ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಧಾರ ಹಿಂಪಡೆಯಲಾರೆ: ರವೀಂದ್ರ ಸ್ಪಷ್ಟನೆ

Last Updated 28 ನವೆಂಬರ್ 2017, 7:28 IST
ಅಕ್ಷರ ಗಾತ್ರ

ಹರಪನಹಳ್ಳಿ: ‘ವಿಧಾನಸಭೆ ಚುನಾವಣೆ ಸ್ಪರ್ಧಿಸದಿರಲು ತೆಗೆದುಕೊಂಡ ನಿರ್ಧಾರದಿಂದ ಕ್ಷೇತ್ರಕ್ಕೆ ಒಳ್ಳೆಯದಾಗಲಿದೆ. ನನ್ನ ನಿರ್ಧಾರ ಅಚಲ’ ಎಂದು ಶಾಸಕ ಎಂ.ಪಿ.ರವೀಂದ್ರ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಸೋಮವಾರ ಧರಣಿ ನಡೆಸಿದ ಅಭಿಮಾನಿಗಳು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ನನ್ನ ನಿರ್ಧಾರದಿಂದ 60 ಕೆರೆಗಳಿಗೆ ನೀರುಣಿಸುವ ಯೋಜನೆ ಜಾರಿಗೆ ಬರಲಿದೆ. ಗರ್ಭಗುಡಿ ಕಂ ಬ್ಯಾರೇಜ್‌ ನಿರ್ಮಾಣ, 371 ‘ಜೆ’ ಕಲಂ ಸೌಲಭ್ಯ ಎಲ್ಲವೂ ಸಿಗಲಿವೆ. ಚುನಾವಣೆಯಿಂದ ಹಿಂದೆ ಸರಿದಿರುವುದು ಹಣಕಾಸಿನ ತೊಂದರೆಯಿಂದ ಮಾತ್ರ ಅಲ್ಲ; ಸ್ವಯಂಕೃತ ಕೃತ್ಯಗಳು, ಕೌಟುಂಬಿಕ ಸಮಸ್ಯೆ, ಕಲುಷಿತ ರಾಜಕಾರಣ, ರಾಜಕೀಯ ಸ್ಥಿತ್ಯಂತರ ಸೇರಿ ಹಲವು ಕಾರಣಗಳೂ ಇವೆ. ಇದು ಚುನಾವಣೆ ನಾಟಕವಲ್ಲ. ನನ್ನ ನಿರ್ಧಾರ ತಾಯಿಗೂ ಗೊತ್ತಿಲ್ಲ.

ರಾಜಕೀಯದಿಂದ ನಿವೃತ್ತಿ ಎಂದು ಎಲ್ಲೂ ಹೇಳಿಲ್ಲ. ನಿವೃತ್ತಿಯಾದರೆ ಅನ್ಯ ಪಕ್ಷ ಸೇರುವ ಅವಶ್ಯಕತೆ ಇಲ್ಲ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರನ್ನು ಬೆಂಬಲಿಸುತ್ತೇನೆ. ಅವರ ಪರವಾಗಿ ಪ್ರಚಾರ ಮಾಡುತ್ತೇನೆ. ಎಂ.ಪಿ.ಪ್ರಕಾಶ್‌ ಅವರ ಅಭಿಮಾನಿಗಳು ರಾಜ್ಯದ ಎಲ್ಲಕಡೆ ಇದ್ದಾರೆ. ಚುನಾವಣೆ ಪ್ರಚಾರಕ್ಕೆ ಪಕ್ಷ ನನ್ನನ್ನು ಬಳಸಿಕೊಳ್ಳಬಹುದು’ ಎಂದು ಹೇಳಿದರು.

‘ಧರಣಿ, ಅತ್ಮಹತ್ಯೆ ತಮಿಳುನಾಡಿನ ಸಂಸ್ಕೃತಿ. ಅಂತಹ ದುಸ್ಸಾಹಸಕ್ಕೆ ಇಲ್ಲಿ ಕೈಹಾಕಬೇಡಿ ನಿಮ್ಮ ನೋವು ನನಗೆ ಅರ್ಥವಾಗುತ್ತದೆ. ಚುನಾವಣೆಗೆ 5 ತಿಂಗಳು ಕಾಲಾವಕಾಶವಿದೆ. ಹೆಚ್ಚಿನ ಅನುದಾನ ತರುತ್ತೇನೆ’ ಎಂದು ಭರವಸೆ ನೀಡಿದರು.

‘ಮುಖ್ಯಮಂತ್ರಿ ಕರೆ ಮಾಡಿದ್ದು, ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ. ವಿರೋಧ ಪಕ್ಷ ಟೀಕೆ ಮಾಡಿದರೆ ನನಗೆ ನೋವಿಲ್ಲ. ನನ್ನ ಎರಡು ವರ್ಷಗಳ ಶಾಸಕಗಿರಿಯನ್ನು ವ್ಯಕ್ತಿಯೊಬ್ಬರಿಗೆ ಬಿಟ್ಟುಕೊಟ್ಟಿದ್ದೆ’ ಎಂದು ಎಚ್‌.ಕೆ.ಹಾಲೇಶ್‌ ಅವರ ಹೆಸರು ಪ್ರಸ್ತಾಪಿಸದೆ ಹೇಳಿದರು.

‘ಕಾರ್ಯಕರ್ತರಿಗೆ ಎಲ್ಲಾ ರೀತಿಯ ಅವಕಾಶ ಮಾಡಿಕೊಟ್ಟಿದ್ದೆ. ನನ್ನ ಕುರಿತು ಅವಹೇಳನಕಾರಿ, ಉಢಾಪೆ ಮಾತುಗಳನ್ನು ಕೆಲವರು ಆಡಿರುವುದು ನೋವುಂಟುಮಾಡಿದೆ’ ಎಂದು ಅಳಲು ಹೇಳಿಕೊಂಡರು. ‘ಹಿತೈಷಿಗಳು, ಕುಟುಂಬದ ಸದಸ್ಯರು, ಮುಖಂಡರೊಡನೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ಮತ್ತೊಮ್ಮೆ ಸಭೆ ಕರೆದು ವಿವರವಾದ ಮಾಹಿತಿ ನೀಡುತ್ತೇನೆ’ ಎಂದರು.

ಟೈರ್‌ಗೆ ಬೆಂಕಿ: ಸೋಮವಾರ ಬೆಳಿಗ್ಗೆ ಶಾಸಕರ ಮನೆ ಮುಂದೆ ಕಾರ್ಯಕರ್ತರು ಧರಣಿ ನಡೆಸಿ, ಸಭೆ ನಡೆಸಿದರು. ಕೆಲ ಕಾರ್ಯಕರ್ತರು ಮನೆ ಮತ್ತು ಪ್ರವಾಸಿ ಮಂದಿರ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿದರು. ಕೆಲವರು ಕೀಟನಾಶಕ ತಂದು ಆತ್ಮಹತ್ಯೆಗೆ ಮುಂದಾದರು.

ಕೆಲ ಕಾಲ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿತು. ಸಭೆಯಲ್ಲಿ ಎಂ.ರಾಜಶೇಖರ ಮಾತನಾಡಿ, ‘2018ರ ಚುನಾವಣೆಯಲ್ಲಿ ನಿಮ್ಮನ್ನು ಗೆಲ್ಲಿಸುವ ಹೊಣೆ ನಮ್ಮದು. ನಿರ್ಧಾರ ಹಿಂದಕ್ಕೆ ಪಡೆಯಿರಿ’ ಎಂದು ಒತ್ತಾಯಿಸಿದರು.

ಮುಖಂಡರಾದ ಟಿ.ಎಚ್‌.ಎಂ.ವಿರೂಪಾಕ್ಷಯ್ಯ, ಬೇಲೂರು ಅಂಜಪ್ಪ, ವೈ. ದೇವೇಂದ್ರಪ್ಪ, ಎಚ್‌.ಬಿ.ಪರಶುರಾಮ್‌, ಎಂ.ಟಿ.ಬಸವನಗೌಡ, ಅರುಣ್‌ ಪೂಜಾರ್‌, ಎಚ್‌.ದೇವರಾಜ್‌, ಕಂಭತ್ತಹಳ್ಳಿ ಮಂಜುನಾಥ್‌, ಬೇಲೂರು ಅಂಜಪ್ಪ, ಕೆ.ಎಂ.ಬಸವರಾಜಯ್ಯ, ಎಂ.ವಿ.ಅಂಜಿನಪ್ಪ, ಬಿದ್ರಿ ಸುನೀಲ್‌, ಸಿದ್ದಲಿಂಗಸ್ವಾಮಿ, ಶಿವಕುಮಾರ್‌ ನಾಯ್ಕ, ಜಯಲಕ್ಷ್ಮಿ. ಪುಷ್ಪಾ ದಿವಾಕರ್‌, ಖಾನಾವಳಿ ಮಂಜುಳಾ, ರೆಹಮಾನ್‌ ಸಾಬ್‌, ಚನ್ನಬಸವನಗೌಡ ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT