸ್ಥಾನ –ವಾರ್ಡ್ –ಸದಸ್ಯರು –ನಿರ್ಮಾಣಕ್ಕೆ ಬಾಕಿ
1. –10 –ರಮೇಶ ಕಡಕೋಳ –0
2. –07 –ಮಂಜುನಾಥ (ಗಣೇಶ)ಬಿಷ್ಟಣ್ಣನವರ –1
3. –13 –ನಿರಂಜನ ಹೇರೂರ –3
3. –06 –ಪಾರ್ವತೆಮ್ಮ ಹಲಗಣ್ಣನವರ –3
4. –19 –ಇರ್ಫಾನ್ ಖಾನ್ ಪಠಾಣ್ –4
5. –20 –ಲಲಿತಾ ಹೂಲಿಕಟ್ಟಿ –5
5. –28 –ರೇಣುಕಾ ಪೂಜಾರ –5
 

ಅತಿ ಹೆಚ್ಚು ಶೌಚಾಲಯ ರಹಿತ ಕುಟುಂಬಗಳಿರುವ ವಾರ್ಡ್‌ಗಳು

ಸ್ಥಾನ –ವಾರ್ಡ್ –ಸದಸ್ಯರು –ಶೌಚಾಲಯ ರಹಿತ ಕುಟುಂಬಗಳು
1. –03 –ಮಲ್ಲೇಶಪ್ಪ ಪಟ್ಟಣಶೆಟ್ಟಿ –236
2. –14 –ಸತೀಶ ಹಾವೇರಿ –149
3. –05 –ಹನುಮಂತಪ್ಪ ದೇವಗಿರಿ –138
4. –04 –ವೆಂಕಟೇಶ ಇಟಗಿ –120
5. –12 –ಐ.ಯು. ಪಠಾಣ್ –94
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT