ಜಳಕ ಪುಳಕ

ಆಯ್ತೇ ಸ್ನಾನ?

ಮನುಷ್ಯರಷ್ಟೇ ಅಲ್ಲ, ಪಕ್ಷಿಗಳೂ ಸ್ನಾನ ಮಾಡುತ್ತವೆ. ಮೀಯುವ ಸುಖದಲ್ಲಿ ಮೈಮರೆತು ತೇಲುತ್ತವೆ. ಒಂದೊಂದು ಹಕ್ಕಿಯದ್ದೂ ಒಂದೊಂದು ಬಗೆಯ ಜಳಕ...ಪುಳಕ...

ನೀರಿನಲ್ಲಿ ಮೀಯುತ್ತಿರುವ ಎಲೆಹಕ್ಕಿ ಚಿತ್ರಗಳು: ವಿಶ್ವನಾಥ ಸುವರ್ಣ

ಕುಟುಂಬದ ಸದಸ್ಯರೆಲ್ಲರೂ ವಾರಕ್ಕೊಮ್ಮೆ ಮೈಕೈಗೆ ಎಣ್ಣೆ ತಿಕ್ಕಿಕೊಂಡು ಸ್ನಾನ (ಅಭ್ಯಂಜನ) ಮಾಡುತ್ತಿದ್ದ ಕಾಲವೊಂದಿತ್ತು. ಆ ದಿನಗಳ ಮಜ್ಜನದ ನೆನಪು ಅತಿಮಧುರ. ಆಗ ಸ್ನಾನ ನಿತ್ಯದ ಕರ್ಮವಷ್ಟೇ ಆಗಿರಲಿಲ್ಲ. ಅದೊಂದು ಮನರಂಜನೆಯೂ ಆಗಿತ್ತು. ಶರವೇಗದಲ್ಲಿ ಸಾಗುತ್ತಿರುವ ಇಂದಿನ ಆಧುನಿಕ ಬದುಕು ಆ ಭಾವವನ್ನು ಕಿತ್ತುಕೊಂಡಿದೆ. ಹಾಗಾಗಿ, ಸ್ನಾನವೆಂದರೆ ಬಹಳಷ್ಟು ಮಂದಿಗೆ ಅತಿಗಳಿಗೆಯಲ್ಲಿ ಮುಗಿದುಹೋಗುವ ಕರ್ಮ.

ಮನುಷ್ಯ ಅಶುಚಿಯಾಗಿದ್ದರೆ ‘ಕೊಳಕು ಪ್ರಾಣಿ’ ಎಂದು ಪ್ರಾಣಿಗಳಿಗೆ ಹೋಲಿಸುವುದು ಸರ್ವೇ ಸಾಮಾನ್ಯ. ಆದರೆ ಪ್ರಾಣಿ, ಪಕ್ಷಿಗಳು ಗಬ್ಬುನಾರುತ್ತವೆ ಎಂಬ ಕಲ್ಪನೆ ತಪ್ಪು. ಶುಚಿತ್ವ ಕಾಪಾಡಿಕೊಳ್ಳದಿದ್ದರೆ ಅವು ಭೂಮಂಡಲದ ಮೇಲೆ ಜೀವಿಸಲು ಅನರ್ಹ. ಸ್ವಚ್ಛತೆ ಇಲ್ಲದಿದ್ದರೆ ಚಿಗಟ, ತೊಣಚಿ, ಹೇನು, ಕೂರೆಯಂಥಹ ರಕ್ತ ಹೀರುವ ಜೀವಿಗಳು ಅವುಗಳ ಮೇಲೆ ದಾಳಿ ಇಡುತ್ತವೆ. ದೇಹದ ರಕ್ತ ಹೀರುವುದರಿಂದ ಮನುಷ್ಯರಂತೆಯೇ ಕೃಶಗೊಂಡು ಸಾಯುತ್ತವೆ. ರಕ್ತ ಹೀರುವಾಗ ಉಂಟಾಗುವ ಗಾಯದ ಮೂಲಕ ಬ್ಯಾಕ್ಟೀರಿಯಾ ಮುಂತಾದ ರೋಗಾಣುಗಳು ದೇಹ ‍ಪ್ರವೇಶಿಸಿ ಹಲವು ಬಗೆಯ ಕಾಯಿಲೆಗಳಿಗೂ ನಾಂದಿ ಹಾಡುತ್ತವೆ. ಉಪದ್ರವಿ ಜೀವಿಗಳ ಕಾಟ ತಪ್ಪಿಸಿಕೊಳ್ಳುವುದೇ ಸ್ನಾನದ ಹಿಂದಿನ ಉದ್ದೇಶ.

ಗಾತ್ರದಲ್ಲಿ ಈ ಉಪದ್ರವಿ ಜೀವಿಗಳು ಚಿಕ್ಕದಾಗಿರುತ್ತವೆ. ಆದರೆ, ದೈತ್ಯ ಪ್ರಾಣಿಗಳ ಜೀವಕ್ಕೂ ಸಂಚಕಾರ ತರುವ ಶಕ್ತಿ ಅವುಗಳಿಗಿದೆ. ಅವುಗಳ ನಿವಾರಣೆಗಾಗಿ ಪ್ರಾಣಿಗಳು ಮತ್ತು ಪಕ್ಷಿಗಳು ಸ್ನಾನ ಮಾಡುತ್ತವೆ.

(ಒಟ್ಟೊಟ್ಟಿಗೆ ಮೀಯುವ ಮಜ  ಚಿತ್ರ: ಎಸ್‌.ಕೆ. ದಿನೇಶ್‌)

ಹಕ್ಕಿಗಳದ್ದು ಕೌತುಕದ ಜೀವನ. ಅವುಗಳ ಬದುಕಿನ ಪರಿ ಕಂಡು ಮನುಷ್ಯನ ಭಾವನೆಗಳು ರೆಕ್ಕೆ ಬಿಚ್ಚಿಕೊಳ್ಳುತ್ತವೆ. ಪಕ್ಷಿಗಳ ಹಾರಾಟದ ಶಕ್ತಿ ಸೋಜಿಗ ಮೂಡಿಸುತ್ತದೆ. ಮಾನವ ನಿರ್ಮಿತ ಎಲ್ಲ ಗಡಿರೇಖೆಗಳು, ನಿಸರ್ಗದ ಅಡೆತಡೆ ದಾಟಿ ಬದುಕುವ ಅವುಗಳ ಸಾಮರ್ಥ್ಯ ಅಚ್ಚರಿಯೇ ಸರಿ.

ವಲಸೆ ಪ್ರಕೃತಿಯ ಅದ್ಭುತ ಶಕ್ತಿಯ ನಿಗೂಢ ‍ಪ್ರಕ್ರಿಯೆ. ಋತುಮಾನಕ್ಕೆ ಅನುಗುಣವಾಗಿ ಹಕ್ಕಿಗಳು ವಲಸೆ ಹೋಗುತ್ತವೆ. ಪ್ರತಿ ಹಕ್ಕಿಗೂ ಇದೊಂದು ಜೀವಿತಾವಧಿಯ ಸವಾಲು. ವಲಸೆ ವೇಳೆಯಲ್ಲಿ ಹಗಲು–ರಾತ್ರಿ ಎನ್ನದೇ ಅವುಗಳದ್ದು ನಿರಂತರ ಪಯಣ. ಸಾವಿರಾರು ಮೈಲಿ ಹಾರಾಟ ನಡೆಸುತ್ತವೆ. ಗಾಳಿ, ಸಮುದ್ರದ ಅಲೆಗಳ ವೇಗ ಬಳಸಿಕೊಂಡು ನಿರ್ದಿಷ್ಟ ದೂರವನ್ನು ತಲುಪುತ್ತವೆ.

ಸಮುದ್ರಯಾನದ ವೇಳೆ ಮನುಷ್ಯ ದಿಕ್ಕುತ‍ಪ್ಪಿದ ನಿದರ್ಶನ ಸಾಕಷ್ಟಿವೆ. ಜಲಪಟಗಳ ರಚನೆ ನಿಖರವಾಗಿದ್ದರೂ ಸಾಗರಯಾನ ಸುಲಭದ್ದಲ್ಲ.‌ ಆದರೆ, ಹಕ್ಕಿಗಳು ದಿಕ್ಕು ತಪ್ಪುವುದಿಲ್ಲ. ತನ್ನ ಅಪ್ಪ, ಅಮ್ಮ, ಕುಟುಂಬದ ಸದಸ್ಯರು ಭೇಟಿ ನೀಡಿದ್ದ ವಲಸೆ ಸ್ಥಳಕ್ಕೆ ಕರಾರುವಾಕ್ಕಾಗಿ ನಿರ್ದಿಷ್ಟ ದಿನದಂದೇ ಬಂದು ಸೇರುವ ಶಕ್ತಿ ಅವುಗಳಿಗೆ ಸಿದ್ಧಿಸಿದೆ. ಈ ವಲಸೆ ಜಾಗ ತಲುಪಲು ರೆಕ್ಕೆಗಳು ಬಲಿಷ್ಠವಾಗಿರಬೇಕು. ಹಾಗಾಗಿ, ರೆಕ್ಕೆಗಳು ಸದೃಢವಾಗಿರಲು ಅವುಗಳಿಗೆ ಮಜ್ಜನ ಅನಿವಾರ್ಯ.

ನೀರು ಸ್ನಾನ: ಪಕ್ಷಿಸಂಕುಲ ದೇಹದ ಶುದ್ಧತೆಗೆ ಹಲವು ಬಗೆಯ ತಂತ್ರ ಬಳಸುತ್ತವೆ. ದೇಹದ ಶುಚಿತ್ವಕ್ಕಾಗಿ ನೀರು ಸ್ನಾನ ಮಾಡುವುದು ನೈರ್ಮಲ್ಯದ ಒಂದು ತಂತ್ರ.

ಪಕ್ಷಿಗಳ ಈ ನೀರಾಟವನ್ನು ನೋಡಲು ನಾವು ರಂಗನತಿಟ್ಟುವರೆಗೇನೂ ಹೋಗಬೇಕಿಲ್ಲ. ನಮ್ಮ ಸುತ್ತಮುತ್ತಲಿನ ಜಲತಾಣಗಳತ್ತ ಕಣ್ಣು ಹರಿಸಿದರೆ ಸಾಕು.

ಸ್ನಾನ ಮಾಡುವುದರಲ್ಲಿ ಪಕ್ಷಿಗಳಿಗೆ ಸಿಗುವ ಖುಷಿ  ವರ್ಣಿಸಲಸದಳ. ಮಳೆ ನೀರಿನಲ್ಲಿ ನೆನೆದರೂ ದಣಿವಾರಿಸಿಕೊಳ್ಳುವಾಗ ನೀರಿನಲ್ಲಿ ಮಿಂದೇಳುತ್ತವೆ. ಕಾಗೆ, ಪಿಕಳಾರ, ಗುಬ್ಬಚ್ಚಿಗಳಿಗೆ ನೀರಿನಲ್ಲಿ ಮೀಯುವುದೆಂದರೆ ಎಲ್ಲಿಲ್ಲದ ಆನಂದ.

ಜವುಗಿನ ಹಕ್ಕಿಗಳು ಸದಾಕಾಲ ನೀರಿನಲ್ಲಿಯೇ ಕಾಲದೂಡುತ್ತವೆ. ಆದರೆ, ಇವುಗಳು ಕೂಡ ರೆಕ್ಕೆಗಳ ಸದೃಢತೆಗಾಗಿ ಮಜ್ಜನ ಮಾಡುತ್ತವೆ. ಗುಳುಮುಳುಕ, ಬಾತುಗಳು, ಸರಳೆ, ನೀರುಕಾಗೆ ಮುಂತಾದ ನೀರಾಶ್ರಯದ ಹಕ್ಕಿಗಳು ನೀರಿನಲ್ಲಿ ಈಜುವಾಗಲೇ ಸ್ನಾನ ಮಾಡುತ್ತವೆ. ನೀರಿನಲ್ಲಿ ಮುಳುಗುವಾಗ ರೆಕ್ಕೆಬಿಚ್ಚಿ ಮಜ್ಜನ ಮಾಡುತ್ತವೆ. ನಿಂತ ನೀರಿನಲ್ಲಿಯೂ ಸ್ನಾನ ಮಾಡುವುದು ಉಂಟು. ಮಿಂದ ಬಳಿಕ ಹತ್ತಿರದ ಮರ ಅಥವಾ ಕಲ್ಲುಬಂಡೆಗಳ ಮೇಲೆ ಕುಳಿತು ರೆಕ್ಕೆಗಳನ್ನು ಒಣಗಿಸಿಕೊಳ್ಳುತ್ತವೆ. ಕೆರೆ, ಕಟ್ಟೆಯ ದಂಡೆ ಅಥವಾ ಮರಗಳ ಮೇಲೆ ನೀರುಕಾಗೆಗಳು ರೆಕ್ಕೆ ಅಗಲಿಸಿಕೊಂಡು ಕುಳಿತುಕೊಂಡಿರುವುದನ್ನು ಗಮನಿಸಬಹುದು.

(ನೀರಿನಲ್ಲಿ ಮೀಯುತ್ತಿರುವ ಪಾರಿವಾಳಗಳು. ಚಿತ್ರ: ಆನಂದ ಬಕ್ಷಿ)

ಅಂಬರಗುಬ್ಬಿಗಳು ಆಗಸದಲ್ಲಿ ಹಾರಾಡುವುದರಲ್ಲಿಯೇ ಕಾಲದೂಡುತ್ತವೆ. ಅವು ನೆಲಕ್ಕೆ ಇಳಿಯುವುದು ಕಡಿಮೆ. ಹಾರಾಟ ಮಾಡುವಾಗಲೇ ನೀರಿಗೆ ಧುಮುಕಿ ಸ್ನಾನ ಮಾಡುತ್ತವೆ. ಬಾಲ ಮೇಲೆತ್ತಿ ನೀರಿನಲ್ಲಿ ದೇಹ ಮುಳುಗಿಸುವ ಅವುಗಳ ಮಜ್ಜನವನ್ನು ನೋಡುವುದೇ ಕಣ್ಣಿಗೆ ಆನಂದ. ನೊಣಹಿಡುಕಗಳು ನೀರಿನ ಅಂಚಿನಲ್ಲಿರುವ ಮರದ ಕೊಂಬೆಗಳ ಮೇಲೆ ಕುಳಿತುಕೊಳ್ಳುತ್ತವೆ. ಬಳಿಕ ನೀರಿಗೆ ಧುಮುಕಿ ಸ್ನಾನ ಮಾಡುತ್ತವೆ.

ದೂಳಿನ ಸ್ನಾನ: ನೀರು ಸ್ನಾನಕ್ಕಷ್ಟೇ ‍‍ಪಕ್ಷಿಗಳು ಸೀಮಿತಗೊಂಡಿಲ್ಲ. ದೂಳು ಅಥವಾ ಮರಳಿನ ಸ್ನಾನ ಮಾಡುವುದರಲ್ಲಿಯೂ ಅವುಗಳದ್ದು ಎತ್ತಿದ ಕೈ. ರೆಕ್ಕೆಪುಕ್ಕಗಳ ಬಲಿಷ್ಠತೆಗೆ ದೂಳಿನ ಸ್ನಾನ ಅವುಗಳಿಗೆ ಚೇತೋಹಾರಿ. ಜತೆಗೆ, ಉಪದ್ರವಿಗಳ ಬಾಧೆಯಿಂದ ತಪ್ಪಿಸಿಕೊಳ್ಳಲು ದೂಳಿನ ಸ್ನಾನ ಸಹಕಾರಿ. ಕನ್ನಡ ನಾಡಿನಲ್ಲಿ ಐದು ನೂರಕ್ಕೂ ಹೆಚ್ಚು ಪಕ್ಷಿ ಪ್ರಭೇದ ಗುರುತಿಸಲಾಗಿದೆ. ಈ ಪೈಕಿ ನೂರಾರು ಪಕ್ಷಿಗಳು ದೂಳಿನಲ್ಲಿ ಮೀಯುತ್ತವೆ.

ಶುಷ್ಕ ವಾತಾವರಣ, ಧಗೆ ಹೆಚ್ಚಿರುವ ವೇಳೆ ದೂಳಿನ ಸ್ನಾನ ಮಾಡುತ್ತವೆ. ನೀರಿನ ಕೊರತೆ ಎದುರಾದಾಗ ಹಾಗೂ ಅಗತ್ಯವಿದ್ದಾಗ ಧೂಮಲೀಲೆಯಲ್ಲಿ ತೊಡಗುತ್ತವೆ. ದೂಳಿನ ಸ್ನಾನಕ್ಕಾಗಿ ಸ್ಥಳದ ಆಯ್ಕೆಯಲ್ಲೂ ಜಾಣತನ ಮೆರೆಯುತ್ತವೆ. ನಯವಾದ ಒಣನೆಲವನ್ನು ಆಯ್ದುಕೊಳ್ಳುತ್ತವೆ. ಕಾಲಿನ ಉಗುರಿನಿಂದ ನೆಲವನ್ನು ಉಜ್ಜುತ್ತವೆ. ಆಗ ಅಲ್ಲಿ ನುಣುಪಾದ ಮಣ್ಣು ಸಿದ್ಧವಾಗುತ್ತದೆ. ಏಕ ಕಾಲಕ್ಕೆ ರೆಕ್ಕೆಗಳನ್ನು ಅಗಲಿಸಿ ಎದೆ ಭಾಗವನ್ನು ಭೂಮಿಗೆ ಒತ್ತು ತ್ತವೆ. ಜತೆಗೆ ಬಾಲ, ತಲೆಯನ್ನೂ ನೆಲಕ್ಕೆ ಒತ್ತು ತ್ತವೆ. ದೂಳು ಇಡೀ ದೇಹ ಆವರಿಸುತ್ತದೆ. ಪಕ್ಷಿಗಳು ನೀರಿನ ಸ್ನಾನ ಮಾಡುವುದು ಇದೇ ಮಾದರಿಯಲ್ಲಿಯೇ.

ಧೂಮಲೀಲೆ ಮುಗಿದ ತಕ್ಷಣ ಪಕ್ಷಿಗಳು ದೀರ್ಘವಾದ ಉಸಿರು ತೆಗೆದುಕೊಳ್ಳುತ್ತವೆ. ಬಳಿಕ ಅತ್ತಿತ್ತ ವಾರೆನೋಟ ಬೀರುತ್ತವೆ. ಸಂತೃಪ್ತಿಯಾಗುವವರೆಗೂ ದೂಳಿನಲ್ಲಿ ಮಿಂದೇಳು ತ್ತವೆ. ಇಡೀ ದೇಹ ದೂಳುಮಯವಾಗುವ ತನಕವೂ ಸ್ಥಳ ಬಿಟ್ಟು ಮೇಲೇಳುವುದಿಲ್ಲ. ನಂತರ ಹತ್ತಿರದ ಮರಗಳು, ಕಲ್ಲುಬಂಡೆಗಳ ಮೇಲೆ ಕುಳಿತು ಮೈಕೊಡವುತ್ತವೆ. ದೇಹಕ್ಕೆ ಅಂಟಿದ ಹೆಚ್ಚುವರಿ ದೂಳು ಕೊಡವಿ ದಣಿವಾರಿಸಿಕೊಳ್ಳುತ್ತವೆ.

(ಬಿಳಿಕತ್ತಿನ ಚೇಕಡಿ ಮಿಂದು ದಣಿವಾರಿಸಿಕೊಂಡ ಪರಿ...)

ಗುಬ್ಬಚ್ಚಿಗಳು ನೀರು, ದೂಳಿನ ಸ್ನಾನ ಎರಡನ್ನೂ ಮಾಡುವುದು ಉಂಟು. ಬಿರುಬೇಸಿಗೆಯಲ್ಲಿ ಕೆಲವು ಪಕ್ಷಿಗಳು ದಿನವೊಂದಕ್ಕೆ ಐದು ಬಾರಿ ಧೂಮಲೀಲೆಯಲ್ಲಿ ಮೀಯುತ್ತವೆ. ಪಕ್ಷಿಸಂಕುಲದ ಸ್ನಾನ ಅಷ್ಟು ಸುರಕ್ಷಿತವಲ್ಲ. ಮಜ್ಜನದ ವೇಳೆ ಮೈಮರೆತರೆ ಬೆಕ್ಕಿನಂತಹ ಸಾಕುಪ್ರಾಣಿಗಳು ಅವುಗಳ ಗೋಣು ಮುರಿಯುತ್ತವೆ. ಪಕ್ಷಿಗಳು ಕೊಳಕನ್ನು ಇಷ್ಟಪಡುವುದಿಲ್ಲ. ದೇಹದ ಶುದ್ಧತೆ ಕಾಪಾಡಿಕೊಳ್ಳುವಲ್ಲಿ ಮನುಷ್ಯರಿಗಿಂತಲೂ ಒಂದು ಹೆಜ್ಜೆ ಮುಂದಿವೆ. ಹಕ್ಕಿಗಳು ಬದುಕುಳಿಯಲು ರೂಪಿಸಿಕೊಂಡಿರುವ ಜೀವನ ವಿಧಾನಗಳಲ್ಲಿ ಮಜ್ಜನವೂ ಒಂದಾಗಿದೆ.

**

ಇರುವೆ ಸ್ನಾನ!‌

ಪಕ್ಷಿಗಳು ದೇಹದ ಶುದ್ಧತೆಗೆ ಇತರೆ ಪ್ರಾಣಿಗಳ ನೆರವು ಪಡೆಯುತ್ತವೆ. ಮಜ್ಜನಕ್ಕಾಗಿ ಅವುಗಳು ಬಳಸುವ ತಂತ್ರಗಾರಿಕೆ ಊಹೆಗೆ ನಿಲುಕದ್ದು. ಬ್ಲೂ ಜೇ ಮತ್ತು ಮೈನಾ ಪ್ರಭೇದಕ್ಕೆ ಸೇರಿದ ಹಕ್ಕಿಗಳು ಮತ್ತು ಇರುವೆಗಳಿಗೆ ಎಲ್ಲಿಲ್ಲದ ನಂಟು. ರೆಕ್ಕೆಪುಕ್ಕದಲ್ಲಿರುವ ಉಪದ್ರವಿಗಳ ನಿವಾರಣೆಗಾಗಿ ಈ ಪಕ್ಷಿಗಳಿಗೆ ಇರುವೆಗಳೇ ಆಸರೆ. ಬ್ಲೂ ಜೇ ಹಕ್ಕಿಯು ಕೊಕ್ಕಿನಿಂದ ಮೆಲ್ಲನೆ ಇರುವೆ ಎತ್ತಿಕೊಂಡು ನವೆಯಾಗುವ ಜಾಗಕ್ಕೆ ಬಿಟ್ಟುಕೊಳ್ಳುತ್ತದೆ. ಆಗ ಇರುವೆಗೂ ಗಲಿಬಿಲಿ. ತಕ್ಷಣ ಕೋಪಗೊಳ್ಳುವ ಇರುವೆ ಅಲ್ಲಿ ಫಾರ್ಮಿಕ್ ಆಮ್ಲ ಸಿಂಪಡಿಸುತ್ತದೆ. ಆಗ ಪಕ್ಷಿಯ ನರ್ತನ ನಗು ತರಿಸುತ್ತದೆ. ಫಾರ್ಮಿಕ್ ಆಮ್ಲ ಬಿದ್ದ ಕೂಡಲೇ ರೆಕ್ಕೆಪುಕ್ಕದಲ್ಲಿ ನೆಲೆಯೂರಿದ್ದ ಕ್ರಿಮಿಗಳು ಸಾವು ಕಾಣುತ್ತವೆ. ಈ ಹಕ್ಕಿಯೂ ನವೆಯಾಗುವ ಜಾಗಕ್ಕೆ ಒಂದೊಂದೇ ಇರುವೆ ಬಿಟ್ಟುಕೊಂಡು ಉಪದ್ರವಕಾರಿ ಕ್ರಿಮಿಗಳನ್ನು ನಿವಾರಣೆ ಮಾಡಿಕೊಳ್ಳುತ್ತದೆ. ಇದಕ್ಕೆ ‘ಇರುವೆ ಸ್ನಾನ’ ಎಂದು ಕರೆಯುತ್ತಾರೆ.


(ಮಜ್ಜನದ ಖುಷಿಯಲ್ಲಿ ರೆಕ್ಕೆ ಬಡಿಯುತ್ತಿರುವ ಹಳದಿ ಕಣ್ಣಿನ ಹರಟೆಮಲ್ಲ)

ಹಕ್ಕಿಯು ಅಪ್ಪಿತಪ್ಪಿಯೂ ಫಾರ್ಮಿಕ್‌ ಆಮ್ಲ ಇರುವ ಇರುವೆಗಳ ಭಕ್ಷಣೆ ಮಾಡುವುದಿಲ್ಲ. ರೆಕ್ಕೆಪುಕ್ಕದಿಂದ ನೆಲಕ್ಕೆ ಬಿದ್ದ ಇರುವೆಗಳು ಆಮ್ಲರಹಿತವಾಗಿರುತ್ತವೆ. ಆಗ ಇವುಗಳನ್ನು ಕುಕ್ಕಿಕೊಂಡು ತಿನ್ನುತ್ತದೆ.

Comments
ಈ ವಿಭಾಗದಿಂದ ಇನ್ನಷ್ಟು
ಸ್ವರ್ಗದ ತುಣುಕುಗಳು

ಕರ್ನಾಟಕ ದರ್ಶನ
ಸ್ವರ್ಗದ ತುಣುಕುಗಳು

20 Mar, 2018
ಖುಷಿಯ ದಾರಿಗೆ   ವಿವೇಕದ ದೀಪ

ಕರ್ನಾಟಕ ದರ್ಶನ
ಖುಷಿಯ ದಾರಿಗೆ ವಿವೇಕದ ದೀಪ

20 Mar, 2018
ಬಾಯ್ಕಳಕ ಬಯಲಾಟ

ಕರ್ನಾಟಕ ದರ್ಶನ
ಬಾಯ್ಕಳಕ ಬಯಲಾಟ

13 Mar, 2018
ಬಂತು ಯುದ್ಧ ಟ್ಯಾಂಕ್‌!

ರೋಚಕ ಸಂಗತಿ
ಬಂತು ಯುದ್ಧ ಟ್ಯಾಂಕ್‌!

13 Mar, 2018
ಕೊಳಲಿನ ಹಬ್ಬ

ಕರ್ನಾಟಕ ದರ್ಶನ
ಕೊಳಲಿನ ಹಬ್ಬ

6 Mar, 2018