ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕ ಕಲೆಯಲ್ಲಿ ಪ್ರತಿಭೆ ಮೆರೆದ ಎಕಲಾರ ಶಾಲೆ

Last Updated 29 ನವೆಂಬರ್ 2017, 7:12 IST
ಅಕ್ಷರ ಗಾತ್ರ

ಔರಾದ್: ಮರೆಯಾಗುತ್ತಿರುವ ನಾಟಕ ಕಲೆಗೆ ಜೀವ ತುಂಬುತ್ತಿರುವ ತಾಲ್ಲೂಕಿನ ಎಕಲಾರ ಪ್ರೌಢ ಶಾಲೆ ವಿದ್ಯಾರ್ಥಿಗಳು ಸತತ ಐದು ವರ್ಷಗಳಿಂದ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಳ್ಳುವ ಮೂಲಕ ರಾಜ್ಯಮಟ್ಟದಲ್ಲೂ ತಮ್ಮ ಕಲೆ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ.

ಬೀದರ್‌ನಲ್ಲಿ ಈಚೆಗೆ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಎಕಲಾರ ಸರ್ಕಾರಿ ಶಾಲೆಯ ಪ್ರೌಢ ಶಾಲೆ ಮಕ್ಕಳು ‘ಸಂಗೊಳ್ಳಿ ರಾಯಣ್ಣ’ ನಾಟಕವನ್ನು ಅದ್ಭುತವಾಗಿ ಪ್ರದರ್ಶಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕಳೆದ ವರ್ಷ ‘ಹಲಗಲಿ ಬೇಡರು’ ಅದಕ್ಕೂ ಮೊದಲು ‘ಸಾವು ಗೆದ್ದ ರೈತ’, ‘ಕಲಿಯಬೇಕು ಅಕ್ಷರ’ ಮತ್ತು ‘ಸಕಾಲ’ ಎಂಬ ಸಾಮಾಜಿಕ ನಾಟಕ ಪ್ರದರ್ಶಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಿದ್ದಾರೆ.

‘ಸಾವು ಗೆದ್ದ ರೈತ’ ನಾಟಕ ಜಿಲ್ಲೆಯಾದ್ಯಂತ ಹೆಸರು ಮಾಡಿದ್ದು, ರೈತ ಸಮುದಾಯದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಹತಾಶೆ ರೈತರಲ್ಲಿ ಈ ನಾಟಕವು ಆತ್ಮವಿಶ್ವಾಸ ತುಂಬಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಸಂಜುಕುಮಾರ ಮಾನಕರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜನರಿಗೆ ಕಾಲ ಮಿತಿಯಲ್ಲಿ ಸೇವೆ ನೀಡಲು ಸರ್ಕಾರ ಜಾರಿಗೆ ತಂದ ‘ಸಕಾಲ’ ಯೋಜನೆಗೆ ಪೂರಕವಾಗಿ ಎಕಲಾರ ಶಾಲೆ ವಿದ್ಯಾರ್ಥಿಗಳು ‘ಸಕಾಲ’ ನಾಟಕ ಪ್ರದರ್ಶನ ಮಾಡಿದ್ದಾರೆ. ಕಂದಾಯ ಇಲಾಖೆಯು ಈ ವಿದ್ಯಾರ್ಥಿಗಳ ಮೂಲಕ ಕೆಲ ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಿೆ.

12 ವಿದ್ಯಾರ್ಥಿಗಳ ತಂಡ ಸಂಗೊಳ್ಳಿ ರಾಯಣ್ಣ ಎಂಬ ಐತಿಹಾಸಿಕ ನಾಟಕ ಪ್ರದರ್ಶಿಸಿ ನಾಟಕ ಪ್ರಿಯರಿಗೆ ಖುಷಿ ನೀಡಿದ್ದಾರೆ. ರಾಣಿ ಚನ್ನಮ್ಮ ಪಾತ್ರದಲ್ಲಿ ಆರತಿ, ಸಂಗೊಳ್ಳಿ ರಾಯಣ್ಣ ಪಾತ್ರಧಾರಿ ವಿವೇಕ ಮತ್ತು ಥ್ಯಾಕರೆ ಪಾತ್ರದಲ್ಲಿ ಸಚಿನ್ ಅತ್ಯುತ್ತಮ ನಟನಾ ಕೌಶಲ ತೋರಿದ್ದಾರೆ. ಅಮರ್ ಉಮಾಕಾಂತ್‌, ಪವನ್‌ ಪ್ರಕಾಶ್‌, ಆನಂದ ಓಂಕಾರ್‌, ವಿರೇಶ್‌ ವಿಜಯ್‌ಕುಮಾರ್, ಸಾವಿತ್ರಿ ಚಂದ್ರಕಾಂತ್‌, ಅಮರ್‌ ಧನರಾಜ್‌, ಕಿರಣ್‌ ಪಾಲ್‌ ಡ್ಯಾನಿಯಲ್‌, ಶ್ರೀಕಾಂತ್‌ ಶಿವರಾಜ್‌, ಲಿಂಗಪ್ರಸಾದ್‌ ಶಿವಶಂಕರ್‌ ಇತರ ಪಾತ್ರಗಳಲ್ಲಿ ನಟಿಸಿದ್ದಾರೆ.

ಶಾಲಾ ಇಂಗ್ಲಿಷ್‌ ಶಿಕ್ಷಕ ನಾಟಕ ರಚನಾಕಾರ: ಮಕ್ಕಳು ಪ್ರದರ್ಶಿಸಿ ಯಶಸ್ಸು ಕಂಡ ನಾಟಕಗಳನ್ನು ರಚಿಸಿದ್ದು ವೃತ್ತಿಪರ ನಾಟಕಕಾರರಲ್ಲ. ಬದಲಾಗಿ ಶಾಲೆಯ ಇಂಗ್ಲಿಷ್‌ ಶಿಕ್ಷಕ ಬೀರಪ್ಪ ಕಡ್ಲಿಮಟ್ಟಿ ಅವರೇ ಈ ಐದು ನಾಟಕಗಳ ರಚನೆಕಾರ ಎಂಬುದು ಇಲ್ಲಿನ ಮತ್ತೊಂದು ವಿಶೇಷ. ಶಿಕ್ಷಕ ಬೀರಪ್ಪ ಕಡ್ಲಿಮಟ್ಟಿ ಅವರೇ ಪಾತ್ರಧಾರಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ನಾಟಕಗಳನ್ನು ರಚಿಸುವುದರಲ್ಲಿ ತೊಡಗಿಸಿಕೊಂಡಿದ್ದಾರೆ.

‘ನಮ್ಮ ಶಾಲೆ ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲೂ ಮುಂದಿದ್ದಾರೆ. ಸತತ ಮೂರು ವರ್ಷಗಳಿಂದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ನಮ್ಮ ಶಾಲೆ ಶೇ 100ರಷ್ಟು ಸಾಧನೆ ಮಾಡಿದೆ. ಈ ವರ್ಷ ನಮ್ಮ ಶಾಲೆಯ ಇಬ್ಬರು ವಿದ್ಯಾರ್ಥಿಗಳು ತಾಲ್ಲೂಕಿಗೆ ಪ್ರಥಮ, ದ್ವಿತೀಯ ಸ್ಥಾನ ಪಡೆದಿದ್ದಾರೆ. ಅವರಿಗೆ ಸರ್ಕಾರ ಉಚಿತ ಲ್ಯಾಪ್‌ಟ್ಯಾಪ್ ನೀಡಿದೆ’ ಎಂದು ಮುಖ್ಯ ಶಿಕ್ಷಕ ಮಹಿಪಾಲರೆಡ್ಡಿ ಶೇರಿಕಾರ ವಿದ್ಯಾರ್ಥಿಗಳ ಸಾಧನೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

* * 

ಹತ್ತು ಐತಿಹಾಸಿಕ ಮತ್ತು ಸಾಮಾಜಿಕ ನಾಟಕ ರಚಿಸಿದ್ದೇನೆ. ಈ ಪೈಕಿ ಐದು ನಾಟಕಗಳಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ ದೊರೆತಿದೆ. ರಾಜ್ಯಮಟ್ಟದಲ್ಲೂ ಪ್ರಶಸ್ತಿ ಪಡೆಯಲು ತಯಾರಿ ನಡೆಸಿದ್ದೇವೆ.
ಬೀರಪ್ಪ ಕಡ್ಲಿಮಟ್ಟಿ, ಎಕಲಾರ ಶಾಲೆ ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT