ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರಿಗೂ ಸಂದೇಶ ಸಾರುವ ಪ್ರದರ್ಶನ

Last Updated 27 ನವೆಂಬರ್ 2017, 9:19 IST
ಅಕ್ಷರ ಗಾತ್ರ

ವಿಜಯಪುರ: ಶತಮಾನದ ಐತಿಹ್ಯ ಹೊಂದಿರುವ ಜಮಾತೆ ಹಿಂದ್‌ ಇಸ್ಲಾಮಿ ಸಂಘಟನೆ, ನಗರದಲ್ಲಿ ಇದೇ ಮೊದಲ ಬಾರಿಗೆ ‘ಹಾರ್ಮನಿ’ ಎಂಬ ಪುಸ್ತಕ ಮೇಳ, ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಜಾಗೃತಿ ಮೂಡಿಸುವ ಪ್ರದರ್ಶನ ಆಯೋಜಿಸಿದ್ದು, ಸಾರ್ವಜನಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನ. 22ರಿಂದ ಮೇಳ ಆರಂಭ ಗೊಂಡಿದ್ದು, ಈ ನಾಲ್ಕು ದಿನಗಳಲ್ಲಿ 3,200ಕ್ಕೂ ಹೆಚ್ಚು ಜನರು ಭೇಟಿ ನೀಡಿ ವೀಕ್ಷಿಸುವ ಜತೆಗೆ, ₹ 2 ಲಕ್ಷ ಮೌಲ್ಯದ 7,500ಕ್ಕೂ ಹೆಚ್ಚು ಪುಸ್ತಕಗಳನ್ನು ಖರೀದಿಸಿದ್ದಾರೆ. ಇನ್ನೂ ನಾಲ್ಕು (ನ. 30) ದಿನ ಮೇಳ ನಡೆಯಲಿದ್ದು ಭಾಗವಹಿಸಲಿರುವವರ ಸಂಖ್ಯೆ ಹೆಚ್ಚಲಿದೆ ಎಂದು ಸಂಘಟಕರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಸಮಾಜದಲ್ಲಿ ವ್ಯವಸ್ಥಿತ ಪಿತೂರಿ ನಡೆಸುತ್ತಿರುವ ಘಾತಕ ಶಕ್ತಿಗಳ ವಿರುದ್ಧ, ಅಂಧಕಾರದಲ್ಲಿರುವ ಜನರನ್ನು ಬೆಳಕಿನತ್ತ ಕರೆತರಲು ಜಮಾತೆ ಹಿಂದ್‌ ಇಸ್ಲಾಮಿ ಸಂಘಟನೆ ಈ ಪುಸ್ತಕ ಮೇಳ, ಪ್ರದರ್ಶನ ಆಯೋಜಿಸಿದೆ ಎಂದು ಸ್ಥಳೀಯ ಸಂಘಟಕರು ತಿಳಿಸಿದರು.

ಪರಿಣಾಮಕಾರಿ ಸಂದೇಶ: ಪ್ರದರ್ಶನದ ಆರಂಭದಲ್ಲೇ ಚೀನಾದ ಮಹಾಗೋಡೆಯ ಪ್ರತಿಕೃತಿ ಬಿಂಬಿಸಲಾಗಿದೆ. ಹೊರಗಿನ ದಾಳಿಯಿಂದ ರಕ್ಷಿಸಿಕೊಳ್ಳಲು ಚೀನಿಯರು ಶತಮಾನಗಳ ಹಿಂದೆ ನಿರ್ಮಿಸಿಕೊಂಡಿದ್ದ ಮಹಾಗೋಡೆ ಯನ್ನು ಸಬಲತೆಯ ಸಂಕೇತವಾಗಿ ಬಿಂಬಿಸುವ ಜತೆಗೆ, ಭಾರತೀಯರ ಮನೋ ದೌರ್ಬಲ್ಯವನ್ನು ಪಕ್ಕದಲ್ಲೇ ಚಿತ್ರಿಸಲಾಗಿದೆ.

ಬ್ರಿಟಿಷರು ಭಾರತವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಶತಮಾನಗಳ ಹಿಂದೆ ಸೃಷ್ಟಿಸಿದ ಮತೀಯವಾದ ಇದೀಗ ಹಿಂದೂ–ಮುಸ್ಲಿಂ ಎಂಬ ಧರ್ಮದ ಕಲಹದಲ್ಲಿ ಹೆಮ್ಮರವಾಗಿ ಬೆಳೆದಿದ್ದು, ಭಾರತ ಮಾತೆ ನಲುಗುತ್ತಿರುವ ಚಿತ್ರಣ ಬಿಂಬಿಸಿದ್ದಾರೆ.

ಬ್ರಿಟಿಷರ ಒಡೆದಾಳುವ ನೀತಿ ಯಿಂದ ನಾವೆಲ್ಲರೂ ಇಂದಿಗೂ ಪ್ರತಿ ಕ್ಷಣ ಅನುಮಾನಾಸ್ಪದ ಜೀವನ ನಡೆಸುತ್ತಿದ್ದೇವೆ. ಸಂವಿಧಾನದ ಆಶಯಕ್ಕೆ ತಕ್ಕಂತೆ, ನಾವೆಲ್ಲ ಮಾನವರು, ಸಮಾನರು ಎಂಬುದನ್ನೇ ಮರೆತು ಜಾತಿ ಜಗಳ ನಡೆಸಿ, ಅವನತಿ ಹೊಂದುತ್ತಿದ್ದೇವೆ ಎಂಬುದನ್ನು ಮನೋಜ್ಞವಾಗಿ ಬಿಂಬಿಸಲಾಗಿದೆ. ಇದು ಪ್ರದರ್ಶನ ವೀಕ್ಷಿಸಿದ ಎಲ್ಲರ ಮನದಲ್ಲಿ ತನ್ನದೇ ಛಾಪು ಮೂಡಿಸುತ್ತದೆ. ಸತ್ಯದ ದರ್ಶನವಾದಂತಾಗುತ್ತದೆ.

ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ದಿಂದ ಯುವ ಸಮೂಹ ಹಳಿ ತಪ್ಪುತ್ತಿರುವುದು, ಭಾರತೀಯ ಸಂಸ್ಕೃತಿಯ ಶ್ರೇಷ್ಠತೆ, ವಿವಿಧತೆಯಲ್ಲಿ ಏಕತೆ, ಐಕ್ಯತೆಯ ಸಂಕೇತ. ಯಾವ ನೆಲದಲ್ಲಿ ವಾಸಿಸುತ್ತಿದ್ದೇವೆ. ಆ ನೆಲಕ್ಕೆ ಋಣಿಯಾಗಿರಬೇಕು ಎಂಬ ಮಹತ್ತರ ಸಂದೇಶವೂ ಇಲ್ಲಿ ಪ್ರತಿಬಿಂಬಿತಗೊಂಡಿರುವುದು ವಿಶೇಷ.

ಬಲಾಢ್ಯರ ಕೈ ವಶವಾಗಿರುವ ನ್ಯಾಯಾಂಗ ವ್ಯವಸ್ಥೆ, ಬಡವರಿಗೆ ಮರೀಚಿಕೆಯಾದ ನ್ಯಾಯ, ಮಿತಿ ಮೀರಿದ ಭ್ರಷ್ಟಾಚಾರ, ಲಂಚಗುಳಿತನ, ಸಮಾಜದಲ್ಲಿ ಎಗ್ಗಿಲ್ಲದೆ ನಡೆದಿರುವ ದೌರ್ಜನ್ಯ, ಶೋಷಣೆಗೆ ಹತಾಶರೂ ಆಗದೆ, ಅಪಾಯಕಾರಿಯೂ ಆಗದೆ ಸಭ್ಯತೆಯ ಮಾರ್ಗದಲ್ಲಿ ಖಂಡಿಸಬೇಕು ಎಂಬ ಸಂದೇಶವನ್ನು ಪರಿಣಾಮಕಾರಿಯಾಗಿ ಬಿಂಬಿಸಿದ್ದಾರೆ.

ಮಾನವೀಯ ಮೌಲ್ಯ ಬಿಂಬಿಸದ ಇಂದಿನ ಅವೈಜ್ಞಾನಿಕ ಶಿಕ್ಷಣ ಪದ್ಧತಿಯಿಂದಾಗುವ ದುಷ್ಪರಿಣಾಮ ಗಳು, ಬಡ್ಡಿ ದಂಧೆ, ಸ್ತ್ರೀ ಶೋಷಣೆ, ಸಂಸಾರ ಬಂಡಿಯ ರಥದ ಚಕ್ರಗಳ ವಿಶ್ಲೇಷಣೆ, ಇಸ್ಲಾಂನ ಐದು ಪ್ರಮುಖ ತತ್ವಗಳು, ದುಶ್ಚಟಗಳ ದುಷ್ಪರಿಣಾಮ, ಉತ್ತಮ ಸಮಾಜ ನಿರ್ಮಾಣದ ಆಶಯ, ಪ್ರಯತ್ನವಿಲ್ಲದೇ ಫಲವಿಲ್ಲ ಎಂದು ಪ್ರವಾದಿ ಹೇಳಿದ ಮಾತುಗಳನ್ನು, ಒಳಿತು–ಕೆಡುಕುಗಳ ಚಿತ್ರಣವನ್ನು ವ್ಯವಸ್ಥಿತವಾಗಿ ಬಿಂಬಿಸಲಾಗಿದೆ.

ಎಲ್ಲಾ ಭಾಷೆಯಲ್ಲಿ ಕುರ್‌ಆನ್‌ ಲಭ್ಯ
ಜಮಾತೆ ಇಸ್ಲಾಂ ಹಿಂದ್‌ ಸಂಘಟನೆ ಆಯೋಜಿಸಿರುವ ‘ಹಾರ್ಮನಿ’ ಪುಸ್ತಕ ಮೇಳದಲ್ಲಿ ಎಲ್ಲಾ ಭಾಷೆಯ ಕುರ್‌ಆನ್‌ ಧರ್ಮಗ್ರಂಥ ಲಭ್ಯವಿದೆ. ಚಿಕ್ಕ ಪುಸ್ತಕದಿಂದ ಹಿಡಿದು ಸಂಪೂರ್ಣ ಮಾಹಿತಿಯಿರುವ ಪುಸ್ತಕಗಳು ಲಭ್ಯವಿಲ್ಲಿ.

ಮಂಗಳೂರಿನ ಶಾಂತಿ ಪ್ರಕಾಶನ ಕನ್ನಡ ಭಾಷೆಯ ಪುಸ್ತಕಗಳನ್ನು ಮಾರಾಟಕ್ಕಿಟ್ಟಿದೆ. ಜೀವನದ ಯಶೋಗಾಥೆ, ಯಶಸ್ವಿ ಜೀವನ, ಸಮಾಜಮುಖಿ ಪುಸ್ತಕಗಳು, ಸಾಮಾಜಿಕ ಚಿಂತನೆ, ಕ್ರಾಂತಿಯ ಪುಸ್ತಕಗಳು ಇಲ್ಲಿವೆ. ಮಕ್ಕಳ ಪುಸ್ತಕಕ್ಕಾಗಿ ಪ್ರತ್ಯೇಕ ಕೌಂಟರ್‌ ತೆರೆಯಲಾಗಿದೆ. ಧರ್ಮಗಳ ನಡುವಿನ ಸಮಾನತೆ ಪ್ರತಿಪಾದಿಸುವ ಪುಸ್ತಕಗಳನ್ನು ಮಾರಾಟಕ್ಕಿಡಲಾಗಿದೆ ಎಂದು ಸಂಘಟನೆಯ ಸ್ವಯಂ ಸೇವಕ ಸರ್ಪರಾಜ್‌ ನವಾಜ್‌ ತಿಳಿಸಿದರು.

* * 

ಪುಸ್ತಕ ಮೇಳ ಎಂದು ಬಂದರೆ ಇಲ್ಲಿ ಧಾರ್ಮಿಕ, ಸಾಮಾಜಿಕ, ಮಾನವೀಯ ಕಳಕಳಿಯ ಸಂದೇಶ ಬಿತ್ತರಿಸುವ ಪ್ರದರ್ಶನ ಕಂಡು ಸಂತಸವಾಯ್ತು
ಹಾಜಿಲಾಲ್‌ ದಳವಾಯಿ ವೀಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT