ಧಾರವಾಡ

ಸೌರ ನಗರ ಯೋಜನೆ ಅನುಷ್ಠಾನ: ಆಯುಕ್ತರಿಗೆ ಅಧಿಕಾರ

‘2004ರಲ್ಲಿ ಕೇಂದ್ರ ಸರ್ಕಾರ ಸೌರ ನಗರ ಯೋಜನೆಗೆ ಸಂಬಂಧಿಸಿದಂತೆ ರಾಜ್ಯದ ಹುಬ್ಬಳ್ಳಿ–ಧಾರವಾಡ ಹಾಗೂ ಮೈಸೂರು ಪಾಲಿಕೆಯನ್ನು ಆಯ್ಕೆ ಮಾಡಿತ್ತು. 2010ರಲ್ಲಿ ಇದಕ್ಕಾಗಿ ₹7–8ಕೋಟಿ ಹಣ ಬಿಡುಗಡೆಯಾಗಿದೆ.

ಧಾರವಾಡದ ಪಾಲಿಕೆ ಕಚೇರಿಯ ಸಭಾಭವನದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಆಯುಕ್ತರು ಸಭೆಯಲ್ಲಿ ಇಲ್ಲದ ಕಾರಣ ಮೇಯರ್‌ ವೇದಿಕೆ ಎದುರು ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಸದಸ್ಯರು ಧರಣಿ ನಡೆಸಿದರು

ಧಾರವಾಡ: ‘ಸೌರ ನಗರ (ಸೋಲಾರ್‌ ಸಿಟಿ) ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪಾಲಿಕೆ ಆಯುಕ್ತರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ’ ಎಂದು ಮೇಯರ್‌ ಡಿ.ಕೆ.ಚವ್ಹಾಣ ಮಂಗಳವಾರ ಹೇಳಿದರು.

ಮಂಗಳವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯ ಶೂನ್ಯ ವೇಳೆ ಬಿಜೆಪಿ ಸದಸ್ಯ ಡಾ. ಪಾಂಡುರಂಗ ಪಾಟೀಲ ಅವರು ಪ್ರಸ್ತಾಪಿಸಿದ ‘ನನೆಗುದಿಗೆ ಬಿದ್ದ ಸೌರ ನಗರ’ ಯೋಜನೆ ಅನುಷ್ಠಾನಕ್ಕೆ ಸರ್ವ ಸದಸ್ಯರು ಒಕ್ಕೊರಲಿನ ಒತ್ತಾಯ ಮಾಡಿದರು. ಇದಕ್ಕೆ ಮೇಯರ್ ಮೇಲಿನ ನಿರ್ಣಯ ಹೇಳಿದರು.

‘2004ರಲ್ಲಿ ಕೇಂದ್ರ ಸರ್ಕಾರ ಸೌರ ನಗರ ಯೋಜನೆಗೆ ಸಂಬಂಧಿಸಿದಂತೆ ರಾಜ್ಯದ ಹುಬ್ಬಳ್ಳಿ–ಧಾರವಾಡ ಹಾಗೂ ಮೈಸೂರು ಪಾಲಿಕೆಯನ್ನು ಆಯ್ಕೆ ಮಾಡಿತ್ತು. 2010ರಲ್ಲಿ ಇದಕ್ಕಾಗಿ ₹7–8ಕೋಟಿ ಹಣ ಬಿಡುಗಡೆಯಾಗಿದೆ. ಆದರೆ ಈವರೆಗೂ ಈ ಯೋಜನೆ ಯಾವುದೇ ಪ್ರಗತಿ ಕಾಣಲಿಲ್ಲ. ಆದರೆ, ನಗರಸಭೆ ಹೊಂದಿರುವ ಚಿತ್ರದುರ್ಗದಲ್ಲಿ ಸೌರ ನಗರ ಯೋಜನೆ ಜಾರಿಗೆ ಬಂದಿದೆ. ಇಲ್ಲಿ ಕನಿಷ್ಠ ವಿಸ್ತೃತ ಯೋಜನಾ ವರದಿಯನ್ನೂ ಪಾಲಿಕೆ ಸಿದ್ಧಪಡಿಸಿಲ್ಲ. ಇದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ’ ಎಂದು ಪಾಂಡುರಂಗ ಪಾಟೀಲ ಬೇಸರ ವ್ಯಕ್ತಪಡಿಸಿದರು.

‘ಬೀದಿ ದೀಪ ಹಾಗೂ ಉದ್ಯಾನ ಇತ್ಯಾದಿಗಳಿಗಾಗಿ ಪಾಲಿಕೆ ಪ್ರತಿವರ್ಷ ₹26 ಕೋಟಿಗೂ ಹೆಚ್ಚು ಹಣ ಹೆಸ್ಕಾಂಗೆ ನೀಡುತ್ತಿದೆ. ಜತೆಗೆ ಮಲಪ್ರಭಾ ಮತ್ತು ನೀರಸಾಗರದಿಂದ ನೀರನ್ನು ಮೇಲೆತ್ತಲು ವಿದ್ಯುತ್ ಶುಲ್ಕಕ್ಕೆ ₹28 ಕೋಟಿ ವೆಚ್ಚವಾಗುತ್ತಿದೆ. ಕೇಂದ್ರ, ರಾಜ್ಯ ಹಾಗೂ ಪಾಲಿಕೆಗಳು ಜಂಟಿಯಾಗಿ ಅನುಷ್ಠಾನಕ್ಕೆ ತರಬೇಕಾದ ಈ ಯೋಜನೆ ಕಾರ್ಯರೂಪಕ್ಕೆ ಬಂದಿದ್ದೇ ಆದಲ್ಲಿ ಪಾಲಿಕೆಗೆ ₹30ರಿಂದ 40ಕೋಟಿ ಉಳಿತಾಯವಾಗಲಿದೆ. ಇದು ಪಾಲಿಕೆಯ ಆದಾಯವನ್ನು ಹೆಚ್ಚಿಸುತ್ತದೆ. ಉಳಿದ ವಿದ್ಯುತ್‌ ಅನ್ನು ಕೈಗಾರಿಕೆಗಳಿಗೆ ನೀಡಬಹುದು. ಆದರೆ, ಪಾಲಿಕೆ ಹಾಗೂ ಅಧಿಕಾರಿಗಳು ಇದಕ್ಕೆ ಆಸಕ್ತಿ ವಹಿಸದಿರುವುದು ವಿಪರ್ಯಾಸ’ ಎಂದರು.

ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್‌ ಸದಸ್ಯ ಗಣೇಶ ಟಗರಗುಂಟಿ, ‘ಪಾಲಿಕೆಗೆ ದೊರೆತ ಬಹಳಷ್ಟು ಇಂಥ ಯೋಜನೆಗಳು ಅನುಷ್ಠಾನವಾಗದೇ ಕೈತಪ್ಪುತ್ತಿದೆ. ಇದಕ್ಕೆ ಉದಾಹರಣೆ ಸೌರ ನಗರ, ಎಲ್‌ಇಡಿ ಹಾಗೂ ಜಿಐಎಸ್‌ ಯೋಜನೆಗಳಿಗೆ ಸರ್ಕಾರಗಳು ಹಣ ನೀಡಿದರೂ, ಅವುಗಳನ್ನು ಬಳಸಿಕೊಳ್ಳುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಇದಕ್ಕೆ ಅಧಿಕಾರಿಗಳೇ ನೇರ ಕಾರಣ’ ಎಂದು ಆರೋಪಿಸಿದರು.

ಬಿಡಾಡಿ ನಾಯಿ, ದನಗಳನ್ನು ಹೊರಗಟ್ಟಿ
‘ಅವಳಿ ನಗರದಲ್ಲಿ ಬಿಡಾಡಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಅವುಗಳನ್ನು ಕೂಡಲೇ ಹೊರಗಟ್ಟಿ. ಕಳೆದ ಎಂಟು ದಿನಗಳಲ್ಲಿ ಬಹಳಷ್ಟು ಬಡಾವಣೆಗಳಲ್ಲಿ ಮಕ್ಕಳು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಕೂಡಲೇ ಇದಕ್ಕೆ ಪರಿಹಾರ ನೀಡಿ’ ಎಂದು ಜೆಡಿಎಸ್‌ ಸದಸ್ಯ ಅಲ್ತಾಫ್ ಕಿತ್ತೂರ ಒತ್ತಾಯಿಸಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ಪಾಂಡುರಂಗ ಪಾಟೀಲ, ‘ಪಾಲಿಕೆ ಸಿಬ್ಬಂದಿಗೆ ಪ್ರತಿ ತಿಂಗಳು ಸಂಬಳಕ್ಕಾಗಿ ₹3 ಕೋಟಿ ಖರ್ಚಾಗುತ್ತಿದೆ. ಇಷ್ಟು ಸಂಬಳಕ್ಕೆ ತೆರಿಗೆ ಹಣ ಕಟ್ಟುವ ಜನ ನಾಯಿಗಳ ಕೈಯಲ್ಲಿ ಕಚ್ಚಿಸಿಕೊಳ್ಳಬೇಕೆಂದರೆ ಯಾವ ಕರ್ಮ. ಮಕ್ಕಳನ್ನು ಆಟವಾಡಲು ಹೊರಗೆ ಬಿಡುವಂತಿಲ್ಲ. ಮನೆಯಲ್ಲಿ ಅನಾರೋಗ್ಯ ಪೀಡಿತರು ರಾತ್ರಿ ಮಲಗುವಂತಿಲ್ಲ. ಇದಕ್ಕೆ ಮುಕ್ತಿ ನೀಡುವ ಮನಸ್ಸಿದ್ದರೆ ನಾಯಿಗಳನ್ನು ಊರಿನಿಂದ ಹೊರಗೆ ಅಟ್ಟಿ. ಇಲ್ಲವೇ ಜನರ ಆಕ್ರೋಶಕ್ಕೆ ತುತ್ತಾಗಿ’ ಎಂದು ಎಚ್ಚರಿಕೆ ನೀಡಿದರು.

‘ನಾಯಿಗಳನ್ನು ಸಾಯಿಸದಂತೆ ಹಾಗೂ ಬೇರೆಡೆ ಬಿಡದಂತೆ ನ್ಯಾಯಾಲಯದ ಆದೇಶ ಇದೆ ಎಂದು ನಮಗೆ ಹೇಳುತ್ತೀರಿ. ಅದೇ ನ್ಯಾಯಾಲಯಕ್ಕೆ ಮತ್ತೊಂದು ಅರ್ಜಿ ಹಾಕಿ, ಇಲ್ಲಿ ನಾಗರಿಕರಿಗೆ ಆಗುತ್ತಿರುವ ಸಮಸ್ಯೆಯನ್ನು ಹೇಳಿ, ಪರಿಹಾರ ಏಕೆ ಕೋರಿಲ್ಲ? ಪ್ರಾಣಿ ದಯಾ ಸಂಘದವರು ಅಡ್ಡ ಬರುತ್ತಾರೆ ಎಂದಾದರೆ ಅವರ ಮಕ್ಕಳಿಗೆ ನಾಯಿ ಕಚ್ಚಿದರೆ ಅವರು ಸುಮ್ಮನೆ ಕೂರುತ್ತಾರೆಯೇ’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಪಾಲಿಕೆ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ‘ಕಸ ಸಮರ್ಪಕವಾಗಿ ವಿಲೇವಾರಿ ಆಗದ ಕಾರಣ ಈ ಸಮಸ್ಯೆ ಇದೆ. ಆದರೆ, ಆಟೊ ಟಿಪ್ಪರ್‌ ಮೂಲಕ ಕಸ ಸಾಗಿಸಿ ಶುಚಿಯಾಗಿಟ್ಟ 19 ಕಡೆ ಬಿಡಾಡಿ ನಾಯಿ, ದನ ಹಾಗೂ ಹಂದಿಗಳ ಹಾವಳಿ ಕಡಿಮೆಯಾಗಿದೆ. ಹೀಗಾಗಿ, 117 ಟಿಪ್ಪರ್‌ಗೆ ಅನುಮೋದನೆ ಸಿಕ್ಕಿದೆ. ಇನ್ನೆರಡು ದಿನಗಳಲ್ಲಿ ಟೆಂಡರ್‌ ಕರೆಯಲಾಗುವುದು’ ಎಂದರು.

ಗಣೇಶಪೇಟೆ ವಸತಿ ಸಮುಚ್ಚಯ ಚರ್ಚೆ
ಹುಬ್ಬಳ್ಳಿಯ ಗಣೇಶ ಪೇಟೆಯಲ್ಲಿರುವ ವಸತಿ ಸಮುಚ್ಚಯದಲ್ಲಿ ಇರುವವರಿಗೆ ಮನೆ ಖಾಲಿ ಮಾಡುವಂತೆ ನೋಟಿಸ್‌ ನೀಡುವುದು ಹಾಗೂ ಬೆದರಿಕೆ ಹಾಕುವುದನ್ನು ಪಾಲಿಕೆ ಸಿಬ್ಬಂದಿ ಮಾಡುತ್ತಿರುವ ಕುರಿತು ದೂರುಗಳು ಬರುತ್ತಿವೆ. ಈ ಸಂಬಂಧ ದೀಪಕ ಚಿಂಚೋರೆ ಗಮನ ಸೆಳೆದರು.

ಈ ಚರ್ಚೆಗೆ ವೀರಣ್ಣ ಸವಡಿ, ಗಣೇಶ ಟಗರಗುಂಟಿ, ಸುಧೀರ ಷರಾಫ, ಡಾ.ಪಾಂಡುರಂಗ ಪಾಟೀಲ ಇತರರು ದನಿಗೂಡಿಸಿ ಮುಂದಿನ ನಿರ್ಣಯದವರೆಗೂ ಯಥಾ ಸ್ಥಿತಿ ಕಾಯುವಂತೆ ಮನವಿ ಮಾಡಿಕೊಂಡರು. ಅದರಂತೆಯೇ ಮೇಯರ್‌ ಡಿ.ಕೆ.ಚವ್ಹಾಣ ನಿರ್ಣಯ ಕೈಗೊಂಡು, ಮುಂದಿನ ಆದೇಶದವರೆಗೂ ಯಥಾಸ್ಥಿತಿ ಕಾಯುವಂತೆ ಅಧಿಕಾರಿಗಳಿಗೆ ಆದೇಶಿಸಿದರು.

ಕಾಂಗ್ರೆಸ್ ಸದಸ್ಯರಿಂದ ಸಭಾತ್ಯಾಗ
ಬೆಳಿಗ್ಗೆ ನಡೆದ ಚರ್ಚೆಗೆ ಸಂಬಂಧಿಸಿದಂತೆ ಸೂಕ್ತ ಉತ್ತರ ನೀಡಲು ಆಯುಕ್ತರು ಇಲ್ಲದ ಕಾರಣ ಜೆಡಿಎಸ್‌ ಸದಸ್ಯರಾದ ರಾಜಣ್ಣ ಕೊರವಿ, ಅಲ್ತಾಫ್ ಕಿತ್ತೂರ ಹಾಗೂ ರಾಜು ಅಂಬೋರೆ ಮೇಯರ್‌ ಎದುರು ಧರಣಿ ನಡೆಸಿದರು. ಇದೇ ವೇಳೆ ಕಾಂಗ್ರೆಸ್‌ನ ದೀಪಕ ಚೀಂಚೋರೆ, ಗಣೇಶ ಟಗರಗುಂಟಿ, ಪ್ರಕಾಶ ಕ್ಯಾರಕಟ್ಟಿ ಇತರರು ಧರಣಿ ನಡೆಸಿ ಸಭಾತ್ಯಾಗ ಮಾಡಿದರು. ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಸದಸ್ಯರು, ‘ಕಾಂಗ್ರೆಸ್‌ ಹಮ್ಮಿಕೊಂಡಿರುವ ಪ್ರತಿಭಟನೆಗೆ ಸದಸ್ಯರು ಒಂದು ಕಾರಣ ಹುಡುಕಿದ್ದಾರೆ. ವಿಷಯ ಕುರಿತು ಚರ್ಚೆ ನಡೆಸಲು ಆಯುಕ್ತರ ಅಗತ್ಯ ಇರಲಿಲ್ಲ’ ಎಂದರು.

Comments
ಈ ವಿಭಾಗದಿಂದ ಇನ್ನಷ್ಟು

ಧಾರವಾಡ
‘ಏಕ ಸಂಸ್ಕೃತಿ ಹೇರಿಕೆ ಸಲ್ಲದು’

‘ಸಂಸ್ಕೃತಿ ಎನ್ನುವುದು ಜೀವನದ ವಿಧಾನ. ಸಂಸ್ಕೃತಿಯಲ್ಲಿ ವೈವಿಧ್ಯ ಇದ್ದರೂ ಇತರರ ನಡವಳಿಕೆ, ರೂಢಿ, ನಂಬಿಕೆ, ವಿಶ್ವಾಸವನ್ನು ಗೌರವಿಸುವುದಾಗಿದೆ. ಸಾಹಿತ್ಯ ನಮ್ಮ ಜೀವನದ ಪ್ರತಿಬಿಂಬ.

13 Dec, 2017
ಧಾರವಾಡದಲ್ಲಿ ಮಹಿಳೆಗೆ ಅಪರಿಚಿತ ವಾಹನ ಡಿಕ್ಕಿ: ನೆರವಿಗೆ ಬಂದ ಸಚಿವ ವಿನಯ ಕುಲಕರ್ಣಿ

ಧಾರವಾಡ
ಧಾರವಾಡದಲ್ಲಿ ಮಹಿಳೆಗೆ ಅಪರಿಚಿತ ವಾಹನ ಡಿಕ್ಕಿ: ನೆರವಿಗೆ ಬಂದ ಸಚಿವ ವಿನಯ ಕುಲಕರ್ಣಿ

13 Dec, 2017
₹130 ಕೋಟಿ ಅನುದಾನ ಬಿಡುಗಡೆ: ವಿನಯ ಕುಲಕರ್ಣಿ

ಧಾರವಾಡ
₹130 ಕೋಟಿ ಅನುದಾನ ಬಿಡುಗಡೆ: ವಿನಯ ಕುಲಕರ್ಣಿ

12 Dec, 2017

ಧಾರವಾಡ
ಕುಡಿಯುವ ನೀರಿಗಾಗಿ ಪರದಾಟ

‘ಹೆಬ್ಬಳ್ಳಿ ಅಗಸಿಯಿಂದ ಕೋಳಿಕೆರಿ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣ ಕಾಮಗಾರಿ 15 ದಿನಗಳ ಹಿಂದೆ ಪೂರ್ಣಗೊಂಡಿತ್ತು.

12 Dec, 2017
ನಿರ್ವಹಣೆ ಸುಲಭ; ಪರಿಸರ ಸುಂದರ

ಒಳ್ಳೆ ಸುದ್ದಿ
ನಿರ್ವಹಣೆ ಸುಲಭ; ಪರಿಸರ ಸುಂದರ

11 Dec, 2017