ಬಳ್ಳಾರಿ

ಕ್ಯಾನ್ಸರ್‌ ಪೀಡಿತರಿಗೆ 7ತಿಂಗಳಿಂದ ಚಿಕಿತ್ಸೆ ಇಲ್ಲ!

ಚಿಕಿತ್ಸೆಗಾಗಿ ದೂರದ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿರುವ ಆಸ್ಪತ್ರೆಗಳನ್ನು ಅವಲಂಬಿಸಬೇಕಾಗಿದೆ.

ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಪಡೆಯುತ್ತಿದ್ದ ಚಿಕಿತ್ಸೆಯನ್ನು ಅರ್ಧಕ್ಕೇ ನಿಲ್ಲಿಸಿ,ಮತ್ತೆ ವಿಮ್ಸ್‌ಗೆ ದಾಖಲಾಗಿರುವ ಸಂಡೂರು ತಾಲ್ಲೂಕಿನ ತೋರಣಗಲ್‌ ಗ್ರಾಮದ ಶಿವರುದ್ರಪ್ಪ ಅವರೊಂದಿಗೆ ಪತ್ನಿ ಮಲ್ಲಮ್ಮ

ಬಳ್ಳಾರಿ: ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕ್ಯಾನ್ಸರ್ ಚಿಕಿತ್ಸಾ ವಿಭಾಗದಲ್ಲಿ ಏಳು ತಿಂಗಳಿಂದ ರೇಡಿಯೊ ಥೆರಪಿ (ವಿಕಿರಣ ಚಿಕಿತ್ಸೆ) ಸ್ಥಗಿತಗೊಂಡಿದ್ದು, ರೋಗಿಗಳು ಪರದಾಡುತ್ತಿದ್ದಾರೆ.

ಚಿಕಿತ್ಸೆಗಾಗಿ ದೂರದ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿರುವ ಆಸ್ಪತ್ರೆಗಳನ್ನು ಅವಲಂಬಿಸಬೇಕಾಗಿದೆ. ಈ ಎರಡೂ ನಗರಗಳಲ್ಲಿ ವಾಸ್ತವ್ಯ ಮತ್ತು ಚಿಕಿತ್ಸೆ ವೆಚ್ಚ ಭರಿಸುವುದು ದುಬಾರಿಯಾಗಿದ್ದು ಬಡ ರೋಗಿಗಳಿಗೆ ತೊಂದರೆಯಾಗಿದೆ. ನಗರಗಳಿಗೆ ತೆರಳಿದವರು ಚಿಕಿತ್ಸೆಯನ್ನು ಅರ್ಧಕ್ಕೇ ನಿಲ್ಲಿಸಿ ವಾಪಸಾಗಿ ಮತ್ತೆ ವಿಮ್ಸ್‌ಗೆ ಎಡತಾಕುತ್ತಿದ್ದಾರೆ. ಆದರೆ, ಅವರನ್ನು ಆಸ್ಪತ್ರೆಗೆ ಸೇರಿಸಿಕೊಳ್ಳಲು ಆಗದ ಸ್ಥಿತಿಯಲ್ಲಿ ವಿಮ್ಸ್‌ ಇದೆ.

ಬಳ್ಳಾರಿ ಸೇರಿದಂತೆ ಕೊಪ್ಪಳ, ರಾಯಚೂರು, ದಾವಣಗೆರೆ, ಚಿತ್ರದುರ್ಗ ಹಾಗೂ ಆಂಧ್ರಪ್ರದೇಶದ ಅನಂತಪುರ, ಕರ್ನೂಲ್ ಜಿಲ್ಲೆಗಳಿಂದ ಬರುವ ಕ್ಯಾನ್ಸರ್‌ಪೀಡಿತರಿಗೆ ವಿಮ್ಸ್‌ನ ಈ ವಿಭಾಗವೇ ಆಸರೆಯಾಗಿದೆ.

ಏಳು ತಿಂಗಳಿನಿಂದ ಸ್ಥಗಿತ ಇಲ್ಲಿನ ವಿಕಿರಣ ಚಿಕಿತ್ಸೆ ಉಪಕರಣಗಳ ಸುರಕ್ಷತೆ ಹಾಗೂ ಸುರಕ್ಷಿತ ಚಿಕಿತ್ಸಾ ಕ್ರಮಗಳಿಗೆ ಸಂಬಂಧಿಸಿದ 16 ಕೊರತೆಗಳನ್ನು ನೀಗಿಸದ ಕಾರಣ ಈ ವಿಭಾಗದ ಪರವಾನಗಿ ರದ್ದುಪಡಿಸಿ, ಅದನ್ನು ಮುಚ್ಚುವಂತೆ ಮುಂಬೈನ ಆಟೊಮಿಕ್ ಎನರ್ಜಿ ರೆಗ್ಯುಲೇಟರಿ ಬೋರ್ಡ್(ಎಇಆರ್‌ಬಿ) ಸೂಚಿಸಿದೆ. ಇದರಿಂದಾಗಿ ಮೇ 9ರಿಂದ ಚಿಕಿತ್ಸೆಯೂ ಸ್ಥಗಿತಗೊಂಡಿದೆ.

ವಿಕಿರಣ ಬಳಸುವ ಸಂಸ್ಥೆಗಳನ್ನು ನಿಯಂತ್ರಿಸುವ ಎಇಆರ್‌ಬಿ ತಂಡ, 2016ರ ಫೆಬ್ರವರಿಯಲ್ಲಿ ವಿಮ್ಸ್‌ಗೆ ಭೇಟಿ ನೀಡಿ, ಕೊರತೆಗಳನ್ನು ನೀಗಿಸುವಂತೆ ಹೇಳಿತ್ತು. ಆದರೆ, 2017 ಫೆಬ್ರವರಿಯಲ್ಲಿ ತಂಡ ಮತ್ತೆ ಭೇಟಿ ನೀಡಿದ್ದಾಗಲೂ ಪರಿಸ್ಥಿತಿ ಸುಧಾರಿಸಿರಲಿಲ್ಲ. ಹೀಗಾಗಿ ವಿಭಾಗವನ್ನು ಮುಚ್ಚುವಂತೆ ಸೂಚಿಸಿತ್ತು.

ಸಲಕರಣೆ ಇಲ್ಲ: ಚಿಕಿತ್ಸೆಗೆ ಬೇಕಾದ ಹೊಸ ರೇಡಿಯೊ ಆಕ್ಟಿವ್‌ ಸೋರ್ಸ್‌–ಕೋಬಾಲ್ಟ್‌ ಸೋರ್ಸ್‌ ಅಳವಡಿಸದ ಕಾರಣ ವಿಕಿರಣ ಯಂತ್ರಗಳು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿ ಇಲ್ಲ.

‘ರೇಡಿಯೊ ಆಕ್ಟಿವ್‌ ಸೋರ್ಸ್‌ ಅನ್ನು ಕನಿಷ್ಠ 10 ವರ್ಷಗಳಿಗೊಮ್ಮೆ ಬದಲಿಸಲೇಬೇಕು. 13 ವರ್ಷದ ಹಿಂದೆ ಅದನ್ನು ಅಳವಡಿಸಲಾಗಿತ್ತು. ಅದನ್ನು ಬದಲಿಸದಿದ್ದರೆ ಚಿಕಿತ್ಸೆ ಸಾಧ್ಯವಿಲ್ಲ ಎಂದು ಎರಡು ವರ್ಷದ ಹಿಂದೆಯೇ ವಿಮ್ಸ್‌ ನಿರ್ದೇಶಕರಿಗೆ ಪತ್ರ ಬರೆಯಲಾಗಿತ್ತು’ ಎಂದು ಕ್ಯಾನ್ಸರ್‌ ವಿಭಾಗದ ವಿಕಿರಣ ಚಿಕಿತ್ಸಕ ಡಾ.ಎನ್‌.ರಾಜೇಶ್‌ ತಿಳಿಸಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ರೋಗಿಗಳಿಗೆ ಕಿಮೊ ಥೆರಪಿಯನ್ನಷ್ಟೇ ನೀಡಲಾಗುತ್ತಿದೆ. ರೇಡಿಯೊ ಥೆರಪಿಗೆಂದು ಬೆಂಗಳೂರು, ಹುಬ್ಬಳ್ಳಿಗೆ ತೆರಳಿದವರು, ಅರ್ಧಕ್ಕೇ ಚಿಕಿತ್ಸೆ ನಿಲ್ಲಿಸಿ ವಾಪಸು ಬರುತ್ತಿದ್ದಾರೆ. ಆದರೆ, ನಾವು ಅಸಹಾಯಕರಾಗಿದ್ದೇವೆ’ ಎಂದು ಹೇಳಿದರು.

ಬೆಂಗಳೂರಿಂದ ವಾಪಸ್‌ ಬಂದೆವು..

ಬಳ್ಳಾರಿ: ‘ಸಂಡೂರು ತಾಲ್ಲೂಕಿನ ತೋರಣಗಲ್‌ ಗ್ರಾಮದ ಶಿವರುದ್ರಪ್ಪ, ನಾಲಿಗೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಪಡೆಯುತ್ತಿದ್ದ ರೇಡಿಯೊ ಥೆರಪಿ ತ್ಯಜಿಸಿ ಮತ್ತೆ ವಿಮ್ಸ್‌ಗೆ ದಾಖಲಾಗಿದ್ದಾರೆ.

ಬಾಯಿ ಮೂಲಕ ಆಹಾರ ನೀಡುವ ವ್ಯವಸ್ಥೆ ಅಳವಡಿಸದ ಕಾರಣ ಅವರು ವಾಪಸು ಬಂದಿದ್ದಾರೆ. ಮೂಗಿನ ಮೂಲಕ ಅವರ ಹೊಟ್ಟೆಗೆ ಪೈಪ್‌ ಅಳವಡಿಸಲಾಗಿದೆ. ಈಗ ಅವರನ್ನು ವಾಪಸು ಕಳಿಸುತ್ತಿದ್ದೇವೆ’ ಎಂದು ಡಾ.ರಾಜೇಶ್‌ ತಿಳಿಸಿದರು. ‘ಅನನುಕೂಲವಾದ್ದರಿಂದ ವಾಪಸ್‌ ಬಂದೆವು’ ಎಂದು ರೋಗಿಯ ಪತ್ನಿ ಮಲ್ಲಮ್ಮ ಅಲವತ್ತುಕೊಂಡರು.

* * 

ಕೋಬಾಲ್ಟ್‌ ಸೋರ್ಸ್‌ ಖರೀದಿಸಲು ಕನಿಷ್ಠ ₹ 1 ಕೋಟಿ ಬೇಕಾಗಿದ್ದು, ಹಣ ಬಿಡುಗಡೆ ಮಾಡಲು ವಿಮ್ಸ್‌ ಆಡಳಿತ ಮಂಡಳಿ ಒಪ್ಪಿದೆ. ಒಂದು ತಿಂಗಳಲ್ಲಿ ಅಳವಡಿಸಿ, ಪರವಾನಗಿ ನೀಡುವಂತೆ ಮತ್ತೆ ಎಇಆರ್‌ಬಿಗೆ ಪತ್ರ ಬರೆಯಲಾಗುವುದು
ಡಾ.ಡಿ.ಪ್ರಭಂಜನಕುಮಾರ್‌, ವಿಮ್ಸ್‌ ನಿರ್ದೇಶಕ

Comments
ಈ ವಿಭಾಗದಿಂದ ಇನ್ನಷ್ಟು
ಜಿಲ್ಲೆಯಲ್ಲಿ ಕೌಶಲ ವಿ.ವಿ ಸ್ಥಾಪನೆ

ಬಳ್ಳಾರಿ
ಜಿಲ್ಲೆಯಲ್ಲಿ ಕೌಶಲ ವಿ.ವಿ ಸ್ಥಾಪನೆ

21 Jan, 2018
ಬಳ್ಳಾರಿ: ಅನಂತಕುಮಾರ ಹೆಗಡೆಗೆ ದಲಿತ ಸಂಘಟನೆಗಳಿಂದ ಕಪ್ಪು ಬಾವುಟ ಪ್ರದರ್ಶನ

ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದಾಗ ಘಟನೆ
ಬಳ್ಳಾರಿ: ಅನಂತಕುಮಾರ ಹೆಗಡೆಗೆ ದಲಿತ ಸಂಘಟನೆಗಳಿಂದ ಕಪ್ಪು ಬಾವುಟ ಪ್ರದರ್ಶನ

20 Jan, 2018
‘ಗಣಿ ಬಾಧಿತ ಜನರಿಗೆ ಪರ್ಯಾಯ ಕೆಲಸ’

ಸಂಡೂರು
‘ಗಣಿ ಬಾಧಿತ ಜನರಿಗೆ ಪರ್ಯಾಯ ಕೆಲಸ’

20 Jan, 2018
ಜಗತ್ತಿನಲ್ಲಿ ಇರುವುದು ಎರಡೇ ಜಾತಿ: ವೀರಭದ್ರ ಶ್ರೀ

ಸಿರುಗುಪ್ಪ
ಜಗತ್ತಿನಲ್ಲಿ ಇರುವುದು ಎರಡೇ ಜಾತಿ: ವೀರಭದ್ರ ಶ್ರೀ

19 Jan, 2018

ಬಳ್ಳಾರಿ
‘ಹಳೇ ಪಿಂಚಣಿ ಯೋಜನೆಯೇ ಇರಲಿ’

‘ಹಳೇ ಪಿಂಚಣಿ ಯೋಜನೆಯಲ್ಲಿ 33 ವರ್ಷ ಸೇವೆ ಸಲ್ಲಿಸಿದ ನೌಕರರಿಗೆ ಶೇ 50ರಷ್ಟು ನಿಶ್ಚಿತ ಪಿಂಚಣಿ ದೊರಕುತ್ತದೆ. ಆದರೆ ಹೊಸ ಯೋಜನೆಯಲ್ಲಿ ಅದಕ್ಕಿಂತ ಹೆಚ್ಚು ಸೇವೆ...

19 Jan, 2018