ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಾಗೇರಿ ತರಾಟೆ

Last Updated 29 ನವೆಂಬರ್ 2017, 6:16 IST
ಅಕ್ಷರ ಗಾತ್ರ

ಸಿದ್ದಾಪುರ: ಅರಣ್ಯ ಅತಿಕ್ರಮಣ ತೆರವು ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳನ್ನು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪ್ರಸಂಗ ಸ್ಥಳೀಯ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನಡೆಯಿತು.

ಅರಣ್ಯ ಇಲಾಖೆಯ ಪ್ರಗತಿ ಪರಿಶೀಲನೆಯ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ,‘ನಿಮಗೆ ನಿಮ್ಮ ಗಾರ್ಡ್, ಫಾರೆಸ್ಟರ್‌ಗಳ ಮೇಲೆ ನಿಯಂತ್ರಣ ಇಲ್ಲ. ನೀವು ಹೇಳಿದ್ದನ್ನು ಅವರು ಕೇಳುವುದಿಲ್ಲ. ನಿಮಗಿಂತ ಅವರೇ ದೊಡ್ಡವರಾಗಿದ್ದಾರೆ’ ಎಂದರು.

‘ಅರಣ್ಯ ಜಮೀನಿನಲ್ಲಿ ಹೊಸ ಅತಿಕ್ರಮಣಕ್ಕೆ ಅವಕಾಶ ಇಲ್ಲ. ಹಳೆ ಮನೆ ಇದ್ದಲ್ಲಿಯೇ ಶೌಚಾಲಯ, ಆಶ್ರಯ ಮನೆ ಕಟ್ಟಲೂ ಕೊಡದಿದ್ದರೆ ಹೇಗೆ? ನಮ್ಮ ತಾಲ್ಲೂಕಿನ ಸ್ಥಿತಿ ನಿಮಗೆ ಗೊತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ 25 ಘಟನೆಗಳ ಉದಾಹರಣೆ ನೀಡಬಲ್ಲೆ’ ಎಂದರು.

‘ಹಳೆ ಮನೆ ಇರುವವರಿಗೆ ನಾವು ತೊಂದರೆ ನೀಡಿಲ್ಲ. ಹಳೆ ಮನೆಗಿಂತ 50–100 ಮೀಟರ್ ಅಂತರದಲ್ಲಿ (ಮನೆ ಅಥವಾ ಶೌಚಾಲಯ) ಮಾಡಿದ್ದಾರೆ’ ಎಂದು ಆರ್ಎಫ್ಒ ಲೋಕೇಶ ಪಾಟಣಕರ್ ಸಮಜಾಯಿಸಿ ನೀಡಿದರು.

‘ಕೆಲವು ಕಡೆ ಗ್ರಾಮ ಪಂಚಾಯ್ತಿಗಳಿಗೆ (ನಿಮ್ಮ ಸಿಬ್ಬಂದಿ) ಆಶ್ರಯ ಮನೆಗಳ ಬಿಲ್‌ ನೀಡದಂತೆ ನೋಟಿಸ್ ನೀಡಿದ್ದಾರಂತೆ. ಗ್ರಾಮ ಪಂಚಾಯ್ತಿಗೆ ಯಾಕೆ ನೋಟಿಸ್ ನೀಡುತ್ತೀರಿ?’ ಎಂದು ಪ್ರಶ್ನೆ ಮಾಡಿದ ಶಾಸಕರು, ‘ನೀವು ಗಾರ್ಡ್, ಫಾರೆಸ್ಟ್‌ಗಳ ಸಭೆ ಕರೆಯಿರಿ. ಅತಿಕ್ರಮಣ ತೆರವು ವಿಷಯದಲ್ಲಿ ನಿಮ್ಮ ಗಮನಕ್ಕೆ ತಾರದೆ ಯಾವುದೇ ಕ್ರಮ ಕೈಗೊಳ್ಳದಂತೆ ಅವರಿಗೆ ಸೂಚನೆ ನೀಡಿ. ನಾನೂ ಕೂಡ ಉಪ ಅರಣ್ಯ ಅಧಿಕಾರಿ (ಡಿಎಫ್‌ಒ) ಮತ್ತು ಅರಣ್ಯ ಸಂರಕ್ಷಣಾಧಿಕಾರಿ (ಕನ್ಸ್‌ರ್‌ವೇಟರ್ ಆಫ್ ಫಾರೆಸ್ಟ್) ಅವರೊಡನೆ ಮಾತನಾಡುತ್ತೇನೆ’ ಎಂದರು.

‘ಆದಾಯ ಪ್ರಮಾಣ ಪತ್ರ ಪಡೆಯುವುದಕ್ಕೆ ಒಟಿಸಿ ಪದ್ಧತಿಯಲ್ಲಿ ಆದಾಯದ ವಿವರ ಭರ್ತಿ ಮಾಡಿದಾಗ, ಆ ವಿವರ ತಪ್ಪಾಗಿದ್ದರೆ ಉಪ ವಿಭಾಗಾಧಿಕಾರಿಗೆ ಮೇಲ್ಮನವಿ ಸಲ್ಲಿಸಬೇಕು. ಮೊದಲಿನಂತೆ ಕೈಯಲ್ಲಿಯೇ ಆದಾಯ ಪ್ರಮಾಣ ಪತ್ರ ನೀಡಲು ಏನು ತೊಂದರೆ?’ ಎಂದು ಶಾಸಕರು, ತಹಶೀಲ್ದಾರ್ ಪಟ್ಟರಾಜ ಗೌಡ ಅವರನ್ನು ಪ್ರಶ್ನೆ ಮಾಡಿದರು.

‘ಈ ವ್ಯವಸ್ಥೆ ಹೊಸದಾಗಿ ಬಂದಿದೆ. ಇದರಲ್ಲಿ ಶೇ 80 ರಷ್ಟು ಸರಿ ಇದೆ. ಶೇ. 20 ರಷ್ಟು ಮಾತ್ರ ವ್ಯತ್ಯಾಸ ಆಗಿದೆ. ಈ ವ್ಯತ್ಯಾಸದ ಕುರಿತು ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ನಮಗೆ ಅರ್ಜಿ ಕೊಟ್ಟರೆ ಸಾಕು. ನಾವೇ ಮೇಲ್ಮನವಿ ಸಲ್ಲಿಸಿ, ಸರಿ ಪಡಿಸಿಕೊಡುತ್ತೇವೆ’ ಎಂದು ಪಟ್ಟರಾಜ ಗೌಡ ಹೇಳಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸುಧೀರ್ ಗೌಡರ್, ಉಪಾಧ್ಯಕ್ಷೆ ದಾಕ್ಷಾಯಿಣಿ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ನಾಗರಾಜ ನಾಯ್ಕ, ಎಂ.ಜಿ.ಹೆಗಡೆ ಗೆಜ್ಜೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT