ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಹಂಗಾಮಿನ ಬೆಳೆ

Last Updated 27 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮಿಡಿಸೌತೆ ಬೆಳೆದ ರೈತರಿಗೆ ನಿಶ್ಚಿತ ಆದಾಯ ಗ್ಯಾರಂಟಿ. ಹೀಗಾಗಿ ಈ ಬೆಳೆಯನ್ನು ಬೆಳೆಯುವವರ ಸಂಖ್ಯೆ ಹೆಚ್ಚುತ್ತಿದೆ. ರಾಜ್ಯದಲ್ಲಿ ಮಿಡಿಸೌತೆಯನ್ನು ಮುಂಗಾರು (ಏಪ್ರಿಲ್‌– ಜೂನ್‌), ಹಿಂಗಾರು (ಆಗಸ್ಟ್‌– ಅಕ್ಟೋಬರ್‌) ಹಾಗೂ ಬೇಸಿಗೆ (ಡಿಸೆಂಬರ್‌– ಫೆಬ್ರುವರಿ) ಬೆಳೆಯಾಗಿ ಬೆಳೆಯಲಾಗುತ್ತಿದೆ. ಒಂದು ಎಕರೆಗೆ 10 ಸಾವಿರ ಬೀಜ ಬೇಕು. ಒಂದು ಬೀಜಕ್ಕೆ 50 ಪೈಸೆಯಿಂದ ಒಂದು ರೂಪಾಯಿವರೆಗೂ ಬೆಲೆ ಇದೆ.

ಬೀಜ ಹಾಕಿದ ಒಂದು ತಿಂಗಳಿಗೆ ಕಾಯಿ ಬಿಡಲು ಶುರುವಾಗುತ್ತದೆ. ಮುಂದಿನ 50ರಿಂದ 60 ದಿನಗಳವರೆಗೆ ದಿನಾಲೂ ಕಾಯಿ ಕೊಯ್ಯಬಹುದು. ಕಾಯಿ ತೆಗೆದುಕೊಳ್ಳುವ ಕಂಪನಿಯವರು 15 ದಿನಗಳಿಗೆ ಒಮ್ಮೆ ರೈತರಿಗೆ ಹಣ ನೀಡುತ್ತಾರೆ. ಈ ಬೆಳೆಗೆ ಸ್ಥಳೀಯ ಮಾರುಕಟ್ಟೆ ಇಲ್ಲದಿರುವುದರಿಂದ ರಫ್ತು ಕಂಪನಿಯ ಜೊತೆಗೆ ಖರೀದಿ ಒಪ್ಪಂದ ಮಾಡಿಕೊಂಡೇ ಬೆಳೆಸುವುದು ಅನಿವಾರ್ಯ.

ಈ ಬೆಳೆಗೆ ನೀರಿನ ಸೌಕರ್ಯ, ಸಮತಟ್ಟಾದ ಭೂಮಿ ಅತ್ಯಗತ್ಯ. ದಿನಾಲೂ ಕಾಯಿ ಕೊಯ್ಯಲೇಬೇಕಾಗಿರುವುದರಿಂದ ಕೆಲಸಕ್ಕೆ ಕೂಲಿಯನ್ನು ಅವಲಂಬಿಸಬೇಕಾಗಿದೆ.

ದಕ್ಷಿಣ ಭಾರತಕ್ಕೆ ವಲಸೆ: ರಷ್ಯಾ, ಅಮೆರಿಕ, ಮೆಕ್ಸಿಕೊ, ವಿಯೆಟ್ನಾಂ ಈ ನಾಲ್ಕು ದೇಶಗಳಲ್ಲೇ ಜಗತ್ತಿನ ಒಟ್ಟು ಮಿಡಿಸೌತೆ ಉತ್ಪಾದನೆಯಲ್ಲಿ ಶೇ 40ರಷ್ಟನ್ನು ಬೆಳೆಯಲಾಗುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಶೇ 50ರಷ್ಟು ಮಿಡಿಸೌತೆಯನ್ನು ರಷ್ಯಾದಲ್ಲೇ ಬಳಕೆ ಮಾಡಲಾಗುತ್ತಿದೆ.

ಈ ರಾಷ್ಟ್ರಗಳಲ್ಲಿ ಕಾರ್ಮಿಕರ ಸಮಸ್ಯೆ ತೀವ್ರವಾಗಿದೆ. ಯಂತ್ರದ ಸಹಾಯದಿಂದ ಕೊಯ್ಯಬೇಕಾಗಿರುವುದರಿಂದ ದೊಡ್ಡ ಕಾಯಿಗಳು ಮಾತ್ರ ಸಿಗುತ್ತಿವೆ. ಜೊತೆಗೆ ಅಲ್ಲಿನ ಹವಾಮಾನ ಪ್ರತಿಕೂಲ ವಾಗಿರುವುದರಿಂದ ಒಂದು ಬೆಳೆಯನ್ನು ಮಾತ್ರ ಬೆಳೆಯಲು ಸಾಧ್ಯವಾಗುತ್ತಿದೆ. ಹೀಗಾಗಿ ಎಳೆಯ ಕಾಯಿ ಸಲುವಾಗಿ 80ರ ದಶಕ ದಲ್ಲಿ ಈ ಬೆಳೆಯನ್ನು ವಿದೇಶಿ ಕಂಪನಿಗಳು ಶ್ರೀಲಂಕಾದಲ್ಲಿ ಬೆಳೆಸಲು ಆಸಕ್ತಿ ತೋರಿಸಿದವು. ಅಲ್ಲಿ ಎಲ್‌ಟಿಟಿಇ ಸಮಸ್ಯೆ ತೀವ್ರ ಗೊಂಡ ಬಳಿಕ 90ರ ದಶಕದಲ್ಲಿ ಅವು ನಮ್ಮ ದೇಶದತ್ತ ಮುಖ ಮಾಡಿದವು.

ಮಿಡಿಸೌತೆಯನ್ನು ಬೆಳೆಯಲು ಕನಿಷ್ಠ 15ರಿಂದ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದೊಳಗಿನ ವಾತಾವರಣ ಇರಬೇಕು. ದಕ್ಷಿಣ ಭಾರತದ ಹವಾಮಾನ ಪೂರಕವಾಗಿದ್ದರಿಂದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಈ ಬೆಳೆ ನೆಲೆಯೂರಿತು.

ಈ ಮೂರು ರಾಜ್ಯಗಳಲ್ಲಿ ರೈತರಿಂದ ಮಿಡಿಸೌತೆಯನ್ನು ಬೆಳೆಸು ತ್ತಿರುವ ಕಂಪನಿಗಳು ‘ಇಂಡಿಯನ್‌ ಗೆರ್ಕಿನ್‌ ಎಕ್ಸ್‌ಪೋರ್ಟರ್ಸ್‌ ಅಸೋಸಿಯೇಷನ್‌’ ನಿರ್ಮಿಸಿಕೊಂಡಿದ್ದು, 25 ವರ್ಷಗಳಿಂದ ಭಾರತದ ಆರ್ಥಿಕತೆಗೆ ಕೊಡುಗೆ ನೀಡುತ್ತಿವೆ. ದೇಶದಲ್ಲಿ ಒಟ್ಟು 45 ಕಂಪನಿಗಳು ರಫ್ತು ಮಾಡುತ್ತಿದ್ದು, ರಾಜ್ಯದಲ್ಲೇ 30 ಕಂಪನಿಗಳಿವೆ.

‘ಮಿಡಿಸೌತೆ ಹೊರತುಪಡಿಸಿದರೆ ಸ್ವಂತ ಬಂಡವಾಳ ಹೂಡದೇ ಕಡಿಮೆ ಅವಧಿಯಲ್ಲಿ ಅಧಿಕ ಲಾಭ ಸಿಗುವ ಮತ್ತೊಂದು ಬೆಳೆ ನಮ್ಮ ದೇಶದಲ್ಲಿಲ್ಲ. ಅತಿವೃಷ್ಟಿ, ಅನಾವೃಷ್ಟಿ ಹಾಗೂ ಕೀಟಬಾಧೆಯಿಂದ ಬೆಳೆ ಹಾನಿಯಾದರೆ ಬೀಜ, ಗೊಬ್ಬರಕ್ಕೆ ನೀಡಿದ ಮುಂಗಡ ಹಣವನ್ನು ರೈತರಿಂದ ನಾವು ವಸೂಲಿ ಮಾಡುತ್ತಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ತಗ್ಗಿ ನಮಗೆ ನಷ್ಟವಾದರೂ ಅದರ ಹೊರೆಯನ್ನು ರೈತರ ಮೇಲೆ ಹಾಕುತ್ತಿಲ್ಲ. ಹೀಗಾಗಿಯೇ ರೈತರಿಗೆ ಕಂಪನಿಗಳ ಮೇಲೆ ವಿಶ್ವಾಸ ಮೂಡಿದೆ. ಹೀಗಾಗಿಯೇ ಸ್ಥಳೀಯ ಮಾರುಕಟ್ಟೆ ಇಲ್ಲದಿದ್ದರೂ ನಾವು ಈ ಬೆಳೆಯನ್ನು ಇಲ್ಲಿ ಬೆಳೆಸಲು ಸಾಧ್ಯವಾಗುತ್ತಿದೆ’ ಎಂಬುದು ರಾಣೆಬೆನ್ನೂರಿನ ‘ಫ್ರೆಶ್‌ ಗ್ರೀನ್‌ ಆಗ್ರೊ ಎಕ್ಸ್‌ಪೋರ್ಟ್‌’ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕರಿಬಸಪ್ಪ ಜಾಡರ ಅವರ ಅಭಿಪ್ರಾಯ.

‘ಡಾಲರ್‌ ಮೌಲ್ಯ ಕುಸಿತ, ಹವಾಮಾನ ವೈಪರೀತ್ಯದಿಂದ ಬೆಳೆ ಹಾನಿ ಮತ್ತು ಬೇಡಿಕೆಗಿಂತಲೂ ಅಧಿಕ ಉತ್ಪಾದನೆಯಾಗುವುದು; ಈ ಮೂರು ಪ್ರಮುಖ ಅಂಶಗಳು ಮಿಡಿಸೌತೆ ರಫ್ತಿನ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ. ರಷ್ಯಾದಿಂದ ಬೇಡಿಕೆ ತಗ್ಗಿದ ಬಳಿಕ ಸ್ಪೇನ್‌, ನ್ಯೂಜಿಲೆಂಡ್‌ ಸೇರಿ ಬೇರೆ ದೇಶಗಳಲ್ಲಿ ಮಾರುಕಟ್ಟೆ ಕಂಡುಕೊಳ್ಳಲು ಯತ್ನಿಸುತ್ತಿದ್ದೇವೆ. ಈ ಬೆಳೆ ಪಾಶ್ಚಾತ್ಯ ರಾಷ್ಟ್ರಗಳ ಆರ್ಥಿಕತೆಯ ಮೇಲೆ ನಿಂತಿದೆ’ ಎನ್ನುತ್ತಾರೆ ದಾವಣಗೆರೆಯ ‘ಇಂಡಸ್‌ ವೆಜ್‌ಪ್ರೊ’ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಗಿರೀಶ್‌.

(ರಫ್ತು ಮಾಡಲು ಗೆರ್ಕಿನ್‌ಅನ್ನು ವಿನೇಗಾರ್‌ ದ್ರಾವಣವಿರುವ ಬ್ಯಾರೆಲ್‌ಗೆ ಹಾಕುತ್ತಿರುವುದು)

ಸಂಸ್ಕರಣೆ ಹೀಗೆ: ಮಿಡಿಸೌತೆ ವಿದೇಶಗಳಲ್ಲಿ ಉಪ್ಪಿನಕಾಯಿ, ಸಲಾಡ್‌, ಬರ್ಗರ್‌ಗೆ ಹೆಚ್ಚು ಬಳಕೆಯಾಗುತ್ತಿದೆ. ಕಾಯಿ ಕೊಯ್ದ 24 ಗಂಟೆಯೊಳಗೆ ಫ್ಯಾಕ್ಟರಿಗೆ ತಂದು ಯಂತ್ರದ ಸಹಾಯದಿಂದ ಮುಳ್ಳುಗಳನ್ನು ತೆಗೆಯಲಾಗುತ್ತದೆ. ಬಳಿಕ ತೊಳೆದು, ಸಣ್ಣ, ಮಧ್ಯಮ ಹಾಗೂ ದೊಡ್ಡದು ಎಂದು ಮೂರು ಬಗೆಯ ಕಾಯಿಗಳನ್ನು ಪ್ರತ್ಯೇಕಿಸಲಾಗುತ್ತದೆ. ಬಳಿಕ ಮೂರು ವಿಧಗಳಲ್ಲಿ ಸಂಸ್ಕರಣೆ ಮಾಡಿ, ಬ್ಯಾರೆಲ್‌ಗಳಲ್ಲಿ ತುಂಬಿ ರಫ್ತು ಮಾಡಲಾಗುತ್ತದೆ.

ಒಟ್ಟು ರಫ್ತಿನ ಪೈಕಿ ಶೇ 70ರಷ್ಟು ಮಿಡಿಸೌತೆಯನ್ನು ವಿನೆಗರ್‌ ದ್ರಾವಣದಲ್ಲಿ ಸಂಸ್ಕರಿಸಲಾಗುತ್ತಿದೆ. ಶೇ 20ರಷ್ಟನ್ನು ‘ಎಸಿಟಿಕ್‌ ಆ್ಯಸಿಡ್‌’ ದ್ರಾವಣದಲ್ಲಿ ಸಂರಕ್ಷಿಸಿಡಲಾಗುತ್ತದೆ. ಇವೆರಡೂ ಸಂಸ್ಕರಣಾ ಮಾದರಿಯಲ್ಲಿ 10 ದಿನಗಳ ಬಳಿಕ ಕಾಯಿ ರಫ್ತಿಗೆ ಸಿದ್ಧಗೊಳ್ಳುತ್ತದೆ. ವಿಶೇಷವಾಗಿ ದೊಡ್ಡ ಕಾಯಿಗಳನ್ನು ‘ಬ್ರೈನ್‌’ ದ್ರಾವಣದಲ್ಲಿ ಸಂಸ್ಕರಣೆ ಮಾಡಲಾಗುತ್ತದೆ. ಇದು 25ರಿಂದ 30 ದಿನಗಳ ಬಳಿಕ ಮಾರುಕಟ್ಟೆಗೆ ಕಳುಹಿಸಲು ಸಿದ್ಧಗೊಳ್ಳುತ್ತದೆ.

ಹೀಗೆ ಸಂಸ್ಕರಿಸಿದ ಮಿಡಿಸೌತೆಯನ್ನು ನೇರವಾಗಿ ತಿನ್ನಲು ಸಾಧ್ಯ ವಿಲ್ಲ. ಅದನ್ನು ಮರು ಸಂಸ್ಕರಿಸಿ ಆಹಾರ ಪದಾರ್ಥದೊಂದಿಗೆ ಬಳಕೆ ಮಾಡಲಾಗುತ್ತದೆ. ಮೂರ್ನಾಲ್ಕು ಕಂಪನಿಗಳು ಕಡಿಮೆ ಸಾಂದ್ರತೆಯ ವಿನೆಗರ್‌ ದ್ರಾವಣದಲ್ಲಿ ಮಿಡಿಸೌತೆಯನ್ನು ಸಂಸ್ಕರಿಸಿ ಜಾರ್‌ಗಳಲ್ಲಿ ರಫ್ತು ಮಾಡುತ್ತಿವೆ. ಅದನ್ನು ನೇರವಾಗಿ ತಿನ್ನಲು ಸಾಧ್ಯವಿದೆ.

ವಾರ್ಷಿಕ ₹1,000 ಕೋಟಿ ವಹಿವಾಟು: ‘ಭಾರತದಿಂದ ವಾರ್ಷಿಕ ಸುಮಾರು 1.20 ಲಕ್ಷ ಟನ್‌ ಮಿಡಿಸೌತೆ ರಫ್ತು ಮಾಡಲಾಗುತ್ತಿದ್ದು, ಇದರ ವಹಿವಾಟು ಮೌಲ್ಯ ಒಟ್ಟು ಅಂದಾಜು ₹ 1,000 ಕೋಟಿ ಆಗಲಿದೆ. ದೇಶದ ಒಟ್ಟು ರಫ್ತಿನ ಪ್ರಮಾಣದಲ್ಲಿ 85 ಸಾವಿರ ಟನ್‌ (ಶೇ 70) ಕರ್ನಾಟಕದ್ದೇ ಪಾಲಿದೆ. ರಷ್ಯಾ, ಅಮೆರಿಕ, ಫ್ರಾನ್ಸ್‌, ಸ್ಪೇನ್‌, ಜರ್ಮನಿ ದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 80 ಸಾವಿರ ರೈತರು ಮೂರು ಬೆಳೆ ಸೇರಿ ವಾರ್ಷಿಕ 40 ಸಾವಿರ ಎಕರೆಯಲ್ಲಿ ಮಿಡಿಸೌತೆ ಬೆಳೆಯುತ್ತಿದ್ದಾರೆ’ ಎಂದು ಇಂಡಿಯನ್‌ ಗೆರ್ಕಿನ್‌ ಎಕ್ಸ್‌ಪೋರ್ಟರ್ಸ್‌ ಅಸೋಸಿಯೇಷನ್‌ನ ಅಧ್ಯಕ್ಷರೂ ಆಗಿರುವ ಹುಬ್ಬಳ್ಳಿಯ ‘ಕೆನ್‌ ಅಗ್ರಿಟೆಕ್‌’ನ ವ್ಯವಸ್ಥಾಪಕ ನಿರ್ದೇಶಕ ವಿವೇಕ ನಾಯಕ ಹೇಳಿದರು.

‘2020ರ ವೇಳೆಗೆ ಭಾರತದಿಂದ ವಾರ್ಷಿಕ 2.50 ಲಕ್ಷ ಟನ್‌ ಮಿಡಿಸೌತೆ ರಫ್ತು ಮಾಡಿ, ₹2,000 ಕೋಟಿ ವಹಿವಾಟು ನಡೆಸಬೇಕು ಎಂಬುದು ನಮ್ಮ ಗುರಿ. ಎಳೆ ಮಿಡಿಸೌತೆಗೆ ಹಲವು ದೇಶಗಳು ಭಾರತವನ್ನೇ ಅವಲಂಬಿಸಿವೆ. ಮಿಡಿಸೌತೆ ಮಾರುಕಟ್ಟೆ ಸದ್ಯ ಸ್ಥಿರವಾಗಿದೆ. ಬೇರೆ ದೇಶಗಳ ಮಾರುಕಟ್ಟೆಯನ್ನು ನಾವು ಆಕ್ರಮಿಸಿಕೊಳ್ಳಬೇಕಾಗಿದೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡರೆ ಇಳುವರಿ ಹೆಚ್ಚಿ ರೈತರಿಗೂ ಅಧಿಕ ಲಾಭ ಸಿಗಲಿದೆ. ಗೊಬ್ಬರದ ಮೇಲಿನ ಸಬ್ಸಿಡಿಯನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಸರ್ಕಾರವೂ ನಮಗೆ ಸಹಕಾರ ನೀಡಬೇಕು’ ಎಂದರು ವಿವೇಕ ನಾಯಕ.

ಹೀಗಿದೆ ಗ್ರೇಡಿಂಗ್‌ ದರ

ಗೆರ್ಕಿನ್‌ ಅಸೋಸಿಯೇಷನ್‌ನ ಸಭೆಯನ್ನು ಮಾರ್ಚ್‌ನಲ್ಲಿ ನಡೆಸಿ ಮುಂದಿನ ಒಂದು ವರ್ಷದ ಅವಧಿಗೆ ಕಾಯಿಗೆ ದರವನ್ನು ನಿಗದಿಗೊಳಿಸಲಾಗುತ್ತದೆ. ರೈತರಿಂದ ಖರೀದಿಸುವ ಕಾಯಿಯನ್ನು ಐದು ಶ್ರೇಣಿ (ಗ್ರೇಡ್‌)ಗಳಲ್ಲಿ ವಿಂಗಡಿಸಲಾಗುತ್ತದೆ.

2017–18ನೇ ಸಾಲಿಗೆ ಒಂದು ಕೆ.ಜಿ.ಗೆ ಮೊದಲನೇ ಶ್ರೇಣಿಯ ಕಾಯಿಗೆ (14.5 ಎಂ.ಎಂ ಸುತ್ತಳತೆ) ₹ 32, ಎರಡನೇ ಶ್ರೇಣಿಯ (17 ಎಂ.ಎಂ) ಕಾಯಿಗೆ ₹ 20, ಮೂರನೇ ಶ್ರೇಣಿಯ (19 ಎಂ.ಎಂ) ಕಾಯಿಗೆ ₹ 10, ನಾಲ್ಕನೇ ಶ್ರೇಣಿಯ (24 ಎಂ.ಎಂ) ಕಾಯಿಗೆ ₹ 6 ಹಾಗೂ ಐದನೇ ಶ್ರೇಣಿಯ (24 ಎಂ.ಎಂ ಮೇಲಿನ) ಕಾಯಿಗೆ ₹ 3 ದರ ನಿಗದಿಗೊಳಿಸಲಾಗಿದೆ.

220 ಲೀಟರ್‌ ಬ್ಯಾರೆಲ್‌ (160 ಕೆ.ಜಿ ಮಿಡಿಸೌತೆ), 240 ಲೀಟರ್‌ ಬ್ಯಾರೆಲ್‌ (180 ಕೆ.ಜಿ) ಹಾಗೂ 260 ಲೀಟರ್‌ ಬ್ಯಾರೆಲ್‌ (190 ಕೆ.ಜಿ)ಗಳಲ್ಲಿ ಕಂಪನಿಯವರು ಮಿಡಿಸೌತೆಗಳನ್ನು ಸಂಸ್ಕರಿಸಿ ರಫ್ತು ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT