ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನ ಸೆಳೆದ ಹಾಲಕ್ಕಿಗರ ಹಗರಣ!

Last Updated 27 ನವೆಂಬರ್ 2017, 8:38 IST
ಅಕ್ಷರ ಗಾತ್ರ

ಕಾರವಾರ: ಒಂದು ಕಡೆ ಜಿಂಕೆಯನ್ನು ಹಿಡಿಯುತ್ತಿರುವ ಚಿರತೆ. ಅದರ ಹಿಂದೆ ಭಯಾನಕ ಘೇಂಡಾಮೃಗ, ದೈತ್ಯ ಕೋಳಿ. ಇನ್ನೊಂದೆಡೆ ‘ಅತಿ ವೇಗ ತಿಥಿ ಬೇಗ’ ಎಂಬ ಫಲಕ ಹಿಡಿದು, ಬಿಳಿ ಬಟ್ಟೆ ಸುತ್ತಿಕೊಂಡು ಥೇಟ್‌ ಅಪಘಾತಕ್ಕೀಡಾದ ವ್ಯಕ್ತಿಯಂತೆ ನಟಿಸುತ್ತಿರುವ ವ್ಯಕ್ತಿ. ನವದೇವತೆಗಳ ದರ್ಶನ..ಇವನ್ನೆಲ್ಲ ನೋಡಲು ಮುಗಿಬೀಳುತ್ತಿರುವ ಜನ.

ಹೌದು, ಇವೆಲ್ಲ ನೋಡೋಕೆ ಸಿಕ್ಕಿದ್ದು ತಾಲ್ಲೂಕಿನ ಅಮದಳ್ಳಿ ಗ್ರಾಮದ ನಾರಾಯಣ ದೇವರ ಜಾತ್ರಾ ಮಹೋತ್ಸವದಲ್ಲಿ. ಈ ವೇಳೆ ನಡೆಯುವ ಹಾಲಕ್ಕಿಗಳ ಹಗರಣ ಇಲ್ಲಿನ ಜನರ ಮನ್ನಣೆ ಗಳಿಸಿದೆ. ಶನಿವಾರ ರಾತ್ರಿ ನಡೆದ ಈ ಪ್ರದರ್ಶನಕ್ಕೆ ಸಾವಿರಾರು ಜನ ಸಾಕ್ಷಿಯಾದರು.

ಬ್ರಿಟಿಷರ ಕಾಲದಲ್ಲಿಯೇ ಇತ್ತು: ‘ಈ ಹಗರಣ ಬ್ರಿಟಿಷರ ಕಾಲದಿಂದಲೂ ಚಾಲ್ತಿಯಲ್ಲಿದೆ. ಇಂಗ್ಲೀಷ್ ಭಾಷೆ ಬರದ ಈ ಭಾಗದ ಜನರು ಅವರ ದಬ್ಬಾಳಿಕೆಯನ್ನು ವಿರೋಧಿಸಲು ಈ ರೀತಿಯ ಹಗರಣ ಹಾಗೂ ಉತ್ಸವದ ಮೂಲಕ ವಿವಿಧ ಅಣುಕು ಪ್ರದರ್ಶನ ಮಾಡುತ್ತಿದ್ದರು. ವಿವಿಧ ವೇಷತೊಟ್ಟು ಅವರಿಗೆ ತಿಳಿಯುವ ಹಾಗೆ ಅದನ್ನು ಬಿಂಬಿಸುತ್ತಿದ್ದರು. ಬಳಿಕ ಅದು ಹಾಲಕ್ಕಿಗಳಿಗೆ ಉತ್ಸವವಾಗಿ ಕಳೆದ ಹಲವು ತಲೆಮಾರುಗಳಿಂದ ಪ್ರತಿ ವರ್ಷ ನಡೆಸಿಕೊಂಡು ಬರಲಾಗುತ್ತಿದೆ’ ಎನ್ನುತ್ತಾರೆ ಜಾನಪದ ಕಲಾವಿದ ಪುರುಷೋತ್ತಮ ಗೌಡ.

ಎಲ್ಲ ಸಮಾಜದವರು ಭಾಗಿ: ಸುತ್ತಮುತ್ತಲಿನ ಗ್ರಾಮಗಳಿಂದ ತಯಾರಿಸಿದ ಪ್ರತಿಕೃತಿಗಳನ್ನು ಮೆರವಣಿಗೆ ಮೂಲಕ ಅಮದಳ್ಳಿಗೆ ತಂದು, ಅಲ್ಲಿನ ನಾರಾಯಣ ದೇವಸ್ಥಾನದ ಮೈದಾನದಲ್ಲಿ ಅರ್ಧಗಂಟೆಗೂ ಹೆಚ್ಚುಕಾಲ ಅದರ ಅಣಕು ಪ್ರದರ್ಶಿಸಲಾಯಿತು. ಇದರ ವೀಕ್ಷಣೆಗೆ ಜಿಲ್ಲೆಯ ನಾನಾ ಭಾಗಗಳಿಂದ ಜನ ಆಗಮಿಸಿದ್ದರು. ಇದು ಕೇವಲ ಹಾಲಕ್ಕಿ ಸಮಾಜದವರಿಗಷ್ಟೇ ಮೀಸಲಿಲ್ಲದೇ, ಕೋಮಾರಪಂಥ, ಪಡ್ತಿ, ಆಗೇರ ಸೇರಿದಂತೆ ಹಲವಾರು ಸಮಾಜದವರು ಸಂಪ್ರದಾಯದಂತೆ ಆಚರಣೆ ಮಾಡುತ್ತಿದ್ದಾರೆ.

* * 

ಮದಳ್ಳಿಯಲ್ಲಿ ನಡೆಯುವ ಈ ಹಗರಣ, ಇಡೀ ವರ್ಷದುದ್ದಕ್ಕೂ ನಡೆದ ವಿದ್ಯಮಾನಗಳ ಅಣಕು ಪ್ರದರ್ಶನ. ಇಲ್ಲಿಯ ಜನ ತಲೆತಲಾಂತರದಿಂದ ಈ ಆಚರಣೆಯನ್ನು ಅಚ್ಚುಕಟ್ಟಾಗಿ ಆಚರಿಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ.
ಅಕ್ಷತಾ, ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT