ವಿಜಯಪುರ

ಲಿಂಗಾಯತ ಧರ್ಮ ಮಾನ್ಯತೆ ಸಿಕ್ಕೇ ಸಿಗುತ್ತದೆ

‘ಹೊಸ ಧರ್ಮವನ್ನು ಸಂವಿಧಾನದಲ್ಲಿ ಸೃಷ್ಟಿಸಲು ಸಾಧ್ಯವಿಲ್ಲ. ಆದರೆ, ಅಸ್ತಿತ್ವದಲ್ಲಿರುವ ಧರ್ಮವನ್ನು ಮಾನ್ಯ ಮಾಡಲು ಸಾಧ್ಯ. ಹೀಗಾಗಿ 12ನೇ ಶತಮಾನದಿಂದಲೇ ಅಸ್ತಿತ್ವದಲ್ಲಿರುವ ಲಿಂಗಾಯತ ಧರ್ಮ ಮಾನ್ಯತೆ ಸಿಕ್ಕೇ ಸಿಗುತ್ತದೆ’

ವಿಜಯಪುರದ ಶಿವಾನುಭವ ಮಂಟಪದಲ್ಲಿ ಮಂಗಳವಾರ ನಡೆದ ಲಿಂಗಾಯತ ಸ್ವತಂತ್ರ ಧರ್ಮ ರ‍್ಯಾಲಿ ಪೂರ್ವಭಾವಿ ಸಭೆಯಲ್ಲಿ ಸಚಿವ ಎಂ.ಬಿ.ಪಾಟೀಲ ಮಾತನಾಡಿದರು

ವಿಜಯಪುರ: ‘ಹೊಸ ಧರ್ಮವನ್ನು ಸಂವಿಧಾನದಲ್ಲಿ ಸೃಷ್ಟಿಸಲು ಸಾಧ್ಯವಿಲ್ಲ. ಆದರೆ, ಅಸ್ತಿತ್ವದಲ್ಲಿರುವ ಧರ್ಮವನ್ನು ಮಾನ್ಯ ಮಾಡಲು ಸಾಧ್ಯ. ಹೀಗಾಗಿ 12ನೇ ಶತಮಾನದಿಂದಲೇ ಅಸ್ತಿತ್ವದಲ್ಲಿರುವ ಲಿಂಗಾಯತ ಧರ್ಮ ಮಾನ್ಯತೆ ಸಿಕ್ಕೇ ಸಿಗುತ್ತದೆ’ ಎಂದು ಸಚಿವ ಎಂ.ಬಿ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಶಿವಾನುಭವ ಮಂಟಪದಲ್ಲಿ ಮಂಗಳವಾರ ನಡೆದ ಲಿಂಗಾಯತ ಸ್ವತಂತ್ರ ಧರ್ಮ ರ‍್ಯಾಲಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಸಿಖ್, ಬೌದ್ಧ, ಜೈನ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ಕೇಂದ್ರ ನೀಡಿದೆ. ಅದೇ ರೀತಿ ಲಿಂಗಾಯತಕ್ಕೂ ಸಿಗಲೇಬೇಕು. ಕೋರ್ಟ್‌ ಮೆಟ್ಟಿಲೇರಿಯಾದರೂ ನಮ್ಮಲ್ಲಿರುವ ಹೇರಳ ದಾಖಲೆಗಳಿಂದ ಮಾನ್ಯತೆ ಪಡೆಯುತ್ತೇವೆ’ ಎಂದರು.

‘12ನೇ ಶತಮಾನದಲ್ಲಿ ಬಸವಾದಿ ಶರಣರ ಸಾಮಾಜಿಕ ಚಳವಳಿಯಿಂದ ಅಸ್ತಿತ್ವಕ್ಕೆ ಬಂದ ಲಿಂಗಾಯತ ಧರ್ಮ 1871 ರ ವರೆಗೆ ಸ್ವತಂತ್ರ ಧರ್ಮವಾಗಿಯೇ ಇತ್ತು. 1881ರ ಜನಗಣತಿಯಲ್ಲಿ ಸಿ.ರಂಗಚಾರ್ಯಲು ಎನ್ನುವ ಅಧಿಕಾರಿ ಲಿಂಗಾಯತರನ್ನು ಒಡೆದು, ಹಿಂದೂ ಧರ್ಮದಲ್ಲಿ ಸೇರಿಸಿ ಶೂದ್ರ ಕೆಟಗೆರಿಯಲ್ಲಿ ಹಾಕಿದರು. ಅಲ್ಲಿಂದ ಆರಂಭವಾದ ಒಡೆದು ಆಳುವ ನೀತಿ ಇಂದಿಗೂ ಮುಂದುವರಿದಿದೆ. ಇನ್ನು ಮುಂದೆ ಇದಕ್ಕೆ ಅವಕಾಶ ನೀಡದೇ ಎಲ್ಲ ಲಿಂಗಾಯತ ಉಪಪಂಗಡಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಮುಂದುವರಿಯಲಾಗುವುದು’ ಎಂದು ತಿಳಿಸಿದರು.

‘ಮೂರು ವರ್ಷಗಳ ಹಿಂದೆ ಯುಪಿಎ ಆಡಳಿತಾವಧಿಯಲ್ಲಿ ಸುಶೀಲಕುಮಾರ ಶಿಂಧೆ ಗೃಹಮಂತ್ರಿಗಳಾಗಿದ್ದಾಗ ಜೈನ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ದೊರಕಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೂಡ ಆ ಹೋರಾಟದಲ್ಲಿದ್ದರು. ಆದರೆ, ಇದೀಗ ಲಿಂಗಾಯತರಿಗೆ ಮಾನ್ಯತೆ ಕೊಡುವ ವಿಷಯ ಬಂದಾಗ ಲಿಂಗಾಯತ ಸ್ವಾಮೀಜಿಯವರೂ ಸೇರಿದಂತೆ ಎಲ್ಲರೂ ಮೌನಕ್ಕೆ ಜಾರಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ‘ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ 106 ಲಿಂಗಾಯತ ಶಾಸಕರಿದ್ದರು. ಅಂದು ಒಳಪಂಗಡಗಳ ಭೇದ-ಭಾವ ಇರಲಿಲ್ಲ, 1.38 ಕೋಟಿ ಲಿಂಗಾಯತ ಜನಸಂಖ್ಯೆ ಕಾಲ ಕ್ರಮೇಣ ಇಂದು ಒಳಪಂಗಡಗಳ ಭೇದದಿಂದಾಗಿ 76 ಲಕ್ಷಕ್ಕೆ ತಂದಿಟ್ಟಿದ್ದಾರೆ. ಛಿದ್ರವಾಗಿರುವ ಸಮಾಜವನ್ನು ಒಂದುಗೂಡಿಸಲು, ನಮ್ಮ ಮಕ್ಕಳಿಗೆ ಸವಲತ್ತುಗಳನ್ನು ಒದಗಿಸಲು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ನೇತೃತ್ವ ವಹಿಸಿದ್ದು, ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಸ್ಥಾನಮಾನ ತಪ್ಪಿಸಲು ಹರಿ-ಬ್ರಹ್ಮ ಬಂದರೂ ಸಾಧ್ಯವಿಲ್ಲ’ ಎಂದು ಹೇಳಿದರು.

‘37 ವರ್ಷಗಳ ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಎಂದೂ ಸಹ ನಾನು ಜಾತಿಗೆ ಅಂಟಿಕೊಂಡವನಲ್ಲ. ಆರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ನನ್ನನ್ನು ಭೇಟಿಯಾಗಿದ್ದ ಲಿಂಗಾಯತ ಒಳಪಂಗಡಗಳ ಪದವೀಧರರು ವಿವಿಧ ನೇಮಕಾತಿಗಳಲ್ಲಿ ತಾವು ಅನುಭವಿಸುತ್ತಿರುವ ಸಂಕಟಗಳನ್ನು, ರಾಜಧಾನಿಯಲ್ಲಿ ವಿವಿಧ ಜಾತಿ-ಧರ್ಮದವರು ತಮ್ಮ ತಮ್ಮ ಸಮಾಜದವರಿಗೆ ಕಲ್ಪಿಸುತ್ತಿರುವ ಅನುಕೂಲಗಳನ್ನು ನನ್ನೆದುರಿಗೆ ಬಿಚ್ಚಿಟ್ಟು, ರಾಜ್ಯದಲ್ಲಿ ಇಂದು ಲಿಂಗಾಯತರು ಅನಾಥರಾಗಿದ್ದೇವೆ. ನಮ್ಮನ್ನು ಎತ್ತಿಕೊಳ್ಳುವರು ಯಾರೂ ಇಲ್ಲ. ಆ ಧರ್ಮದಲ್ಲಿ ಹುಟ್ಟಿದ ನೀವಾದರೂ ನಮ್ಮ ಕಷ್ಟ ಆಲಿಸಿ ಎಂದಾಗ ನನ್ನ ಅಂತರಂಗದ ಪ್ರಜ್ಞೆ ಎಚ್ಚರವಾಗಿದೆ. ಇದು ಒಂದು ರೀತಿಯ ತಡಮಾಡಿ ಬುದ್ಧಿ ಬಂದಂತೆ ಆಗಿದೆ ಹೊರತು ಯಾವುದೇ ರಾಜಕೀಯ ದುರುದ್ದೇಶ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ವಿರಕ್ತ ಮಠದವರಿಗೆ ನಾವು ಮಠ ಖಾಲಿ ಮಾಡಿ ಎಂದಿದ್ದು ಅವರನ್ನು ಹೊರ ಹಾಕಬೇಕು ಎಂಬ ದುರುದ್ದೇಶದಿಂದ ಅಲ್ಲ. ಬದಲಾಗಿ ಬಸವಾದಿ ಶರಣರ ತತ್ತ್ವಗಳನ್ನು ಪ್ರಸಾರ ಮಾಡಬೇಕಿದ್ದ ವಿರಕ್ತ ಮಠಗಳು ಇಂಥ ಚಳವಳಿಗಳು ನಡೆದಾಗ ಸುಮ್ಮನಿರುವುದನ್ನು ತಾಳದೇ ಸಂಕಟದಿಂದ ಹೇಳಿದ್ದು’ ಎಂದು ಹೊರಟ್ಟಿ, ‘ನನ್ನ ರಾಜಕೀಯ ಜೀವನದಲ್ಲಿ ಲಿಂಗಾಯತ ಪರವಾಗಿ ಬದ್ಧತೆಯಿಂದ ಕಾರ್ಯ ಮಾಡಿದ ಎಂ.ಬಿ. ಪಾಟೀಲರಂತಹ ವ್ಯಕ್ತಿಗಳನ್ನು ನೋಡಿಲ್ಲ, ಅವರಿಗಿರುವ ಬದ್ಧತೆ, ಅವರಲ್ಲಿರುವ ದಾಖಲೆಗಳ ಸಂಗ್ರಹವನ್ನು ನೋಡಿದರೆ ನೂರಕ್ಕೆ ನೂರು ನಮಗೆ ಯಶ ಸಿಗುತ್ತದೆ’ ಎಂದರು.

ಬಸವ ಜಯಮೃತ್ಯುಂಜಯ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ, ಶಂಭುಲಿಂಗ ಸ್ವಾಮೀಜಿ ಮಾತನಾಡಿದರು. ಡಿ.ಎಸ್.ಗುಡ್ಡೋಡಗಿ, ಆರ್.ಆರ್.ಕಲ್ಲೂರ, ಎನ್.ಎಸ್.ಖೇಡ, ರವೀಂದ್ರ ಬಿಜ್ಜರಗಿ, ಈರಣ್ಣ ಪಟ್ಟಣಶೆಟ್ಟಿ, ಅಶೋಕ ಮನಗೂಳಿ, ಎಂ.ಎಸ್.ಲೋಣಿ, ಉಮೇಶ ಕೋಳಕೂರ ಉಪಸ್ಥಿತರಿದ್ದರು.

* * 

ಸ್ವತಂತ್ರ ಧರ್ಮ ಮಾನ್ಯತೆ ದೊರಕಿದ ನಂತರ ಎಲ್ಲರೂ ಈ ಕಡೆ ಬರುತ್ತಾರೆ. ಅಂದು ಬಂದು ಅಪವಾದ ತೆಗೆದುಕೊಳ್ಳುವ ಬದಲು ಇಂದೇ ನಮ್ಮ ಹೋರಾಟಕ್ಕೆ ಕೈ ಜೋಡಿಸಿ
ಎಂ.ಬಿ.ಪಾಟೀಲ
ಜಲ ಸಂಪನ್ಮೂಲ ಸಚಿವ

Comments
ಈ ವಿಭಾಗದಿಂದ ಇನ್ನಷ್ಟು
ಮೈಸೂರು ಸೋಪ್‌ ಸಂತೆಗೆ ಜನಸಾಗರ!

ವಿಜಯಪುರ
ಮೈಸೂರು ಸೋಪ್‌ ಸಂತೆಗೆ ಜನಸಾಗರ!

20 Jan, 2018

ನಿಡಗುಂದಿ
ಕಲಗುರ್ಕಿಯಲ್ಲಿ ಜನಪದ ಸಂಸ್ಕೃತಿ ಉತ್ಸವ

ರಾಚಯ್ಯ ಸ್ವಾಮಿ ಹಿರೇಮಠ, ಡಾ.ವಿಶ್ವನಾಥ ಮಠ, ಜಿಲ್ಲಾ ಪಂಚಾಯ್ತಿ ಸದಸ್ಯೆ ಶ್ರೀದೇವಿ ಐಹೊಳ್ಳಿ, ತಾಲ್ಲೂಕು ಪಂಚಾಯ್ತ ಸದಸ್ಯೆ ಲಕ್ಷ್ಮೀಬಾಯಿ ಕಸನಕ್ಕಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ...

20 Jan, 2018

ದೇವರಹಿಪ್ಪರಗಿ
ರಾಣಿ ಚನ್ನಮ್ಮ ಜಯಂತ್ತುತ್ಸವ, ಕಿತ್ತೂರು ವಿಜಯೋತ್ಸವ ಇಂದು

ಸಮೀಪದ ಮುಳಸಾವಳಗಿ ಗ್ರಾಮದಲ್ಲಿ ಜ. 20ರ ಶನಿವಾರ ಪಂಚಮಸಾಲಿ ಸಮಾಜದ ಆಶ್ರಯದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ, 194ನೇ ಕಿತ್ತೂರು ವಿಜಯೋತ್ಸವ ಹಾಗೂ ಸಂಗೊಳ್ಳಿ...

20 Jan, 2018
‘ಧರ್ಮ ಅರಿಯದವರಿಂದ ವಿಷಬೀಜ ಬಿತ್ತುವ ಕೆಲಸ’

ಮುದ್ದೇಬಿಹಾಳ
‘ಧರ್ಮ ಅರಿಯದವರಿಂದ ವಿಷಬೀಜ ಬಿತ್ತುವ ಕೆಲಸ’

19 Jan, 2018

ವಿಜಯಪುರ
ನಾಲತವಾಡದ ಹೋರಿ ಚಾಂಪಿಯನ್..!

ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡದ ರಾಯನಗೌಡ ಮಲ್ಲನಗೌಡ ಚಿತ್ತಾಪುರ ಅವರ ಹಾಲು ಹಲ್ಲಿನ ಹೋರಿ ವಿಜಯಪುರ ಹೊರ ವಲಯದ ತೊರವಿಯಲ್ಲಿ ಸಿದ್ಧೇಶ್ವರ ಜಾತ್ರೆ ಅಂಗವಾಗಿ ನಡೆದ...

19 Jan, 2018