ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಆರೋಪಕ್ಕೆ ತಕ್ಕ ಉತ್ತರ: ರಮೇಶ ಜಾರಕಿಹೊಳಿ

Last Updated 28 ನವೆಂಬರ್ 2017, 6:37 IST
ಅಕ್ಷರ ಗಾತ್ರ

ಬಳ್ಳಾರಿ:‘ಅನರ್ಹರು ಪರಿಶಿಷ್ಟ ಪಂಗಡದ ಜಾತಿ ಪ್ರಮಾಣಪತ್ರ ಪಡೆಯುತ್ತಾರೆ ಎಂದು ಕೊಪ್ಪಳದ ಸಮಾವೇಶದಲ್ಲಿ ಬಿಜೆಪಿ ಮಾಡಿರುವ ಆರೋಪಕ್ಕೆ ಉತ್ತರ ನೀಡಲೆಂದೇ ಡಿ.11ರಂದು ಹೊಸಪೇಟೆಯಲ್ಲಿ ಪಂಗಡ ಸಮುದಾಯದ ಸಮಾವೇಶವನ್ನು ಕಾಂಗ್ರೆಸ್‌ ಆಯೋಜಿಸಿದೆ’ ಎಂದು ಸಹಕಾರ ಸಚಿವ ರಮೇಶ್‌ ಜಾರಕಿ ಹೊಳಿ ತಿಳಿಸಿದರು.

‘ಗದಗ, ಕೊಪ್ಪಳ ಜಿಲ್ಲೆಯವರನ್ನೂ ಸೇರಿಸಿ 3 ಲಕ್ಷಕ್ಕೂ ಹೆಚ್ಚು ಮಂದಿ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅದಕ್ಕಾಗಿ ಮೂರೂ ಜಿಲ್ಲೆಗಳಲ್ಲಿ ಪೂರ್ವಸಿದ್ಧತಾ ಸಭೆಗಳನ್ನು ನಡೆಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರನ್ನು ಆಹ್ವಾನಿಸಲಾಗಿದೆ’ ಎಂದು ನಗರದಲ್ಲಿ ಸೋಮ ವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಪಕ್ಷದ ಜೊತೆ ಗುರುತಿಸಿಕೊಂಡೇ ಸಮಾವೇಶವನ್ನು ಮಾಡುವುದು ನಮ್ಮ ಹಕ್ಕು. ಅದನ್ನು ನೀವು ಪ್ರಶ್ನಿಸಬಾರದು. ಪಕ್ಷಾತೀತವಾಗಿ ಸಮಾವೇಶವನ್ನು ಏಕೆ ಸಂಘಟಿಸುವುದಿಲ್ಲ ಎಂಬ ತಪ್ಪು ಪ್ರಶ್ನೆ ಕೇಳಬೇಡಿ’ ಎಂದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ‘ಕೊಪ್ಪಳದಲ್ಲಿ ಇತ್ತೀಚೆಗೆ ಸಮಾವೇಶ ನಡೆಸಿದ್ದ ಬಿಜೆಪಿಯು ಪರಿಶಿಷ್ಟ ಪಂಗಡದವರನ್ನು ತಪ್ಪುದಾರಿಗೆ ಎಳೆದಿದೆ. ಅನರ್ಹರು ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪಾಗಿ ಹಬ್ಬಿಸಲಾಗಿದೆ.

ಆದರೆ ಸುಳ್ಳು ಹೇಳಿ ಯಾರೂ ಜಾತಿ ಪ್ರಮಾಣಪತ್ರವನ್ನು ಪಡೆಯಲು ಆಗುವುದಿಲ್ಲ. ಅನರ್ಹರಿಗೆ ಪ್ರಮಾಣಪತ್ರ ನೀಡುವ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ’ ಎಂದು ಪ್ರತಿಪಾದಿಸಿದರು.

7.5 ಮೀಸಲಾತಿ: ‘ಉದ್ಯೋಗ ಮತ್ತು ಶಿಕ್ಷಣದಲ್ಲಿ ಪಂಗಡದವರಿಗೆ ತಮಿಳುನಾಡು ಮಾದರಿಯಲ್ಲಿ ಶೇ 7.5 ಮೀಸಲಾತಿ ನೀಡುವುದಾಗಿ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ವಾಲ್ಮೀಕಿ ಜಯಂತಿಯಲ್ಲಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಆದರೆ ಜಾರಿಗೊಳಿಸುವಲ್ಲಿ ತಾಂತ್ರಿಕ ಸಮಸ್ಯೆ ಇದೆ. ಮೀಸಲಾತಿ ಶೇ 50ಕ್ಕಿಂತ ಹೆಚ್ಚಾಗಬಾರದು ಎಂದು ಸುಪ್ರೀಂಕೋರ್ಟ್‌ ಹೇಳಿರುವುದು ಗೊಂದಲಕಾರಿಯಾಗಿದೆ. ಈ ಬಗ್ಗೆ ಕಾನೂನು ಘಟಕದೊಂದಿಗೆ ಚರ್ಚಿಸಲಾಗುತ್ತಿದೆ’ ಎಂದರು. ‘ನಮಗೆ ಶೇ 7.5ರಷ್ಟು ಮೀಸಲಾತಿ ನೀಡಿ, ಗಂಗಾಮತಸ್ಥರನ್ನು, ಕುರುಬರನ್ನು ಪಂಗಡಕ್ಕೆ ಸೇರಿಸಿಕೊಳ್ಳಲಿ. ಆದರೆ ನಮಗೆ ಮಾತ್ರ ಪೂರ್ಣ ಮೀಸಲಾತಿ ಕೊಡಬೇಕು’ ಎಂದು ಪ್ರತಿಪಾದಿಸಿದರು.

‘ಮತ್ತೊಂದು ಸಚಿವ ಸ್ಥಾನವನ್ನು ಬೆಂಗಳೂರು ಭಾಗದ ಶಾಸಕರೊಬ್ಬರಿಗೆ ನೀಡಬೇಕು ಎಂದು ಮುಖ್ಯಮಂತ್ರಿಯನ್ನು ಕೋರಲಾಗಿದೆ’ ಎಂದರು. ‘ಮುಂದಿನ ದಿನಗಳಲ್ಲಿ ಹಲವರು ಮುಖಂಡರು ಕಾಂಗ್ರೆಸ್‌ ಸೇರುವ ಸಾಧ್ಯತೆ ಇದೆ. ಆದರೆ ಯಾವುದೇ ಶಾಸಕರನ್ನು ಆಹ್ವಾನಿಸಿಲ್ಲ’ ಎಂದರು. ‘ಪರಿವಾರ ನಾಯಕರು ಮತ್ತು ತಳವಾರರು ಸೇರಿದಂತೆ ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಜನಸಂಖ್ಯೆ ಸುಮಾರು 50 ಲಕ್ಷವಿದೆ’ ಎಂದರು.

* * 

ಸಹಕಾರಿ ಬ್ಯಾಂಕ್‌ಗಳಲ್ಲಿ ಮನ್ನಾ ಮಾಡಿದ ಸಾಲದ ಹಣವನ್ನು ಪಾವತಿಸಲಾಗುತ್ತಿದೆ. ಬ್ಯಾಂಕ್‌ಗಳಿಂದ ಪಟ್ಟಿ ದೊರೆತ ಪ್ರಕಾರ ಪಾವತಿಸಲಾಗುತ್ತಿದೆ
ಸತೀಶ್‌ ಜಾರಕಿಹೊಳಿ, ಸಹಕಾರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT