ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಘಾಟನೆಗೆ ಅಣಿಯಾದ ವಸತಿಗೃಹ

Last Updated 27 ನವೆಂಬರ್ 2017, 8:35 IST
ಅಕ್ಷರ ಗಾತ್ರ

ಚಿತ್ತಾಪುರ: ಕಲಬುರ್ಗಿ-ಸೇಡಂ ರಾಜ್ಯ ಹೆದ್ದಾರಿ ಬದಿಯಲ್ಲಿ ಇರುವ ತಾಲ್ಲೂಕಿನ ಮಾಡಬೂಳ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಈಗ ಸುಸಜ್ಜಿತ ವಸತಿಗೃಹದ ಭಾಗ್ಯ ಲಭಿಸಿದೆ.

ಸಚಿವ ಪ್ರಿಯಾಂಕ್ ಎಂ. ಖರ್ಗೆ ಅವರ ಕಾಳಜಿಯಿಂದಾಗಿ ಪೊಲೀಸ್ ಠಾಣೆಯ ಬಳಿಯೆ ಸಿಬ್ಬಂದಿ ವಾಸಕ್ಕಾಗಿ ರೂ,3.36 ಕೋಟಿ ವೆಚ್ಚದಲ್ಲಿ ಎರಡು ಬ್ಲಾಕ್ ಒಳಗೊಂಡಿದೆ. ಸುಸಜ್ಜಿತ 24 ಮನೆಗಳು ಇರುವ ಸಿಬ್ಬಂದಿ ವಸತಿ ಸಮುಚ್ಚಯ ಕಟ್ಟಡ ನಿರ್ಮಾಣ ಕಾಮಗಾರಿ ಅಂತಿಮ ಘಟ್ಟ ತಲುಪಿ ಕಟ್ಟಡವು ಉದ್ಘಾಟನೆಗೆ ಅಣಿಯಾಗಿದೆ.

ಕಟ್ಟಡದಲ್ಲಿ 24 ಮನೆಗಳಿರುವ ಎರಡು ಬ್ಲಾಕ್ ಇವೆ. ಪ್ರತಿ ಬ್ಲಾಕ್ನಲ್ಲಿ 12 ಕುಟುಂಬಗಳು ವಾಸ ಮಾಡಲು ಅನುಕೂಲ ಆಗುವಂತೆ ಮನೆ ಕಟ್ಟಲಾಗಿದೆ. ಪ್ರತಿ ಕುಟುಂಬದ ವಾಸಕ್ಕೆ 800 ಚದರ ಅಡಿ ವಿಸ್ತೀರ್ಣ ಅಳತೆಯ ಜಾಗದಲ್ಲಿ ಮನೆ ನಿರ್ಮಿಸಲಾಗಿದೆ. ಪ್ರತಿ ಬ್ಲಾಕ್‌ನಲ್ಲಿ 9,600 ಚದರ ಅಡಿಯಂತೆ ಒಟ್ಟು 19,200 ಚದರ ಅಡಿ ವಿಸ್ತೀರ್ಣ ಅಳತೆಯ ಜಾಗದಲ್ಲಿ ಬೃಹತ್ ವಸತಿಗೃಹ ಕಟ್ಟಡ ನಿರ್ಮಾಣ ಮಾಡಲಾಗಿದೆ.

ಪ್ರತಿಯೊಂದು ಕುಟುಂಬಕ್ಕೆ ವಾಸ ಮಾಡಲು ಎರಡು ಬೆಡ್ ರೂಂ, ಒಂದು ಹಾಲ್ ಮತ್ತು ಅಡುಗೆ ಕೋಣೆ ವ್ಯವಸ್ಥೆ ಮಾಡಲಾಗಿದೆ. ಒಂದು ಬೆಡ್ ರೂಂಗೆ ಅಟ್ಯಾಚ್ ಬಾಥ್ ರೂಂ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ಬ್ಲಾಕ್‌ನಲ್ಲಿ ನೆಲಮಹಡಿ, ಮೊದಲ ಮಹಡಿ, ಎರಡನೆ ಮಹಡಿಯಲ್ಲಿ ತಲಾ 4 ಕುಟುಂಬಗಳಂತೆ ಎರಡು ಬ್ಲಾಕ್‌ನಲ್ಲಿ ಒಟ್ಟು 24 ಸಿಬ್ಬಂದಿಗೆ ವಾಸ ಮಾಡಲು ಅನುಕೂಲವಾಗಿದೆ ಎಂದು ಠಾಣೆಯ ಪೊಲೀಸ್ ಸಿಬ್ಬಂದಿ ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ.

ಕಳೆದ 2007ರಲ್ಲಿ ಶಹಾಬಾದ ಗ್ರಾಮೀಣ ಪೊಲೀಸ್ ಠಾಣೆಯನ್ನು ಮಾಡಬೂಳಕ್ಕೆ ಸ್ಥಳಾಂತರ ಮಾಡಲಾಗಿತ್ತು. ಹೆದ್ದಾರಿ ಪಕ್ಕದಲ್ಲಿರುವ ಮಾಡಬೂಳ ತಾಂಡಾದ ಸರ್ಕಾರಿ ಶಾಲಾ ಕಟ್ಟಡದಲ್ಲಿ ಠಾಣೆಯ ತಾತ್ಕಾಲಿಕ ಕಚೇರಿ, ಸೇವೆ ಶುರು ಮಾಡಲಾಗಿತ್ತು. ನಂತರ ಹೊಸದಾಗಿ ಠಾಣಾ ಕಟ್ಟಡ ಕಟ್ಟಿ ಅನುಕೂಲ ಮಾಡಲಾಗಿತ್ತು. ಆದರೆ, ಸಿಬ್ಬಂದಿ ವಾಸಕ್ಕೆ ಮನೆಯ ಸೌಲಭ್ಯ ಮಾತ್ರ ಗಗನಕುಸುಮವಾಗಿತ್ತು ಎನ್ನುತ್ತಾರೆ ಪೊಲೀಸ್ ಸಿಬ್ಬಂದಿ.

ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣಾಧಿಕಾರಿ ಮತ್ತು ಸಿಬ್ಬಂದಿ ಕಲಬುರ್ಗಿಯಲ್ಲಿ ಮನೆ ಮಾಡಿ ಬಂದು ಹೋಗುತ್ತಿದ್ದರು. ಕಲಬುರ್ಗಿ ಮನೆಯಲ್ಲಿದ್ದ ಸಿಬ್ಬಂದಿ ತುರ್ತುಸೇವೆಗೆ ತಕ್ಷಣ ಠಾಣೆಗೆ ಹಾಜರಾಗಲು ಹಗಲು ರಾತ್ರಿಯೆನ್ನದೆ ಪಡಬಾರದ ಕಷ್ಟಪಡುತ್ತಿದ್ದರು. ಈ ಎಲ್ಲಾ ಸಮಸ್ಯೆಗಳಿಗೆ ವಸತಿಗೃಹ ಕಟ್ಟಡ ನಿರ್ಮಾಣದಿಂದ ಪರಿಹಾರ ಒದಗಿಸಿದಂತಾಗಿದೆ ಎಂದು ಪೊಲೀಸರು ಸಂಭ್ರಮಿಸುತ್ತಿದ್ದಾರೆ.

‘ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಾಗಿ ಸುಸಜ್ಜಿತ ವಸತಿಗೃಹ ಕಟ್ಟಡ ನಿರ್ಮಾಣದಿಂದ ತುಂಬಾ ಅನುಕೂಲವಾಗಿದೆ. ಠಾಣೆಯಲ್ಲಿ ಕರ್ತವ್ಯ ಮುಗಿದ ತಕ್ಷಣ ಸಿಬ್ಬಂದಿ ಮನೆಗೆ ತೆರಳಿ ಕುಟುಂಬದೊಂದಿಗೆ ಸಂತೋಷದಿಂದ ಕಾಲ ಕಳೆಯಲು, ವಿಶ್ರಾಂತಿ ಪಡೆಯಲು ತುಂಬಾ ಉಪಯುಕ್ತವಾಗಿದೆ. ಠಾಣೆಯ ಹಿಂದುಗಡೆಯೆ ಮನೆಗಳು ಇರುವುದರಿಂದ ತುರ್ತು ಸೇವೆಯ ಕರೆ ನೀಡಿದಾಗ ಸಿಬ್ಬಂದಿ ತಕ್ಷಣ ಠಾಣೆಗೆ ಹಾಜರಾಗಲು ಸಾಧ್ಯವಾಗಲಿದೆ’ ಎನ್ನುತ್ತಾರೆ ಮಾಡಬೂಳ ಠಾಣೆಯ ಪಿಎಸ್ಐ ಹುಸೇನ್ ಬಾಷಾ.

ವಸತಿಗೃಹ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಹೊಸ ವಸತಿ ಗೃಹ ಕಟ್ಟಡ ಯಾವಾಗ ಉದ್ಘಾಟನೆ ಮಾಡುತ್ತಾರೊ, ನಮಗೆ ವಾಸ ಮಾಡಲು ಯಾವಾಗ ಅನುವು ಮಾಡಿ ಕೊಡುತ್ತಾರೆ ಎಂದು ಠಾಣೆಯ ಪೊಲೀಸ್ ಸಿಬ್ಬಂದಿಗಳು ಕಾತರದಿಂದ ಕಾದು ಕುಳಿತ್ತಿದ್ದಾರೆ.

* * 

ವಸತಿಗೃಹ ಕಾಮಗಾರಿ ಪೂರ್ಣಗೊಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟನೆ ನೆರವೇರಿಸಿದ ತಕ್ಷಣ ಸಿಬ್ಬಂದಿಗೆ ಮನೆ ಹಂಚಿಕೆ ಮಾಡಲಾಗುವುದು.
ಹುಸೇನ್ ಬಾಷಾ, ಪಿಎಸ್ಐ, ಮಾಡಬೂಳ ಪೊಲೀಸ್ ಠಾಣೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT