ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧ ಪಕ್ಷ ಇಲ್ಲ; ಆಡಳಿತವೂ ಇಲ್ಲ!

Last Updated 28 ನವೆಂಬರ್ 2017, 9:48 IST
ಅಕ್ಷರ ಗಾತ್ರ

ವಿಜಯಪುರ: ‘ವಿಜಯಪುರ ಜಿಲ್ಲಾ ಪಂಚಾಯಿತಿಯಲ್ಲಿ ವಿರೋಧ ಪಕ್ಷದ ಅಸ್ತಿತ್ವವೇ ಇಲ್ಲ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಅಧಿಕಾರ ಹಂಚಿಕೊಂಡು ಆಡಳಿತ ನಡೆಸುತ್ತಿದ್ದರೂ; ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ’

‘ಸಾಮಾನ್ಯ ಸಭೆಗಳಲ್ಲಿ ಸರ್ವಾನುಮತದಿಂದ ತೆಗೆದುಕೊಂಡ ನಿರ್ಣಯಕ್ಕೆ ಕಿಮ್ಮತ್ತಿಲ್ಲ. ಯಾವೊಂದು ನಿರ್ಣಯ ಇದುವರೆಗೂ ಅನುಷ್ಠಾನಗೊಂಡಿಲ್ಲ. ಹಿಂದಿನ ಸಭೆಯಲ್ಲಿ ತೆಗೆದುಕೊಂಡ ಮಹತ್ವದ ಠರಾವುಗಳು ಇಂದಿಗೂ ಜಾರಿಗೊಂಡಿಲ್ಲ...’

‘ಜಿಲ್ಲೆಯ ರೈತರ ಅನುಕೂಲಕ್ಕಾಗಿ ಹೋಬಳಿ ಕೇಂದ್ರಗಳಲ್ಲಿ ಯಂತ್ರಧಾರೆ ಕಾರ್ಯಕ್ರಮ ಅನುಷ್ಠಾನಗೊಳಿಸಿದರೂ, ಬಹುತೇಕ ಕಡೆ ರೈತರ ಉಪಯೋಗಕ್ಕೆ ಲಭ್ಯವಿಲ್ಲ... ಶೌಚಾಲಯ ಆಂದೋಲನ ಎಂಬುದು ಸಿಂದಗಿ ತಾಲ್ಲೂಕಿಗೆ ಸೀಮಿತಗೊಂಡಿದೆ. ಅದು ಅಧ್ಯಕ್ಷೆಯ ಸ್ವ ಹಿತಾಸಕ್ತಿಗೆ...’ ವಿಜಯಪುರ ಜಿಲ್ಲಾ ಪಂಚಾಯಿತಿ ಆಡಳಿತದ ವಿರುದ್ಧ ಸದಸ್ಯರು, ಜಿಲ್ಲೆಯ ಜನತೆ ಆಕ್ರೋಶ ವ್ಯಕ್ತಪಡಿಸಿದ ಪರಿಯಿದು.

ಹಳಿ ತಪ್ಪಿದೆ: ‘ನ.18ರ ಶನಿವಾರ ನಿಗದಿಯಾಗಿದ್ದ ಜಿಲ್ಲಾ ಪಂಚಾಯಿತಿಯ ಎಂಟನೇ ಸಾಮಾನ್ಯ ಸಭೆ ಛಟ್ಟಿ ಅಮಾವಾಸ್ಯೆ ಕಾರಣದಿಂದ 28ರ ಮಂಗಳವಾರಕ್ಕೆ ಮುಂದೂಡಲ್ಪಟ್ಟಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ದಿನ ಬಬಲೇಶ್ವರಕ್ಕೆ ಭೇಟಿ ನೀಡಲಿದ್ದಾರೆ ಎಂದು ನ. 29ರ ಬುಧವಾರಕ್ಕೆ ಮುಂದೂಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಬ್ಬಂದಿ ದೂರವಾಣಿ ಕರೆ ಮಾಡಿ ತಿಳಿಸಿದ್ದರು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆದರೆ ಸೋಮವಾರ ಮತ್ತೆ ಕರೆ ಮಾಡಿ ಮಂಗಳವಾರವೇ ಸಭೆ ನಡೆಯಲಿದೆ. ಬನ್ನಿ ಎಂದೂ ಆಹ್ವಾನ ನೀಡಿದ್ದಾರೆ. ಸಾಮಾನ್ಯ ಸಭೆ ಎಂದು ನಡೆಯಲಿದೆ ಎಂಬುದೇ ಸದಸ್ಯರಿಗೆ ಗೊಂದಲವಾದರೆ, ಯಾವ ರೀತಿ ಸಭೆಗೆ ತಯಾರಾಗಬೇಕು. ಯಾವ ವಿಷಯ ಪ್ರಸ್ತಾಪಿಸಬೇಕು ಎಂಬುದೇ ಅರಿವಾಗದಾಗಿದೆ. ಒಟ್ಟಾರೆ ಜಿಲ್ಲಾ ಪಂಚಾಯಿತಿ ಆಡಳಿತ ಹಳಿ ತಪ್ಪಿದೆ. ಇದನ್ನು ಪ್ರಶ್ನಿಸುವವರು ಮೌನಕ್ಕೆ ಶರಣಾಗಿರುವುದು ದುರಂತದ ಸಂಗತಿ. ನಾವೇನಾದರೂ ಸಭೆಯಲ್ಲಿ ಮಾತನಾಡಿದರೆ ಅದಕ್ಕೊಂದು ಬಣ್ಣ ಕಟ್ತಾರೆ. ಏನು ಹೇಳಬೇಕು ಎಂಬುದೇ ತೋಚದಂತಾಗಿದೆ’ ಎಂದೂ ಅಸಮಾಧಾನ ವ್ಯಕ್ತಪಡಿಸಿದರು.

ದೌರ್ಭಾಗ್ಯ: ‘ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಮೇಟಿ ಶೌಚಾಲಯ ಆಂದೋಲನವನ್ನು ಸಿಂದಗಿ ತಾಲ್ಲೂಕಿಗೆ ಸೀಮಿತಗೊಳಿಸಿಕೊಂಡಿದ್ದಾರೆ. ತಿಂಗಳಲ್ಲಿ ಬಹುತೇಕ ದಿನ ಗೋವಾದಲ್ಲಿ ವಾಸ್ತವ್ಯ ಹೂಡುತ್ತಾರೆ. ಉಪಾಧ್ಯಕ್ಷರಾಗಿದ್ದ ಪ್ರಭುಗೌಡ ಸಿ ದೇಸಾಯಿ ತಮ್ಮ ಸದಸ್ಯತ್ವ ರದ್ದಾಗಿದ್ದರಿಂದ, ನ್ಯಾಯಾಲಯದ ಆದೇಶದಂತೆ ಮರು ಆದೇಶ ತರಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಗೆ ಎಡತಾಕುತ್ತಿದ್ದಾರೆ.

ಸಿಇಓ ಸೇರಿದಂತೆ ಉಳಿದ ಅಧಿಕಾರಿಗಳನ್ನು ಯಾವುದಾದರೂ ಕಾಮಗಾರಿ, ಯೋಜನೆ ಬಗ್ಗೆ ಮಾಹಿತಿ ಕೇಳಿದರೆ ಆ ಕಚೇರಿ, ಇ ಕಚೇರಿಗೆ ಹೋಗಿ ಎಂದು ಅಲೆದಾ
ಡಿಸುತ್ತಾರೆ ವಿನಾಃ ಸಣ್ಣ ಮಾಹಿತಿಯನ್ನು ನೀಡಲ್ಲ. ಒಟ್ಟಾರೆ ಜಿಲ್ಲಾ ಪಂಚಾಯಿತಿ ಆಡಳಿತ ಸಂಪೂರ್ಣ ನಿಷ್ಕ್ರಿಯಗೊಂಡಿದೆ.

ಧ್ವನಿ ಎತ್ತಬೇಕಿರುವ ನಮ್ಮ ಚುನಾಯಿತ ಜಿಲ್ಲಾ ಪಂಚಾಯಿತಿ ಸದಸ್ಯರು ಜಾಣ ಕಿವುಡು–ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಶಾಸಕ, ಸಚಿವರಂತೂ ಜಿಲ್ಲಾ ಪಂಚಾಯಿತಿ ಆಡಳಿತ ಅಸ್ಥಿತ್ವದಲ್ಲಿದೆ ಎಂಬುದನ್ನು ಮರೆತಿರುವುದು ನಮ್ಮ ದೌರ್ಭಾಗ್ಯ’ ಎಂದು ಆರ್‌.ಬಿ.ಪಾಟೀಲ, ಟಿ.ಬಿ.ಪಾಟೀಲ, ಕೆ.ಎ.ಪಟೇಲ ಆಕ್ರೋಶ ವ್ಯಕ್ತಪಡಿಸಿದರು

ಸಭೆಯಲ್ಲಿ ಭಾಗವಹಿಸುವೆ: ದೇಸಾಯಿ
‘ಹೈಕೋರ್ಟ್‌ ಆದೇಶದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ನ 27ರ ಸೋಮವಾರ ಸದಸ್ಯತ್ವ ರದ್ದು ಆದೇಶವನ್ನು ಹಿಂಪಡೆದು ಹೊಸ ಆದೇಶ ಹೊರಡಿಸಿದೆ. ಹಿಂದಿನಂತೆಯೇ ಉಪಾಧ್ಯಕ್ಷ ಸ್ಥಾನದಲ್ಲಿ ಸರ್ಕಾರಿ ಸೌಲಭ್ಯಗಳೊಂದಿಗೆ ಮುಂದುವರೆಯುವಂತೆ ಸೂಚಿಸಿದೆ.

ಈ ಆದೇಶದ ಪ್ರತಿಯನ್ನು ಪಡೆದೇ ಬೆಂಗಳೂರಿನಿಂದ ಮರಳುತ್ತಿರುವೆ. ಮಂಗಳವಾರದ ಸಭೆಯಲ್ಲಿ ಭಾಗಿಯಾಗುವೆ’ ಎಂದು ಪ್ರಭುಗೌಡ ಸಿ ದೇಸಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

* * 

ಜಿಲ್ಲಾ ಪಂಚಾಯ್ತಿ ಆಡಳಿತ ಹಳಿ ತಪ್ಪಿದೆ. ಕಚೇರಿಗೆ ತೆರಳಿ ಪ್ರಮುಖ ಯೋಜನೆಗಳ ಕುರಿತಂತೆ ಮಾಹಿತಿ ಕೇಳಿದರೂ ಯಾರೊಬ್ಬರೂ ನೀಡದಾಗಿದ್ದಾರೆ
ಕೆ.ಎ.ಪಟೇಲ
ವಿಜಯಪುರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT